ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಉಳಿಯಬಹುದಾದ ಟಾಟಾ ಹೆಕ್ಸಾ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಭಾರತದ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರು ಎಸ್‌ಯುವಿ, ಮಿನಿ ಎಸ್‌ಯುವಿ ಇಲ್ಲವೇ ಎಂಯುವಿಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೇ ಉದ್ದೇಶಕ್ಕೆ ಪ್ರಮುಖ ಬ್ರ್ಯಾಂಡ್‌ಗಳು ಈ ವರ್ಗದಲ್ಲೇ ಅತಿ ಹೆಚ್ಚು ಹೊಸ ವಾಹನಗಳನ್ನು ರಸ್ತೆಗೆ ಇಳಿಸುತ್ತಿವೆ. ಎಂಯುವಿ ವರ್ಗಕ್ಕೆ ಸೇರಿದ ಹೆಕ್ಸಾ ವಾಹನವನ್ನು ಟಾಟಾ ಸಮೂಹ ಭಾರತೀಯ ಗ್ರಾಹಕರಿಗೆ ಪರಿಚಯಿಸಿ, ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಿದೆ.

ಸಫಾರಿ ಮತ್ತು ಆರ್ಯ ಹೊರತುಪಡಿಸಿದರೆ ಎಸ್‌ಯುವಿ, ಎಂಯುವಿ ವರ್ಗದಲ್ಲಿ ಟಾಟಾದ ಯಾವುದೇ ವಾಹನವಿಲ್ಲ. ಸಫಾರಿ ಒಂದು ಬಾರಿ ಸಂಪೂರ್ಣ ಬದಲಾವಣೆ ಆಗಿದ್ದರೂ ಮಾರುಕಟ್ಟೆಯಲ್ಲಿ ಇತರೇ ಕಂಪೆನಿಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುತ್ತಿಲ್ಲ. ಎಂಯುವಿ ಆರ್ಯ ಮಾರುಕಟ್ಟೆಯಲ್ಲಿ ಹೆಸರನ್ನೇ ಮಾಡದೆ ಹಾಗೇ ನಿಧಾನವಾಗಿ ಮಾಯವಾಯಿತು.

ಆದರೂ ವಿನ್ಯಾಸಕ್ಕೆ ಹೆಚ್ಚು ಶ್ರಮವಹಿಸದ ಟಾಟಾ ಮೋಟಾರ್ಸ್ ಆರ್ಯ ಮಾದರಿಯ ಆಧಾರದಲ್ಲೇ ನವೀನ ತಂತ್ರಜ್ಞಾನಗಳನ್ನು ಒಳಗೊಂಡು ಹೆಕ್ಸಾವನ್ನು ರೂಪಿಸಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಉಳಿಯಬೇಕಾದ ತುರ್ತು ಅಗತ್ಯ ಸಹ ಕಾರಣ ಎನ್ನಬಹುದು.

ಆರು ಮ್ಯಾನುಯಲ್‌ ಗೇರ್‌ ಹೊಂದಿರುವ ಎಕ್ಸ್‌ಟಿ 4/4 ಅನ್ನು ಹೆದ್ದಾರಿ ಮತ್ತು ಕಚ್ಚಾ ರಸ್ತೆಯಲ್ಲಿ ಓಡಿಸುವ ಅವಕಾಶ ದೊರಕಿತ್ತು. ಇದಕ್ಕೆ ಆಯ್ದುಕೊಂಡಿದ್ದು ಕನಕಪುರ, ಮಳವಳ್ಳಿ ಮೂಲಕ ಬಿಳಿಗಿರಿರಂಗನಬೆಟ್ಟ ತಲುಪುವ ರಸ್ತೆಯನ್ನು.

ನೋಡಲು ಸದೃಢ, ವಿಶಾಲ ಮತ್ತು ಎತ್ತರ ಮೈಕಟ್ಟು. ಅಗಲ ಮತ್ತು ಎತ್ತರ ಚಕ್ರಗಳು. ಎದ್ದುಕಾಣುವ ಎಲ್‌ಇಡಿ ಬಳಸಿದ ಹೆಡ್‌ಲೈಟ್‌. ಅದರ ಪಕ್ಕದಲ್ಲಿ ಲೋಗೋ ಬಳಿ ಬಳಸಿದ ಸ್ಟೀಲ್‌ ಗ್ರಿಲ್‌ ವಾಹನಕ್ಕೆ ಗೌರವವನ್ನು ನೀಡುತ್ತದೆ. ಫಾಗ್‌ ಲೈಟ್‌ ವಾಹನಕ್ಕೆ ಅದ್ದೂರಿತನವನ್ನು ನೀಡುತ್ತದೆ. ಹಿಂಭಾಗದಿಂದ ನೋಡುವಾಗ ಅಗಲವಾದ ಪಾರ್ಕಿಂಗ್‌ ಲೈಟ್‌ ಇಂದಿನ ಟ್ರೆಂಡ್‌ಗೆ ತಕ್ಕನಾಗೇ ಇದೆ. ಎಂಯುವಿ ಆದರೂ ಎಸ್‌ಯುವಿಗೆ ಹತ್ತಿರವಾದ ಅನುಭವವನ್ನು ನೀಡುತ್ತದೆ.

ಟಾಟಾ ಅಭಿವೃದ್ಧಿಪಡಿಸಿದ ಡೆಕೋರ್‌ ಎಂಜಿನ್‌ನ ಮುಂದುವರೆದ ಪೀಳಿಗೆಯ 2200 ಸಿಸಿ ನಾಲ್ಕು ಸಿಲಿಂಡರ್‌ನ ವರಿಕೋರ್‌ 400 ಎಂಜಿನ್‌ ಅನ್ನು ಹೆಕ್ಸಾಗೆ ಅಳವಡಿಸಲಾಗಿದೆ. ಡೆಕೋರ್‌ಗೆ ಹೋಲಿಸಿದರೆ ಇದು ಕಡಿಮೆ ಸದ್ದು ಮಾಡುತ್ತದೆ. ಎಳೆಯುವ ಶಕ್ತಿ ಹೆಚ್ಚಾಗಿಯೇ ಇದೆ. ಮೈಲೇಜ್‌ ಸಹ ಗಣನೀಯವಾಗಿ ಹೆಚ್ಚಾಗಿದೆ. ಒಳಭಾಗದಲ್ಲಿ ಆಕರ್ಷಕವಾದ ನವಿರಾದ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಬಳಸಲಾಗಿದೆ.

ಇದು ಯಾವುದೇ ಬಣ್ಣದ ಸೀಟ್‌ಗೂ ಹೊಂದಾಣಿಕೆಯಾಗುತ್ತದೆ. ಕ್ಯಾಬಿನ್‌ ಮತ್ತು ಸೀಟ್‌ಗಳು ಎತ್ತರದಲ್ಲಿದ್ದು, ರಸ್ತೆಯಲ್ಲಿ ಯಜಮಾನನ ಸ್ಥಾನ ನೀಡುತ್ತದೆ. ಎಷ್ಟೇ ವೇಗವಾಗಿ ಹೋದರೂ ರಸ್ತೆಯ ಗ್ರಿಪ್‌ ಚೆನ್ನಾಗಿಯೇ ಇರುತ್ತದೆ. ಇದು ವಾಹನಕ್ಕೆ ನೀಡಬಹುದಾದ ಉತ್ತಮ ಅಂಕ ಎನ್ನಬಹುದು. ಜೆಬಿಎಲ್‌ ಸೌಂಡ್‌ ಸಿಸ್ಟಂ ಗುಣಮಟ್ಟದ್ದೇ ಆಗಿದ್ದರೂ, ಐದು ಇಂಚಿನ ಟಚ್‌ಸ್ಕ್ರೀನ್‌ ತುಂಬಾ ಪುಟ್ಟದ್ದು ಎನಿಸುತ್ತದೆ, ಧ್ವನಿ ನಿಯಂತ್ರಣ ವ್ಯವಸ್ಥೆ ಸ್ಟೇರಿಂಗ್‌ನಲ್ಲೇ ಇದೆ.

ಇದೇ ಮೊದಲ ಬಾರಿಗೆ ಟಾಟಾ ಮೋಟಾರ್ಸ್ ಆಟೋ, ಡೈನಾಮಿಕ್‌, ಕಂಫರ್ಟ್‌ ಮತ್ತು ರಫ್‌ ರೋಡ್‌ ಮೋಡ್‌ ಎಲೆಕ್ಟ್ರಾನಿಕ್‌ ಸ್ಟಬಿಲಿಟಿ ಪ್ರೋಗ್ರಾಂ ಮಲ್ಟಿ ಫಂಕ್ಷನ್‌ಗಳನ್ನು ಈ ವಾಹನದಲ್ಲಿ ಪರಿಚಯಿಸಿದೆ. ರಸ್ತೆಯ ಗುಣಮಟ್ಟಕ್ಕೆ ತಕ್ಕಂತೆ ಮೋಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಅವಕಾಶ ಮೇಲ್ವರ್ಗದ ವಾಹನಗಳಲ್ಲಿ ದೊರಕು ತ್ತದೆ. ಟಾಟಾ ಸಮೂಹದ ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ಗಳಲ್ಲಿ ಈ ವಿಶೇಷಣಗಳಿವೆ.

ಮೊದಲ ಮತ್ತು ಎರಡನೇ ಸಾಲಿನ ಸೀಟ್‌ಗಳು ಆರಾಮದಾಯಕ. ಆದರೆ ಮೂರನೇ ಸಾಲಿನ ಸೀಟ್‌ಗಳು ದೂರ ಪ್ರಯಾಣಕ್ಕೆ ತಕ್ಕದ್ದಲ್ಲ. ಎಸಿ ಮೂರೂ ಸಾಲಿಗೂ ಚೆನ್ನಾಗಿಯೇ ಇದೆ. ಸೈಡ್‌ ಮಿರರ್‌ಗಳು ಸಂಪೂರ್ಣ ಯಾಂತ್ರಿಕೃತ.

ಎಕ್ಸ್‌ಎಂಎ ಮತ್ತು ಎಕ್ಸ್‌ಟಿಎ ಶ್ರೇಣಿಯ ವಾಹನ ಸಂಪೂರ್ಣ ಆಟೊ ಗೇರ್‌ ವ್ಯವಸ್ಥೆ ಹೊಂದಿದೆ. ಉಳಿದ ನಾಲ್ಕು ವರ್ಗಗಳಲ್ಲಿ ಮ್ಯಾನುಯಲ್‌ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಮ್ಯಾನುಯಲ್‌ ವ್ಯವಸ್ಥೆಯಲ್ಲಿ ಎರಡನೇ ಗೇರ್‌ನಲ್ಲಿ ವಾಹನದ ಮುನ್ನುಗ್ಗುವಿಕೆ ತೃಪ್ತಿ ನೀಡುವುದಿಲ್ಲ. ಹೆದ್ದಾರಿಯಲ್ಲಿ ಓವರ್‌ಟೇಕ್‌ ಮಾಡಲು ತೊಂದರೆ ನೀಡುತ್ತದೆ. ಆದರೆ ಆಟೊ ವ್ಯವಸ್ಥೆಯಲ್ಲಿ ಈ ತೊಂದರೆಯಿಲ್ಲ.

ಬೆಂಗಳೂರಿನ ಶೋರೂಂ ದರ ₹12.27 ಲಕ್ಷದಿಂದ ಆರಂಭವಾಗಿ ₹17.83 ಲಕ್ಷದವರೆಗೆ ಇದೆ. ಹೆಕ್ಸಾ ರಸ್ತೆಗೆ ಇಳಿದದ್ದೇ ಟೊಯೊಟ ಇನ್ನೊವಾ ಕ್ರಿಸ್ತಾಗೆ ಪೈಪೋಟಿ ನೀಡಲು. ತಾಂತ್ರಿಕವಾಗಿ ಹಾಗೂ ದರದಲ್ಲಿ ಸುಲಭವಾಗಿ ಪೈಪೋಟಿ ನೀಡಬಹುದು. ಆದರೆ ಸರ್ವಿಸ್‌ ಮತ್ತು ಮಾರುಕಟ್ಟೆ ವಿಸ್ತರಣೆಯತ್ತ ಗಮನ ಹರಿಸಬೇಕು.

***

ಪರೀಕ್ಷಾ ಫಲಿತಾಂಶ
ಕಿ.ಮೀ ಸೆಕೆಂಡ್
20 0.94
40 2.58
60 4.83
80 8.12
100 12.32
120 17.98

***

ಆಟೊ ಸಂತೆಯಲ್ಲಿ...
ಮಹೀಂದ್ರಾದಿಂದ ಜೀತೊ ಮಿನಿವ್ಯಾನ್ ಮಿನಿ ವ್ಯಾನ್‌ ವಾಣಿಜ್ಯ ವಾಹನಗಳ ಮಾರುಕಟ್ಟೆ ಭಾರತದಲ್ಲಿ ಹಿಗ್ಗಿರುವ ಅವಕಾಶವನ್ನು ಬಳಸಿಕೊಂಡಿರುವ ಮಹೀಂದ್ರಾ, ಇದೀಗ ಮಿನಿ ವ್ಯಾನ್‌ ಅನ್ನು ಪರಿಚಯಿಸಿದೆ.

ಈ ‘ಜೀತೊ ಮಿನಿ ವ್ಯಾನ್’ ಡೀಸೆಲ್ ಅವತರಣಿಕೆಗೆ ₹ 3.45 ಲಕ್ಷ (ಎಕ್ಸ್ ಷೋರೂಂ, ಮುಂಬೈ) ಬೆಲೆ ನಿಗದಿಪಡಿಸಲಾಗಿದೆ. ಸದ್ಯಕ್ಕೆ ಡೀಸೆಲ್ ಅವತರಣಿಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಯು ಕಾಣಿಸಿಕೊಳ್ಳುವುದಾಗಿ ಕಂಪೆನಿ ತಿಳಿಸಿದೆ.

ಜೀತೊ ಎರಡು ವಿಧಗಳಲ್ಲಿ ಲಭ್ಯ. ಒಂದು, ಹಾರ್ಡ್ ಟಾಪ್ ಮತ್ತೊಂದು ಸೆಮಿ ಹಾರ್ಡ್ ಟಾಪ್. ವಿನ್ಯಾಸದ ವಿಷಯಕ್ಕೆ ಬಂದರೆ, ಡ್ಯುಯಲ್ ಟೋನ್‌ನಂತೆ ಒಳಾಂಗಣ ವಿನ್ಯಾಸವಿದ್ದು, ಆಧುನಿಕ ಡ್ಯಾಷ್‌ಬೋರ್ಡ್ ಹಾಗೂ ಲಾಕ್‌ ಮಾಡುವಂಥ ಗ್ಲೌವ್ ಬಾಕ್ಸ್‌ ಆಯ್ಕೆ ಲಭ್ಯವಿದೆ. ಡ್ರೈವರ್ ಹಾಗೂ ಪ್ರಯಾಣಿಕರಿಗೆ ಬಕೆಟ್ ಸೀಟ್, ಹಿಂಬದಿ ಪ್ರಯಾಣಿಕರಿಗೆ ಕುಷನ್ ಬೆಂಚ್ ಸೀಟ್‌ಗಳಿವೆ.

ಬಿಎಸ್ಐವಿ ಎಂ ಡ್ಯೂರಾ ಡಿಐ ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್ ಜೀತೊಗೆ ಇದ್ದು, 625ಸಿಸಿ ಯುನಿಟ್‌ನಲ್ಲಿ 1 ಬಿಎಚ್‌ಪಿ ಹಾಗೂ 38 ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಇದರೊಂದಿಗೆ 4 ಸ್ಪೀಡ್ ಗಿಯರ್‌ ಬಾಕ್ಸ್ ಇದೆ. ಸನ್‌ರೈಸ್ ರೆಡ್, ಅಲ್ಟ್ರಾಮರೈನ್ ಬ್ಲೂ ಹಾಗೂ ಡೈಮಂಡ್ ವೈಟ್ ಈ ಮೂರು ಬಣ್ಣಗಳಲ್ಲಿ ಮಿನಿ ವ್ಯಾನ್ ಲಭ್ಯ.

***

ಡುಕಾಟಿಯಿಂದ 1299 ಪನಿಗೇಲ್ ಆರ್ ಅಂತಿಮ ಆವೃತ್ತಿ ಬಿಡುಗಡೆ
ಎಲ್‌ಟ್ವಿನ್ ಎಂಜಿನ್ ಬೆಂಬಲಿತ ಸೂಪರ್‌ಬೈಕ್ ತಯಾರಿಕೆಗೆ ಡುಕಾಟಿ ವಿದಾಯ ಹೇಳಿದ್ದು, ಈ ವಿಭಾಗದ ಅಂತಿಮ ಆವೃತ್ತಿ 1299 ಪನಿಗೇಲ್ ಆರ್ ಸೂಪರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಡಬ್ಲುಎಸ್‌ಬಿಕೆ ಸ್ಪೆಕ್ ಚಾಸಿಸ್ ಇದ್ದು, ಇದರ 1,285 ಸಿಸಿ ಎಂಜಿನ್ 206.5 ಬಿಎಚ್‌ಪಿ ಹಾಗೂ 142 ಎನ್‌ ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. 6-ಸ್ಪೀಡ್ ಗಿಯರ್‌ಬಾಕ್ಸ್ ಜತೆಗಿದೆ.

ಇದರ ಮತ್ತೂ ಆಕರ್ಷಣೆಗಳೆಂದರೆ ರೇಸಿಂಗ್ ಚಾಸಿಸ್. ಸೂಪರ್ ಕ್ವಾಡ್ರೊ ಎಲ್‌ಟ್ವಿನ್ ಇದ್ದು, ಆ್ಯಂಟಿ ಲಾಕ್ ಬ್ರೇಕ್, ಟ್ರಾಕ್ಷನ್ ಕಂಟ್ರೋಲ್, ಎಂಜಿನ್ ಬ್ರೇಕ್ ಕಂಟ್ರೋಲ್, ವೀಲೀ ಕಂಟ್ರೋಲ್, ಎಬಿಎಸ್ ಹೀಗೆ ಸಾಕಷ್ಟು ಆಯ್ಕೆಗಳು ಬೈಕ್‌ ಅನ್ನು ಉತ್ಕೃಷ್ಟಗೊಳಿಸಿವೆ.

ಬ್ರೆಂಬೊ ಬ್ರೇಕ್‌, ಪಿರೆಲ್ಲಿ ಡಿಯಾಬ್ಲೊ ಸೂಪರ್ಕೋರ್ಸ್‌ ಎಸ್‌ಪಿ ಟೈರ್‌ಗಳು ಸ್ಪೋರ್ಟಿ ಲುಕ್ ನೀಡಿವೆ. ಬೈಕ್‌ನ ಕಾನ್‌ರಾಡ್‌ಗಳು ಹಾಗೂ ವಾಲ್ವ್‌ಗಳನ್ನು ಟೈಟಾನಿಯಮ್‌ನಿಂದ ಮಾಡಲಾಗಿದೆ. ನ್ಯಾಲೆನ್ಸರ್ ಪ್ಯಾಡ್‌ಗಳನ್ನು ಟಂಗ್‌ಸ್ಟನ್‌ನಿಂದ ತಯಾರಿಸಲಾಗಿದೆ. 1299 ಪನಿಗೇಲ್ ಆರ್‌ ಬೈಕ್‌ ಬೆಲೆ ₹ 59.18 ಲಕ್ಷ.

***

ವೋಲ್ವೊದಿಂದ ಕಾಂಪಾಕ್ಟ್ಎಸ್‌ಯುವಿ

ಕಳೆದ ಬಾರಿ ಸ್ವಿಡನ್‌ನ ಆಟೊ ಪ್ರದರ್ಶನವೊಂದರಲ್ಲಿ ಕಾಣಿಸಿಕೊಂಡು ಭಾರಿ ಸುದ್ದಿ ಮಾಡಿದ್ದ ವೋಲ್ವೊ XC40 ಭಾರತಕ್ಕೆ ಬರುವ ಸೂಚನೆ ನೀಡಿದೆ. ಈ ಕಾಂಪಾಕ್ಟ್ ಎಸ್‌ಯುವಿ ಮುಂದಿನ ವರ್ಷ ಭಾರತಕ್ಕೆ ಕಾಲಿಡಲಿದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.

ಕಾಂಪಾಕ್ಟ್ ಲಕ್ಷುರಿ ವಿಭಾಗದಲ್ಲಿ ವೋಲ್ವೊದ ಮೊದಲ ಉತ್ಪನ್ನ ಇದಾಗಿದ್ದು, ಹೊಸ ಸಿಎಂಎ ಪ್ಲಾಟ್‌ಫಾರಂ ಮೇಲೆ ಇದನ್ನು ಅಭಿವೃದ್ಧಿಪಡಿಸಿರುವುದು ಇದೇ ಮೊದಲು. 3 ಹಾಗೂ 4 ಸಿಲಿಂಡರ್ ಎಂಜಿನ್ ಪೆಟ್ರೋಲ್, ಡೀಸೆಲ್ ಹಾಗೂ ಹೈಬ್ರಿಡ್ ಅವತರಣಿಕೆಗಳಲ್ಲಿ ಈ ಎಸ್‌ಯುವಿ ಲಭ್ಯವಿರಲಿದೆ. ಭಾರತದಲ್ಲಿ ಮೊದಲು ಡೀಸೆಲ್ ಆವೃತ್ತಿಯಲ್ಲಿ ದೊರೆಯಲಿದೆ.

ಥಾರ್‌ ಹ್ಯಾಮರ್ ಶೈಲಿಯ ಹೆಡ್‌ಲ್ಯಾಂಪ್‌ಗಳು ಈ ಎಸ್‌ಯುವಿಯ ಅತ್ಯಾಕರ್ಷಕ ಅಂಶ. XC90 ಮತ್ತು XC60ನಂತೆ ಶೈಲಿ ಇದಕ್ಕಿದೆ. 5 ಸೀಟರ್ ಕ್ಯಾಬಿನ್ ಇದ್ದು, ಎಲ್‌ಇಡಿ ಡೇಟೈಮ್ ಲೈಟ್‌ ಹಾಗೂ ಕ್ರೋಮ್ ಗ್ರಿಲ್ ಕಳೆ ತಂದಿವೆ. ವರ್ಟಿಕಲ್‌ ಟಚ್‌ಸ್ಕ್ರೀನ್ ಇನ್ಫೊಟೇನ್‌ಮೆಂಟ್ ಸಿಸ್ಟಮ್, 3 ಸ್ಪೋಕ್ ಮಲ್ಟು ಫಂಕ್ಷನಲ್ ಸ್ಟೀರಿಂಗ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಬೆಲೆ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT