ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿ–ನಿಯೋಜಿತರ ಕುರ್ಚಿ ಸಂಘರ್ಷ

ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ಗಾವಣೆ ತಡೆ ಹಿಡಿದ ಸರ್ಕಾರ; ಡಿಡಿಪಿಐಗೆ ದೂರು
Last Updated 20 ಜುಲೈ 2017, 6:35 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿನ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಹುದ್ದೆಯ ಕುರ್ಚಿಗೆ ಇಬ್ಬರು ಅಧಿಕಾರಿಗಳ ನಡುವೆ ಗುದ್ದಾಟ ಆರಂಭವಾಗಿದೆ. ರಾಜ್ಯದಾದ್ಯಂತ ಬಿಇಒಗಳನ್ನು ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ತಡೆ ಹಿಡಿದಿರುವುದೇ ಅಧಿಕಾರಿಗಳ ನಡುವೆ ಕುರ್ಚಿ ಸಂಘರ್ಷಕ್ಕೆ ಕಾರಣವಾಗಿದೆ.

ಕೋಲಾರದ ಹಾಲಿ ಬಿಇಒ ಬಿ.ಜಗದೀಶ್‌ ಅವರು ಹುದ್ದೆಯಲ್ಲಿ ಮುಂದುವರಿದಿದ್ದು, ನಿಯೋಜಿತ ಬಿಇಒ ಜಿ.ರಘುನಾಥ ರೆಡ್ಡಿ ಅವರದು ತ್ರಿಶಂಕು ಸ್ಥಿತಿಯಾಗಿದೆ. ನಿತ್ಯ ಕರ್ತವ್ಯಕ್ಕೆ ಹಾಜರಾಗುವ ರಘುನಾಥ ರೆಡ್ಡಿ ಅವರಿಗೆ ಕಚೇರಿಯಲ್ಲಿ ಕೂರಲು ಕೊಠಡಿಯಿಲ್ಲ ಮತ್ತು ಓಡಾಡಲು ಇಲಾಖೆಯ ವಾಹನವಿಲ್ಲ.

ಜಗದೀಶ್‌ ಅವರು ಇಲಾಖೆಯ ಕೊಠಡಿ ಮತ್ತು ವಾಹನ ಬಳಸುತ್ತಿದ್ದಾರೆ. ರಘುನಾಥ ರೆಡ್ಡಿ ಬೇರೆ ದಾರಿ ಕಾಣದೆ ಬಿಇಒ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಭಾರತ ಸೇವಾ ದಳ ಕಟ್ಟಡದ ಕೊಠಡಿಯಲ್ಲಿ ಕೂರುತ್ತಿದ್ದಾರೆ.

ರಾಯಚೂರಿಗೆ ವರ್ಗಾವಣೆ: ಜಗದೀಶ್‌ ಅವರನ್ನು ರಾಯಚೂರು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ (ಡಯಟ್) ಖಾಲಿ ಇರುವ ಹಿರಿಯ ಉಪನ್ಯಾಸಕರ ಹುದ್ದೆಗೆ ವರ್ಗಾವಣೆ ಮಾಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ (ಆಡಳಿತ) ಕೆ.ನಾರಾಯಣ ಅವರು ಜುಲೈ 15ರಂದು ಆದೇಶ ಹೊರಡಿಸಿದ್ದರು.

ಜಗದೀಶ್‌ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಚಿಕ್ಕಬಳ್ಳಾಪುರ ಡಯಟ್‌ ಹಿರಿಯ ಉಪನ್ಯಾಸಕ ರಘುನಾಥ ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈ ಆದೇಶದ ಅನ್ವಯ ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಜುಲೈ 17ರಂದು ರಘುನಾಥ ರೆಡ್ಡಿ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದರು.

ರಘುನಾಥ ರೆಡ್ಡಿ ಅದೇ ದಿನ ಮಧ್ಯಾಹ್ನ ಕೋಲಾರ ಬಿಇಒ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲು ಬಂದಾಗ ಜಗದೀಶ್‌ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಅವರು ಜಗದೀಶ್‌ ಅವರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ಕಚೇರಿಗೆ ಬರುವಂತೆ ಹೇಳಿದ್ದರು. ಆದರೆ, ಸಂಜೆ 6 ಗಂಟೆಯಾದರೂ ಜಗದೀಶ್‌ ಕಚೇರಿಗೆ ಬಂದಿಲ್ಲ. ಹೀಗಾಗಿ ರಘುನಾಥ ರೆಡ್ಡಿ ಬಿಇಒ ಕಚೇರಿ ವ್ಯವಸ್ಥಾಪಕರ ಸಮ್ಮುಖದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದಾಗಿ ಸಿಬ್ಬಂದಿಯ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದರು. ಬಳಿಕ ಸೂಚಿತ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಿದ್ದರು.

ಹಸ್ತಾಂತರ ಮಾಡಿಲ್ಲ: ರಘುನಾಥ ರೆಡ್ಡಿ ಕರ್ತವ್ಯಕ್ಕೆ ಹಾಜರಾದ ಬಳಿಕ ಹುದ್ದೆಯಿಂದ ಬಿಡುಗಡೆಯಾಗಬೇಕಿದ್ದ ಜಗದೀಶ್‌, ನಿಯಮದ ಪ್ರಕಾರ ಅಧಿಕಾರ ಹಸ್ತಾಂತರ ಮಾಡಿಲ್ಲ. ಬದಲಿಗೆ ಆಗ ಬಂದೆ ಈಗ ಬಂದೆ ಎನ್ನುತ್ತಲೇ ದಿನ ದೂಡಿದ್ದರು. ರಘುನಾಥ ರೆಡ್ಡಿ ಮಂಗಳವಾರ (ಜುಲೈ 18) ಬೆಳಿಗ್ಗೆ ಕಚೇರಿಗೆ ಬಂದಾಗಲೂ ಜಗದೀಶ್‌ ಇರಲಿಲ್ಲ. ಕಚೇರಿ ಕೊಠಡಿಗೆ ಬೀಗ ಹಾಕಿಕೊಂಡು ಹೊರ ಹೋಗಿದ್ದ ಜಗದೀಶ್‌, ಮಧ್ಯಾಹ್ನದವರೆಗೂ ಕಚೇ ರಿಗೆ ಬಂದಿಲ್ಲ. ಅಲ್ಲದೇ, ಸಿಬ್ಬಂದಿ ಹಾಜ ರಾತಿ ಪುಸ್ತಕವನ್ನು ತಮ್ಮ ಕೊಠಡಿಯ ಅಲ್ಮೇರಾದಲ್ಲಿಟ್ಟು ಹೋಗಿದ್ದರು.

ಹೀಗಾಗಿ ರಘುನಾಥ ರೆಡ್ಡಿ, ಅವರಿಗೆ ನಾಲ್ಕೈದು ಬಾರಿ ಕರೆ ಮಾಡಿ ಅಧಿಕಾರ ಹಸ್ತಾಂತರದ ಪ್ರಮಾಣಪತ್ರಕ್ಕೆ (ಸಿಟಿಸಿ) ಸಹಿ ಮಾಡುವಂತೆ ಕೇಳಿದ್ದರು. ಆದರೂ ಜಗದೀಶ್‌ ಕಚೇರಿಗೆ ಬಂದಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡು ರೆಡ್ಡಿ, ಸಿಬ್ಬಂದಿಯಿಂದ ಹೊಸ ಹಾಜರಾತಿ ಪುಸ್ತಕ ತರಿಸಿ ಅದರಲ್ಲಿ ಸಹಿ ಮಾಡಿದ್ದರು.

ನಂತರ ಮಂಗಳವಾರ ಮಧ್ಯಾಹ್ನದ ವೇಳೆಗೆ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ಅವರು, ರಾಜ್ಯದೆಲ್ಲೆಡೆ ಬಿಇಒಗಳ ವರ್ಗಾವಣೆ ಆದೇಶವನ್ನು ತಡೆಹಿಡಿದಿರುವುದಾಗಿ ಹೊಸ ಆದೇಶ ಹೊರಡಿಸಿದ್ದರು. ಈ ಆದೇಶ ಮುಂದಿಟ್ಟುಕೊಂಡು ಜಗದೀಶ್‌ ಹುದ್ದೆಯಿಂದ ಬಿಡುಗಡೆಯಾಗಲು ನಿರಾಕರಿಸಿದ್ದಾರೆ. ಈ ಸಂಬಂಧ ರಘುನಾಥ ರೆಡ್ಡಿ ಡಿಡಿಪಿಐಗೆ ಪತ್ರ ಬರೆದಿದ್ದಾರೆ. ಇಲಾಖೆಯು ರಘುನಾಥ ರೆಡ್ಡಿ ಅವರಿಗೆ ಬೇರೆ ಹುದ್ದೆ ತೋರಿಸದ ಕಾರಣ ಅವರ ಸ್ಥಿತಿ ಅತಂತ್ರವಾಗಿದೆ.

**

ಆಯುಕ್ತರು ವರ್ಗಾವಣೆ ಆದೇಶ ರದ್ದುಪಡಿಸುವುದಕ್ಕೂ ಮುನ್ನವೇ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಜಗದೀಶ್‌ ಅಧಿಕಾರ ಹಸ್ತಾಂತರಿಸದೆ ಸತಾಯಿಸು ತ್ತಿದ್ದು  ಡಿಡಿಪಿಐಗೆ ದೂರು ಕೊಟ್ಟಿದ್ದೇನೆ.

-ರಘುನಾಥ ರೆಡ್ಡಿ, ನಿಯೋಜಿತ ಬಿಇಒ

**

ವರ್ಗಾವಣೆ ಆದೇಶ ರದ್ದುಪಡಿಸಿದ್ದಾರೆ. ಅಧಿಕಾರ ಹಸ್ತಾಂತರ  ಪ್ರಶ್ನೆಯೇ ಇಲ್ಲ. ರಘು ನಾಥ ರೆಡ್ಡಿ ನನ್ನ ಅನುಪಸ್ಥಿತಿಯಲ್ಲಿ ಕೊಠಡಿ ಬೀಗ ಒಡೆಸಿದ್ದಾರೆ. ಹೊಸ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ.

-ಬಿ.ಜಗದೀಶ್‌,  ಹಾಲಿ ಬಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT