ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಧ್ವಜ: ರಾಜ್ಯ ಅಸ್ಮಿತೆಯ ಸಂಕೇತ– ವಿರೋಧ ಏಕೆ?

Last Updated 19 ಜುಲೈ 2017, 20:23 IST
ಅಕ್ಷರ ಗಾತ್ರ

ಕೆಂಪು, ಹಳದಿ ವರ್ಣದ ಧ್ವಜ ಈಗಾಗಲೇ ಕನ್ನಡ ಧ್ವಜವಾಗಿ ಬಳಕೆಯಾಗುತ್ತಿದೆ. ಈಗ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಿ ಕಾನೂನು ಮಾನ್ಯತೆ ನೀಡುವ ವಿಚಾರದಲ್ಲಿ ಅಧ್ಯಯನ ನಡೆಸಲು ಒಂಬತ್ತು ಸದಸ್ಯರ ಸಮಿತಿಯನ್ನು ರಾಜ್ಯ ಸರ್ಕಾರ ರೂಪಿಸಿರುವುದು ವಿವಾದವಾಗಿದೆ.

ರಾಜ್ಯ ಸರ್ಕಾರದ ಈ ನಡೆಗೆ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಸಿಟ್ಟಾಗಿರುವುದು ವಿಪರ್ಯಾಸ. ರಾಜ್ಯಕ್ಕೆ ಪ್ರತ್ಯೇಕವಾದ ನಾಡಧ್ವಜ ಅಗತ್ಯವಿಲ್ಲ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿರುವ ಸಂದರ್ಭದಲ್ಲಿ ನಾಡಧ್ವಜ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂಬಂಥ ಟೀಕೆಗಳನ್ನೂ ಮಾಡಲಾಗಿದೆ.

ಈ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವನ್ನು ಪ್ರದರ್ಶಿಸಿಕೊಂಡು ಬಂದಿದೆ ಎಂಬುದು ಸ್ಪಷ್ಟ.  2009ರಲ್ಲಿ ಆಗಿನ ಮುಖ್ಯಮಂತ್ರಿ, ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರು, ‘ರಾಷ್ಟ್ರೀಯ ಏಕತೆಗೆ ಧಕ್ಕೆ ಆಗುತ್ತದೆ’ ಎಂದು ನಾಡಧ್ವಜ ಬೇಡಿಕೆ ತಿರಸ್ಕರಿಸಿದ್ದರು. ಆದರೆ 2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅದೇ ಪಕ್ಷದ ಡಿ.ವಿ. ಸದಾನಂದ ಗೌಡ ಅವರು ತಮ್ಮ ಬಜೆಟ್ ಭಾಷಣದಲ್ಲಿ ‘ನವೆಂಬರ್ 1ರಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ’ ಎಂದಿದ್ದರು.

ಕನ್ನಡ ಧ್ವಜಾರೋಹಣ ಕಡ್ಡಾಯಗೊಳಿಸಿದ್ದ ಈ ಆದೇಶವನ್ನು ವಾಪಸು ಪಡೆದಿರುವುದಾಗಿ ನಂತರ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು.

ಕಾನೂನಾತ್ಮಕವಾಗಿ ಹೇಳುವುದಾದರೆ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಲು ಯಾವುದೇ ಅಡ್ಡಿ ಇಲ್ಲ. ಈ ವಿಚಾರದಲ್ಲಿ ರಾಜ್ಯಗಳನ್ನು ನಿರ್ಬಂಧಿಸುವ ಯಾವುದೇ ಅಂಶ ಸಂವಿಧಾನದಲ್ಲಿ ಇಲ್ಲ. ಈಗಾಗಲೇ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಇದೆ. ಜೊತೆಗೆ ಕೇಂದ್ರ ಸರ್ಕಾರದ ಜೊತೆ ನಾಗಾ ಒಪ್ಪಂದದ ಅನ್ವಯ ನಾಗಾಲ್ಯಾಂಡ್‌ಗೂ ಪ್ರತ್ಯೇಕ ಅಧಿಕೃತ ಧ್ವಜ ನೀಡುವ ವಿಚಾರ ಈಗ ಚರ್ಚೆಯಾಗುತ್ತಿದೆ ಎಂಬುದನ್ನೂ ಗಮನಿಸಬೇಕು.

ರಾಜ್ಯದಲ್ಲಿ ಈಗಾಗಲೇ ಅಧಿಕೃತವಾಗಿ ನಾಡಗೀತೆ ಇದೆ. ಅದೇ ರೀತಿ ನಾಡಧ್ವಜ ಇದ್ದರೆ ತಪ್ಪೇನು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ  ಪ್ರಶ್ನೆ ಇಲ್ಲಿ ಪ್ರಸ್ತುತ. ನಾಡಧ್ವಜ ಹೊಂದುವುದರಿಂದ ದೇಶದ ಏಕತೆಗೆ ಧಕ್ಕೆ ಆಗಿಬಿಡುತ್ತದೆ ಎಂಬ ವಾದಗಳಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಅನಗತ್ಯ ಭಾವೋದ್ರೇಕಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಸರ್ವಥಾ  ಸಲ್ಲದು.

ನಾಡ ಧ್ವಜವನ್ನು ಹೊಂದುವುದು ಭಾಷಾಭಿಮಾನದ ದ್ಯೋತಕ ಹಾಗೂ ರಾಜ್ಯದ ಅಸ್ಮಿತೆಯ ಸಂಕೇತ. ಇದರಿಂದ ರಾಷ್ಟ್ರ ಹಿತಾಸಕ್ತಿ ಜೊತೆ ಯಾವುದೇ ಸಂಘರ್ಷ ಏರ್ಪಡುವುದಿಲ್ಲ. ಜರ್ಮನಿ, ಅಮೆರಿಕ  ಅಥವಾ ಆಸ್ಟ್ರೇಲಿಯಾದಂತಹ ದೇಶಗಳಲ್ಲಿನ ರಾಜ್ಯಗಳು ತಮ್ಮದೇ ಪ್ರತ್ಯೇಕ ಧ್ವಜಗಳನ್ನು ಹೊಂದಿವೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಯಾವುದೇ ರೀತಿ ಭಂಗವಾಗಿಲ್ಲ.

ಭಾರತದಲ್ಲಿ ವಸಾಹತುಶಾಹಿ ಆಡಳಿತದ ಮುಕ್ತಾಯದ ನಂತರ ‘ವಿವಿಧತೆಯಲ್ಲಿ ಏಕತೆ’ ಎಂಬುದು ನಮ್ಮ ಮೂಲಮಂತ್ರವಾಗಿದೆ ಎಂಬುದನ್ನು ನಾವು ಹೇಗೆ ಮರೆಯುವುದು? ಬಹುತ್ವವೇ ನಮ್ಮ ಬಲ ಎಂಬುದನ್ನು ನಾವು ಕಂಡುಕೊಳ್ಳಬೇಕು. ಸ್ವಾತಂತ್ರ್ಯಾನಂತರ ರಚಿಸಲಾದ ಭಾಷಾವಾರು ರಾಜ್ಯಗಳ ಆಡಳಿತ ಮಾದರಿ ಯಶಸ್ವಿಯಾಗಿಯೇ ಕಾರ್ಯನಿರ್ವಹಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಹೇರುವ ಪ್ರಯತ್ನಗಳು ಈವರೆಗೆ ಕಾಪಾಡಿಕೊಂಡು ಬಂದಿರುವ ಸಮತೋಲನದ ಹದ ತಪ್ಪಿಸುತ್ತಿವೆ.

ಇಂತಹ ನಡೆ, ಉಗ್ರ ಕನ್ನಡ ರಾಷ್ಟ್ರೀಯತಾವಾದಕ್ಕೆ ಎಡೆ ಮಾಡಿಕೊಡುವುದು ಸಹಜ. ನಾಡ ಧ್ವಜದಂತಹ ಅಸ್ಮಿತೆಯ ಸಂಕೇತಕ್ಕೂ ವಿರೋಧ ತೋರುವುದು ಅಥವಾ ತಡೆ ಒಡ್ಡುವುದರಿಂದ ನಕಾರಾತ್ಮಕ ಪರಿಣಾಮಗಳಾಗುವ ಸಾಧ್ಯತೆಯೇ ಹೆಚ್ಚು.

ಕನ್ನಡತನದ ಅಭಿಮಾನದಿಂದ ಭಾರತೀಯತೆಗೆ ಧಕ್ಕೆ ಆಗುತ್ತದೆ ಎಂಬಂತಹ ಚಿಂತನೆ ಅಪ್ರಬುದ್ಧ ಮಾತ್ರವಲ್ಲ ಅನಗತ್ಯವಾದ ಭಾವೋದ್ರೇಕಗಳನ್ನು ಕೆರಳಿಸುವಂತಹದ್ದು. ತಮ್ಮದೇ ಅಸ್ಮಿತೆ ಹೊಂದಿದ ಬಲವಾದ ರಾಜ್ಯಗಳು ರಾಷ್ಟ್ರವನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ ರಾಷ್ಟ್ರವನ್ನು ಇನ್ನಷ್ಟು ಬಲಗೊಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT