ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದಲ್ಲಿ 4ನೇ ಬಾರಿ ನೀರಿನಮಟ್ಟ ಇಳಿಕೆ

Last Updated 19 ಜುಲೈ 2017, 10:36 IST
ಅಕ್ಷರ ಗಾತ್ರ

ಹಾಸನ: ಮುಂಗಾರು ದುರ್ಬಲಗೊಂಡ ಪರಿಣಾಮ ಈ ಬಾರಿಯೂ ಹೇಮಾವತಿ ಜಲಾಶಯದ ಒಡಲು ಭರ್ತಿಯಾಗಿಲ್ಲ.  ಕಳೆದ ವರ್ಷಕ್ಕೆ ಹೋಲಿಸಿದರೂ ನೀರು ತೀರಾ ಕಡಿಮೆ ಇದೆ. ಜಿಲ್ಲೆಯಲ್ಲಿ ಮೂರು ಜಲಾಶಯ ಇದ್ದರೂ ಕುಡಿಯುವ ನೀರಿಗೆ ಹಾಹಾ ಕಾರ ತಪ್ಪಿಲ್ಲ. ಬೇಲೂರಿನ ಯಗಚಿ ಮತ್ತು ಆಲೂರಿನ ವಾಟೆ ಹೊಳೆ ಜಲಾಶಯದ ಒಳಹರಿವು ಶೂನ್ಯ. ಮುಂದೇನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಹೀಗಾಗಿ, ಮಳೆ ನೆಚ್ಚಿಕೊಂಡು ಬೆಳೆ ಬೆಳೆಯುವ ಬದಲು ಕೃಷಿ, ತೋಟಗಾರಿಕೆ ಇಲಾಖೆ ಸಲಹೆ ಪಡೆಯುವಂತೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ.

ಸಕಲೇಶಪುರ ತಾಲ್ಲೂಕು ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರದೇಶದಲ್ಲಿ ಅಧಿಕ ಮಳೆಯಾದರೆ ಅಣೆಕಟ್ಟೆಗೆ ಒಳಹರಿವು ಹೆಚ್ಚಳವಾಗುತ್ತದೆ. ಸಾಮಾನ್ಯವಾಗಿ ಜುಲೈನಲ್ಲಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ, ಈ ವರ್ಷ ತುಂಬುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ಹೇಮಾವತಿ ಅಣೆಕಟ್ಟೆ ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಅಡಿ. ಕಳೆದ ವರ್ಷ ಇದೇ ದಿನ ಜಲಾಶಯ 2895.66 ಅಡಿಗಳಿತ್ತು. ಈಗ 2875.68 ಅಡಿಗಳಿದೆ. ಹಿಂದೆ 17.23 ಟಿಎಂಸಿ ಅಡಿ ಇತ್ತು. ಈಗ 8 ಟಿಂಎಸಿ ಅಡಿ ನೀರು ಇದೆ. ಇದರಲ್ಲಿ ಡೆಡ್‌ ಸ್ಟೋರೆಜ್‌ (ತಳಮಟ್ಟದ, ಬಳಕೆಗೆ ಸಿಗದ) ಹೊರುತುಪಡಿಸಿದರೆ 3.03 ಟಿಎಂಸಿ ಅಡಿ ನೀರು ಕುಡಿಯಲು ಲಭ್ಯವಾಗಲಿದೆ. ಪ್ರಸ್ತುತ 2158 ಕ್ಯುಸೆಕ್‌ ಒಳ ಹರಿವು ಇದ್ದರೇ, ಕುಡಿಯುವ ನೀರಿನ ಉದ್ದೇಶ ಕ್ಕಾಗಿ 150 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ಹೇಮಾವತಿ ಜಲಾಶಯದ ಇತಿಹಾಸ ದಲ್ಲಿ ನಾಲ್ಕು ಬಾರಿ ಕಡಿಮೆ ನೀರಿನ ಸಂಗ್ರಹವಾಗಿದೆ. 1982ರ ಜುಲೈನಲ್ಲಿ 4.20 ಟಿಎಂಸಿ ಅಡಿ, 1995ರಲ್ಲಿ 6.34 ಟಿಎಂಸಿ ಅಡಿ, 2002ರಲ್ಲಿ 6.49 ಟಿಎಂಸಿ ಅಡಿ, 2003ರಲ್ಲಿ 5.70 ಟಿಎಂಸಿ ಅಡಿ ಸಂಗ್ರಹ ಇತ್ತು.

‘ಆರಂಭದಲ್ಲಿ ಮುಂಗಾರು ಕೆಲ ದಿನ ಆರ್ಭಟಿಸಿತು. ರೈತರು ಮಳೆ ನಂಬಿ ಬಿತ್ತನೆ ಮಾಡಿದರು. ಜಲಾಶಯದ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಮಧ್ಯಂತರದಲ್ಲಿ ನೀರು ಬಿಡುಗಡೆ ಮಾಡುವುದನ್ನು ನಿಲ್ಲಿಸಲಾಯಿತು. ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಯಿತು’ ಎಂದು ರೈತ ಮಹೇಶಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಸದ್ಯ ಜಲಾಶಯದಲ್ಲಿನ ನೀರನ್ನು ಕುಡಿಯಲು ಮಾತ್ರ ಬಳಸಲಾಗುವುದು. ಜಿಲ್ಲೆಯ ಜಲಾಶಯಗಳಲ್ಲಿ ಸಂಗ್ರಹ ಇರುವ ನೀರನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು. ರೈತರು ಹಾಗೂ ಜನಸಾಮಾನ್ಯರಿಗೆ ನೀರು ಒದಗಿಸಲು ಏನು ಮಾಡಬೇಕು ಎಂಬುದರ ಕುರಿತು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಕೆಲವೆಡೆ 800 ಅಡಿ ಆಳ ಕೊರೆದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಶೀಘ್ರವೇ ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡು ಕುಡಿಯುವ ನೀರಿನ ಶಾಶ್ವತ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿ ಸಲಾಗುವುದು’ ಎಂದು ಜಿಲ್ಲಾಧಿಕಾರಿ ರೋಹಣಿ ಸಿಂಧೂರಿ ತಿಳಿಸಿದರು.

ಎಷ್ಟು ಎಕರೆಗೆ ನೀರು ?
ಹಾಸನ: ಹೇಮಾವತಿ ಜಲಾಶಯದ ನೀರು ಪ್ರತಿ ವರ್ಷ ಹಾಸನ ಜಿಲ್ಲೆಯ 1,74,48 ಎಕರೆಗೆ, ಮಂಡ್ಯ ಜಿಲ್ಲೆಯ 2,92,920 ಎಕರೆ, ಮೈಸೂರು ಜಿಲ್ಲೆಯ 5,600 ಎಕರೆ ಮತ್ತು ತುಮಕೂರು ಜಿಲ್ಲೆಯ 3.16 ಲಕ್ಷ ಎಕರೆ ಕೃಷಿಗೆ ನೀರು ಒದಗಿಸುತ್ತದೆ.

ಅಲ್ಲದೇ ಏತ ನೀರಾವರಿ ಅವಲಂಬಿತ 45,756 ಎಕರೆಗೆ ನೀರು ಉಣಿಸುತ್ತದೆ ಜಲಾಶಯ. ಹಾಸನ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಗೆ ಜಲಾಶಯದಿಂದ 4.57 ಟಿಎಂಸಿ ನೀರನ್ನು ಕುಡಿಯಲು ಒದಗಿಸಲಾಗುತ್ತದೆ. ಈ ಪೈಕಿ ಹಾಸನ ನಗರಕ್ಕೆ 0.14 ಟಿಎಂಸಿ ನೀರು ಸರಬರಾಜು ಮಾಡಲಾಗುತ್ತದೆ.

* * 

ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯಾವ ಬೆಳೆ ಬೆಳೆದರೆ ಸೂಕ್ತ ಎನ್ನುವ ಜತೆಗೆ ಹಾಲಿ ಬೆಳೆಯುತ್ತಿರುವ ಬೆಳೆ ಉಳಿಸಿಕೊಳ್ಳಲು ಸಾಧ್ಯವೇ ಎಂಬ  ಮಾಹಿತಿ ನೀಡಲಿದ್ದಾರೆ
ಎ.ಮಂಜು
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT