ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಭಿವೃದ್ಧಿಗೆ ವಿಶೇಷ ಬಜೆಟ್‌ ಮಂಡಿಸಿ

Last Updated 19 ಜುಲೈ 2017, 10:46 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿಶೇಷ ಬಜೆಟ್‌ ಮಂಡಿಸಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು. ತಾಲ್ಲೂಕಿನ ಚಂದಕವಾಡಿ ಗ್ರಾಮದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಹೋರಾಟ ಸಮಿತಿಯಿಂದ ನಡೆದ ಹಿಂದುಳಿದ ಗಡಿನಾಡು ಗ್ರಾಮೀಣಾಭಿವೃದ್ಧಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳು ಹಿಂದುಳಿದಿವೆ. ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ನಗರ ಪ್ರದೇಶಕ್ಕೆ ನೀಡುವ ಆದ್ಯತೆಯನ್ನು ಗ್ರಾಮೀಣ ಪ್ರದೇಶಕ್ಕೆ ನೀಡದೆ ಮಲತಾಯಿ ಧೋರಣೆ ಅನುಸರಿಸಿವೆ. ಇದರಿಂದ ನಗರ ಪ್ರದೇಶ ಸ್ವರ್ಗವಾಗಿದ್ದರೆ, ಗ್ರಾಮೀಣ ಪ್ರದೇಶಗಳು ಮೂಲ ಸೌಲಭ್ಯಗಳಿಲ್ಲದೆ ನರಕವಾಗಿವೆ ಎಂದರು.

ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಅರಿಯಲು ರಾಜ್ಯ ಸರ್ಕಾರ ಕೂಡಲೇ ಅಧ್ಯಯನ ಸಮಿತಿ ರಚಿಸಬೇಕು. ಗ್ರಾಮೀಣ ಪ್ರದೇಶಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇದಕ್ಕಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ಅನಿವಾರ್ಯವಾಗಿದೆ. ಎಲ್ಲರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.

ಚಂದಕವಾಡಿ ಹೋಬಳಿಯ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ಮುಂದಿನ ದಿನಗಳಲ್ಲಿ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲಾ ಗುವುದು. ಯುವಜನರಿಗಾಗಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜೈಲು ಪ್ರಕರಣ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ದುರಂತ ಕಥೆ ಉನ್ನತ ಅಧಿಕಾರಿಗಳ ಮಾಹಿತಿಯಿಂದ ಬಯಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣವೇ ಕ್ರಮವಹಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶಿವಕುಮಾರ್, ಬಂಗಾರನಾಯಕ, ಸುರೇಶ್‌, ಆನಂದ, ಶ್ರೀನಿವಾಸ್, ಕಾರ್‌ ನಾಗೇಶ್‌, ಶಿವಲಿಂಗಮೂರ್ತಿ, ದಳಪತಿ ವೀರತಪ್ಪ, ನಾಗರಾಜಮೂರ್ತಿ, ವರದರಾಜು ಹಾಜರಿದ್ದರು.

‘ಗೋವಾಗೆ ತೆರಳಿ ಪ್ರತಿಭಟನೆ’
‘ಮಹದಾಯಿ ಹಾಗೂ ಕಳಸಾ– ಬಂಡೂರಿ ನದಿ ನೀರಿನ ಸಂಬಂಧ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಗೋವಾ ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಮುಂದಿನ ತಿಂಗಳು ‘ಗೋವಾ ರಾಜ್ಯ ಮುತ್ತಿಗೆ’ ಎಂಬ ಹೆಸರಿನಲ್ಲಿ ಅಲ್ಲಿಗೆ ತೆರಳಿ ಪ್ರತಿಭಟನೆ ಮಾಡಲಾಗುವುದು’ ಎಂದು ವಾಟಾಳ್‌ ನಾಗರಾಜ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಹಾಗೂ ಕಳಸಾ–ಬಂಡೂರಿ ಹೋರಾಟಕ್ಕೆ 2 ವರ್ಷ ತುಂಬಿದೆ. ಆದರೂ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಹಾಗಾಗಿ, ನೂರಾರು ವಾಹನಗಳಲ್ಲಿ ಗೋವಾಗೆ ತೆರಳಿ ಪ್ರತಿಭಟನ ಮಾಡಲಾಗುವುದು. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಬಂದ್‌ ಮಾಡಿ, ರಾಜ್ಯದಿಂದ ಸರಬರಾಜಾಗುವ ತರಕಾರಿ, ಹಾಲು, ಮೊಸರು ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ತಮಿಳುನಾಡು ಸರ್ಕಾರ ಜಿಲ್ಲೆಯ ಗಡಿಯಂಚಿನಲ್ಲಿರುವ ಚಿಕ್ಕಹಳ್ಳಿ ಗ್ರಾಮದ ಬಳಿ ಜಲಾಶಯ ನಿರ್ಮಿಸಲು ಮುಂದಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯ ಬರಿದಾಗುತ್ತವೆ. ತಮಿಳುನಾಡು ಈ ಯೋಜನೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ಗಡಿ ಬಂದ್‌ ಮಾಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT