ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಅಶ್ವಿನ್; ಮೇಲೇರಿದ ರಂಗನಾ

ಅಗ್ರಸ್ಥಾನದಲ್ಲಿ ಮುಂದುವರಿದ ಎಡಗೈ ಸ್ಪಿನ್ನರ್ ಜಡೇಜ
Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ದುಬೈ: ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿರುವ ಟೆಸ್ಟ್ ಬೌಲರ್‌ಗಳ ಕ್ರಮಾಂಕ ಪಟ್ಟಿಯ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಶ್ರೀಲಂಕಾದ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಅವರು ಏಳನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

39 ವರ್ಷದ ಹೆರಾತ್ ಅವರು ಈಚೆಗೆ ಕೊಲಂಬೊದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ 249ಕ್ಕೆ11 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅವರು ಒಟ್ಟು 81 ಪಂದ್ಯಗಳಿಂದ 384 ವಿಕೆಟ್‌ಗಳನ್ನು ಗಳಿಸಿದ್ದಾರೆ. ಆದರೆ ಅಶ್ವಿನ್ ಎರಡನೇ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ. ಇದರಿಂದಾಗಿ ಪಟ್ಟಿಯ ಮೊದಲ ಎರಡು ಸ್ಥಾನಗಳಲ್ಲಿ ಎಡಗೈ ಸ್ಪಿನ್ನರ್‌ಗಳಿರುವುದು ವಿಶೇಷ.

ತಲಾ 826 ಅಂಕಗಳನ್ನು ಗಳಿಸಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಮತ್ತು ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್ ಅವರು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ ಅವರು 12 ಸ್ಥಾನಗಳ ಬಡ್ತಿ ಪಡೆದಿದ್ದಾರೆ. ಅವರು 38ನೇ ಸ್ಥಾನದಿಂದ 26ಕ್ಕೇರಿದ್ದಾರೆ.

ಜಿಂಬಾಬ್ವೆ ತಂಡದ ನಾಯಕ ಮತ್ತು ಲೆಗ್‌ಸ್ಪಿನ್ನರ್ ಗ್ರೆಮ್ ಕ್ರೀಮರ್ ಅವರು ಕೊಲಂಬೊದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದರು. ಅದರೊಂದಿಗೆ ಅವರು 73 ನೇ ಸ್ಥಾನದಿಂದ 53ಕ್ಕೆ ಜಿಗಿದಿದ್ದಾರೆ.

ಅಗ್ರಸ್ಥಾನದಲ್ಲಿ ಸ್ಟೀವ್ ಸ್ಮಿತ್: ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಾಶೀಮ್ ಆಮ್ಲಾ ಅವರು ಅಗ್ರ ಹತ್ತರಲ್ಲಿ ಮರಳಿ ಸ್ಥಾನ ಗಳಿಸಿಕೊಂಡಿದ್ದಾರೆ.

13ನೇ ಸ್ಥಾನದಲ್ಲಿದ್ದ ಅವರು ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಎರಡು ಅರ್ಧಶತಕ ಗಳಿಸಿದ್ದರು.  ಜಿಂಬಾಬ್ವೆಯ ಕ್ರೇಗ್ ಇರ್ವಿನ್ ಮತ್ತು ಸಿಕಂದರ್ ರಝಾ  ಅವರು ಕ್ರಮವಾಗಿ 40 ಮತ್ತು 48ನೇ ಸ್ಥಾನ ಗಳಿಸಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ್ ಪೂಜಾರ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅವರು ಕ್ರಮವಾಗಿ ನಾಲ್ಕು ಮತ್ತು ಹತ್ತನೆ ಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮುಂದುವರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT