ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ ಸ್ಫೋಟಕ್ಕೆ ಕಡಿವಾಣ ಅನಿವಾರ್ಯ

Last Updated 19 ಜುಲೈ 2017, 10:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಮಾಜದ ಆರೋಗ್ಯ ಸುಧಾರಣೆ ಮತ್ತು ಅಗತ್ಯ ಸಂಪನ್ಮೂಲಗಳ ಅಸಮತೋಲನ ತಪ್ಪಿಸುವ ದಿಸೆಯಲ್ಲಿ ಈಗಿನಿಂದಲೇ ಜನಸಂಖ್ಯೆ ನಿಯಂತ್ರಿಸುವ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಜೆ. ಮಂಜುನಾಥ್ ಪ್ರತಿಪಾದಿಸಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವನ ದುರಾಸೆಯಿಂದ ಭೂಮಿಯ ಮೇಲೆ ಈಗಾಗಲೇ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗುತ್ತಿದೆ. ಒಂದೊಮ್ಮೆ ಜನಸಂಖ್ಯೆ ಮಿತಿ ಮೀರಿದರೆ ಸಂಪನ್ಮೂಲ ಒದಗಿಸುವುದು ಕಷ್ಟವಾಗುತ್ತದೆ. ಪರಿಸರದ ಮೇಲೆ ಅದರ ಗಂಭೀರ ಪರಿಣಾಮ ಉಂಟಾಗುತ್ತದೆ. ನೀರು, ಗಾಳಿ, ಆಹಾರ ಮಲೀನವಾಗುತ್ತವೆ.

ಆದ್ದರಿಂದ ಕುಟುಂಬ ಕಲ್ಯಾಣ ಯೋಜನೆಯ ಕ್ರಮಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡಬೇಕಾಗಿದೆ’ ಎಂದು ತಿಳಿಸಿದರು.
‘ಜನಸಂಖ್ಯೆ ಹೆಚ್ಚಳದಿಂದ ಪ್ರಮುಖವಾಗಿ ಪರಿಸರ ಮತ್ತು ಪ್ರಾದೇಶಿಕ ಅಸಮತೋಲನ ಉಂಟಾಗುತ್ತದೆ.

ಎರಡ್ಮೂರು ವರ್ಷಗಳಲ್ಲಿ ನಾವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದ್ದೇವೆ. ಈಗಾಗಲೇ ದೇಶದ ಜನಸಂಖ್ಯೆಯ ಪೈಕಿ ಶೇ 30 ರಷ್ಟು ಜನರು ನಗರ, ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. 20 ವರ್ಷಗಳಲ್ಲಿ ಇದರ ಪ್ರಮಾಣ ಶೇ 70ಕ್ಕೆ ಏರಲಿದೆ. ಆಗ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಯ ಜೀವನ ದುಸ್ತರವಾಗುತ್ತದೆ. 2025ರ ವೇಳೆಗೆ ಜಗತ್ತಿನ ಮೂರು ರಾಷ್ಟ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದೆ ಎಂದು ಅಮೆರಿಕದ ಸಂಸ್ಥೆಯೊಂದು ನೀಡಿರುವ ವರದಿ ಆತಂಕ ಹೆಚ್ಚಿಸುತ್ತಿದೆ. ಗಿಡ ಮರ ಹನನವಾಗಿ ಕಾಂಕ್ರಿಟ್‌ ಕಾಡು ನಿರ್ಮಾಣವಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಮಾರಕವಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿಶಂಕರ್‌ ಮಾತನಾಡಿ, ‘ಲಿಂಗ ಸಮಾನತೆ ಕಾಪಾಡುವುದು, ದಾರಿದ್ರ್ಯ, ಬಡತನ ನಿವಾರಣೆ, ತಾಯಿ ಮತ್ತು ಮಗುವಿನ ಆರೋಗ್ಯದ ಅರಿವು ಮೂಡಿಸುವುದು, ಮಾನವ ಹಕ್ಕುಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಹಿಂದೆ ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಜನಸಂಖ್ಯೆ ನಿಯಂತ್ರಣದ ಉದ್ದೇಶದಿಂದಲೇ ಸಣ್ಣ ಕುಟುಂಬಗಳ ಯೋಜನೆ ಜಾರಿಗೆ ತಂದಿದ್ದರು. ಜನಸಂಖ್ಯೆ ಸ್ಥಿರವಾಗಿದ್ದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ತಿಳಿಸಿದರು.

‘ಇಂದಿಗೂ ಮುಂದುವರಿದ ರಾಷ್ಟ್ರಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ದಂಪತಿ ಶಾಶ್ವತ, ತಾತ್ಕಾಲಿಕ ವಿಧಾನಗಳ ಮೂಲಕ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳುವ ಅಗತ್ಯವಿದೆ. ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ತರುವಲ್ಲಿ ದೇಶದಲ್ಲಿ ರಾಜ್ಯ 8ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಬಾಗೇಪಲ್ಲಿ, ಚಿಂತಾಮಣಿ ತಾಲ್ಲೂಕುಗಳಲ್ಲಿ ಸ್ವಲ್ಪಮಟ್ಟಿನ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಉಳಿದ ತಾಲ್ಲೂಕುಗಳಲ್ಲಿ ಸ್ಥಿರವಾಗಿದೆ’ ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜೆ. ಮಂಜುನಾಥ್ ಅವರು ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ವಿಜಯ್ ಕುಮಾರ್, ಪ್ರಜನನ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದ (ಆರ್‌ಸಿಎಚ್‌) ಜಿಲ್ಲಾ ಅಧಿಕಾರಿ ಡಾ.ಡಿ.ಎಸ್. ಸುರೇಂದ್ರನಾಥ್, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ರಮೇಶ್‌ ಬಾಬು, ಜಿಲ್ಲಾ ಆಯುಷ್ ಅಧಿಕಾರಿ ಡಾ. ಇಂದುಮತಿ ಉಪಸ್ಥಿತರಿದ್ದರು.

* * 

ಜನಸಂಖ್ಯಾ ಸ್ಫೋಟದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ
ಶಿವಸ್ವಾಮಿ
ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT