ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆಯಲ್ಲಿ ರೈತರಿಗೆ ಅನ್ಯಾಯ

Last Updated 19 ಜುಲೈ 2017, 8:43 IST
ಅಕ್ಷರ ಗಾತ್ರ

ಶಿರಸಿ: ಕಳೆದ ಮುಂಗಾರಿನ ವೈಫಲ್ಯದಿಂದ ಬೆಳೆದು ಕಳೆದುಕೊಂಡು ವಿಮೆಯ ಭರವಸೆಯಲ್ಲಿದ್ದ ರೈತರು ನಿರಾಸೆಗೊಂಡಿದ್ದಾರೆ. ಅವೈಜ್ಞಾನಿಕ ಸರ್ವೆಯಿಂದ ರೈತರಿಗೆ ಅನ್ಯಾಯವಾಗಿದೆ ಎಂಬ ಕೂಗು ತಾಲ್ಲೂಕಿನಲ್ಲಿ ಬಲವಾಗಿ ಕೇಳಿಬರುತ್ತಿದೆ. ತಾಲ್ಲೂಕಿನಲ್ಲಿ ಕಳೆದ ವರ್ಷ 14,817 ರೈತರು ಒಟ್ಟು ₹ 69.40 ಲಕ್ಷ ಮೊತ್ತದ ಬೆಳೆ ವಿಮೆ ಪಾವತಿಸಿದ್ದರು. ಅವರಲ್ಲಿ ಕೇವಲ 5186 ರೈತರು ಬೆಳೆ ವಿಮೆಗೆ ಆಯ್ಕೆಯಾಗಿದ್ದಾರೆ. ತಾಲ್ಲೂಕಿಗೆ ₹ 9.38 ಕೋಟಿ ಬೆಳೆ ವಿಮೆ ಬಂದಿದೆ. 9631 ರೈತರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ.

‘ಕಳೆದ ವರ್ಷ ತಾಲ್ಲೂಕಿನಲ್ಲಿ ಮುಂಗಾರು ಕೈಕೊಟ್ಟಿದೆ. ಸಂಪಖಂಡ ಹೋಬಳಿ ಬಿಟ್ಟರೆ ಇನ್ನುಳಿದ ಶಿರಸಿ, ಹುಲೇಕಲ್, ಬನವಾಸಿ ಹೋಬಳಿಗಳಲ್ಲಿ ಕಡಿಮೆ ಮಳೆಯಾಗಿದೆ. ಬನವಾಸಿ ಹೋಬಳಿಯಲ್ಲಿ ಗದ್ದೆಯಲ್ಲಿ ನೀರಿಲ್ಲದೇ ಬಹಳಷ್ಟು ರೈತರು ಬಿತ್ತನೆಯನ್ನೇ ಮಾಡಿಲ್ಲ. ಬಿತ್ತನೆ ಮಾಡಿದ ಸಸಿಗಳು ನೀರಿನ ಕೊರತೆಯಿಂದ ಮೇಲೇಳಲಿಲ್ಲ. ಭತ್ತ ಬೆಳೆದಿದ್ದ ರೈತರು ಕೊಯ್ಲು ಮಾಡಲು ಸಹ ಹಣವಿಲ್ಲದೇ ಬರಡಾಗಿದ್ದ ಹುಲ್ಲನ್ನು ಗದ್ದೆಯಲ್ಲಿ ಹಾಗೆಯೇ ಬಿಟ್ಟಿದ್ದರು. ಆದರೆ ಅಧಿಕಾರಿಗಳು ರ್‍ಯಾಂಡಮ್ (ಅನಿರ್ದಿಷ್ಟ) ಸರ್ವೆ ನಡೆಸಿದ ಪರಿಣಾಮ ಇದಾಗಿದೆ’ ಎನ್ನುತ್ತಾರೆ ಸಂತೊಳ್ಳಿಯ ರೈತ ಆನಂದ ಗೌಡ.

‘ಬೆಳೆ ಹಾನಿ ಬಗ್ಗೆ ನಡೆಸುವ ರ್‍ಯಾಂಡಮ್ ಸರ್ವೆ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಬೆಳೆ ಹಾನಿ ಸಮೀಕ್ಷೆ ನಡೆಸುವ ಸಿಬ್ಬಂದಿ ಬಳಿಯಿರುವ ಮೊಬೈಲ್‌ಗೆ ಬೆಳೆ ವಿಮೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ (ಡಿಎಸ್ಓ) ಕಚೇರಿಯಿಂದ ಬರುವ ಭೂಮಿ ಸರ್ವೆ ಸಂಖ್ಯೆ ಆಧರಿಸಿ ಸಮೀಕ್ಷೆ ನಡೆಯುತ್ತದೆ.

ಮೊಬೈಲ್‌ನಲ್ಲಿರುವ ಬೆಳೆನಷ್ಟಕ್ಕೆ ಸಂಬಂಧಿಸಿದ ಆ್ಯಪ್ ಬಳಸಿ ಬೆಳೆಯ ಚಿತ್ರ, ವಿಡಿಯೊವನ್ನು ಇಲಾಖೆಯ ಸರ್ವರ್‌ಗೆ ರವಾನೆ ಮಾಡಲಾಗುತ್ತದೆ. ಇದನ್ನು ಆಧರಿಸಿ ಪ್ರತಿ ಪಂಚಾಯ್ತಿ ವ್ಯಾಪ್ತಿಯ ಬೆಳೆ ಹಾನಿ ಲೆಕ್ಕ ಹಾಕುತ್ತಾರೆ. ಈ ವ್ಯವಸ್ಥೆಯ ಅಡಿಯಲ್ಲಿ ಉತ್ತಮ ಇಳುವರಿ ಇರುವ ಸರ್ವೆ ಸಂಖ್ಯೆ ಆಯ್ಕೆಯಾದರೆ ಇಡೀ ಪಂಚಾಯ್ತಿಗೆ ಅನ್ಯಾಯವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಖಾತೆಗೆ ಜಮಾ ಆಗಿಲ್ಲ: ‘ಬನವಾಸಿ ಹೋಬಳಿ 10 ಪಂಚಾಯ್ತಿಗಳ ವ್ಯಾಪ್ತಿಯ 5250 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಭತ್ತ ಬೆಳೆಯಲಾಗುತ್ತದೆ. ಕಳೆದ ವರ್ಷ ಎಲ್ಲ ಪಂಚಾಯ್ತಿಗಳ ರೈತರಿಗೆ ಬೆಳೆ ವಿಮೆ ದೊರೆತಿತ್ತು. ಈ ಬಾರಿ ಗುಡ್ನಾಪುರ, ಭಾಶಿ, ಬನವಾಸಿ, ಬಿಸಲಕೊಪ್ಪ, ಉಂಚಳ್ಳಿ ಪಂಚಾಯ್ತಿಗಳ ರೈತರು ವಿಮೆಯಿಂದ ವಂಚಿತರಾಗಿದ್ದಾರೆ. ವಿಮೆಗೆ ಆಯ್ಕೆಯಾಗಿರುವ ರೈತರಲ್ಲೂ ಕೆಲವರಿಗೆ ವಿಮಾ ಹಣ ಖಾತೆಗೆ ಜಮಾ ಆಗಿಲ್ಲ’ ಎಂದು ಆನಂದ ಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಳೆದ ವರ್ಷ ಸಕಾಲಿಕ ಮಳೆ ಇಲ್ಲದಿರುವುದರಿಂದ ಮುಂಗಾರು ಬೆಳೆ ತೀರಾ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಸರಾಸರಿ ಬೆಳೆ ಪ್ರಮಾಣ ಲೆಕ್ಕ ಹಾಕುವುದು ಕಷ್ಟ. ಸರ್ಕಾರದ ಈ ಹಳೆಯ ಮಾದರಿಯಿಂದ ರೈತರಿಗೆ ಬೆಳೆ ವಿಮೆ ಪಡೆಯಲು ಸಾಧ್ಯವಿಲ್ಲ’ ಎನ್ನುತ್ತಾರೆ ಬೆಳೆ ವಿಮೆಯಿಂದ ವಂಚಿತರಾದ ರೈತ ಹೊನ್ನಪ್ಪ ಗೌಡ.  ‘ಬಿಸಲಕೊಪ್ಪ ಪಂಚಾಯ್ತಿಯಲ್ಲಿ ಮಳಲಗಾಂವದಲ್ಲಿ ಭತ್ತ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಈ ಭಾಗ ಬಿಟ್ಟು ಭತ್ತ ಅತಿ ಕಡಿಮೆ ಬೆಳೆಯುವ ಪ್ರದೇಶದಲ್ಲಿ ಹಾನಿಯ ಸರ್ವೆ ನಡೆದಿದೆ. ಇದರಿಂದ ನೈಜ ಫಲಾನುಭವಿಗಳಿಗೆ ವಿಮೆ ಸಿಕ್ಕಿಲ್ಲ’ ಎನ್ನುತ್ತಾರೆ  ಜಿ.ಕೆ. ಹೆಗಡೆ ಬಿಸಲಕೊಪ್ಪ.

‘ಬೆಳೆ ವಿಮೆಗೆ ಬೆಳೆ ಕಟಾವು ಪ್ರಯೋಗ ಮತ್ತು ಸರಾಸರಿಯ ಲೆಕ್ಕಾಚಾರಗಳು ರೈತರ ಪಾಲಿಗೆ ಮಾರಕವಾಗಿವೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಎರಡು ಕಡೆಗಳಲ್ಲಿ ಬೆಳೆ ಕಟಾವು ಪ್ರಯೋಗ ಪರೀಕ್ಷಿಸಲಾಗುತ್ತದೆ. ಹಿಂದಿನ ಏಳು ವರ್ಷಗಳಲ್ಲಿ ಐದು ವರ್ಷಗಳ ಸರಾಸರಿ ಬೆಳೆಯನ್ನು ಹೋಲಿಕೆ ಮಾಡಿಕೊಂಡು ಪ್ರಸಕ್ತ ವರ್ಷದ ಬೆಳೆ ಐದು ವರ್ಷಗಳ ಸರಾಸರಿ ಬೆಳೆಗಿಂತ ಕಡಿಮೆ ಇದ್ದರೆ ರೈತರಿಗೆ ವಿಮಾ ಹಣ ಸಿಗುತ್ತದೆ. ವ್ಯತ್ಯಾಸ ಇಲ್ಲದಿದ್ದರೆ ವಿಮಾ ಹಣ ಬರುವುದಿಲ್ಲ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಕೆ.ವಿ.ಕೂರ್ಸೆ.
‘ಒಟ್ಟು ರೈತರು ವಿಮೆ ಹಣ ಪಾವತಿಸಿರುವ ಹಣಕ್ಕಿಂತ ದುಪ್ಪಟ್ಟ ಬೆಳೆ ವಿಮೆ ಮೊತ್ತ ಮಂಜೂರು ಆಗಿದೆ. ವಿಮೆಯ ಹಣ ನೇರವಾಗಿ ರೈತರ ಖಾತೆಗೆ ಸಂದಾಯವಾಗಲಿದೆ ಎಂದು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT