ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಪೇಟೆ ಚಿನ್ನದ ವಂಚಕ ಪೊಲೀಸ್‌ ಬಲೆಗೆ

ಟ್ರಸ್ಟ್‌, ಮಕ್ಕಳ ಅನಾಥಾಶ್ರಮ ಹೆಸರಿನಲ್ಲಿ ವಂಚಿಸಿದವ ಸೆರೆ
Last Updated 19 ಜುಲೈ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವೇದನಾ ಟ್ರಸ್ಟ್‌’ ಹೆಸರಿನಲ್ಲಿ ಚಿನ್ನದ ಸರಗಳನ್ನು ಖರೀದಿಸಿ ಹಣ ನೀಡದೇ ವಂಚಿಸುತ್ತಿದ್ದ ಆರೋಪದಡಿ ಜಗದೀಶ್‌ ಷಾ ಎಂಬಾತನನ್ನು ಸಿಟಿ ಮಾರುಕಟ್ಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಗುಜರಾತಿನ ಆತ, ಮೆಜೆಸ್ಟಿಕ್‌ನ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದಾನೆ. ಆತನಿಂದ ₹9.48 ಲಕ್ಷ ಮೌಲ್ಯದ 21 ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ.

‘ನಕಲಿ ಚೆಕ್‌ ಕೊಟ್ಟು ಪರಿಚಯಸ್ಥರ ಮೂಲಕ ಚಿಕ್ಕಪೇಟೆಯ ಆಭರಣ ಮಳಿಗೆಯಲ್ಲಿ ಆರೋಪಿಯು ಚಿನ್ನದ ಸರಗಳನ್ನು ಖರೀದಿಸುತ್ತಿದ್ದ. ಬಳಿಕ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿ ನಾಪತ್ತೆಯಾಗುತ್ತಿದ್ದ. ಜತೆಗೆ ಆ ಸರಗಳನ್ನು ಚಿಕ್ಕಪೇಟೆಯ ಮತ್ತೊಂದು ಮಳಿಗೆಯಲ್ಲೇ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ’ ಎಂದು ಸಿಟಿ ಮಾರುಕಟ್ಟೆ ಪೊಲೀಸರು ತಿಳಿಸಿದರು.

ಅನಾಥಾಶ್ರಮದ ಹೆಸರಿನಲ್ಲೂ ವಂಚನೆ: ‘ಚಿಕ್ಕಪೇಟೆಯಲ್ಲಿ ಅಂಗಡಿ ಇಟ್ಟುಕೊಂಡಿರುವ ಗುಜರಾತಿನ ಮಾರ್ವಾಡಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದಆರೋಪಿ, ಸಂವೇದನಾ ಟ್ರಸ್ಟ್‌, ಮಕ್ಕಳ ಅನಾಥಾಶ್ರಮ ನಡೆಸುತ್ತಿರುವುದಾಗಿ ಹೇಳುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಯ ಮಾತು ನಂಬಿದ್ದ ಮಾರ್ವಾಡಿಗಳು ಪ್ರತಿ ತಿಂಗಳು ₹2,000ದಿಂದ ₹5,000ವರೆಗೆ ದೇಣಿಗೆ ಕೊಡುತ್ತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿಯು ಮಾರ್ವಾಡಿಗಳಿಂದ ಹೆಚ್ಚೆಚ್ಚು ಹಣ ಪಡೆಯಲಾರಂಭಿಸಿದ್ದ’.

‘ಇತ್ತೀಚೆಗೆ ಚಿಕ್ಕಪೇಟೆಯ ವಾಸ್ತುಶಿಲ್ಪಿ ಪ್ರವೀಣ್‌ಕುಮಾರ್‌ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಅನಾಥಾಶ್ರಮದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು, ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿದ್ದೇವೆ. ಅವರಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಲು ಇಚ್ಛಿಸಿದ್ದು, ಪರಿಚಯಸ್ಥರಿಂದ ಗುಣಮಟ್ಟದ ಸರ ಕೊಡಿಸುವಂತೆ ಕೇಳಿದ್ದ’.

‘ಅದನ್ನು ನಂಬಿ ಪ್ರವೀಣ್‌ ಕುಮಾರ್‌, ಜೂನ್‌ 27ರಂದು 6 ಚಿನ್ನದ ಸರ ಹಾಗೂ ಮರುದಿನ 3 ಸರಗಳನ್ನು ಪರಿಚಯಸ್ಥರ ಮಳಿಗೆಯಿಂದ ಆರೋಪಿಗೆ ಕೊಡಿಸಿದ್ದರು. ಅದೇ ವೇಳೆ ಆರೋಪಿಯು ₹1 ಲಕ್ಷ ಮೊತ್ತದ ಚೆಕ್‌ ಕೊಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು.

‘ಚೆಕ್ ಬೌನ್ಸ್‌ ಆಗಿತ್ತು. ಆರೋಪಿಯ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಬಳಿಕವೇ ಪ್ರವೀಣ್‌ ಕುಮಾರ್‌ ದೂರು ಕೊಟ್ಟಿದ್ದರು’ ಎಂದು ಸಿಟಿ ಮಾರುಕಟ್ಟೆ ಪೊಲೀಸರು ತಿಳಿಸಿದರು.

‘ತನಿಖೆ ಕೈಗೊಂಡಾಗ ಆರೋಪಿಯು ಚಿಕ್ಕಪೇಟೆಯ ಮತ್ತೊಬ್ಬ ಮಾರ್ವಾಡಿಗೂ ಇದೇ ರೀತಿ ವಂಚಿಸಿದ್ದು ಗೊತ್ತಾಯಿತು. ಬಳಿಕ ವಿಶೇಷ ತಂಡ ರಚಿಸಿ ಆರೋಪಿಯನ್ನು ಬಂಧಿಸಿದೆವು’ ಎಂದು ವಿವರಿಸಿದರು.

ನಕಲಿ ಟ್ರಸ್ಟ್‌: ಆರೋಪಿಯು ವಂಚಿಸಲು ಬಳಸುತ್ತಿದ್ದ ‘ಸಂವೇದನಾ ಟ್ರಸ್ಟ್‌’ ನಕಲಿ ಎಂಬುದು ತನಿಖೆಯಿಂದ ಗೊತ್ತಾಗಿದೆ. ‘ಕರ್ನಾಟಕ ಹಾಗೂ ಗುಜರಾತಿನಲ್ಲಿ ಈ ಹೆಸರಿನ ಯಾವುದೇ ಟ್ರಸ್ಟ್‌ಗಳಿಲ್ಲ. ಅನಾಥಾಶ್ರಮವೂ ಇಲ್ಲ ಎಂಬುದು ಖಚಿತವಾಗಿದೆ. ಗುಜರಾತಿನಲ್ಲಿ ಆರೋಪಿಯ ಪತ್ನಿ ಹಾಗೂ ಮಕ್ಕಳಿದ್ದಾರೆ. ವಂಚನೆಯಿಂದ ಸಂಪಾದಿಸುತ್ತಿದ್ದ ಹಣವನ್ನು ಊರಿಗೆ ಕಳುಹಿಸುತ್ತಿದ್ದ’ ಎಂದು ಪೊಲೀಸರು ವಿವರಿಸಿದರು.

ದೇಣಿಗೆ ಪಡೆಯಲು ಬಂದಾಗ ಸಿಕ್ಕಿಬಿದ್ದ ಪ್ರವೀಣ್‌ ಕುಮಾರ್‌ ಅವರನ್ನು ವಂಚಿಸಿದ್ದ ಬಳಿಕ ನಾಪತ್ತೆಯಾಗಿದ್ದ ಆರೋಪಿಯು ದೇಣಿಗೆ ಸಂಗ್ರಹಕ್ಕಾಗಿ ಇತ್ತೀಚೆಗೆ ಇನ್ನೊಬ್ಬ ಮಾರ್ವಾಡಿ ಬಳಿ ಬಂದಿದ್ದ. ಅಲ್ಲಿಯೂ ಚಿನ್ನದ ಸರ ಕೊಡಿಸುವಂತೆ ಬೇಡಿಕೆ ಇಟ್ಟಿದ್ದ. ಈ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಹೋದ ಪೊಲೀಸರಿಗೆ ಆತ ಸೆರೆಸಿಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT