ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಜಯಂತಿ ಒಕ್ಕಲಿಗರಿಗೆ ಸೀಮಿತವಲ್ಲ

Last Updated 19 ಜುಲೈ 2017, 11:06 IST
ಅಕ್ಷರ ಗಾತ್ರ

ಕೋಲಾರ: ‘ಕೆಂಪೇಗೌಡ ಜಯಂತಿ ಒಕ್ಕಲಿಗರಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ಸಮಾಜಗಳನ್ನು ಒಳಗೊಂಡಂತೆ ಜಯಂತಿ ಆಚರಿಸಿದರೆ ಕಾರ್ಯಕ್ರಮ ಅರ್ಥಗರ್ಭಿತವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಂಪೇಗೌಡರು ಸಮಷ್ಟಿ ಪ್ರಜ್ಞೆಯಿಂದ ಬೆಂಗಳೂರಿನ ರೂಪುರೇಷೆ ರೂಪಿಸಿ, ಗಡಿ ನಿರ್ಮಿಸಿದರು. ಇಂದು ನಾವು ಆ ಗಡಿ ದಾಟಿ, ಉದ್ದಕ್ಕೂ ಅಗಲಕ್ಕೂ ಬೆಂಗಳೂರು ಬೆಳೆಸಿ ಮೂಲ ಸೌಕರ್ಯಗಳಿಲ್ಲದೆ ಒದ್ದಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅತ್ಯಂತ ನಮ್ರತೆ ಮತ್ತು ಶ್ರದ್ಧಾ- ಭಕ್ತಿಯಿಂದ ಆಳ್ವಿಕೆ ನಡೆಸಿದ ಕೆಂಪೇಗೌಡರು ನಾಡ ಪ್ರಭುವಲ್ಲ, ಮಹಾಪ್ರಭು. ಅವರ ಮೌಲ್ಯ ಆದರ್ಶ ಪಾಲನೆಗೆ ಬದ್ಧರಾಗಬೇಕು. ಈ ಹಿಂದೆ ಮಹನೀಯರನ್ನು ಯಾರೂ ಸಹ ಜಾತಿಗೆ ಸೀಮಿತಗೊಳಿಸಿರಲಿಲ್ಲ. ಆದರೆ, ಇಂದು ಮಹನೀಯರಿಗೆ ಜಾತಿಯ ಮುದ್ರೆ ಹಾಕಿಬಿಟ್ಟಿದ್ದೇವೆ. ಜಾತಿಯ ಕಾಯಿಲೆ ಎಂದಿಗೂ ಒಳ್ಳೆಯದಲ್ಲ’ ಎಂದು ಕಿವಿಮಾತು ಹೇಳಿದರು.

ಎರಡೂ ಮಾರಾಟಕ್ಕಿವೆ: ‘ಜ್ಞಾನ -ಮಾನ ಮಾರಾಟಕ್ಕಿರುವ ಸಮಾಜ ಆರೋಗ್ಯಕರವಾಗಿರಲು ಸಾಧ್ಯವಿಲ್ಲ. ಆದರೆ, ನಮ್ಮ ದೇಶದಲ್ಲಿ ಈ ಎರಡೂ ಮಾರಾಟಕ್ಕಿವೆ. ಹಣ ಕೊಟ್ಟರೆ ವೈದ್ಯ, ಎಂಜಿನಿಯರ್‌ ಆಗಬಹುದು. ಜತೆಗೆ ರಾಜಕೀಯವಾಗಿ ಅಧಿಕಾರಕ್ಕೂ ಬರಬಹುದು. ಜಾತಿಯ ಬಲವಿದ್ದರೆ ಮಾನ ಇಲ್ಲದಿದ್ದರೂ ಬದುಕಬಹುದು’ ಎಂದು ಮಾರ್ಮಿಕವಾಗಿ ನುಡಿದರು.

‘ಸರ್ಕಾರ ಹೆಚ್ಚು ಹೆಚ್ಚಾಗಿ ಜಯಂತಿಗಳನ್ನು ಆಚರಿಸಲು ಮುಂದಾಗಿರುವುದು ಚರ್ಚೆಯ ವಿಷಯವಾಗಿದೆ. ಕೆಲ ಜಯಂತಿಗಳಿಗೆ ಸಾರ್ವತ್ರಿಕ ರಜೆ ನೀಡದಿರುವುದು ತಪ್ಪಲ್ಲ. ಸರ್ಕಾರಕ್ಕೂ ಜಾತಿಗಳಿಗೂ ಏನು ಸಂಬಂಧ. ಜಾತಿ -ಮತಗಳನ್ನು ಸರ್ಕಾರ ಮಾಡಿಲ್ಲ. ಆದರೆ, ಅಧಿಕಾರಕ್ಕೆ ಬರುವ ಪೈಪೋಟಿಯಲ್ಲಿ ನಮ್ಮಂತಹ ರಾಜಕಾರಣಿಗಳು ಜನರ ನಡುವೆ ಜಾತಿಯ ಗೋಡೆಗಳನ್ನು ನಿರ್ಮಿಸಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ದೂರದೃಷ್ಟಿ ಹೊಂದಿದ್ದರು: ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ‘ಸುಶಿಕ್ಷಿತ ರಾಜರಲ್ಲಿ ಅಗ್ರಸ್ಥಾನ ಪಡೆದಿದ್ದ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣೀಭೂತರು. ಕೇವಲ ಬೆಂಗಳೂರು ನಿರ್ಮಾಣಕ್ಕೆ ಸೀಮಿತವಾಗದ ಅವರು ಶಿಕ್ಷಣ ಹಾಗೂ ಸಾಮಾಜಿಕ ಬದಲಾವಣೆ ಬಗ್ಗೆ ದೂರದೃಷ್ಟಿ ಹೊಂದಿದ್ದರು’ ಎಂದು ಬಣ್ಣಿಸಿದರು.

‘ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಟ್ಟ ಕೆಂಪೇಗೌಡರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.

ಭವನ ನಿರ್ಮಿಸಬೇಕು: ‘ಜಿಲ್ಲೆಯಲ್ಲಿ ಇತ್ತೀಚೆಗೆ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದ ಕಾರಣ ಈಗ ಸರ್ಕಾರದ ವತಿಯಿಂದ ಸರಳವಾಗಿ ಆಚರಿಸಲಾಗುತ್ತಿದೆ. ಕೋಲಾರದಲ್ಲಿ ಕೆಂಪೇಗೌಡರ ಭವನ ನಿರ್ಮಿಸಬೇಕು ಮತ್ತು ಪುತ್ಥಳಿ ಸ್ಥಾಪಿಸಬೇಕು. ಜತೆಗೆ ಒಂದು ಬಡಾವಣೆ ಮತ್ತು ರಸ್ತೆಗೆ ಕೆಂಪೇಗೌಡರ ಹೆಸರಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಸಚಿವರಿಗೆ ಮನವಿ ಮಾಡಿದರು.

‘ಕೆಂಪೇಗೌಡರ ಆಳ್ವಿಕೆ ಸಮಯದಲ್ಲಿ ಸಂವಿಧಾನ, ಕಾನೂನು ಯಾವುದೂ ಇರಲಿಲ್ಲ. ಆದರೂ ಅವರು ಅವುಗಳನ್ನು ಅಳವಡಿಸಿಕೊಂಡು ಉತ್ತಮ ಆಡಳಿತ ನಡೆಸಿದರು. ಜತೆಗೆ ಪರಿಸರ ಮತ್ತು ನೀರು ಸಂರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು’ ಎಂದು ಹೇಳಿದರು.

ಕೇಂದ್ರ ಉದ್ಘಾಟನೆ: ಕಾರ್ಯಕ್ರಮಕ್ಕೂ ಮುನ್ನ ಸಚಿವ ರಮೇಶ್‌ಕುಮಾರ್ ರಂಗಮಂದಿರ ಆವರಣದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಿವಿಜಿ ಅಧ್ಯಯನ ಕೇಂದ್ರ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು ಕೆಂಪೇಗೌಡರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪಿ.ಮುನಿರೆಡ್ಡಿ ಮತ್ತು ಕಲಾವಿದರು ಕೆಂಪೇಗೌಡರ ಜೀವನ ಕುರಿತ ನಾಟಕ ಪ್ರದರ್ಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮಚಂದ್ರ, ಜಿಲ್ಲಾ ಘಟಕದ ಉಪಾಧ್ಯಕ್ಷ ವಿ.ಕೃಷ್ಣಾರೆಡ್ಡಿ, ಗೌರವಾಧ್ಯಕ್ಷ ಬಿಸಪ್ಪಗೌಡ, ವಕೀಲ ವೆಂಕಟರಾಮೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಪಾಲ್ಗೊಂಡಿದ್ದರು.

ಕಾರಾಗೃಹದಲ್ಲಿ ಲೋಪ ಆಗಿದೆ: ಸಚಿವ ರಮೇಶ್‌ಕುಮಾರ್‌

ಕೋಲಾರ: ‘ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಲೋಪ ಆಗಿದೆ. ಅಲ್ಲಿ ಎಲ್ಲಾ ವ್ಯವಸ್ಥೆ ಸರಿಯಿಲ್ಲ. ನ್ಯಾಯಯುತ ತನಿಖೆ ದೃಷ್ಟಿಯಿಂದ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಸಚಿವ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಕ್ಷ ಅಧಿಕಾರಿಗಳು ಎಂದರೆ ಸರ್ವಾಧಿಕಾರಿಗಳಲ್ಲ. ಅವರು ಅಧಿಕಾರಿಗಳೇ. ಐಪಿಎಸ್ ಅಧಿಕಾರಿಗಳಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದು ಸರಿಯಲ್ಲ’ ಎಂದು ಡಿಜಿಪಿ ಸತ್ಯನಾರಾಯಣರಾವ್‌ ಮತ್ತು ಡಿಐಜಿ ರೂಪಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂಬುದು ತಪ್ಪು ಕಲ್ಪನೆ. ಜೈಲಿನಲ್ಲಿ ಐಷಾರಾಮಿ ಜೀವನಕ್ಕೆ ಅವಕಾಶವಿದ್ದರೆ ನಾನು ಅಲ್ಲಿಗೆ ಹೋಗುತ್ತಿದೆ. ಕಾರಾಗೃಹ ಪ್ರಕರಣ ಇನ್ನು ತನಿಖೆ ಹಂತದಲ್ಲಿದೆ. ಹೀಗಾಗಿ ಆ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ’ ಎಂದರು.

‘ಯಾವುದೇ ಇಲಾಖೆಯಲ್ಲಿ ಸಾಕಷ್ಟು ಮಂದಿ ದಕ್ಷ ಅಧಿಕಾರಿಗಳಿರುತ್ತಾರೆ. ಏನಾದರೂ ಲೋಪ ಕಂಡಬಂದಲ್ಲಿ ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ತಪ್ಪಲ್ಲ. ಅದೇ ರೀತಿ ಸರ್ಕಾರ ಈ ಪ್ರಕರಣದ ತನಿಖೆಗೆ ಆದೇಶಿಸಿದೆ. ಆದರೆ, ಯಾವುದೇ ಅಧಿಕಾರಿಯನ್ನು ಅಮಾನತು ಮಾಡಿಲ್ಲ. ಅಧಿಕಾರಿಗಳು ಅದೇ ಹುದ್ದೆಯಲ್ಲಿದ್ದರೆ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಜತೆಗೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚು’ ಎಂದು ವರ್ಗಾವಣೆ ಕ್ರಮವನ್ನು ಸಮರ್ಥಿಸಿಕೊಂಡರು.

* * 

ಕೋಲಾರದಲ್ಲಿ ರಸ್ತೆ ಮತ್ತು ಬಡಾವಣೆಗೆ ಕೆಂಪೇಗೌಡರ ಹೆಸರಿಡಲು ತಿಂಗಳೊಳಗೆ ನಿರ್ಣಯ ಕೈಗೊಳ್ಳಲಾಗುವುದು. ಎಲ್ಲಿ ಕೆಂಪೇಗೌಡರ ಪುತ್ಥಳಿ ಸ್ಥಾಪಿಸಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗುವುದು
ಕೆ.ಆರ್.ರಮೇಶ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT