ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕೊಡಿ

ಬೀದರ್‌ನಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಒತ್ತಾಯ
Last Updated 20 ಜುಲೈ 2017, 5:44 IST
ಅಕ್ಷರ ಗಾತ್ರ

ಬೀದರ್‌: ‘ವೀರಶೈವ ಹಾಗೂ ಲಿಂಗಾಯತ ಎರಡೂ ಬೇರೆ ಬೇರೆಯಾಗಿವೆ. ಬಸವಣ್ಣನಿಂದ ಸ್ಥಾಪಿಸಲ್ಪಟ್ಟ ಲಿಂಗಾಯತ ಧರ್ಮಕ್ಕೆ ಸರ್ಕಾರ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕು’ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಆಗ್ರಹಿಸಿದರು.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಒತ್ತಾಯಿಸಿ ನಗರದಲ್ಲಿ ಆಯೋಜಿಸಿದ್ದ ರ‍್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಲ್ಲಿ ಲಿಂಗಾಯತರ ಸಮಾವೇಶ ಆಯೋಜಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಮಹಾರಾಷ್ಟ್ರ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಮೂಲಕವೂ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

‘ಹಿಂದಿನ ಕೇಂದ್ರದ ಯುಪಿಎ ಸರ್ಕಾರದ ಸಚಿವರು ರಾಜ್ಯ ಸರ್ಕಾರದ ಮೂಲಕ ಶಿಫಾರಸು ಮಾಡುವಂತೆ ಸಲಹೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಪದವನ್ನು ಸೂಚಿಸಿ ಪತ್ರ ಕೊಡುವಂತೆ ಸೂಚನೆ ನೀಡಿದ್ದಾರೆ. ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಈಗ ಕಾಲ ಸನ್ನಿಹಿತವಾಗಿದೆ’ ಎಂದು ಹೇಳಿದರು.

‘ಲಿಂಗಾಯತ ಸ್ವತಂತ್ರ ಧರ್ಮವಾಗಿದೆ. ಸಮಾಜ ಹಾಗೂ ರಾಷ್ಟ್ರ ನಿರ್ಮಾಣ ಮಾಡಿ ವಿಶ್ವದೊಂದಿಗೆ ಬೆಸುಗೆ ಹಾಕುವುದು ಲಿಂಗಾಯತ ಧರ್ಮದ ಉದ್ದೇಶವಾಗಿದೆ. 1851ರಲ್ಲಿ ಬ್ರಿಟಿಷರು ಜಾತಿ ಗಣತಿ ಮಾಡಿದ್ದರು. ಜೈನ ಹಾಗೂ ಸಿಖ್‌ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಟ್ಟಿದ್ದರು. ಲಿಂಗಾಯತರಿಗೂ ಸುವರ್ಣ ಅವಕಾಶ ಬಂದೊದಗಿತ್ತು. ಆದರೆ ಮೈಸೂರಿನ ಜಾತಿ ವಾದಿಗಳು ವಿರೋಧಿಸಿದ್ದರು’ ಎಂದು ಆರೋಪಿಸಿದರು.

‘ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಅಕ್ಕಮಹಾದೇವಿ ಹೆಸರಿಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸಲು ಆದೇಶ ಹೊರಡಿಸಿದೆ. ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಹೆಸರಿಡಲು ಒಪ್ಪಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಕಲ್ಪಿಸಿಕೊಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸೆಪ್ಟೆಂಬರ್‌ 11ರಂದು ಮಹಾರಾಷ್ಟ್ರದ ಲಾತೂರ್‌ನಲ್ಲಿ ಲಿಂಗಾಯತರ ಬೃಹತ್‌ ಸಮಾವೇಶ ನಡೆಸಲಾಗುವುದು. ಬೆಳಗಾವಿ ಹಾಗೂ ಹೈದರಾಬಾದ್‌ನಲ್ಲೂ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿಯೇ ₹ 1,600 ಕೋಟಿ ಕಾಯ್ದಿರಿಸಿದೆ. ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ದೊರಕಿದರೆ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ನೆರವು ದೊರೆಯಲಿದೆ’ ಎಂದು ಹೇಳಿದರು.

‘ಅಖಿಲ ಭಾರತ ವೀರಶೈವ ಮಹಾಸಭಾದವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮತಕ್ಕೆ ಬಂದು ಒಂದೇ ಪದ ಸೂಚಿಸಿ ಎಂದು ಹೇಳಿದ್ದರು. ಆದರೆ ಈಶ್ವರ ಖಂಡ್ರೆ ಅವರು ವೀರಶೈವ–ಲಿಂಗಾಯತ ಎಂದು ಸೂಚಿಸಿದ್ದರು. ಆದರೆ ಎರಡೂ ಪದಗಳು ಬೇರೆಯಾಗಿವೆ. ಸಂಶೋಧಕ ಚಿದಾನಂದ ಮೂರ್ತಿ ಅವರು ಲಿಂಗಾಯತರು, ವೀರಶೈವರು ಒಂದೇ ಎಂದು ಹೇಳುವವರು ಒಂದೇ ಮನೆಯಲ್ಲಿ ಇರಲಾಗದು’ ಎಂದು ಸಲಹೆ ನೀಡಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು. ಕೂಡಲಸಂಗಮದ ಬಸವ ಜಯ ಮೃತ್ಯುಂಜಯಸ್ವಾಮೀಜಿ ಮಾತನಾಡಿದರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ, ಅಕ್ಕ ಡಾ. ಗಂಗಾಂಬಿಕೆ, ಚನ್ನಬಸವಾನಂದ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ಧರಾಮ ಶರಣರು, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್, ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲ,  ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಅಶೋಕ ಖೇಣಿ, ಪ್ರಭು ಚವ್ಹಾಣ, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್, ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಸಂಧ್ಯಾ ತೋಡ್ಕರ್‌ ಪಾಲ್ಗೊಂಡಿದ್ದರು.

**

ಊರಿಂದಲೇ ಮೈಕ್ ತಂದರು!

ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಲಿಂಗಾಯತರು ಜಿಲ್ಲೆಯ ವಿವಿಧೆಡೆಯಿಂದ ಬೈಕ್, ಜೀಪ್, ಕಾರ್‌ ಹಾಗೂ ಬಸ್‌ಗಳಲ್ಲಿ ನಗರಕ್ಕೆ ಬಂದರು.

ಬೈಕ್‌ಗೆ ಬಸವೇಶ್ವರ ಫೊಟೊ, ಷಟ್‌ಸ್ಥಲ ಧ್ವಜ ಕಟ್ಟಿದ್ದರು. ಜೀಪ್‌ಗಳಲ್ಲಿ ಬಂದವರು ತಮ್ಮೊಂದಿಗೆ ಮೈಕ್ ಅನ್ನು ಕೂಡ ತಂದಿದ್ದರು. ಜೀಪ್ ಒಳಗಿಂದ ಮೈಕ್ ಮೂಲಕ ಘೋಷಣೆಗಳನ್ನು ಹಾಕಿದರು. ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಮಾರ್ಗದರ್ಶನವನ್ನೂ ಮಾಡಿದರು.

ಊಟದ ವ್ಯವಸ್ಥೆ: ವಿವಿಧೆಡೆಯಿಂದ ರ‍್ಯಾಲಿಯಲ್ಲಿ ಭಾಗವಹಿಸಲು ಬಂದಿದ್ದ ಎಲ್ಲರಿಗೂ ನಗರದ ಪ್ರಮುಖ ಮೂರು ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ರ‍್ಯಾಲಿ ಸಾಗಿದ ಮಾರ್ಗದಲ್ಲಿ ಅಲ್ಲಲ್ಲಿ ಕುಡಿಯುವ ನೀರು ಒದಗಿಸಲಾಯಿತು.

**

ಲಿಂಗಾಯತ ಸಂಸ್ಥೆಗಳಿಗೆ ರಜೆ

ಬೀದರ್‌ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ಲಿಂಗಾಯತ ಸಮುದಾಯವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು. ಲಿಂಗಾಯತ ವಿದ್ಯಾರ್ಥಿಗಳು ಉತ್ಸಾಹದಿಂದ ರ‍್ಯಾಲಿಯಲ್ಲಿ ಪಾಲ್ಗೊಂಡರು.

ವಿವಿಧ ಶಿಕ್ಷಣ ಸಂಸ್ಥೆಗಳು ತಾಲ್ಲೂಕು ಕೇಂದ್ರದಿಂದ ಲಿಂಗಾಯತರಿಗೆ  ಬೀದರ್‌ಗೆ ಬರಲು ಹಾಗೂ ರ‍್ಯಾಲಿಯಲ್ಲಿ ಪಾಲ್ಗೊಂಡ ನಂತರ ಮರಳಿ ಒಯ್ಯಲು ಶಾಲಾ ವಾಹನದ ವ್ಯವಸ್ಥೆ ಮಾಡಿದ್ದವು.

**

ಮುಖ್ಯಮಂತ್ರಿಯವರು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಲಿಂಗಾಯತರ ಭಾವನೆಗಳಿಗೆ ಸ್ಪಂದಿಸಬೇಕು.
-ಬಸವಲಿಂಗ ಪಟ್ಟದ್ದೇವರು, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT