ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾದ ‘ಕಬಡ್ಡಿ’ ಆಟಗಾರರ ಕನಸು

ಯುವ ಸಬಲೀಕರಣ ಇಲಾಖೆಯಿಂದ ಕ್ರೀಡಾ ಶಾಲೆಗೆ ಲಭಿಸಿತು ₹ 15 ಲಕ್ಷ ‘ಸಿಂಥೆಟಿಕ್ ಮ್ಯಾಟ್’
Last Updated 20 ಜುಲೈ 2017, 6:38 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಹಿರಿಯ, ಉದಯೋನ್ಮುಖ ಕಬಡ್ಡಿ ಕ್ರೀಡಾಪಟುಗಳು, ತರಬೇತಿದಾರರ ಕನಸು ಕೊನೆಗೂ ನನಸಾಗಿದೆ.
ಸತತ ಒತ್ತಾಯ ಬಳಿಕ ರಾಜ್ಯ ಸರ್ಕಾರವು ನಗರದ ಕ್ರೀಡಾ ವಸತಿ ನಿಲಯದ ಕಬಡ್ಡಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ‘ಸಿಂಥೆಟಿಕ್ ಮ್ಯಾಟ್’ ಪೂರೈಸಿದೆ.

ಈವರೆಗೆ ಮಣ್ಣಿನ ಅಂಕಣಗಳಲ್ಲಿಯೇ ಆಡಿ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕಬಡ್ಡಿ ಆಟಗಾರರು ಪ್ರತಿಭೆ ಮೆರೆದಿದ್ದಾರೆ. ಈಗಲೂ ಮೆರೆಯುತ್ತಿದ್ದಾರೆ.

ಬೆಂಗಳೂರು ಮಹಾನಗರ, ಬೇರೆ ರಾಜ್ಯ, ರಾಷ್ಟ್ರಗಳಲ್ಲಿ ಕ್ರೀಡಾಪಟುಗಳು ಸಿಂಥೆಟಿಕ್ ಮ್ಯಾಟ್ ಅಂಕಣಗಳಲ್ಲಿ ತರಬೇತಿ ಪಡೆದು ಪಂದ್ಯಾವಳಿಯಲ್ಲಿ ಪ್ರತಿಭೆ ಮೆರೆಯುತ್ತಿದ್ದಾರೆ. ಆದರೆ, ಜಿಲ್ಲಾ ಮಟ್ಟದಲ್ಲಿ ಸಿಂಥೆಟಿಕ್ ಹಾಸಿಗೆ ಅಂಕಣ ವ್ಯವಸ್ಥೆ ಇಲ್ಲದೇ ಇದ್ದುದಕ್ಕೆ ಮಣ್ಣಿನ ಅಂಕಣಗಳಲ್ಲಿಯೇ ತರಬೇತುದಾರರು ಆಟಗಾರರಿಗೆ ತರಬೇತಿ ನೀಡಬೇಕಾಗಿತ್ತು.

ಮೊದಲೇ ಕಬಡ್ಡಿ ಆಟವೆಂದರೆ ಮೈ ಕೈ ನೋವು ಮಾಡಿಕೊಳ್ಳುವುದು, ಮುರಿದುಕೊಳ್ಳುವ ಆಟ ಎಂಬ ಭಾವನೆ  ಸಾರ್ವಜನಿಕ ವಲಯದಲ್ಲಿ ಇದೆ. ಹೀಗಾಗಿ, ಆಸಕ್ತಿ ಇದ್ದರೂ ಈ ಕಾರಣಕ್ಕೆ ಕಬಡ್ಡಿ ಬದಲು ಬೇರೆ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ತರಬೇತಿ ಪಡೆದವರು ಅನೇಕರು.

ಸಿಂಥೆಟಿಕ್ ಮ್ಯಾಟ್‌ ಕೊರತೆ ಕಾರಣಕ್ಕಾಗಿಯೇ ಕಬಡ್ಡಿ ಆಡುವ ಪ್ರತಿಭೆಗಳ ವಿಕಾಸಕ್ಕೆ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಪೋಷಕರು, ಕಬಡ್ಡಿ ತರಬೇತಿದಾರರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿಕೊಂಡು ಬಂದಿದ್ದರು.

ಕೊನೆಗೂ ಇವರ ಮನವಿಗೆ ಸ್ಪಂದಿಸಿದ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ₹ 15 ಲಕ್ಷ ಮೊತ್ತದ ಸಿಂಥೆಟಿಕ್ ಮ್ಯಾಟ್‌ ಪೂರೈಸಿದೆ. ಇದರಿಂದ ಕ್ರೀಡಾ ವಸತಿ ನಿಲಯದ ಕಬಡ್ಡಿ ಆಟದ ಪ್ರತಿಭೆಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.

ಸಿಂಥೆಟಿಕ್ ಮ್ಯಾಟ್ ವಿಶೇಷ: ‘ಸಿಂಥೆಟಿಕ್ ಮ್ಯಾಟ್ ಕಬಡ್ಡಿ ಆಟಕ ಅಂಕಣಗಳಿಗೆ ಮೊದಲು ಬಳಕೆ ಮಾಡಲು ಪ್ರಾರಂಭ ಮಾಡಿದ್ದು ಮಲೇಷ್ಯಾ. ಕಬಡ್ಡಿ ಭಾರತದ ಕ್ರೀಡೆಯಾದರೂ ಈಗ ಜಗತ್ತಿನಲ್ಲಿ 40 ದೇಶಗಳು ಈ ಆಟ ಆಡುತ್ತಿವೆ. ಅಮೆರಿಕವೂ ಈಚೆಗೆ ಕಬಡ್ಡಿ ಕ್ರೀಡೆಗೆ ಪ್ರವೇಶಿಸಿದೆ. ಬಹುತೇಕ ಎಲ್ಲ ದೇಶಗಳಲ್ಲೂ ಸಿಂಥೆಟಿಕ್ ಮ್ಯಾಟ್ ಅಂಕಣಗಳಲ್ಲಿಯೇ ಕಬಡ್ಡಿ ಪಂದ್ಯಾವಳಿ ಆಗುತ್ತವೆ’ ಎಂದು ಕಬಡ್ಡಿ ರಾಷ್ಟ್ರೀಯ ತರಬೇತಿದಾರ ಮತ್ತು ಕ್ರೀಡಾ ವಸತಿ ನಿಲಯದ ಕಬಡ್ಡಿ ತರಬೇತಿದಾರ ಇಸ್ಮಾಯಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಿನ ಉದಯೋನ್ಮುಖ ಕಬಡ್ಡಿ ಆಟಗಾರರಿಗೆ ಸಿಂಥೆಟಿಕ್ ಮ್ಯಾಟ್ ಅಂಕಣ ಕಲ್ಪಿಸುವುದು, ಅದರಲ್ಲಿಯೇ ತರಬೇತಿ ನೀಡುವುದು ಅವಶ್ಯ’ ಎಂದರು.

ಮಣ್ಣಿನ ಅಂಕಣಗಳಲ್ಲಿ ಕಬಡ್ಡಿ ಆಟ ಆಡುವುದಕ್ಕೂ ಸಿಂಥೆಟಿಕ್ ಮ್ಯಾಟ್ ಅಂಕಣಗಳಲ್ಲಿ ಆಡುವುದು ಸಾಕಷ್ಟೂ ವ್ಯತ್ಯಾಸವಿದೆ. ಕಬಡ್ಡಿ ಆಟ ಕಲಿಕೆ ಹಂತದಲ್ಲಿ ಕ್ರೀಡಾ ಗಾಯ (ಸ್ಪೋರ್ಟ್ಸ್ ಇಂಜ್ಯುರಿಸ್‌) ಆಗುವುದನ್ನು ತಡೆಯುತ್ತದೆ. ನಿರ್ಭಯವಾಗಿ ಮತ್ತು ಲೀಲಾಜಾಲವಾಗಿ ಆಟಗಾರರು ಕ್ರೀಡಾ ಕೌಶಲ ಪ್ರದರ್ಶಿಸಬಹುದು. ಈ ಅಂಕಣದಲ್ಲಿ ಆಡುವಾಗ ‘ಶೂ’ ಧರಿಸಿಕೊಂಡೇ ಆಡಬೇಕು. ಇಲ್ಲದೇ ಇದ್ದರೆ ಆಡಲು ಸಾಧ್ಯವಿಲ್ಲ ಎಂದು ಸಿಂಥೆಟಿಕ್ ಮ್ಯಾಟ್ ಅಂಕಣ ವಿಶೇಷತೆ ವಿವರಿಸಿದರು.

**

ಪ್ರತಿಭೆಗಳ ಬೇಡಿಕೆಗೆ ಸ್ಪಂದಿಸಿದ ಇಲಾಖೆ

‘ನಮ್ಮಲ್ಲಿ ಅತ್ಯುತ್ತಮ ಕಬಡ್ಡಿ ಆಟಗಾರರು ಇದ್ದಾರೆ. ಅವರಿಗೆ ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗಿದೆ. ಈಗ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಮ್ಮ ಜಿಲ್ಲೆಗೆ ₹ 15 ಲಕ್ಷ ಮೊತ್ತದ ಸಿಂಥೆಟಿಕ್ ಮ್ಯಾಟ್ ಒದಗಿಸಿದೆ’ ಎಂದು ಇಲಾಖೆ ಸಹಾಯಕ ನಿರ್ದೇಶಕ ಸೀಬಿ ರಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ರೀಡಾ ಪ್ರತಿಭೆಗಳ ಬೇಡಿಕೆಗೆ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳು, ಸ್ಥಳೀಯ ಶಾಸಕರು ಸ್ಪಂದಿಸಿ ಸೌಕರ್ಯ ಒದಗಿಸಿದ್ದಾರೆ’ ಎಂದು ಹೇಳಿದರು.

**

ಬೇರೆ ಕ್ರೀಡೆಗಳಿಗೂ ಬಳಸಬಹುದು
ಮುಖ್ಯವಾಗಿ ಕಬಡ್ಡಿ ಕ್ರೀಡೆಗೆ ಬಳಸಲು ಸಿಂಥೆಟಿಕ್ ಮ್ಯಾಟ್ ಕಲ್ಪಿಸಲಾಗಿದೆ.ಕ್ರೀಡಾ ವಸತಿ ನಿಲಯದಲ್ಲಿ 90ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಕರಾಟೆ, ಕುಸ್ತಿ, ಜಿಮ್ನ್ಯಾಸ್ಟಿಕ್ ಕ್ರೀಡೆಗಳಿಗೂ ಬಳಸಿಕೊಳ್ಳಬಹುದು ಎಂದು ಇಸ್ಮಾಯಿಲ್ ಹೇಳಿದರು.

**

ಆ.15ರಂದು ಉದ್ಘಾಟನೆ
‘ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ಸಿಂಥೆಟಿಕ್ ಮ್ಯಾಟ್ ಬಳಕೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಚಾಲನೆ ನೀಡುವರು. ಅಂದು ಕೆಲ ಪಂದ್ಯಗಳು ಸಾಂಕೇತಿಕವಾಗಿ ನಡೆಯಲಿವೆ. ಬಳಿಕ ಈ ಸೌಕರ್ಯವನ್ನು ಹಂತ ಹಂತವಾಗಿ ಬಳಸಿಕೊಳ್ಳಲಾಗುವುದು’ ಎಂದು ಕ್ರೀಡಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT