ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳು ಒಂದಾಗಿ: ಸುತ್ತೂರು ಸ್ವಾಮೀಜಿ

Last Updated 19 ಜುಲೈ 2017, 9:50 IST
ಅಕ್ಷರ ಗಾತ್ರ

ಉಡುಪಿ: ‘ಹಿಂದೂ ಧರ್ಮ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು, ನಮ್ಮಲ್ಲಿ ಇರುವಂತೆ ಪರಧರ್ಮ ಸಹಿಷ್ಣತೆ ಬೇರೆ ಧರ್ಮದಲ್ಲಿ ಇಲ್ಲ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಶ್ರೀಕೃಷ್ಣ ಮಠ, ಪರ್ಯಾಯ ಪೇಜಾವರ ಮಠ ರಾಜಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಿಂದೂ ಧರ್ಮದಲ್ಲಿ ಮಾತ್ರ ಸ್ವ ಧರ್ಮ ಪ್ರೀತಿ ಹಾಗೂ ಪರ ಧರ್ಮ ಸಹಿಷ್ಣುತೆ ಇದೆ. ಆದರೆ ಬೇರೆ ಧರ್ಮದಲ್ಲಿ ಇಂತಹ ಭಾವನೆ ಇಲ್ಲ. ವ್ಯಕ್ತಿಗತ ಸ್ವ ಪ್ರತಿಷ್ಠೆ ಕಾರಣದಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ.

ವ್ಯಕ್ತಿಗಳಿಗೆ ಪ್ರಾಧಾನ್ಯ ಕೊಡುವುದನ್ನು ಬಿಟ್ಟು ಧರ್ಮದಲ್ಲಿ ನಂಬಿಕೆ, ನಿಷ್ಠೆ ಮತ್ತು ಭಗವಂತನಲ್ಲಿ ಅಚಲ ವಿಶ್ವಾಸ ಇಟ್ಟುಕೊಂಡರೆ ಸಮಾಜದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಹಿಂದೂಗಳು ಸಂಕುಚಿತ ಭಾವನೆ ಬಿಟ್ಟು ಸಂಘಟಿತರಾಗಬೇಕು’ ಎಂದು ಅವರು ಸಲಹೆ ನೀಡಿದರು.

‘ಧಾರ್ಮಿಕ ಚೌಕಟ್ಟಿನ ಒಳಗೆ ಜನ ಸಮುದಾಯದಲ್ಲಿ ಸಾಮರಸ್ಯ ಮೂಡಿಸಿ ಎಲ್ಲ ಹಿಂದೂಗಳನ್ನು ಒಂದಾಗಿರುವಂತೆ ಆಧ್ಯಾತ್ಮಿಕ ಸಂದೇಶವನ್ನು ಪೇಜಾವರ ಸ್ವಾಮೀಜಿ ನೀಡಿದ್ದಾರೆ. ವಿಶೇಷ ವ್ಯಕ್ತಿತ್ವ ಬೆಳೆಸಿಕೊಂಡಿರುವ ಅವರು ವಿಶ್ವಪ್ರಸಿದ್ಧರಾಗಿದ್ದಾರೆ. ಕೃಷ್ಣ ಮಠದ ಹಾಗೆಯೇ ಅವರೂ ಖ್ಯಾತಿ ಪಡೆದಿದ್ದಾರೆ. ತಾವು ಮಾಡಿದ ತಪಸ್ಸನ್ನು ಸಮಾಜಕ್ಕೆ ಧಾರೆ ಎರೆದಿದ್ದಾರೆ’  ಎಂದು ಬಣ್ಣಿಸಿದರು.

ವಿಶ್ವೇಶತೀರ್ಥ ಸ್ವಾಮೀಜಿ ಅವರು ಮಾತನಾಡಿ, ‘ದಾಸ ಮತ್ತು ಶರಣ ಸಾಹಿತ್ಯದಲ್ಲಿ ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಚಾರದಲ್ಲಿ ಭಿನ್ನತೆ ಇದ್ದರೂ, ಆಧ್ಯಾತ್ಮಿಕ ವಿಷಯ ಎರಡಲ್ಲಿಯೂ ಒಂದೇ ಆಗಿದೆ. ಸಹನೆ, ಸೌಹಾರ್ದ, ಸಹಕಾರ ಬೆಳೆಸಿಕೊಂಡರೆ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ. ಸುತ್ತೂರು ಶ್ರೀಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಎಲ್ಲರಿಗೂ ಅದರ್ಶಪ್ರಾಯರಾಗಿದ್ದಾರೆ’ ಎಂದರು.

‘ಭವ್ಯವಾದ ಎತ್ತರದ ನಿಲುವು ಹೊಂದಿರುವ ಸುತ್ತೂರು ಶ್ರೀಗಳು ಶರೀರದ ನಿಲುವಿಗಿಂತ ಎತ್ತರ ವ್ಯಕ್ತಿತ್ವ ಹೊಂದಿ ದೊಡ್ಡ ಸಾಧನೆ ಮಾಡಿದ್ದಾರೆ. ಮಠ ಎಂಬ ಶಬ್ದಕ್ಕೆ ವಿದ್ಯಾರ್ಥಿಗಳು, ಶಿಷ್ಯರು ಒಂದಾಗಿರುವ ಸ್ಥಳ ಎಂದಿದೆ. ಎಲ್ಲ ವಿದ್ಯಾರ್ಥಿಗಳು ವಿದ್ಯೆ ನೀಡಿದ ಶ್ರೇಯಸ್ಸು ಅವರದ್ದ’ ಎಂದು ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು. ಶ್ರೀಪತಿ ತಂತ್ರಿ ಸ್ವಾಗತಿಸಿದರು, ಗುರುಮೂರ್ತಿ ವಂದಿಸಿದರು.

* * 

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಮಾಜಕ್ಕೆ ಬೇಕಾಗಿರುವ ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಮುಂದಾಳತ್ವವನ್ನು ಸಮರ್ಥವಾಗಿ ನೀಡಿದ್ದಾರೆ.
ವಿಶ್ವಪ್ರಸನ್ನ ಸ್ವಾಮೀಜಿ,  ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT