ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾದ ಯಗಚಿ ಜಲಾಶಯದ ಒಡಲು

Last Updated 19 ಜುಲೈ 2017, 10:32 IST
ಅಕ್ಷರ ಗಾತ್ರ

ಬೇಲೂರು: ಮುಂಗಾರು ಮಳೆ ಕೊರತೆಯಿಂದಾಗಿ ಇಲ್ಲಿನ ಯಗಚಿ ಜಲಾಶಯದ ಒಡಲು ಬರಿದಾಗಿದೆ. ಅಣೆಕಟ್ಟೆಯಲ್ಲಿನ ನೀರು ತಳಮಟ್ಟ ಕಂಡಿದೆ. ಜಲಾಶಯ ನಿರ್ಮಾಣಗೊಂಡ 13 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನೀರು ಸಂಪೂರ್ಣ ಖಾಲಿಯಾಗಿ ನೆಲ ಕಾಣುತ್ತಿದೆ. ಮಳೆ ಬಾರದಿದ್ದರೆ, ಬೇಲೂರು, ಚಿಕ್ಕಮಗಳೂರು ಪಟ್ಟಣಗಳ ಜನರಿಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಸಮೀಪದ ಚಿಕ್ಕಬ್ಯಾಡಿಗೆರೆ ಬಳಿ ನಿರ್ಮಿಸಿರುವ ಯಗಚಿ ಅಣೆಕಟ್ಟೆಯಲ್ಲಿ 2003–04ನೇ ಸಾಲಿನಿಂದ ನೀರು ಸಂಗ್ರಹಿಸಲಾಗುತ್ತಿದೆ. ಗರಿಷ್ಠ 964.603 ಮೀಟರ್‌ ಎತ್ತರವಿದ್ದು, ಈಗ 954.46 ಮೀಟರ್ ನೀರಿದೆ. ಅಣೆಕಟ್ಟೆಯ ಡೆಡ್‌ ಸ್ಟೋರೇಜ್ ಮಟ್ಟ 954 ಮೀಟರ್‌. 3.60 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 0.422 ಟಿಎಂಸಿ ಅಡಿ ನೀರಿದೆ. ಇದರಲ್ಲಿ ಡೆಡ್‌ ಸ್ಟೋರೇಜ್‌ 0.364 ಟಿಎಂಸಿ ಅಡಿ ಕಳೆದರೆ ಬಳಕೆಗೆ ಉಳಿಯುವ ನೀರು ಕೇವಲ 0.058 ಟಿಎಂಸಿ ಅಡಿ ಮಾತ್ರ.

ಬೇಲೂರು, ಚಿಕ್ಕಮಗಳೂರು ಪಟ್ಟಣ ಜನರಿಗೆ ಕುಡಿಯುವ ನೀರು ಪೂರೈಕೆಗೆ ಪ್ರತಿದಿನ 11.47 ಕ್ಯುಸೆಕ್‌ ನೀರು ಅವಶ್ಯಕತೆಯಿದೆ. ಈಗ ಅಣೆಕಟ್ಟೆಯಲ್ಲಿರುವ ನೀರಿನಿಂದ ಈ ಎರಡೂ ಪಟ್ಟಣಗಳ ಜನರಿಗೆ 15 ದಿನ ಮಾತ್ರ ಪೂರೈಕೆ ಮಾಡಬಹುದಾಗಿದೆ. 15 ದಿನದೊಳಗೆ ಮಳೆ ಬಾರದಿದ್ದರೆ, ಬೇಲೂರು ಹಾಗೂ ಚಿಕ್ಕಮಗಳೂರು ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಕಳೆದ ವರ್ಷ ಜಲಾಶಯಕ್ಕೆ 0.87 ಟಿಎಂಸಿ ಅಡಿ ನೀರು ಹರಿದು ಬಂದಿತ್ತಾದರೂ ಈ ವರ್ಷ ಜಲಾಶಯಕ್ಕೆ ಒಂದೇ ಒಂದು ಕ್ಯುಸೆಕ್‌ ನೀರು ಹರಿದು ಬಂದಿಲ್ಲ.
ಇದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 1.48 ಟಿಎಂಸಿ ಅಡಿ ನೀರಿತ್ತು. ನೀರಾವರಿ ಮತ್ತು ಕುಡಿಯುವ ನೀರಿಗೆ ಬಳಕೆ ಮಾಡಲಾಗಿತ್ತು.

ಈ ವರ್ಷದ ಮಾರ್ಚ್‌– ಏಪ್ರಿಲ್‌ ತಿಂಗಳಿನಲ್ಲಿ ಹಾಸನ ನಗರದ ಜನತೆಗೆ ಕುಡಿಯುವ ನೀರು ಪೂರೈಕೆಗೆ 15 ದಿನಗಳ ಕಾಲ 200 ಕ್ಯುಸೆಕ್‌ ನೀರು ಹರಿಸಲಾಗಿತ್ತು. ಇದು ಕೂಡ ಜಲಾಶಯ ಬರಿದಾಗಲು ಕಾರಣವಾಗಿದ್ದು, ಈಗ ಬೇಲೂರು ಪಟ್ಟಣದ ಜನರಿಗೆ ನೀರಿಲ್ಲದಂತಾಗಿದೆ.

ನೀರು ಸಂಗ್ರಹಿಸಲು ಆರಂಭವಾದ 13 ವರ್ಷಗಳಲ್ಲಿ 9 ವರ್ಷ ಜಲಾಶಯ ಭರ್ತಿಯಾಗಿದ್ದರೆ, 4 ವರ್ಷ ಭರ್ತಿಯಾಗಿಲ್ಲ. 2015–16ರಲ್ಲಿ 3.68 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಆಲ್ದೂರು, ಗೆಂಡೇಹಳ್ಳಿ ಭಾಗದಲ್ಲಿ ಮಳೆ ಕೊರತೆಯಿಂದ ನೀರು ಹರಿದು ಬಂದಿಲ್ಲ.

ಕೊಳವೆಬಾವಿ  ನೀರು ಪೂರೈಕೆಗೆ ಚಿಂತನೆ
ಬೇಲೂರು: ಜಲಾಶಯದಿಂದ ನೀರು ಪೂರೈಕೆ ಸ್ಥಗಿತಗೊಂಡರೆ, ಕೊಳವೆಬಾವಿಗಳ ಮೂಲಕ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ತಿಳಿಸಿದರು.

ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದ ₹ 27 ಲಕ್ಷ ಹಣದಲ್ಲಿ ಹೊಸದಾಗಿ 13 ಕೊಳವೆಬಾವಿ ಕೊರೆಸಲಾಗಿದೆ. ಹಳೆಯ 45 ಕೊಳವೆಬಾವಿಗಳಿದ್ದು ಅವುಗಳ ಮೂಲಕ ನೀರು ಪೂರೈಸಲಾಗುವುದು. ಕೊಳವೆಬಾವಿಗಳೂ ವಿಫಲವಾದರೆ ಜನರಿಗೆ ನೀರು ಕೊಡುವುದು ಅಸಾಧ್ಯ. ದೇವರೇ ಕಾಪಾಡಬೇಕು ಎಂದು ಮಾಹಿತಿ ನೀಡಿದರು.

* * 

ಬೇಲೂರು, ಚಿಕ್ಕಮಗಳೂರು ಪಟ್ಟಣಕ್ಕೆ 15 ದಿನ ಮಾತ್ರ ನೀರು ಪೂರೈಕೆ ಮಾಡಬಹುದಾಗಿದೆ. ಈಗಾಗಲೇ ಅರಸೀಕೆರೆ ತಾಲ್ಲೂಕಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ
ರಾಧಾಕೃಷ್ಣ
ಕಾರ್ಯಪಾಲಕ ಎಂಜಿನಿಯರ್‌, ಯಗಚಿ ಜಲಾಶಯ ಯೋಜನೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT