ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಿಕಲಾ ಸೌಲಭ್ಯಗಳ ಮಾಹಿತಿ ಸಂಗ್ರಹ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರ ಆರೋಪದ ಬಗ್ಗೆ ವಿಚಾರಣೆಗೆ ನೇಮಕವಾಗಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್ ಕುಮಾರ್ ಅವರು ಬುಧವಾರ ಜೈಲಿಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಹಾಗೂ ಕೆಲ ಕೈದಿಗಳ ವಿಚಾರಣೆ ನಡೆಸಿದರು.

ಹಿಂದೆ ಕಾರಾಗೃಹ ಇಲಾಖೆ ಡಿಐಜಿಯಾಗಿ ಕೆಲಸ ಮಾಡಿದ್ದ ಎಸ್‌.ರವಿ (ಈಗ ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್) ಹಾಗೂ ಮೈಸೂರು ಕಾರಾಗೃಹದ ಮುಖ್ಯ ಅಧೀಕ್ಷಕ ಆನಂದರೆಡ್ಡಿ ಜತೆ ಮಧ್ಯಾಹ್ನ 3.30ರ ಸುಮಾರಿಗೆ ಕಾರಾಗೃಹಕ್ಕೆ ತೆರಳಿದ ವಿನಯ್‌ಕುಮಾರ್, ಮೊದಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಹಾಗೂ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್ ತೆಲಗಿ ಅವರ ಸೆಲ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಆ ನಂತರ ಜೈಲು ಅಧೀಕ್ಷಕಿ ಅನಿತಾ ಜತೆ ಮುಕ್ಕಾಲು ತಾಸು ಚರ್ಚೆ ನಡೆಸಿದ ವಿನಯ್‌ಕುಮಾರ್, ಶಶಿಕಲಾ ಪ್ರಕರಣದ ತೀರ್ಪು, ಶಿಕ್ಷೆಯ ಸ್ವರೂಪ, ನ್ಯಾಯಾಲಯ ಅವರಿಗೆ ನೀಡಿದ್ದ ವಿನಾಯ್ತಿಗಳು, ಈವರೆಗೆ ಅವರನ್ನು ಭೇಟಿಯಾದವರ ವಿವರಗಳನ್ನು ಪಡೆದುಕೊಂಡರು.

ಅಲ್ಲದೆ, ಹಿಂದಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರು ತಮ್ಮ ವಿವೇಚನಾಧಿಕಾರ ಬಳಸಿ ಯಾವ ಯಾವ ಸೌಲಭ್ಯಗಳನ್ನು ಹೊಂದಲು ಶಶಿಕಲಾ ಅವರಿಗೆ ಅನುಮತಿ ಕೊಟ್ಟಿದ್ದರು ಎಂಬ ಬಗ್ಗೆಯೂ ತಿಳಿದುಕೊಂಡರು.

ತೆಲಗಿಗೆ ಕೆಲ ಸವಲತ್ತುಗಳನ್ನು ಹೊಂದಲು ನ್ಯಾಯಾಲಯವೇ ಅನುಮತಿ ನೀಡಿರುವುದನ್ನು ಜೈಲು ಸಿಬ್ಬಂದಿ ವಿನಯ್‌ಕುಮಾರ್ ಅವರ ಗಮನಕ್ಕೆ ತಂದರು. ಹೀಗಾಗಿ, ತೆಲಗಿಯ ಸೌಲಭ್ಯಗಳ ಬಗ್ಗೆ ಅವರು ಹೆಚ್ಚಾಗಿ ಪ್ರಶ್ನೆ ಮಾಡಲಿಲ್ಲ ಎಂದು ಗೊತ್ತಾಗಿದೆ.

ವೈದ್ಯ ಹೇಳಿದ್ದೇನು?: ನಂತರ ಆಸ್ಪತ್ರೆ ವಿಭಾಗಕ್ಕೆ ಹೋದ ಅವರು, ಜುಲೈ 29ರಂದು ಸಜಾಬಂದಿ ನಾಗೇಂದ್ರ ಮೂರ್ತಿ ಎಂಬಾತನಿಂದ ಹಲ್ಲೆಗೊಳಗಾದರು ಎನ್ನಲಾದ ವೈದ್ಯ ಕಳಸೇಗೌಡ ಅವರನ್ನು ವಿಚಾರಣೆ ಮಾಡಿದರು. ಕೈದಿಯೊಬ್ಬ ವೈದ್ಯರಿಗೆ ಹಲ್ಲೆ ನಡೆಸಿದ್ದ ಸಂಬಂಧ
ಕಾರಾಗೃಹಗಳ ಇಲಾಖೆಯ ಹಿಂದಿನ ಡಿಐಜಿ ಡಿ.ರೂಪಾ ತಮ್ಮ ವರದಿಯಲ್ಲಿ ಹೇಳಿದ್ದರು.

‘ಆ ದಿನ ಮಧ್ಯಾಹ್ನ 2.40ರ ಸುಮಾರಿಗೆ ನಾಗೇಂದ್ರನ ಆರೋಗ್ಯ ತಪಾಸಣೆ ಮಾಡುತ್ತಿದ್ದೆ. ಏಕಾಏಕಿ ಆಕ್ರೋಶಗೊಂಡ ಆತ, ಕೊಠಡಿಯ ಚಿಲಕ ಹಾಕಿ ಕಬ್ಬಿಣದ ಕುರ್ಚಿಯನ್ನು ನನ್ನ ಮೇಲೆ ಎಸೆಯಲು ಯತ್ನಿಸಿದ’ ಎಂದು ಕಳಸೇಗೌಡ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯಕೀಯ ವರದಿ ಸಂಗ್ರಹ: ‘ತಪಾಸಣೆ ನಡೆಸಿದ 25 ಕೈದಿಗಳಲ್ಲಿ 18 ಮಂದಿ ಮದ್ಯವ್ಯಸನಿಗಳಿದ್ದಾರೆ’ ಎಂದು ಡಿಐಜಿ ರೂಪಾ ಅವರಿಗೆ ವೈದ್ಯರು ಕೊಟ್ಟಿದ್ದ ವೈದ್ಯಕೀಯ ವರದಿಯನ್ನೂ ವಿನಯ್‌ಕುಮಾರ್ ಪರಿಶೀಲಿಸಿದರು. ಇದೇ ವೇಳೆ ಆ ಕೈದಿಗಳ ಹೆಸರುಗಳನ್ನು ದಾಖಲಿಸಿಕೊಂಡ ಅವರು, 25
ಮಂದಿಯನ್ನೂ ಖುದ್ದಾಗಿ ವಿಚಾರಣೆ ನಡೆಸಿ ಹೇಳಿಕೆ ಪಡೆಯುವುದಾಗಿ ವೈದ್ಯರಿಗೆ ತಿಳಿಸಿದರು.

ಫಾರ್ಮಸಿಗಳ ಬಗ್ಗೆ ವೈದ್ಯರನ್ನು ಕೇಳಿದಾಗ, ‘ಆಸ್ಪತ್ರೆಯ ಫಾರ್ಮಸಿಗಳ ನಿರ್ವಹಣೆ ಸಜಾಬಂದಿಗಳೇ ಮಾಡುತ್ತಿದ್ದಾರೆ. ಹೀಗಾಗಿ, ಅವರಿಗೆ ಬೇಕಾದ ಮಾತ್ರೆಗಳು ವೈದ್ಯರ ಗಮನಕ್ಕೂ ಬಾರದೆ ಸಿಕ್ಕಿ ಬಿಡುತ್ತವೆ’ ಎಂದು ಹೇಳಿದ್ದಾರೆ.

‘ಜೈಲು ಅಕ್ರಮದ ಬಗ್ಗೆ ಡಿ.ರೂಪಾ ನೀಡಿದ್ದ ಎರಡು ವರದಿಗಳಲ್ಲಿರುವ ಅಂಶಗಳ ಸತ್ಯಾಸತ್ಯತೆ ಪರಿಶೀಲನೆ ಹಾಗೂ ಸಂಬಂಧಪಟ್ಟ ಸಾಕ್ಷ್ಯಗಳ ಸಂಗ್ರಹಕಷ್ಟೇ ಸೀಮಿತವಾಗಿ ವಿನಯ್‌ಕುಮಾರ್ ತನಿಖೆ ನಡೆಸುತ್ತಿದ್ದಾರೆ’ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ನಿಯಮ ಮೀರಿಲ್ಲ: ಜೈಲು ಅಧೀಕ್ಷಕಿ
‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಕಾರಾಗೃಹ ದಲ್ಲಿದ್ದಾಗ ಬ್ಯಾರಕ್‌ನ ಉಸ್ತುವಾರಿಗಾಗಿ ಮುಖ್ಯ ಅಧೀಕ್ಷಕಿ ದಿವ್ಯಾ ಅವರನ್ನು ಬೇರೆ ಜೈಲಿನಿಂದ ಕರೆಸಲಾಗಿತ್ತು. ಅಂತೆಯೇ ಶಶಿಕಲಾ ಬ್ಯಾರಕ್‌ನ ಉಸ್ತುವಾರಿಯನ್ನು ನನಗೆ ವಹಿಸಲಾಗಿತ್ತು. ಇಷ್ಟು ದಿನವೂ ನಾನು ಮ್ಯಾನ್ಯುಯಲ್ ಪ್ರಕಾರವೇ ನಡೆದುಕೊಂಡಿದ್ದೇನೆ. ನಿಯಮ ಮೀರಿ ಯಾವುದೇ ಸೌಲಭ್ಯಗಳನ್ನೂ ಒದಗಿಸಿಲ್ಲ’ ಎಂದು ಅನಿತಾ ತನಿಖಾ ತಂಡಕ್ಕೆ  ಹೇಳಿಕೆ ನೀಡಿರುವುದು ಗೊತ್ತಾಗಿದೆ.

ರೂಪಾ ವರ್ತನೆ: ಹಿರಿಯ ಸಚಿವರ ಅತೃಪ್ತಿ
ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಅವರ ಪತಿ, ಐಎಎಸ್‌ ಅಧಿಕಾರಿ ಮುನೀಶ್ ಮೌದ್ಗಿಲ್‌ ಅವರ ಅಶಿಸ್ತು, ಸೇವಾ ನಿಯಮಗಳನ್ನು ಉಲ್ಲಂಘಿಸಿರುವ ಧೋರಣೆಗೆ ಹಿರಿಯ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದ ವಿವಾದ, ಅಧಿಕಾರಿಗಳ ಮೇಲೆ ಕೈಗೊಂಡ ಕ್ರಮ ಕುರಿತು ಸಚಿವ ಸಂಪುಟ ಸಭೆಯಲ್ಲಿ  ಪ್ರಾಸಂಗಿಕವಾಗಿ ಚರ್ಚೆಗೆ ಬಂತು. ‘ಚೌಕಟ್ಟು ಮೀರಿ ವರ್ತಿಸುತ್ತಿರುವ ಈ ಇಬ್ಬರು ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ  ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯರು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

‘ಡಿಜಿಪಿ ಶ್ರೇಣಿ ಅಧಿಕಾರಿ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದರೂ ಅವರು ಮೌನಕ್ಕೆ ಶರಣಾಗಿದ್ದಾರೆ. ಸರ್ಕಾರದ ಕ್ರಮದ ಬಗ್ಗೆ ಚಕಾರ ಎತ್ತಿಲ್ಲ.  ಅಂತಹ ಸೌಜನ್ಯದ ನಡೆಯನ್ನು ಎಲ್ಲರೂ ನಿರೀಕ್ಷಿಸುತ್ತಾರೆ. ಅಶಿಸ್ತು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಮೇಲೂ ರೂಪಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು. ವರದಿಯನ್ನು ಅವರೇ ಸೋರಿಕೆ ಮಾಡಿದರು. ಇಂತಹ ಚಾಳಿ ಸರಿಯಲ್ಲ’ ಎಂದು  ಸಚಿವರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ಸಚಿವರು, ‘ಗಂಡ–ಹೆಂಡತಿ ಇಬ್ಬರದ್ದೂ ಅದೇ ಕತೆ. ಪ್ರತಿ ವಿಷಯದಲ್ಲಿಯೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಲೇ ಇದ್ದಾರೆ. ಸುಮ್ಮನೆ ವರ್ಗಾವಣೆ ಮಾಡಿ ಕೈತೊಳೆದುಕೊಂಡರೆ ಪ್ರಯೋಜನವಿಲ್ಲ. ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿ, ಪ್ರಕರಣವನ್ನು ಬೇರೆ ರೀತಿಯಲ್ಲಿಯೇ ನಿಭಾಯಿ ಸಬೇಕಾಗಿತ್ತು’ ಎಂದು ಸಲಹೆ ಇತ್ತರು.

‘ಈಗ ಎಚ್ಚರಿಕೆ ನೀಡಲಾಗಿದೆ. ಇದು ಮರುಕಳಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡೋಣ’ ಎಂದು ಸಿದ್ದರಾಮಯ್ಯ ಹೇಳಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT