ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಬೆಳೆಗಳಿಗೆ ಜೀವಕಳೆ

Last Updated 19 ಜುಲೈ 2017, 6:05 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಮಳೆ ಸುರಿಯುತ್ತಿದೆ. ಮುಸಲಧಾರೆ ಮಳೆಯಿಂದಾಗಿ  ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಾಪನಗರದಲ್ಲಿ ಮಂಗಳವಾರ ವಿದ್ಯುತ್‌ ಕಂಬದ ಬಳಿ ಮೇಯಲು ಬಂದಿದ್ದ ಹಸುವೊಂದು ಪ್ರವಹಿಸುತ್ತಿದ್ದ ವಿದ್ಯುತ್‌ ತಗುಲಿ ಸ್ಥಳದಲ್ಲೇ ಮೃತಪಟ್ಟಿದೆ.

ನಗರದ ರೈಲ್ವೆ ಕೆಳಸೇತುವೆ ಅಡಿಯಲ್ಲಿ ನೀರು ನಿಂತು ಭಗತಸಿಂಗ್‌ ವೃತ್ತದಿಂದ ಬೋಮಗೊಂಡೇಶ್ವರ ವೃತ್ತದ ಕಡೆಗೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಟೀಚರ್ಸ್‌ ಕಾಲೊನಿ, ಆದರ್ಶ ಕಾಲೊನಿ ಹಾಗೂ ಕೆಇಬಿ ಕಾಲೊನಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ನಯಾಕಮಾನ್‌ನಿಂದ ಚೌಬಾರಾ ವರೆಗಿನ ರಸ್ತೆಯಲ್ಲಿ ನೀರು ನಿಂತು ತರಕಾರಿ ಮಾರುವವರು ಹೆಚ್ಚು ತೊಂದರೆ ಅನುಭವಿಸಬೇಕಾಯಿತು.

ಒಳಚರಂಡಿ ನಿರ್ಮಾಣಕ್ಕೆ ಓಲ್ಡ್‌ಸಿಟಿಯಲ್ಲಿ ರಸ್ತೆ ಮಧ್ಯೆ ಅಗೆದಿರುವ ಕಾರಣ ರಸ್ತೆಗಳು ಕೆಸರುಗುಂಡಿಯಾಗಿವೆ. ಒಳಚರಂಡಿ ಪೈಪ್‌ ಅಳವಡಿಸಲು ವಿವಿಧೆಡೆ ಅಗೆದ ರಸ್ತೆಯನ್ನು ದುರಸ್ತಿ ಮಾಡದ ಕಾರಣ ಕೆಸರು ತುಂಬಿಕೊಂಡು ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು.

ಹಳ್ಳಕೊಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಕಾರಂಜಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮುಸಲಧಾರೆ ಮಳೆಯಿಂದ ಬಾಡುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದೆ. ಬಿಎಸ್‌ಎನ್‌ಎಲ್‌ ಕೇಬಲ್‌ಗಳಲ್ಲಿ ನೀರು ಸೇರಿಕೊಂಡು ಸ್ಥಿರ ದೂರವಾಣಿಗಳು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಮೊಬೈಲ್‌ ಫೋನ್‌ಗಳ ನೆಟ್‌ವರ್ಕ್‌ಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿತು. ಬಿಎಸ್‌ಎನ್‌ಎಲ್‌ ಗ್ರಾಹಕರು ಹೆಚ್ಚು ತೊಂದರೆ ಅನುಭವಿಸಬೇಕಾಯಿತು.

18 ಮಿ.ಮೀ ಮಳೆ: ಬೀದರ್‌ ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸರಾಸರಿ 18 ಮಿ.ಮೀ ಮಳೆ ಸುರಿದಿದೆ. ಭಾಲ್ಕಿಯಲ್ಲಿ ಗರಿಷ್ಠ 58 ಮಿ.ಮೀ ಹಾಗೂ  ಬೀದರ್‌ನಲ್ಲಿ 56 ಮಿ.ಮೀ ಮಳೆಯಾಗಿದೆ. ಔರಾದ್‌ನಲ್ಲಿ ಸರಾಸರಿ 20 ಮಿ.ಮೀ., ಬೀದರ್‌ನಲ್ಲಿ  27 ಮಿ.ಮೀ., ಭಾಲ್ಕಿಯಲ್ಲಿ  23 ಮಿ.ಮೀ., ಬಸವಕಲ್ಯಾಣದಲ್ಲಿ 9 ಮಿ.ಮೀ. ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಸರಾಸರಿ 11 ಮಿ.ಮೀ ಮಳೆ ಬಿದ್ದಿದೆ.

ರೈತರ ಮೊಗದಲ್ಲಿ ಸಂತಸ: ಹದಿನೈದು ದಿನಗಳಿಂದ ಮಳೆ ಇಲ್ಲದೇ ಬೆಳೆಗಳು ಬಾಡಲು ಆರಂಭಿಸಿದ್ದವು. ಹಳ್ಳಕೊಳ್ಳಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಸೋಮವಾರ ಮಧ್ಯರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್‌ ತಿಳಿಸಿದರು. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಬುಧವಾರ ಸಹ ಮಳೆ ಮುಂದುವರಿಯಲಿದೆ. ತೊಗರಿ, ಉದ್ದು, ಸೋಯಾ ಬೆಳೆಗೆ ಅನುಕೂಲವಾಗಿದೆ ಎಂದು ಹೇಳಿದರು.

ರೈತರ ಮೊಗದಲ್ಲಿ ಮಂದಹಾಸ
ಭಾಲ್ಕಿ: ತಾಲ್ಲೂಕಿನ ಎಲ್ಲೆಡೆ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಸುರಿದ ಮಳೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.ಸುಮಾರು 25 ದಿನಗಳಿಂದ ಮಳೆ ಬಾರದೆ ಇರುವುದರಿಂದ ರೈತರು ಪ್ರತಿನಿತ್ಯ ಆಕಾಶದ ಕಡೆಗೆ ನೋಡುವಂತಾಗಿತ್ತು. ಬಿತ್ತನೆ ಕಾರ್ಯ ಬಹುತೇಕ ಪೂರ್ಣಗೊಂಡಿರುವುದರಿಂದ ಬೆಳೆಗಳಿಗೆ ಮಳೆ ಅಗತ್ಯವಿತ್ತು. ಆದರೆ, ಇಲ್ಲಿಯವರೆಗೆ ಮಳೆ ಬಾರದೆ ಇರುವುದರಿಂದ ಕೆಲವೆಡೆ ಬೀಜ ಮೊಳಕೆ ಒಡೆಯದೆ ಹಾಳಾಗಿವೆ.

ಇನ್ನು ಕೆಲವೆಡೆ ಬೆಳೆ ಬಾಡಲು ಆರಂಭಿಸಿತ್ತು. ತಾಲ್ಲೂಕಿನ ಹಲಬರ್ಗಾ, ತಳವಾಡ, ಕರಡ್ಯಾಳ, ಕೋನ ಮೇಳಕುಂದಾ, ಧನ್ನೂರ, ಜ್ಯಾಂತಿ, ನೇಳಗಿ, ಗೋಧಿಹಿಪ್ಪರ್ಗಾ, ಭಾತಂಬ್ರಾ, ದಾಡಗಿ, ಏಣಕೂರ, ಎಕಲಾಸಪೂರ ವಾಡಿ ಸೇರಿದಂತೆ ಎಲ್ಲೆಡೆ ಮಳೆ ಸುರಿದಿದ್ದು, ಬೆಳೆಗಳಿಗೆ ಕಳೆ ತಂದಿದೆ ಎನ್ನುತ್ತಾರೆ ರೈತರು.

ಹಲಬರ್ಗಾ ಹೋಬಳಿಯಲ್ಲಿ 24.1 ಮಿ.ಮೀ, ಖಟಕ ಚಿಂಚೋಳಿ 18.6, ಲಖನಗಾಂವ 29.7, ನಿಟ್ಟೂರ 42.1, ಸಾಯಿಗಾಂವ 16.7, ಭಾಲ್ಕಿ 20.4 ಮಿ.ಮೀ ಸೇರಿದಂತೆ ಒಟ್ಟಾರೆ ತಾಲ್ಲೂಕಿನಲ್ಲಿ 25.3 ಮಿ.ಮೀ ಮಳೆ ಆಗಿದೆ ಎಂದು ತಾಂತ್ರಿಕ ವ್ಯವಸ್ಥಾಪಕ ಸತೀಶ ಮುದ್ದಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

* * 

ಜಿಲ್ಲೆಯಲ್ಲಿ ಸೋಮವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಬಾಡುತ್ತಿದ್ದ ಉದ್ದು ಹಾಗೂ ಸೋಯಾ ಬೆಳೆಗಳಿಗೆ ಅನುಕೂಲವಾಗಿದೆ. ರೈತರ ಆತಂಕವೂ ಕಡಿಮೆಯಾಗಿದೆ.
ಜಿಯಾವುಲ್‌
ಕೃಷಿ ಇಲಾಖೆಯ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT