ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಫೈನಲ್‌ ಪ್ರವೇಶದ ಕನಸು

ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ ಪಂದ್ಯ ಇಂದು; ಭರವಸೆಯಲ್ಲಿ ಮಿಥಾಲಿ ರಾಜ್‌ ಬಳಗ
Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಡರ್ಬಿ, ಲಂಡನ್‌: ಗುಂಪು ಹಂತದ ಪಂದ್ಯಗಳಲ್ಲಿ ಅತ್ಯುತ್ತಮ ಆಟವಾಡಿದ ಭಾರತ ತಂಡ ಮಹಿಳೆಯರ ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ನಲ್ಲಿ ಗುರುವಾರ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಒಟ್ಟು 11 ವಿಶ್ವಕಪ್‌ ಟೂರ್ನಿಗಳ ಪೈಕಿ ಆಸ್ಟ್ರೇಲಿಯಾ ಆರು ಬಾರಿ ಪ್ರಶಸ್ತಿ ಗೆದ್ದಿದೆ, ಎರಡು ಬಾರಿ ರನ್ನರ್ ಅಪ್ ಆಗಿದೆ. ಈ ಬಾರಿಯ ಟೂರ್ನಿಯಲ್ಲಿಯೂ ಅಮೋಘ ಆಟವಾಡಿದೆ. ಇಂಥ ತಂಡದ ಸವಾಲನ್ನು ಮೆಟ್ಟಿನಿಲ್ಲಲು ಒಮ್ಮೆಯೂ ವಿಶ್ವಕಪ್ ಗೆಲ್ಲದೇ ಇರುವ ಭಾರತ ತಂಡ ಭಾರಿ ಭಾರಿ ಪ್ರಯತ್ನ ನಡೆಸಬೇಕಾಗಿದೆ.

ಈ ಬಾರಿ ಟೂರ್ನಿಯ ಗುಂಪು ಹಂತದ ಪಂದ್ಯಗಳ ಪೈಕಿ ಐದನ್ನು ಗೆದ್ದಿರುವ ಭಾರತ ಎರಡರಲ್ಲಿ ಸೋತಿದೆ. ಆಸ್ಟ್ರೇಲಿಯಾ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಪಾಯಿಂಟ್ಸ್‌ ಪಟ್ಟಿಯಲ್ಲಿ ಕಾಂಗರೂಗಳ ನಾಡಿನ ತಂಡ ಎರಡನೇ ಸ್ಥಾನದಲ್ಲಿದ್ದು ಭಾರತ ಮೂರನೇ ಸ್ಥಾನದಲ್ಲಿದೆ. ಒಮ್ಮೆ ಮಾತ್ರ (2005ರಲ್ಲಿ) ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಭಾರತ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.

ಇದೆಲ್ಲವನ್ನು ಮರೆತು ಸೆಮಿಫೈನಲ್‌ನಲ್ಲಿ ಜಯ ಸಾಧಿಸುವುದು ಭಾರತದ ಈಗಿನ ಗುರಿ. ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾದಾಗ ಭಾರತವನ್ನು ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಮಣಿಸಿತ್ತು. ಗುರುವಾರದ ಪಂದ್ಯದಲ್ಲಿ ಇದರ ಸೇಡು ತೀರಿಸುವುದಕ್ಕೂ ಭಾರತ ಸಜ್ಜಾಗಿದೆ. ಕೌಂಟಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಈ ಕ್ರೀಡಾಂಗಣ ಭಾರತದ ಪಾಲಿಗೆ ಅದೃಷ್ಟದ್ದು. ಗುಂಪು ಹಂತದ ನಾಲ್ಕು ಪಂದ್ಯಗಳನ್ನು ಮಿಥಾಲಿ ಬಳಗದವರು ಇಲ್ಲಿ ಆಡಿದ್ದು ಎಲ್ಲ ಪಂದ್ಯಗಳಲ್ಲೂ ಜಯಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ  186 ರನ್‌ಗಳಿಂದ ಗೆದ್ದಿದ್ದರು. ಆಸ್ಟ್ರೇಲಿಯಾ ಈ ಬಾರಿ ಈ ಕ್ರೀಡಾಂಗಣದಲ್ಲಿ ಒಂದು ಪಂದ್ಯವನ್ನು ಕೂಡಾ ಆಡಲಿಲ್ಲ.

‘ಈ ಕ್ರೀಡಾಂಗಣ ಈಗ ನಮ್ಮ ತವರಿನ ಅಂಗಳದಂತೆ ಆಗಿದೆ. ಹೀಗಾಗಿ ತಂಡದ ಎಲ್ಲಾ ಸದಸ್ಯೆಯರು ಭರವಸೆಯಲ್ಲಿದ್ದಾರೆ’ ಎಂದು ನಾಯಕಿ ಮಿಥಾಲಿ ರಾಜ್ ಅಭಿಪ್ರಾಯಪಟ್ಟರು.

ಎಲ್ಲ ವಿಭಾಗಗಳಲ್ಲಿ ಅಸಾಮಾನ್ಯ ಸಾಮರ್ಥ್ಯ ತೋರಿದರೆ ಮಾತ್ರ ಆಸ್ಟ್ರೇಲಿಯಾವನ್ನು ಮಣಿಸಲು ಸಾಧ್ಯ. ಗುಂಪು ಹಂತದಲ್ಲಿ ಈ ತಂಡದ ವಿರುದ್ಧ ಅಮೋಘ ಶತಕ ಸಿಡಿಸಿದ್ದ ಆರಂಭಿಕ ಬ್ಯಾಟ್ಸ್‌ವುಮನ್‌ ಪೂನಮ್‌ ರಾವತ್‌ (106) ಮತ್ತು ಅರ್ಧ ಶತಕ ಗಳಿಸಿದ್ದ  ಮಿಥಾಲಿ ರಾಜ್‌ (69) ಗುರುವಾರವೂ ಅದೇ ಲಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.

ಇವರಿಬ್ಬರು ಇತರ ಪಂದ್ಯಗಳಲ್ಲೂ ಉತ್ತಮ ಆಟ ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಒತ್ತಡದಲ್ಲೂ ಮಿಥಾಲಿ ಶತಕ ಸಿಡಿಸಿದ್ದರು. ಹರ್ಮನ್‌ಪ್ರೀತ್ ಕೌರ್‌ ಮತ್ತು ವೇದಾ ಕೃಷ್ಣಮೂರ್ತಿ ಕೂಡ ಮಿಂಚಿದ್ದರು. ಬೌಲರ್‌ಗಳು ಪರಿಣಾಮಕಾರಿ ಆಟವಾಡಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆರಂಭದ ಪಂದ್ಯಗಳಲ್ಲಿ ಬೆಳಗಿದರೂ ನಂತರ ಗಮನಾರ್ಹ ಸಾಧನೆ ಮಾಡಲಾಗದ ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಅವರು ಫಾರ್ಮ್‌ ಕಳೆದುಕೊಂಡಿರುವುದು ಭಾರತ ತಂಡದ ಆತಂಕಕ್ಕೆ ಕಾರಣವಾಗಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ದಾಖಲೆ ತಮ್ಮದಾಗಿಸಿಕೊಂಡಿರುವ ಜೂಲನ್ ಗೋಸ್ವಾಮಿ ಈ ಟೂರ್ನಿಯಲ್ಲಿ ಗಮನ ಸೆಳೆಯಲಿಲ್ಲ. ಆದರೆ ಸ್ಪಿನ್ನರ್‌ಗಳು ಟೂರ್ನಿಯುದ್ದಕ್ಕೂ ಅತ್ಯುತ್ತಮವಾಗಿ ಆಡಿದ್ದಾರೆ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಚೊಚ್ಚಲ ಪಂದ್ಯ ಆಡಿದ ರಾಜೇಶ್ವರಿ ಗಾಯಕವಾಡ್‌ 15 ರನ್‌ಗಳಿಗೆ ಐದು ವಿಕೆಟ್ ಕಬಳಿಸಿದ್ದರು. ಹೀಗಾಗಿ ಅವರಿಗೆ ಫೈನಲ್‌ನಲ್ಲಿ ಆಡಲು ಅವಕಾಶ ಸಿಗುವ ಸಾಧ್ಯತೆ ಇದೆ.

‘ಆಸ್ಟ್ರೇಲಿಯಾ ಅತ್ಯುತ್ತಮ ತಂಡ ಎಂಬುದನ್ನು ಮರೆಯುವುದಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಆ ತಂಡ ಬಲಿಷ್ಠಗಿದೆ. ಆದರೆ ಪರಿಸ್ಥಿತಿಗೆ ತಕ್ಕಂತೆ ಆಡುವುದು ಮುಖ್ಯ. ಇಲ್ಲಿಯವರೆಗೆ ಚೆನ್ನಾಗಿ ಆಡಿರುವ ಭಾರತದ ಮಹಿಳೆಯರು ಗುರುವಾರವೂ ಜಯದ ಕಡೆಗೆ ದಾಪುಗಾಲು ಹಾಕುವ ಭರವಸೆ ಇದೆ’ ಎಂದು ಮಿಥಾಲಿ ರಾಜ್‌ ಅಭಿಪ್ರಾಯಪಟ್ಟರು.

ತಂಡಗಳು
ಭಾರತ:
ಮಿಥಾಲಿ ರಾಜ್‌ (ನಾಯಕಿ), ಏಕ್ತಾ ಬಿಷ್ಠ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಹರ್ಮನ್‌ಪ್ರೀತ್ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೇಶ್ರಮ್‌, ಶಿಖಾ ಪಾಂಡೆ, ಪೂನಮ್‌ ಯಾದವ್‌, ನುಶತ್‌ ಪರ್ವೀನ್‌, ಪೂನಮ್
ರಾವತ್‌, ದೀಪ್ತಿ ಶರ್ಮಾ, ಸುಶ್ಮಾ ವರ್ಮಾ (ವಿಕೆಟ್‌ ಕೀಪರ್‌).

ಆಸ್ಟ್ರೇಲಿಯಾ: ಮೆಗ್‌ಲ್ಯಾನಿಂಗ್‌ (ನಾಯಕಿ), ಸಾರಾ ಅಲೆ, ಕ್ರಿಸ್ಟನ್ ಬೀಮ್ಸ್‌, ಅಲೆಕ್ಸ್‌ ಬ್ಲ್ಯಾಕ್‌ವೆಲ್‌, ನಿಕೋಲ್‌ ಬೋಲ್ಟನ್‌, ಆಶ್ಲಿ ಗಾರ್ಡನರ್‌, ರಚೆಲ್ ಹೇನ್ಸ್‌, ಅಲಿಸಾ ಹೀಲಿ (ವಿಕೆಟ್ ಕೀಪರ್‌), ಜೆಸ್ ಜೊನಾಸೆನ್‌, ಬೇಥ್‌ ಮೂನಿ, ಎಲಿಸ್ ಪೆರಿ, ಮೇಗನ್‌ ಶ್ರುಟ್‌, ಬೆಲಿಂದಾ ವಕಾರೆವಾ, ಎಲಿಸ್ ವಿಲಾನಿ, ಅಮಂಡಾ ಜೇಡ್‌ ವೆಲಿಂಗ್ಟನ್‌.

ಇದು ಕಠಿಣ ಸವಾಲಿನ ಪಂದ್ಯ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಬೇಕಾದರೆ ಭಾರತ ತಂಡದವರು ತಮ್ಮ ಪೂರ್ಣ ಸಾಮರ್ಥ್ಯವನ್ನು ತೋರಿಸಬೇಕಾಗಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಬಲಿಷ್ಠ ತಂಡ. ಆದರೆ ಅವರನ್ನು ಯಾರಿಗೂ ಮಣಿಸಲು ಸಾಧ್ಯವಿಲ್ಲ ಎಂದು ಹೇಳಲಾಗದು. ನ್ಯೂಜಿಲೆಂಡ್ ಎದುರಿನ ಪಂದ್ಯದಂತೆ ಸರಿಯಾದ ತಂತ್ರಗಳನ್ನು ಹೆಣೆದು ಕಾರ್ಯರೂಪಕ್ಕೆ ತಂದರೆ ಭಾರತಕ್ಕೆ ಗೆಲ್ಲುವ ಅವಕಾಶವಿದೆ.

‘ಮೊದಲ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ನಂತರ ವೈಫಲ್ಯ ಕಂಡಿರುವ ಸ್ಮೃತಿ ಮಂದಾನ ಗುರುವಾರ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಮೆರೆಯಬೇಕಾಗಿದೆ. ಅವರಿಗೆ ಇದು ಸಾಧ್ಯವಾದರೆ ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ ರಾಜ್ ಇನಿಂಗ್ಸ್ ಕಟ್ಟುವ ಕೆಲಸ ಮಾಡಲಿದ್ದಾರೆ.

ಏಕ್ತಾ ಬಿಷ್ಠ್‌ ಜಾಗದಲ್ಲಿ ರಾಜೇಶ್ವರಿ ಗಾಯಕವಾಡ್ ಅವರಿಗೆ ಅವಕಾಶ ನೀಡಿದ ಮಿಥಾಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಯಶಸ್ಸು ಕಂಡಿದ್ದರು. ಗಾಯಕವಾಡ್‌ ಅವರು ಏಕ್ತಾ ಬಿಷ್ಠ್ ಅವರಿಗಿಂತ ಚೆಂಡಿಗೆ ಹೆಚ್ಚು ತಿರುವು ನೀಡಬಲ್ಲರು. ಆಸ್ಟ್ರೇಲಿಯಾ ವಿರುದ್ಧವೂ ಮಿಂಚುವ ಸಾಧ್ಯತೆ ಇದೆ’ ಎಂದು ಡಯಾನಾ ಹೇಳಿದರು.

ಪಂದ್ಯ ಆರಂಭ
ಮಧ್ಯಾಹ್ನ: 3 (ಭಾರತೀಯ ಕಾಲಮಾನ)

*
ಡರ್ಬಿಯ ಕೌಂಟಿ ಕ್ರೀಡಾಂಗಣ ನಮ್ಮ ತಂಡಕ್ಕೆ ಹೊಸತು. ಆದರೆ ಪರಿಸ್ಥಿತಿಗೆ ಹೊಂದಿಕೊಂಡು ಆಡಲು ನಮಗೆ ಕಷ್ಟಕರವಾಗದು. ಸರಿಯಾದ ತಂತ್ರಗಳನ್ನು ಅಳವಡಿಸಿಕೊಂಡರೆ ಈ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ತಲುಪುವುದರಲ್ಲಿ ಸಂದೇಹ ಇಲ್ಲ.
–ನಿಕೋಲ್‌ ಬಾಲ್ಟನ್‌
ಆಸ್ಟ್ರೇಲಿಯಾ ತಂಡದ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT