ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ದೊರೆಯದ ಅವಕಾಶ: ಸಭಾತ್ಯಾಗ

ರೈತರ ಸಾಲ ಮನ್ನಾಗಾಗಿ ವಿಪಕ್ಷಗಳ ಆಗ್ರಹ
Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ದೊರೆಯದ್ದರಿಂದ ವಿರೋಧ ಪಕ್ಷಗಳು ಬುಧವಾರ ಲೋಕಸಭೆಯ ಕಲಾಪ ನಡೆಯುತ್ತಿದ್ದ ವೇಳೆ ಸಭಾತ್ಯಾಗ ಮಾಡಿದವು.

ಸಂಸತ್‌ನ ಮುಂಗಾರು ಅಧಿವೇಶನದ 3ನೇ ದಿನವಾದ ಬುಧವಾರ ಬೆಳಿಗ್ಗೆ 11ಕ್ಕೆ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಆರಂಭ ಆಗುತ್ತಿದ್ದಂತೆಯೇ ಮಾತಿಗಿಳಿದ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ, ದೇಶದಾದ್ಯಂತ ರೈತರ ಸಮಸ್ಯೆಗಳು ಉಲ್ಬಣಿಸುತ್ತಿವೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೃಷಿಕರ ಸಮಸ್ಯೆಗಳ ಕುರಿತು ಸರ್ಕಾರ ಸುದೀರ್ಘ ಚರ್ಚೆ ನಡೆಸಿ, ಪರಿಹಾರ ಮಾರ್ಗ ಕಂಡುಕೊಳ್ಳಬೇಕು ಎಂದು ಕೋರಿದರು.

ಆದರೆ, ಸ್ಪೀಕರ್ ಸುಮಿತ್ರಾ ಮಹಾಜನ್‌ ಅವರು ಚರ್ಚೆಗೆ ಅವಕಾಶ ನಿರಾಕರಿಸಿದರು. ತಕ್ಷಣ ವಿರೋಧ ಪಕ್ಷದ ಸದಸ್ಯರೆಲ್ಲ ಘೋಷಣೆ ಕೂಗಲಾರಂಭಿಸಿದ್ದರಿಂದ ಒಂದು ಗಂಟೆ ಕಾಲ ಕಲಾಪ ಮುಂದೂಡಲಾಯಿತು.

ಮಧ್ಯಾಹ್ನ 12ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆಯೇ ಶೂನ್ಯವೇಳೆಗೆ ಅವಕಾಶ ನೀಡಲಾಯಿತು. ಆಗಲೂ ಮಾತಿಗಿಳಿದ ಖರ್ಗೆ, ರೈತರ ಜೀವನ ಸಂಪೂರ್ಣ ಹಾಳಾಗುತ್ತಿದೆ. ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಮೂಲಕ ಅವರ ನೆರವಿಗೆ ಬರಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಕೂಡಲೇ ಶೇ 50ರಷ್ಟು ಹೆಚ್ಚಿಸಬೇಕು ಎಂದು ಗ್ರಹಿಸಿದರು.

ಶೂನ್ಯವೇಳೆ ಇರುವುದರಿಂದ ಈಗ ಚರ್ಚೆಗೆ ಅವಕಾಶ ನೀಡಲಾಗದು. ನಿಯಮ 193ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪೀಕರ್‌ ತಿಳಿಸಿದರು. ಇದಕ್ಕೆ ಸಮ್ಮತಿ ವ್ಯಕ್ತಪಡಿಸದ ಖರ್ಗೆ, ‘ಈ ಕುರಿತು ಮಾತನಾಡಲು ಕೋರಿ ಮಂಡಿಸಲಾದ ನಿಲುವಳಿ ಸೂಚನೆಯನ್ನು ತಿರಸ್ಕರಿಸಲಾಗಿದೆ. ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಕ್ಕೆ ಹಿಂದೇಟು ಹಾಕದೆ ವಿಸ್ತೃತ ಚರ್ಚೆ ನಡೆಸಿ’ ಎಂದು ಮನವಿ ಮಾಡಿದರೂ ಅವಕಾಶ ದೊರೆಯಲಿಲ್ಲ.

ವಿಪಕ್ಷಗಳ ಸದಸ್ಯರೆಲ್ಲ ಎದ್ದು ನಿಂತು ಚರ್ಚೆಗೆ ಅವಕಾಶ ಕೋರಿದರೂ ಸ್ಪೀಕರ್‌ ಮನ್ನಣೆ ನೀಡಲಿಲ್ಲ. ಆಗ ಕಾಂಗ್ರೆಸ್‌, ಆರ್‌ಜೆಡಿ, ಎನ್‌ಸಿಪಿ, ಟಿಎಂಸಿ, ಎಎಪಿ, ಜೆಡಿಯು ಹಾಗೂ ಎಡ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

‘ಕೇಂದ್ರ ಸರ್ಕಾರ ರೈತರ ಪರ ಇದೆ. ಯಾವುದೇ ರೀತಿಯ ಚರ್ಚೆಗೆ ಸರ್ಕಾರ ಸಿದ್ಧವಿದೆ. ನಿಯಮ 193ರ ಅಡಿ ಎಲ್ಲರೂ ಮುಕ್ತವಾಗಿ ಚರ್ಚೆ ನಡೆಸಬಹುದಾಗಿದೆ. ಕಲಾಪದಲ್ಲಿ ಪಾಲ್ಗೊಳ್ಳಿ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಮನವಿ ಮಾಡಿದರೂ ಹೊರ ನಡೆದ ವಿಪಕ್ಷಗಳ ಸದಸ್ಯರು ಅರ್ಧ ಗಂಟೆ ನಂತರ ಕಲಾಪಕ್ಕೆ ಮರಳಿದರು. ಸಂಜೆ ನಿಯಮ 193ರ ಅಡಿ ಚರ್ಚೆಗೆ ಅವಕಾಶ ದೊರೆಯಿತು.

ಗೋರಕ್ಷಣೆ ಹತ್ಯೆ: ಹೊಸ ಕಾನೂನು ಬೇಕಿಲ್ಲ
ನವದೆಹಲಿ:
ಉದ್ರಿಕ್ತ ಗುಂಪುಗಳು ನಡೆಸುವ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಎಸಗುವ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಹೊಸ ಕಾನೂನು ಜಾರಿಗೆ ತರುವ ಇಲ್ಲವೇ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಥವಾ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ತಿದ್ದುಪಡಿ ಮಾಡುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಬುಧವಾರ ತಳ್ಳಿಹಾಕಿದೆ.

‘ಒಬ್ಬ ಅಥವಾ ಹತ್ತು ಜನರು ಒಟ್ಟಾಗಿ ಮಾಡುವ ಕೊಲೆಯ ವಿರುದ್ಧ ಕ್ರಮ ಕೈಗೊಳ್ಳಲು ಈಗಿರುವ ಕಾನೂನುಗಳೇ ಸಾಕು’ ಎಂದು ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹಿರ್‌ ರಾಜ್ಯಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಕೇಳಿದ ಸರಣಿ ಪ್ರಶ್ನೆಗಳಿಗೆ, ‘ಹೊಸ ಕಾನೂನು ರೂಪಿಸುವ ಅಥವಾ ಸಿಆರ್‌ಪಿಸಿ/ಐಪಿಸಿಗೆ ತಿದ್ದುಪಡಿ ತರುವ ಅಗತ್ಯ ಇದೆ ಎಂದು ನನಗೆ ಅನ್ನಿಸುವುದಿಲ್ಲ’ ಎಂದು ಉತ್ತರಿಸಿದರು.

ಆಕಾಶವಾಣಿಗೆ ₹10 ಕೋಟಿ ವರಮಾನ
ನವದೆಹಲಿ:
ರೇಡಿಯೊದಲ್ಲಿ ಪ್ರತಿ ತಿಂಗಳು ಪ್ರಸಾರವಾಗುವ ಪ್ರಧಾನಿ ನರೇಂದ್ರ ಮೋದಿ ಅವರ ಮನದ ಮಾತು ಕಾರ್ಯಕ್ರಮದಿಂದಾಗಿ ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಆಕಾಶವಾಣಿಗೆ ₹10 ಕೋಟಿ ವರಮಾನ ಬಂದಿದೆ.

2016–17ನೇ ಸಾಲಿನಲ್ಲಿ ₹5.19 ಕೋಟಿ ಮತ್ತು 2015–16ರಲ್ಲಿ ₹4.78 ಕೋಟಿ ವರಮಾನ ಸಂಗ್ರಹವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್‌ ಸಿಂಗ್‌ ರಾಥೋಡ್‌ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಮನದ ಮಾತಿನ ಮೂಲ ಕಾರ್ಯಕ್ರಮ  ಪ್ರಸಾರವಾದ ನಂತರ ಅದೇ ದಿನ,  ದೇಶದ 18 ಭಾಷೆಗಳು ಮತ್ತು 33 ಉಪಭಾಷೆಗಳಲ್ಲಿ  ಅದನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಅಗರ್‌ವಾಲ್‌ ಆಕ್ಷೇಪಾರ್ಹ ಮಾತು: ಕೋಲಾಹಲ
ನವದೆಹಲಿ: 
ಸಮಾಜವಾದಿ ಪಕ್ಷದ ಸಂಸದ ನರೇಶ್‌ ಅಗರ್‌ವಾಲ್‌ ಅವರು ಹಿಂದೂ ದೇವರು ಮತ್ತು ಮದ್ಯದ ಬಗ್ಗೆ ಆಡಿದ ಮಾತು ರಾಜ್ಯಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತು.

ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೇಶದಾದ್ಯಂತ ದೌರ್ಜನ್ಯ ನಡೆಯುತ್ತಿದೆ ಎಂಬ ವಿಷಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಅಗರ್‌ವಾಲ್‌ ಈ ಹೇಳಿಕೆ ನೀಡಿದರು.

ತಕ್ಷಣವೇ ಆಡಳಿತಾರೂಢ ಎನ್‌ಡಿಎ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹೇಳಿಕೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಹಾಗಾಗಿ ಅಗರ್‌ವಾಲ್‌ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಸದನವನ್ನು ಎರಡು ಬಾರಿ ಮುಂದೂಡಬೇಕಾಯಿತು. ಅವರು ವಿಷಾದ ವ್ಯಕ್ತಪಡಿಸಿದ ಬಳಿಕ ಕಲಾಪ ನಡೆಯಿತು. ಹಿಂದೂ ಧರ್ಮದ ಪ್ರತಿ ದೇವರ ಹೆಸರನ್ನು ಅವರು ಮದ್ಯದ ಬ್ರ್ಯಾಂಡ್‌ ಜತೆ ಸಮೀಕರಿಸಿದ್ದಾರೆ.

ಸದನದ ಹೊರಗೆ ಈ ಮಾತನ್ನು ಅವರು ಹೇಳಿದ್ದರೆ ತಕ್ಷಣ ಪ್ರಕರಣ ದಾಖಲಾಗುತ್ತಿತ್ತು. ಬೇರೆ ಸಮುದಾಯದ ದೇವರ ಬಗ್ಗೆ ಇಂತಹ ಹೇಳಿಕೆ ನೀಡುವ ಧೈರ್ಯ ಅವರಿಗೆ ಇದೆಯೇ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರಶ್ನಿಸಿದರು. ಅಗರ್‌ವಾಲ್‌ ಹೇಳಿಕೆಯನ್ನು ಕಡತದಿಂದ ತೆಗೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT