ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಿಟ್‌ನೆಸ್‌ ಅಂದರೆ ತೆಳ್ಳಗಿರುವುದಲ್ಲ’

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಚಿಕ್ಕ ವಯಸ್ಸಿನಿಂದಲೂ ಫ್ಯಾಷನ್‌ ಜಗತ್ತಿನ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದ ಅಮೂಲ್ಯ ರಾಮ್‌ ಕಾಲೇಜು ಮೆಟ್ಟಿಲು ಏರುತ್ತಿದ್ದಂತೆ ರ‍್ಯಾಂಪ್‌ ಮೇಲೆ ಹೆಜ್ಜೆಯೂರಲು ಆರಂಭಿಸಿದರು.

ಅಮೂಲ್ಯ ಅವರ ಅಪ್ಪ ರಾಮ್‌ ಅವರು ಕಲಾವಿದರಾಗಿದ್ದರಿಂದ ಇವರು ಸಹಜವಾಗಿಯೇ ಬಣ್ಣದ ಲೋಕದ ಕಡೆಗೆ ಆಕರ್ಷಿತರಾಗಿದ್ದರು. ಕಲಾವಿದರ ಕುಟುಂಬವೇ ಆಗಿದ್ದರಿಂದ ಫ್ಯಾಷನ್‌ ಲೋಕದಲ್ಲಿ ಅವಕಾಶ ಪಡೆಯಲು ಹೆಚ್ಚು ಕಷ್ಟವಾಗಲಿಲ್ಲ. ಅಮೂಲ್ಯ ಮೊದಲ ಬಾರಿ ರ‍್ಯಾಂಪ್‌ ಏರಿದ್ದು ಪ್ರಥಮ ಪಿಯುಸಿಯಲ್ಲಿದ್ದಾಗ ಮೊದಲ ಬಾರಿಯ ಸ್ಪರ್ಧೆಯಲ್ಲಿಯೇ ‘ಬೆಸ್ಟ್‌ ಆಟಿಟ್ಯೂಡ್‌’ ಪ್ರಶಸ್ತಿ ಪಡೆದ ಖುಷಿ ಅವರದು.

ಹೀಗೆ ಆರಂಭವಾದ ಅಮೂಲ್ಯ ಅವರ ಫ್ಯಾಷನ್‌ ಜಗತ್ತಿನ ಪಯಣ ಸುಗಮವಾಗಿಯೇ ಮುಂದುವರಿಯಿತು. ಕಾಲೇಜಿನಲ್ಲಿ ಅಂತರಕಾಲೇಜು ಸೌಂದರ್ಯ ಸ್ಪರ್ಧೆಗಳಲ್ಲಿ ನೂರಾರು ಬಾರಿ ಸ್ಪರ್ಧಿಸಿದ ಅನುಭವ ಅವರಿಗಿದೆ. ಹೀಗಾಗಿ ಪಿಯುಸಿ ಮುಗಿದ ಬಳಿಕ ಫ್ಯಾಶನ್‌ ಡಿಸೈನಿಂಗ್‌ ಕಡೆಗೆ ಆಕರ್ಷಿತರಾದರು. ಮುಂದೆ ಆ ಕ್ಷೇತ್ರದಲ್ಲಿಯೇ ಮುಂದುವರಿಯುವ ಹಂಬಲದಿಂದ ಫ್ಯಾಶನ್‌ ಡಿಸೈನಿಂಗ್‌ ಕೋರ್ಸ್‌ಗೆ ಸೇರಿದರು.

ಸಾಂಪ್ರದಾಯಿಕ ಹಾಗೂ ಬುಡಕಟ್ಟು ಜನಾಂಗ, ಪ್ರಾಕೃತಿಕ ವಿನ್ಯಾಸದ ವಸ್ತ್ರವಿನ್ಯಾಸಗಳನ್ನು ಮಾಡಿ, ಅದಕ್ಕೆ ತಾನೇ ರೂಪದರ್ಶಿಯಾದ ಅನುಭವ ಇವರದು. ಅನೇಕ ಉತ್ಪನ್ನಗಳ ಜಾಹೀರಾತುಗಳಲ್ಲಿ ಅಮೂಲ್ಯ ನಟಿಸಿದ್ದಾರೆ. ಲೈಮ್‌ ರೋಡ್‌, ಕೆಲವು ಶಿಕ್ಷಣ ಸಂಸ್ಥೆಗಳು, ಖಾದಿ ವಸ್ತ್ರಗಳ ಜಾಹೀರಾತುಗಳಲ್ಲಿ ನಟಿಸಿದ್ದಾರೆ.

ಇವರ ಎತ್ತರವೇ ಇವರಿಗೆ ಮಾಡೆಲಿಂಗ್‌ನಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆಯಂತೆ. ’ನಾನು ಐದು ಅಡಿ ಆರು ಇಂಚು ಎತ್ತರ ಇದ್ದೆ. ಇದೇ ನನಗೆ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಇನ್ನು ಮಾಡೆಲಿಂಗ್‌ನಲ್ಲಿ ಮೈಮಾಟ ನೋಡುತ್ತಾರೆ. ನಾನೂ ಫಿಟ್‌ ಆಗಿದ್ದರಿಂದ ಬೇಗ ಆಯ್ಕೆಯಾದೆ. ಶಾಲಾ ದಿನಗಳಲ್ಲೇ ನನ್ನ ಮೈಕಟ್ಟು ನೋಡಿ ಎಲ್ಲರೂ ರೂಪದರ್ಶಿ ಆಗು ಎಂದು ಹುರಿದುಂಬಿಸುತ್ತಿದ್ದರು’ ಎಂದು ನಗುತ್ತಾರೆ ಅಮೂಲ್ಯ.

ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಸಕ್ರಿಯರಾಗಿರುವ ಅಮೂಲ್ಯ ನಟನೆಯತ್ತ ಅಷ್ಟೇನೂ ಆಸಕ್ತಿ ಹೊಂದಿಲ್ಲ. ಆದರೆ ಉತ್ತಮ ಪಾತ್ರ ಸಿಕ್ಕರೆ ನಟಿಸಬಹುದು ಎನ್ನುತ್ತಾರೆ. ಹೆಸರಾಂತ ವಸ್ತ್ರ ವಿನ್ಯಾಸಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಅವರ ಗುರಿಯಂತೆ.

ಕಳೆದ ಎರಡು ವರ್ಷಗಳಿಂದ ವಸ್ತ್ರವಿನ್ಯಾಸಕಿಯಾಗಿಯೂ ಕೆಲಸ ಮಾಡುತ್ತಿರುವ ಅಮೂಲ್ಯ ಅನೇಕ ರೂಪದರ್ಶಿಯರಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅಲ್ಲದೆ ತಾವು ವಿನ್ಯಾಸ ಮಾಡಿದ ಬಟ್ಟೆಗಳಿಗೆ ತಾನೇ ರೂಪದರ್ಶಿಯಾಗಿ ವೇದಿಕೆ ಏರಿದ್ದಾರೆ.

ಐದು ವರ್ಷಗಳಿಂದ ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿರುವ ಅಮೂಲ್ಯ ಚೆನ್ನೈ, ಹೈದರಾಬಾದ್‌, ಮುಂಬೈನಲ್ಲೂ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ’ಮಾಡೆಲಿಂಗ್‌ನಲ್ಲಿ ಬಣ್ಣ ಮುಖ್ಯವಾಗುವುದಿಲ್ಲ. ಆದರೆ ಫಿಟ್‌ ಆಗಿರಬೇಕು ಎಂಬ ಸೂತ್ರ ಅಮೂಲ್ಯಗೆ ತಿಳಿದಿದೆ. ಹಾಗಾಗಿ ಅವರು ಫಿಟ್‌ನೆಸ್‌ ಕಡೆ ಹೆಚ್ಚು ಗಮನ ಹರಿಸುತ್ತಾರೆ.

‘ನಾವು ಸ್ವಲ್ಪ ದಪ್ಪ ಆದರೂ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ. ಹೆಚ್ಚಿನವರು ಫಿಟ್‌ನೆಸ್‌ ಅಂದಾಗ ಸಣ್ಣ, ತೆಳ್ಳಗೆ ಇರುವುದು ಎಂದು ನಂಬುತ್ತಾರೆ. ಆದರೆ ಮಾಡೆಲಿಂಗ್‌ ಪ್ರಪಂಚದಲ್ಲಿ ಫಿಟ್‌ ಆಗಿರುವವರಿಗೆ ಹೆಚ್ಚು ಅವಕಾಶ’ ಎಂದು ವ್ಯಾಖ್ಯಾನ ನೀಡುತ್ತಾರೆ.

ಒಳ್ಳೆಯ ಮೈಕ್ಕಟ್ಟಿಗಾಗಿ ಎರಡು ದಿನಕ್ಕೊಮ್ಮೆ ಜಿಮ್‌ಗೆ ಹೋಗುತ್ತಾರೆ. ಆದರೆ ಜಿಮ್‌ಗಿಂತ ಮನೆಯಲ್ಲಿಯೇ ಸರಳ ವ್ಯಾಯಾಮಗಳನ್ನು ಮಾಡುವುದು ಅವರಿಗಿಷ್ಟ. ಯೋಗ ಕೂಡ ಮಾಡುತ್ತಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಶೋ ಸ್ಟಾಪರ್‌ ಆಗಿ ಆಯ್ಕೆಯಾಗಿದ್ದುದು ಅವರಿಗೆ ತುಂಬಾ ಖುಷಿ ಕೊಟ್ಟಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT