ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯವನ್ನು ಆಹ್ವಾನಿಸುತ್ತಿವೆ ಗುಂಡಿ ಬಿದ್ದ ರಸ್ತೆಗಳು

Last Updated 19 ಜುಲೈ 2017, 7:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಂಗಾರು ಮಳೆ ಶುರುವಾಗಿ ತಿಂಗಳು ಕಳೆದರೂ, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಗೊಮ್ಮೆ, ಈಗೊಮ್ಮೆ ಜಿಟಿ, ಜಿಟಿಯಾಗಿ ಮಳೆಯಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ಸಣ್ಣ ಮಳೆಯಲ್ಲಿಯೂ ವಾಹನಗಳಲ್ಲಿ ಸಂಚರಿಸುವುದು ಸಾರ್ವಜನಿಕರಿಗೆ ಸವಾಲಿನ ಕೆಲವಾಗಿದೆ.

ನಗರದ ಹೃದಯ ಭಾಗವಾದ ಚನ್ನಮ್ಮನ ವೃತ್ತ ಸಂಪರ್ಕಿಸುವ ರಸ್ತೆ­ಗಳಿಂದ ಹಿಡಿದು ಗಲ್ಲಿಯಲ್ಲಿನ ರಸ್ತೆಗಳ­ವರೆಗೆ ಬಹುತೇಕ ರಸ್ತೆಗಳು ಗುಂಡಿಮ­ಯ­ವಾಗಿವೆ. ದ್ವಿಚಕ್ರ ವಾಹನಗಳ ಸವಾರರು ಜೀವವನ್ನು ಕೈಯಲ್ಲಿ ಹಿಡಿದು­ಕೊಂಡು ಚಾಲನೆ ಮಾಡಬೇಕಿದೆ. ಪಾದಚಾರಿಗಳು ರಸ್ತೆಯಲ್ಲಿ ನಡೆಯದಂತಹ ಸ್ಥಿತಿ ನಿರ್ಮಾಣವಾಗಿದೆ.

ಹಳ್ಳವಾಗುವ ರಸ್ತೆ: ಕೋರ್ಟ್‌ ವೃತ್ತದಲ್ಲಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ರಸ್ತೆಯು ಮಳೆ ಬಂದರೆ ಹಳ್ಳವಾಗುತ್ತದೆ. ವಿವಿಧ ಕಡೆಗೆ ಹೋಗುವ ಬಸ್ಸುಗಳು ಇಲ್ಲಿಯೇ ನಿಲ್ಲುವುದರಿಂದ ಜನರು ನರಕಯಾತನೆ ಅನುಭವಿಸಬೇಕಾಗಿದೆ.

‘ಮಳೆ ಬಂದಾಗಲೆಲ್ಲ ಈ ಜಾಗ ಬಹುತೇಕ ಹಳ್ಳವಾಗುತ್ತದೆ. ಚರಂಡಿ ಸೇರಲು ಇದ್ದ ಮಾರ್ಗಗಳು ಮುಚ್ಚಿ ಹೋಗಿವೆ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಕೋರ್ಟ್ ವೃತ್ತದ ಸಮೀಪ ಅಂಗಡಿ ಇಟ್ಟುಕೊಂಡಿರುವ ರಾಜೇಶ್.

‘ಮುಖ್ಯರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಪರ್ಯಾಯ ಮಾರ್ಗ ಇಲ್ಲದ ಕಾರಣ ಇಲ್ಲಿಯೇ ವಾಹನಗಳು ಓಡಾಡುತ್ತವೆ. ಹಾಗಾಗಿ, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಅನಾಹುತ ಆದ ಮೇಲೆಯೇ ಸಂಬಂಧಪಟ್ಟವರು ಕಣ್ಣು ತೆರೆಯುವುದು’ ಎಂದು ದೇಶಪಾಂಡೆನಗರದ ಬಬಲೇಶ್ವರ ಎಂಬು­ವ­ವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆಯಲ್ಲ ಕೆಸರು ಗದ್ದೆ: ದಾಜಿಬಾನಪೇಟೆ ಮುಖ್ಯರಸ್ತೆಯಲ್ಲಿ ಓಡಾಡುವುದೇ ಸವಾಲು. ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿ ಕೇಬಲ್ ಅಳವಡಿಕೆಗಾಗಿ ರಸ್ತೆ ಅಗೆಯಲಾಗಿತ್ತು. ಆಗ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಅವು ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ.

‘ಮಳೆಗಾಲದಲ್ಲಿಯೂ ರಸ್ತೆ ಅಗೆಯಲು ಅನುಮತಿ ಕೊಟ್ಟರು. ಗುಂಡಿ ಸರಿಯಾಗಿ ಮುಚ್ಚದ್ದರಿಂದ ರಸ್ತೆಯ ಒಂದು ಭಾಗ ಕೆಸರುಮಯವಾಗಿದೆ. ಇಲ್ಲಿ ಎಷ್ಟೋ ಮಂದಿ  ಜಾರಿ ಬಿದ್ದಿದ್ದಾರೆ’ ಎಂದು ದಾಜಿಬಾನಪೇಟೆಯ ಲಕ್ಷ್ಮಣ್‌ ನಾಯಕ್ ಹೇಳುತ್ತಾರೆ.

* * 

ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊ­ಳ್ಳ­ಲಾಗಿದೆ. ಆದರೆ, ಸುರಿಯುತ್ತಿರುವ ಮಳೆ ದುರಸ್ತಿ ಕಾಮಗಾರಿಗೆ ಅಡ್ಡಿ­ಯಾಗಿದೆ.  ಮಳೆ ನಿಂತ ಬಳಿಕ ಗುಂಡಿ ಮುಚ್ಚುತ್ತೇವೆ
ಲೀನಾ ಸುನೀಲ ಮಿಸ್ಕಿನ್
ವಾರ್ಡ್–43ರ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT