ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಮಳಿಗೆಗಳಿಗೆ ಕಡಿವಾಣ, ಆಗ್ರಹ

Last Updated 19 ಜುಲೈ 2017, 10:14 IST
ಅಕ್ಷರ ಗಾತ್ರ

ಮಂಡ್ಯ: ನಗರದ ಪ್ರಮುಖ ರಸ್ತೆಗಳು ಸೇರಿದಂತೆ ವಿವಿಧೆಡೆ ಅನಧಿಕೃತವಾಗಿ ಅಂಗಡಿ, ಮಳಿಗೆಗಳು ತಲೆ ಎತ್ತುತ್ತಿದ್ದು, ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ನಗರಸಭೆಯ ಸದಸ್ಯರು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

ಈ ಹಿಂದೆಯೂ ಅಕ್ರಮ ಮಳಿಗೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಇನ್ನಾದರೂ ಆಡಳಿತ ಚುರುಕಾಗಬೇಕು. ಅನಧಿಕೃತ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸದಸ್ಯರ ಮಾತುಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ‘ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯದೇ  ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾಗಬೇಕು. ಶೀಘ್ರ ದಿನಾಂಕ ಗೊತ್ತುಪಡಿಸಿ’ ಎಂದು ಪೌರಾಯುಕ್ತರಿಗೆ ಸೂಚಿಸಿದರು.

ವಿಷಯ ಪ್ರಸ್ತಾಪಿಸಿದ ಸದಸ್ಯ ಅರುಣ್ ಕುಮಾರ್, ‘ಏಕಾಏಕಿ ಅನಧಿಕೃತವಾಗಿ ಅಂಗಡಿಗಳು ತಲೆ ಎತ್ತುವುದರಿಂದ  ವಾಹನ ದಟ್ಟಣೆ ಉಂಟಾಗುತ್ತದೆ. ಪ್ರಮುಖ ರಸ್ತೆಗಳಲ್ಲಿ ಈ ಸಮಸ್ಯೆ ಕಾಣುತ್ತಿದೆ’ ಎಂದರು.

‘ವಿ.ವಿ.ರಸ್ತೆ, ಅಶೋಕ ನಗರ, ಸುಭಾಷ್ ನಗರದ ರಸ್ತೆಗಳಲ್ಲಿ ಈಗಾಗಲೇ ಸಂಚಾರ ದಟ್ಟಣೆಯಿದೆ. ಸವಾರರು ವಾಹನ ನಿಲ್ಲಿಸಲೂ ಪರದಾಡುವಂತೆ ಆಗಿದೆ’ ಎಂದು ಗಮನಸೆಳೆದರು. ಈ ಹಂತದಲ್ಲಿ ಪ್ರತಿಕ್ರಿಯಿಸಿದ ಪೌರಾಯುಕ್ತ ನರಸಿಂಹಮೂರ್ತಿ, ‘ಕಾರ್ಯಾಚರಣೆಯನ್ನು ಕೈಗೊಂಡರೆ ಕೆಲ ಸದಸ್ಯರೇ ಅಂಗಡಿ ತೆರವು ಮಾಡದಂತೆ ಒತ್ತಡ ಹೇರುತ್ತಾರೆ. ನಾವು ಯಾರ ಮಾತು ಕೇಳಬೇಕು’ ಎಂದು ಪ್ರಶ್ನಿಸಿದರು.

ಇದರಿಂದ ಇರಿಸುಮುರಿಸಿಗೆ ಒಳಗಾದ ಕೆಲ ಸದಸ್ಯರು, ‘ನಗರದ ಅಭಿವೃದ್ಧಿ ದೃಷ್ಟಿಯಿಂದ ತೆರವು ಅಗತ್ಯ. ಒತ್ತಡ ಹೇರುವವರ ಹೆಸರನ್ನು  ಸಭೆಯಲ್ಲಿ ಉಲ್ಲೇಖಿಸಿ. ಅವರ ವಿರುದ್ಧವೂ ಹೋರಾಟ ಮಾಡೋಣ’ ಎಂದು ಹೇಳಿದರು. ‘ಅನಧಿಕೃತ ಅಂಗಡಿಗಳ ತೆರವಿಗೆ ಎಲ್ಲರ ಬೆಂಬಲವಿದೆ. ದಿನಾಂಕ ನಿಗದಿ ಪಡಿಸಿ, ಪೊಲೀಸ್ ರಕ್ಷಣೆ ಪಡೆದು ಕಾರ್ಯಾಚರಣೆಗೆ ಮುಂದಾಗೋಣ’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸದಸ್ಯ ಶಶಿಧರ್ ಮತ್ತು ಅರುಣಕುಮಾರ್‌ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಸದಸ್ಯ ಕೆರಗೋಡು ಸೋಮಶೇಖರ್, ‘ಸದಸ್ಯರು ಆವೇಶದಿಂದ ಮಾತನಾಡಬಾರದು. ಪೊಲೀಸರ ನೆರವು ಪಡೆದು ಕ್ರಮಬದ್ಧವಾಗಿಯೇ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸೋಣ’ ಎಂದು ಸಲಹೆ ಮಾಡಿದರು.
ಡೆಂಗಿ ನಿಯಂತ್ರಣ, ಕ್ರಮಕ್ಕೆ ಆಗ್ರಹ: ‘ನಗರದಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಜ್ವರದ ಭೀತಿ ಹೆಚ್ಚುತ್ತಿದ್ದು, ಇದನ್ನು ತಡೆಯಲು ನಗರಸಭೆ ಕೈಗೊಂಡಿರುವ ಕ್ರಮಗಳನ್ನು ತಿಳಿಸಬೇಕು’ ಎಂದು  ಸದಸ್ಯ ಮಹೇಶ್ಚಂದ್ರ ಪಟ್ಟುಹಿಡಿದರು.

‘ನಾನು ಪ್ರತಿನಿಧಿಸುವ ವಾರ್ಡ್‌ನಲ್ಲಿ 22 ಮಂದಿ ಡೆಂಗಿ ಜ್ವರಕ್ಕೆ ತುತ್ತಾಗಿದ್ದಾರೆ. ನಿಯಂತ್ರಣದ ಕ್ರಮಗಳ ಬಗ್ಗೆ ಜನರು ಪ್ರಶ್ನಿಸುತ್ತಾರೆ. ಏನು ಉತ್ತರಿಸಬೇಕು’ ಎಂದು ಪ್ರಶ್ನಿಸಿದರು. ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲ ವಾರ್ಡ್ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಿ. ಸೊಳ್ಳೆಗಳ ಹಾವಳಿ ನಿಯಂತ್ರಿಸಲು, ಸ್ವಚ್ಛತೆ ಕಾಪಾಡಲು ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಮಹೇಶ್ ಕೃಷ್ಣ ಅವರು, ‘ಆರೋಗ್ಯ ಅಧಿಕಾರಿಗಳು ಡೆಂಗಿ, ಚಿಕೂನ್‌ಗುನ್ಯಾ ಪ್ರಕರಣಗಳು, ನಿಯಂತ್ರಣ, ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು’ ಎಂದು ಒತ್ತಾಯಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಶಿಧರ್‌ ಬಸವರಾಜ್, ‘ಸ್ವಚ್ಛತೆ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಾಗೃತಿಗೆ ಬೀದಿನಾಟಕ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜನೆ ಹಾಗೂ ಕರಪತ್ರಗಳ ಹಂಚಿಕೆ ಕಾರ್ಯ ನಡೆದಿದೆ ಎಂದು ಹೇಳಿದರು.

ಪರಿಸರ ಅಧಿಕಾರಿಗಳು ವಾರ್ಡ್‌ಗೆ ಭೇಟಿ ನೀಡಿ ಕ್ರಮ ಜರುಗಿಸಲಿ ಎಂದು  ಸದಸ್ಯ ರವೀಂದ್ರ ಸಲಹೆ ನೀಡಿದರು.  ಪರಿಸರ ಎಂಜಿನಿಯರ್ ಸುಬ್ರಹ್ಮಣ್ಯ  ಮಾತನಾಡಿದರು. ಪೌರಾಯುಕ್ತ ನರಸಿಂಹಮೂರ್ತಿ ಅವರು, ಆಯ್ದ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಬೇಕು ಎಂದು ಪರಿಸರ ಎಂಜಿನಿಯರ್‌ಗಳಿಗೆ ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT