ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕಾಯಂಗೊಳಿಸಲು ಒತ್ತಾಯ

Last Updated 19 ಜುಲೈ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂಧನ ಇಲಾಖೆಯ ವಿವಿಧ ವಿಭಾಗಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 27 ಸಾವಿರ ಕಾರ್ಮಿಕರನ್ನು ಕಾಯಂಗೊಳಿಸಬೇಕು’ ಎಂದು ಹಿರಿಯ ಕಾರ್ಮಿಕ ಮುಖಂಡ ವಿ.ಜೆ.ಕೆ.ನಾಯರ್ ಆಗ್ರಹಿಸಿದರು.

ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಒಕ್ಕೂಟವು ಸೆಂಟರ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿದ್ಯುತ್ ಕಾರ್ಮಿಕರ ರಾಜ್ಯ ಮಟ್ಟದ  ಎರಡನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಇಂಧನ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರು ಸರ್ಕಾರಿ ನೌಕರರಿಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆದರೆ, ವೇತನದ ವಿಚಾರದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ.  ಅವರಿಗೂ ಸಮಾನ ವೇತನ ಸಿಗಬೇಕು’ ಎಂದರು.

ಅಖಿಲ ಭಾರತ ವಿದ್ಯುತ್ ನೌಕರರ ಒಕ್ಕೂಟದ ಅಧ್ಯಕ್ಷ ಕೆ.ಒ.ಹಬೀಬ್, ‘ಕಾರ್ಮಿಕರಿಗೆ ಕಾನೂನುಬದ್ಧ ಸೌಕರ್ಯಗಳನ್ನು ಕೊಡದ ಗುತ್ತಿಗೆದಾರರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರ ರೈಲು ನಿಲ್ದಾಣದಿಂದ ರ್‌್ಯಾಲಿ:  ಸಮ್ಮೇಳನ ಆರಂಭಕ್ಕೂ ಮೊದಲು ನಗರ ರೈಲು ನಿಲ್ದಾಣದಿಂದ ಶಿಕ್ಷಕರ ಸದನದವರೆಗೆ ನೌಕರರು ಹಾಗೂ ಒಕ್ಕೂಟದ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

‘ವಿದ್ಯುತ್ ಕಾರ್ಮಿಕರಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ  ವೇತನ ಪದ್ಧತಿ ಇದೆ. ಬಳ್ಳಾರಿಯಲ್ಲಿ ತಿಂಗಳಿಗೆ ₹4,000ದಿಂದ
₹4,500 ಮಾತ್ರ ನೀಡಲಾಗುತ್ತಿದೆ. ಈ ತಾರತಮ್ಯ  ನಿಲ್ಲಬೇಕು’ ಎಂದು ಮುಖಂಡರೊಬ್ಬರು ಒತ್ತಾಯಿಸಿದರು.

ಬಳಸಿ ಬಿಸಾಡುವ ಪದ್ಧತಿ ಬೇಡ:  ‘ಗುತ್ತಿಗೆದಾರರು, ಇಎಸ್‌್ಐ ಹಾಗೂ ಭವಿಷ್ಯನಿಧಿ ಹಣದಲ್ಲಿ ಅವ್ಯವಹಾರ ಎಸಗುತ್ತಿದ್ದಾರೆ. ಸಂಬಳದಲ್ಲೂ ವಿನಾಕಾರಣ ಹಣ ಕಡಿತ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ, ನಾಳೆಯಿಂದ ಕೆಲಸಕ್ಕೆ ಬರಬೇಡ ಎನ್ನುತ್ತಾರೆ. ಅವರ ಅನುಕೂಲಕ್ಕೆ ನಮ್ಮನ್ನು ಬಳಸಿ ಬಿಸಾಡುವ ಪದ್ಧತಿ ನಿಲ್ಲಬೇಕು’ ಎಂದು ಹಾಸನದ ಕಾರ್ಮಿಕ ಪ್ರಮೋದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಿನವೊಂದಕ್ಕೆ 8–9 ಗಂಟೆವರೆಗೂ ರಾತ್ರಿ–ಹಗಲೆನ್ನದೇ ದುಡಿಯುತ್ತೇವೆ. ಆದರೆ, ತಿಂಗಳಿಗೆ ಸಂಬಳ ಸಿಗುವುದು ₹8,000 ಮಾತ್ರ. ಇಎಸ್‌ಐ ಹಾಗೂ ಪಿ.ಎಫ್‌ ಹೆಸರಿನಲ್ಲಿ ₹2,000 ಕಡಿತ ಮಾಡುತ್ತಾರೆ. ಅದಕ್ಕೆ ದಾಖಲೆ ನೀಡುವುದಿಲ್ಲ’ ಎಂದು ಅಳಲು ತೋಡಿಕೊಂಡರು.

‘ನೌಕರರ ವೇತನ ಪರಿಷ್ಕರಿಸಬೇಕು. ವಿದ್ಯುತ್ ಅವಘಡದಿಂದ ಸಾವನ್ನಪ್ಪುವಕಾರ್ಮಿಕರ ಕುಟುಂಬದ ಹಾಗೂ ಅಂಗವಿಕಲರಾಗುವ ನೌಕರರ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆಯೇ ಹೊರಬೇಕು’ ಎಂದು ಚಿಕ್ಕಮಗಳೂರಿನ ಅಶೋಕ್  ಒತ್ತಾಯಿಸಿದರು.

‘ಐಎಎಸ್‌ಗಳ ನಡುವೆ ತಾರತಮ್ಯವೇಕೆ?’
‘ಐಎಎಸ್‌ ಅಧಿಕಾರಿಗಳದ್ದು ಇಂಡಿಯನ್ ಅಡ್ಮಿನಿಸ್ಟ್ರೇಟಿವ್‌ ಸರ್ವಿಸ್ ಆದರೆ, ನಮ್ಮದು ಇಂಡಿಯನ್ ಅಗ್ರಿಕಲ್ಚರ್ ಸರ್ವಿಸ್. ಒಬ್ಬ ಐಎಎಸ್ ಅಧಿಕಾರಿ

ಆತ್ಮಹತ್ಯೆ ಮಾಡಿಕೊಂಡಾಗ ವಹಿಸುವ ಕಾಳಜಿಯನ್ನು ಸರ್ಕಾರ ರೈತ ಆತ್ಮಹತ್ಯೆ ಮಾಡಿಕೊಂಡಾಗ  ವಹಿಸುವುದಿಲ್ಲ. ಏಕೆ ಈ ತಾರತಮ್ಯ’ ಎಂದು ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಪ್ರಶ್ನಿಸಿದರು.

‘ರೈತರದ್ದು ಆತ್ಮಹತ್ಯೆಯ ಸಂಘ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವತ್ತ ಸರ್ಕಾರ ಗಮನ ನೀಡುತ್ತಿಲ್ಲ. ಬದಲಿಗೆ ನಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಪರವಾನಗಿ ನೀಡಿದೆ’ ಎಂದು ಅವರು ವ್ಯಂಗ್ಯವಾಗಿ ಹೇಳಿದರು.

‘ಗೋಹತ್ಯೆ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಅವುಗಳ ಸಂತತಿ ಉಳಿಸುವ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಮದ್ಯದಂಗಡಿ ಮುಚ್ಚಿದ
24 ಗಂಟೆಯೊಳಗೆ ಅದನ್ನು ತೆರೆಯಲು ಚಿಂತಿಸುವ ಸರ್ಕಾರ, ಇಡೀ ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

**

2016–17ರಲ್ಲಿ  ಸಂಭವಿಸಿದ  ವಿದ್ಯುತ್ ಅಪಘಾತಗಳಲ್ಲಿ 1,501   ಕಾರ್ಮಿಕರು ಮೃತಪಟ್ಟಿದ್ದಾರೆ. ಹೋರಾಟ ನಡೆಸದಿದ್ದರೆ ಈ ಪ್ರಕರಣಗಳನ್ನು ಮುಚ್ಚಿ ಹಾಕಬಹುದು.
-ಎಸ್‌. ವರಲಕ್ಷ್ಮಿ, ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ

80 ಕೆ.ಜಿ ವ್ಯಕ್ತಿಗೂ 30 ಕೆ.ಜಿ ವ್ಯಕ್ತಿಗೂ ಬಸ್‌ಗಳಲ್ಲಿ ಒಂದೇ ರೀತಿಯ ಟಿಕೆಟ್ ದರ ಇದೆ. ಅದೇ ರೀತಿ ಉದ್ಯೋಗ ವಿಚಾರದಲ್ಲಿ ಈ ನೀತಿ ಏಕಿಲ್ಲ?
-ಕೆ.ಎಸ್‌. ಪುಟ್ಟಣ್ಣಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT