ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಸದಸ್ಯನ ಬಂಧನ ಖಂಡಿಸಿ ಬಿಜೆಪಿ ಧರಣಿ

Last Updated 19 ಜುಲೈ 2017, 10:12 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ, ಬಂಧಿಸಲಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಮಾರಚಾಕನಹಳ್ಳಿ ಗ್ರಾಮಸ್ಥರು, ಮುಖಂಡರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

ಮಾರಚಾಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ ಅವರ ವಿರುದ್ಧ ಶಿವಳ್ಳಿ ಠಾಣೆಯ ಎಸ್ಐ ಸುಳ್ಳು ಮೊಕದ್ದಮೆ ದಾಖಲಿಸಿ, ರಾತ್ರೋರಾತ್ರಿ ಬಂಧಿಸಿದ್ದಾರೆ. ಇದು, ಖಂಡನೀಯ ಎಂದು ಆರೋಪಿಸಿದರು.

ಎಸ್‌ಪಿ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕಚೇರಿ ಎದುರಿನ ರಸ್ತೆಯಲ್ಲಿ ಧರಣಿ ನಡೆಸಿದರು. ಬಂಧಿತ ಗ್ರಾ.ಪಂ ಸದಸ್ಯನ ಮೇಲೆ ಕಾರಾಗೃಹ ಸಿಬ್ಬಂದಿ ಕೂಡ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಯ ನೀರುಗಂಟಿ ಒಬ್ಬರಿಗೆ 9 ತಿಂಗಳಿನಿಂದ ಸಂಬಳ ಪಾವತಿ ಆಗಿರಲಲ್ಲ. ಈ ಕುರಿತು ಅವರು ಪಿಡಿಒ ವಿರುದ್ಧ ನೀಡಿದ ದೂರು ಸ್ವೀಕರಿಸಲು ಎಸ್‌ಐ ತಕರಾರು ಮಾಡಿದ್ದರು. ಇದನ್ನು ಪ್ರಶ್ನಿಸಿದ ಕಾರಣಕ್ಕೆ ಎಸ್‌ಐ ಅವರು ಪಿಡಿಒ ಅವರಿಂದಲೇ ಪ್ರತಿದೂರು ದಾಖಲಿಸಿ, ಸಕಾರಣವಿಲ್ಲದೆ ಪುಟ್ಟಸ್ವಾಮಿ ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಿ ಕ್ರಮ ಜರುಗಿಸಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ವಿಧಾನಪರಿಷತ್‌ ಮಾಜಿ ಸದಸ್ಯ ಅಶ್ವತ್ಥ್‌ನಾರಾಯಣ ಅವರು, ‘ಪಂಚಾಯಿತಿ ಸದಸ್ಯರೊಬ್ಬರನ್ನು ರಾತ್ರೋರಾತ್ರಿ ಬಂಧಿಸಿ, ಜೈಲಿಗೆ ಕಳುಹಿಸಿದ ವರ್ತನೆ ಖಂಡನೀಯ. ಸುಳ್ಳು ದೂರು ನೀಡಿರುವ ಪಿಡಿಒ ವಿರುದ್ಧವೂ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಎಸ್‌ಪಿ ರಾಧಿಕಾ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಎಸ್‌ಪಿ ಅವರು, ‘ಪರಿಶೀಲಿಸಿ ಕ್ರಮಕೈಗೊಳ್ಳುವ’ ಭರವಸೆ ನೀಡಿದರು. ಮುಖಂಡರಾದ ಶ್ರೀಧರ, ರಮೇಶ್‌ ಪೀಹಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ್, ಕಾರ್ಯದರ್ಶಿ ಮಲ್ಲಿಕಾರ್ಜುನ, ರೈತ ಮೋರ್ಚಾದ ಮುಖಂಡ ರವೀಂದ್ರ, ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಸಿದ್ದರಾಜುಗೌಡ ಪ್ರತಿಭಟನೆಯ ಮುಂಚೂಣಿಯಲ್ಲಿ ಇದ್ದರು.

ಬಂಧನ, ಬಿಡುಗಡೆ: ಗ್ರಾಮಸ್ಥರು ಮತ್ತು ಬಿಜೆಪಿ ಮುಖಂಡರು ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಪೊಲೀಸರು ಬಳಿಕ,  ಅವರನ್ನು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT