ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸಿನ ವರ್ಷಧಾರೆ: ರೈತರಲ್ಲಿ ಮಂದಹಾಸ

Last Updated 19 ಜುಲೈ 2017, 9:12 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಲೆನಾಡಿನಲ್ಲಿ ವರ್ಷಧಾರೆಯ ಸಿಂಚನ ಚುರುಕು ಗೊಂಡಿದ್ದು, ಜಿಲ್ಲೆಯ ವಿವಿಧೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ನಗರದಲ್ಲಿ ಬೆಳಿಗ್ಗೆಯಿಂದಲೇ ತುಂತುರು ಮಳೆ ಶುರುವಾಯಿತು. ಮಧ್ಯಾಹ್ನದ ಹೊತ್ತಿಗೆ ಬಿರುಸುಗೊಂಡು ಸುಮಾರು ಒಂದು ಗಂಟೆ ಜೋರಾಗಿ ಸುರಿಯಿತು. ರಾತ್ರಿ  ಜಿಟಿಜಿಟಿ ಮಳೆ ಸುರಿಯಿತು. 

ತಾಲ್ಲೂಕಿನ ಬ್ಯಾರವಳ್ಳಿ, ಜೋಳ ದಾಳು ಭಾಗದಲ್ಲಿ 14.5 ಮಿ.ಮೀ, ಆಲ್ದೂರು ಭಾಗದಲ್ಲಿ 12.5 ಮಿ.ಮೀ, ಕೆ.ಆರ್‌.ಪೇಟೆ ವ್ಯಾಪ್ತಿಯಲ್ಲಿ 5.5 ಮಿ.ಮೀ ಹಾಗೂ ಸಂಗಮೇಶ್ವರ ಪೇಟೆ ಭಾಗದಲ್ಲಿ 3.5 ಮಿ.ಮೀ ಮಳೆಯಾಗಿದೆ.

ಕಳಸ ವರದಿ: ಹೋಬಳಿಯಾದ್ಯಂತ ಮಂಗಳವಾರ ಬೆಳಿಗ್ಗಿನಿಂದ ಸತತವಾಗಿ ಮಳೆ ಸುರಿಯುತ್ತಿದೆ. ಗಾಳಿಯ ಜತೆಗೆ ಸುರಿಯುತ್ತಿರುವ ಮಳೆಯು ಚಳಿಯ ವಾತಾವರಣ ಮೂಡಿಸಿದೆ. ಜನರು ಮನೆಗಳಿಂದ ಹೊರಬಾರದೆ ಪಟ್ಟಣದ ವ್ಯಾಪಾರ ವಹಿವಾಟು ಕುಗ್ಗಿದೆ. ಹೋಬಳಿಯ ಸಂಸೆ, ಕುದುರೆಮುಖ, ಹಿರೇಬೈಲು, ಬಾಳೆಹೊಳೆಯಲ್ಲೂ ಮಳೆಯ ಆರ್ಭಟ ಜೋರಾಗಿತ್ತು. ಹಳ್ಳ, ತೊರೆಗಳ ಜೊತೆಗೆ ಭದ್ರಾ ನದಿಯ ನೀರು ಕೂಡ ಗಣನೀಯ ಪ್ರಮಾಣದಲ್ಲಿ ಏರಿದೆ.

ಜುಲೈ ಮೊದಲ ಎರಡು ವಾರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿತ್ತು. ಇದೀಗ ಸುರಿಯುತ್ತಿರುವ ಮಳೆ ಆ ಕೊರಗನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲಿದೆ. ಕಳಸದಲ್ಲಿ ಈ ವರ್ಷ ಜನವರಿಯಿಂದ ಈವರೆಗೆ ಮಳೆ ಪ್ರಮಾಣ 1000ಮಿ.ಮೀ. ದಾಟಿದೆ.

ಮೂಡಿಗೆರೆ ವರದಿ: ತಾಲ್ಲೂಕಿನಾದ್ಯಂತ ಮಂಗಳವಾರ ಮಳೆ ಚುರುಕುಗೊಂಡು ಹಗಲಿಡೀ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು. ಸೋಮವಾರ ಸಂಜೆಯಿಂದ ಪ್ರಾರಂಭವಾದ ಮಳೆ ಮಂಗಳವಾರ ಸಂಜೆಯವರೆಗೂ ನಿರಂತರವಾಗಿ ಸುರಿದು, ಭತ್ತದ ಸಸಿಮಡಿ ಹಾಕಿದ್ದ ರೈತರಿಗೆ ಹರ್ಷನೀಡಿತು.

ತಾಲ್ಲೂಕಿನ ಬಾಳೂರು, ಬಣಕಲ್‌, ಗೋಣಿಬೀಡು ಹೋಬಳಿಗಳಲ್ಲೂ ಉತ್ತಮ ಮಳೆಯಾಗಿದ್ದು, ಹೇಮಾವತಿ, ಜಪಾವತಿ, ಚಿಕ್ಕಳ್ಳ, ದೊಡ್ಡಳ್ಳಗಳಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಳವಾಗಿದೆ. ನದಿ ತೀರದ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

ಪಶ್ಚಿಮಘಟ್ಟದ ತಪ್ಪಲು ಪ್ರದೇಶ ವಾದ ದೇವರಮನೆ, ಭೈರಾಪುರ, ದೇವರುಂದ ಭಾಗದಲ್ಲಿ ಧಾರಾಕಾರ ಮಳೆಯ ನಡುವೆ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗುತ್ತಿರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಮಂಗಳವಾರ ಇಡೀ ದಿನ ದೇವರಮನೆ ಹಾಗೂ ಶಿಶಿಲ ಗ್ರಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು.

ಚಾರ್ಮಾಡಿ ಘಾಟಿಯಲ್ಲಿ ವಿಪರೀತ ಮಂಜು ಮುಸುಕಿದ್ದು, ರಸ್ತೆ ಕಾಣದೇ ವಾಹನ ಸವಾರರು ಪರದಾಡಿದರು. ಈ ನಡುವೆ ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ, ರಸ್ತೆ ಕಾಣದೇ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಹೆಚ್ಚಿನ ಹಾನಿ ಸಂಭವಿಸದ ಕಾರಣ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯಗೊಳಿಸಲಾಯಿತು.

ವಿದ್ಯುತ್‌ ಕಂಬಕ್ಕೆ ಹಾನಿ
ಮಳೆಯೊಂದಿಗೆ ಗಾಳಿ ಬೀಸಿದ್ದರಿಂದ ಬಣಕಲ್‌ ಹೋಬಳಿ ಯ ಹೆಗ್ಗುಡ್ಲು ಸಮೀಪ ಒಣಗಿದ್ದ ಮರವೊಂದು ವಿದ್ಯುತ್‌ ತಂತಿಯ ಮೇಲೆ ಬಿದ್ದ ಪರಿಣಾಮ, ಎಂಟಕ್ಕೂ ಅಧಿಕ ವಿದ್ಯುತ್‌ ಕಂಬಗಳು ತುಂಡಾಗಿದ್ದು, ಹೆಗ್ಗುಡ್ಲು, ಮತ್ತಿಕಟ್ಟೆ, ದಾಸರಹಳ್ಳಿ ಪ್ರದೇಶಗಳಿಗೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ಕೊಪ್ಪ ವರದಿ: ತಾಲ್ಲೂಕಿನಾದ್ಯಂತ ಮಂಗಳವಾರ ಧಾರಾಕಾರ ಮಳೆ ಸುರಿದಿದ್ದು, ತಾಲ್ಲೂಕಿನ ಜೀವನದಿ ತುಂಗೆ ಸೇರಿದಂತೆ ಹಳ್ಳಕೊಳ್ಳಗಳೆಲ್ಲ ತುಂಬಿ ಹರಿದಿವೆ. ಮಳೆಯ ಜೊತೆ ಬೀಸುತ್ತಿರುವ ಶೀತ ಗಾಳಿಯಿಂದಾಗಿ ವಾತಾವರಣದಲ್ಲಿ ಚಳಿ ಆವರಿಸಿದೆ. ಸತತ ಮಳೆಯಿಂದಾಗಿ ತಾಲ್ಲೂಕಿನೆಲ್ಲೆಡೆ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದೆ.

ಬಾಳೆಹೊನ್ನೂರು: ವಿದ್ಯುತ್ ಲೈನ್‌ಗೆ ಹಾನಿ
ಬಾಳೆಹೊನ್ನೂರು: ಮಂಗಳವಾರ ಸುರಿದ ಭಾರೀ ಗಾಳಿ ಮಳೆಗೆ ಪಟ್ಟಣದ ಕೊಪ್ಪ ರಸ್ತೆಯಿಂದ ಹಲಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು ಹಾನಿಯಾಗಿದೆ.

ಗಾಳಿಯ ರಭಸಕ್ಕೆ ಮೇ ಫ್ಲವರ್ ಮರವೊಂದು ಅರ್ಧ ಭಾಗ ತುಂಡಾಗಿ ಮುಖ್ಯರಸ್ತೆಯ ಬದಿಯಲ್ಲಿ ಹಾದುಹೋಗಿದ್ದ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಇದರಿಂದ ಮೂರು ವಿದ್ಯುತ್ ಕಂಬಗಳು ತುಂಡಾಗಿವೆ. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಮರ ಬಿದ್ದ ಪರಿಣಾಮ ಪಟ್ಟಣದಲ್ಲಿ ಸಂಜೆ 7.30ರವರೆಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹಲಸೂರು ಗ್ರಾಮಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಮರಬಿದ್ದಿದ್ದರಿಂದ ಆ ಭಾಗಕ್ಕೆ ವಾಹನಗಳು ತೆರಳಲು ಸಹ ಅಡಚಣೆ ಉಂಟಾಗಿತ್ತು.

ಕೂಡಲೇ ಸ್ಥಳಕ್ಕೆ ಬಂದ ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯ ಹಲಸೂರು ಗೆಳೆಯರ ಬಳಗದ ಸದಸ್ಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರ ಬಿದ್ದ ಭಾಗದಲ್ಲಿ 3ವಿದ್ಯುತ್‌ ಪರಿವರ್ತಕಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಿದೆ. ಬುಧವಾರ ಅದನ್ನು ಸರಿಪಡಿಸಲಾಗುವುದು ಎಂದು ಮೆಸ್ಕಾಂ ಎಇಇ ನಂದೀಶ್‌ ತಿಳಿಸಿದ್ದಾರೆ.

ಮಳೆಯಿಂದ ಹಾನಿ
ಶೃಂಗೇರಿ: ತಾಲ್ಲೂಕಿನಲ್ಲಿ ಮಂಗಳವಾರ ಎಡೆಬಿಡದೆ ಮಳೆ ಸುರಿದಿದೆ. ಒಂದೇ ದಿನ 38.4ಮಿ.ಮೀ ಮಳೆ ಸುರಿದಿದ್ದು, ಜನವರಿಯಿಂದ ಇಲ್ಲಿ ತನಕ 1230.8 ಮಿ.ಮೀ ವರ್ಷಧಾರೆಯಾಗಿದೆ. ಹಾಲಂದೂರು, ಅಡ್ಡಗದ್ದೆ, ಕಲ್ಕಟ್ಟೆ, ಮಾಗಲು, ಮೆಣಸೆ, ಮಸಿಗೆ, ಕಿಗ್ಗಾ, ಕೆರೆಕಟ್ಟೆ ಮೊದಲಾದ ಕಡೆ ಭಾರಿ ಮಳೆಯಾಗಿದೆ. ತುಂಗಾನದಿಯ ನೀರಿನ ಏರಿಕೆ ಪ್ರಮಾಣ ಹೆಚ್ಚಿದೆ. ಭತ್ತದ ಕೃಷಿ ಚಟುವಟಿಕೆ ತಾಲ್ಲೂಕಿನಲ್ಲಿ ಚುರುಕುಗೊಂಡಿದೆ.

ಕೆರೆಕಟ್ಟೆ ಸರ್ವೇಶ್ವರ ದೇವಸ್ಥಾನದ ಬಳಿ ಧರೆ ಕುಸಿದು ವಾಹನ ಸಂಚಾರ ಹಲವು ಗಂಟೆ ಸ್ಥಗಿತಗೊಂಡಿತು. ಶೃಂಗೇರಿಯಿಂದ ಮಂಗಳೂರಿಗೆ, ದಕ್ಷಿಣ ಕನ್ನಡದಿಂದ ಶೃಂಗೇರಿಗೆ ಈ ಹಾದಿಯಿಂದ ವಾಹನದಲ್ಲಿ ಚಲಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT