ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳ,ಕೊಳ್ಳ ಖಾಲಿ; ಜನರಲ್ಲಿ ಆತಂಕ

Last Updated 19 ಜುಲೈ 2017, 8:56 IST
ಅಕ್ಷರ ಗಾತ್ರ

ಹೊಸಪೇಟೆ: ಮಳೆಗಾಲ ಆರಂಭವಾಗಿ ಸುಮಾರು ಎರಡು ತಿಂಗಳಾಗುತ್ತ ಬಂದರೂ ಜಿಲ್ಲೆಯಲ್ಲಿ ಇದುವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಇದರಿಂದಾಗಿ ಜಿಲ್ಲೆಯ ಬಹುತೇಕ ಹಳ್ಳ, ಕೊಳ್ಳಗಳು ಬರಿದಾಗಿ ಬಿಕೋ ಎನ್ನುತ್ತಿವೆ.

ಈ ಬಾರಿ ‘ಮುಂಗಾರು ಮಳೆ’ ಉತ್ತಮವಾಗಿ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಅದು ಹುಸಿಯಾಗಿದೆ. ಮಳೆಯಿಲ್ಲದ ಕಾರಣ ಜಿಲ್ಲೆಯಲ್ಲಿನ ಬಹುತೇಕ ಜಲಮೂಲಗಳು ನೀರಿಲ್ಲದೇ ಸೊರಗಿವೆ. ಜಿಲ್ಲೆಯ ಪ್ರಮುಖ ಜೀವ ನಾಡಿಯಾಗಿರುವ ತುಂಗಭದ್ರಾ ಜಲಾಶಯವು ನೀರಿಲ್ಲದೇ ಬಣಗುಡುತ್ತಿದೆ.

ಸತತ ಮೂರು ವರ್ಷಗಳ ಬರಗಾಲ ದಿಂದ ತತ್ತರಿಸಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಚಿಂತಕ್ರಾಂತರಾಗಿ ಕೈಚೆಲ್ಲಿ ಕೂತಿದ್ದಾರೆ. ಸಮರ್ಪಕ ಮಳೆಯಾಗದ ಕಾರಣ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿತ್ತನೆ ಸ್ಥಗಿತಗೊಂಡಿದೆ. ಜಿಲ್ಲೆಯ 3.65 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 8ರಷ್ಟು ಪ್ರದೇಶದಲ್ಲಿ ಇದುವರೆಗೆ ಬಿತ್ತನೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಶೇ 70ಕ್ಕಿಂತಲೂ ಅಧಿಕ ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಾರೆ.

ಕಾಲುವೆ ಭಾಗದ ರೈತರು ಆತಂಕಕ್ಕೆ: ತುಂಗಭದ್ರಾ ಜಲಾಶಯದಲ್ಲಿ 15.347 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದೆ. ಕುಡಿಯುವ ಉದ್ದೇಶಕ್ಕಾಗಿ ಎಡದಂಡೆ ಕೆಳಮಟ್ಟದ ಕಾಲುವೆಯಿಂದ 200 ಕ್ಯುಸೆಕ್‌, ಬಲದಂಡೆ ಪವರ್‌ ಕಾಲುವೆಗೆ 600 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

ಬಲದಂಡೆ ಮೇಲ್ಮಟ್ಟದ ಕಾಲುವೆ, ವಿಜಯನಗರ ಕಾಲದ ಉಪಕಾಲುವೆಗಳಾದ ರಾಯ, ಬಸವ, ಬೆಲ್ಲ, ಕಾಳಘಟ್ಟ, ತುರ್ತಾ ಕಾಲುವೆಗೆ ಇದುವರೆಗೆ ನೀರು ಹರಿಸಿಲ್ಲ. ಈ ಕಾಲುವೆಗಳಲ್ಲಿ ಹರಿಯುವ ನೀರನ್ನೇ ನೆಚ್ಚಿಕೊಂಡು ಕೃಷಿ ಮಾಡುವ ರೈತರು ದಿಕ್ಕು ತೋಚದೇ ಕಂಗಾಲಾಗಿದ್ದಾರೆ.

‘ಈ ಹಿಂದೆ ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದೆವು. ಮೂರು ವರ್ಷಗಳಿಂದ ಬರ ಇರುವುದರಿಂದ ಒಂದು ಬೆಳೆ ಬೆಳೆಯುತ್ತಿದ್ದೇವೆ. ಮಳೆಗಾಲ ಆರಂಭವಾಗಿ ಎರಡು ತಿಂಗಳಾಗುತ್ತ ಬಂದರೂ ಇಲ್ಲಿಯವರೆಗೆ ಕಾಲುವೆಗೆ ನೀರು ಹರಿಸಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಒಂದು ಬೆಳೆ ಬೆಳೆಯುವುದು ಕೂಡ ಕಷ್ಟವಾಗಲಿದೆ’ ಎನ್ನುತ್ತಾರೆ ನಾಗೇನಹಳ್ಳಿಯ ರೈತ ಬಸಪ್ಪ. ಈ ಗ್ರಾಮದ ರೈತರು ತುರ್ತಾ ಕಾಲುವೆಯ ನೀರನ್ನೇ ನೆಚ್ಚಿಕೊಂಡು ಕೃಷಿ ಮಾಡುತ್ತಾರೆ.

‘ದೇವರು ರೈತರೊಂದಿಗೆ ಪರೀಕ್ಷೆ ಮಾಡುತ್ತಿದ್ದಾನೋ ಏನೋ ತಿಳಿಯು ತ್ತಿಲ್ಲ. ಇಂತಹ ಕಡು ಕಷ್ಟಕಾಲ ಎಂದೂ ನೋಡಿರಲಿಲ್ಲ. ಆದರೆ, ಮೂರು ವರ್ಷಗಳಿಂದ ವಿಧಿ ನಮ್ಮನ್ನು ಕಾಡು ತ್ತಲೇ ಇದೆ. ಇನ್ನೆರಡು ತಿಂಗಳಲ್ಲಿ ಮಳೆ ಯಾಗದಿದ್ದರೆ ರೈತರು ಬದುಕುಳಿ ಯುವುದು ಬಹಳ ಕಷ್ಟವಾಗಲಿದೆ’ ಎಂದು ಅಳಲು ತೋಡಿಕೊಂಡರು.

‘ಕಾಲುವೆಗಳಿಗೆ ಈಗ ನೀರು ಬಿಟ್ಟರೆ ಭತ್ತ ನಾಟಿ ಮಾಡಲು ಅನುಕೂಲ ವಾಗುತ್ತದೆ. ಆದರೆ, ಜಲಾಶಯದಲ್ಲಿ ನೀರು ಇಲ್ಲದಿರುವುದರಿಂದ ಅಧಿಕಾರಿ ಗಳು ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕು. ಇತ್ತೀಚೆಗೆ ಉಪವಿಭಾಗಾ ಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನು ಭೇಟಿ ಮಾಡಿ ಕಾಲುವೆಗಳಿಗೆ ನೀರು ಹರಿಸುವಂತೆ ಕೋರಿದ್ದೇವೆ. ಶೀಘ್ರವೇ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ತಿಳಿಸಿದರು.

* * 

ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ನೋಡಿದರೆ ರೈತರು ಒಂದು ಬೆಳೆ ಬೆಳೆಯುವುದು ಕೂಡ ಕಷ್ಟವಾಗಲಿದೆ. ಸಂಕಷ್ಟದಲ್ಲಿರುವ ರೈತರನ್ನು ದೇವರೇ ಕಾಪಾಡಬೇಕು
ಜೆ. ಕಾರ್ತಿಕ್‌
ಜಿಲ್ಲಾ ಅಧ್ಯಕ್ಷ, ರೈತ ಸಂಘ– ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT