ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋವಾ ಸರ್ಕಾರದ್ದು ಉದ್ಧಟತನ’

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹದಾಯಿ ಜಲ ಹಂಚಿಕೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವುದು ಗೋವಾ ಸರ್ಕಾರದ ಉದ್ಧಟತನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಬುಧವಾರ ಮಾತನಾಡಿದ ಅವರು, ‘ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್ ಮಾಡಿರುವ ಪದ ಬಳಕೆಯೂ ಅವರಿಗೆ ಗೌರವ ನೀಡುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಪದ ಬಳಕೆ ಹೇಗಿರಬೇಕೆನ್ನುವುದನ್ನು ಅವರು ಕಲಿತುಕೊಳ್ಳುವುದು ಒಳ್ಳೆಯದು’ ಎಂದು ತಿರುಗೇಟು ನೀಡಿದರು.

‘ಜಲ ವಿವಾದವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದೇವೆ. ನ್ಯಾಯಮಂಡಳಿಯೂ  ಇದೇ ಸಲಹೆ ನೀಡಿದೆ. ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರಿಗೂ ಪತ್ರ ಬರೆದಿದ್ದೇನೆ. ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಮಂತ್ರಿ ಅವರಿಗೂ ಮತ್ತೆ ಪತ್ರ ಬರೆಯುತ್ತೇನೆ’ ಎಂದರು.

ವರ್ಗಾವಣೆ ಸಮರ್ಥನೆ: ‘ಪೊಲೀಸ್‌ ಇಲಾಖೆಯಲ್ಲಿ ಶಿಸ್ತು ಇರಬೇಕು. ಅದಕ್ಕಾಗಿಯೇ ಬಂದಿಖಾನೆ ಡಿಜಿಪಿ ಎಚ್‌.ಎನ್‌. ಸತ್ಯನಾರಾಯಣ ರಾವ್‌ ಮತ್ತು ಡಿಐಜಿ ರೂಪಾ ಇಬ್ಬರನ್ನೂ ವರ್ಗಾವಣೆ ಮಾಡಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರ’ ಎಂದು ಅವರು ಸ್ಪಷ್ಟಪಡಿಸಿದರು.

‘ಸರ್ಕಾರದ ಕೆಲಸದಲ್ಲಿ ಮುಖ್ಯ, ಅಮುಖ್ಯ, ಉತ್ತಮ ಜಾಗ, ಕೆಟ್ಟ ಜಾಗ  ಎನ್ನುವುದು ಇದೆಯೇ.  ವರ್ಗಾವಣೆಯನ್ನು ವಿರೋಧ ಪಕ್ಷಗಳಿಂದ ಮಾಡಿಸಬೇಕಾ’ ಎಂದು ವಿರೋಧ ಪಕ್ಷಗಳ ವಿರುದ್ಧ ಅವರು  ಹರಿಹಾಯ್ದರು.

ಬತ್ತಿ ಹೋದ ಕೆರೆ, ಕಟ್ಟೆ ಡಿನೋಟಿಫೈ ಸಿದ್ದರಾಮಯ್ಯ  ಸಮರ್ಥನೆ
ಬೆಂಗಳೂರು: ‘ಬತ್ತಿಹೋದ ಕೆರೆ, ಕಟ್ಟೆಗಳನ್ನು ಸರ್ಕಾರಿ ಸ್ವಾಮ್ಯದಿಂದ ಕೈಬಿಡುವುದು ಅನಿವಾರ್ಯ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆ ಡಿನೋಟಿಫೈ ಮಾಡುವ ಕ್ರಮವನ್ನು ಸಮರ್ಥಿಸಿಕೊಂಡರು.

ಕೆರೆಗಳ ಡಿನೋಟಿಫೈ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ,  ‘ಈಗ ಬಸ್‌ ನಿಲ್ದಾಣವಾಗಿರುವ ಬೆಂಗಳೂರಿನ ಧರ್ಮಾಂಬುಧಿ ಕೆರೆಯನ್ನು ಮತ್ತೆ ಹೇಗೆ ಉಳಿಸಿಕೊಳ್ಳಲು ಸಾಧ್ಯ’ ಎಂದು ಮರು ಪ್ರಶ್ನೆ ಹಾಕಿದರು.  ‘ಗುಣ ಸ್ವರೂಪ ಕಳೆದುಕೊಂಡಿರುವ ಕೆರೆಗಳನ್ನು ಮತ್ತೆ  ಪುನರುಜ್ಜೀವನ   ಮಾಡಲು ಆಗುವುದಿಲ್ಲ. ಅಂತಹ ಕೆರೆಗಳನ್ನು ಮಾತ್ರ ಸ್ವಾಮ್ಯದಿಂದ ಕೈಬಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದು ಹೇಳಿದರು.

‘ಜೀವಂತ  ಅಥವಾ ಅಲ್ಪ ಸ್ವಲ್ಪ ನೀರು ಬರುವ ಕೆರೆಗಳನ್ನು ಕೈಬಿಡುವ ಆಲೋಚನೆ ಸರ್ಕಾರದ ಮುಂದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT