ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿಗೂ ಮುನ್ನವೇ ಪೌರ ಕಾರ್ಮಿಕರ ಸಾವು

ಅರಿವು– ನೆರವು ಕಾರ್ಯಕ್ರಮ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ವೆಂಕಟೇಶ್‌ ಕಳವಳ
Last Updated 20 ಜುಲೈ 2017, 7:18 IST
ಅಕ್ಷರ ಗಾತ್ರ

ಕೋಲಾರ: ‘ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ಸೇವಾವಧಿ ಪೂರ್ಣ ಗೊಳ್ಳುವ ಮುನ್ನವೇ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗಿ ಮೃತಪಡು ತ್ತಿರುವುದು ವಿಷಾದಕರ’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್‌ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ನಗರದ ಟಿ.ಚನ್ನಯ್ಯ ರಂಗಮಂದರದಲ್ಲಿ ಬುಧವಾರ ಪೌರ ಕಾರ್ಮಿಕರಿಗೆ ಆಯೋಜಿಸಿದ್ದ ಅರಿವು– ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೌರ ಕಾರ್ಮಿಕರ ಪೈಕಿ ಶೇ 10ರಷ್ಟು ಮಂದಿ ಮಾತ್ರ ನಿವೃತ್ತಿಯಾಗುತ್ತಿದ್ದಾರೆ. ಹೆಚ್ಚಿನವರು ಚರ್ಮ ರೋಗ ಅಥವಾ ತೀವ್ರತರ ಕಾಯಿಲೆಗಳಿಗೆ ತುತ್ತಾಗಿ ಮೃತಪಡುತ್ತಿದ್ದಾರೆ’ ಎಂದರು.

‘ನಗರ ಮತ್ತು ಪಟ್ಟಣವನ್ನು ಸ್ವಚ್ಛ ಮಾಡುವುದು ಸುಲಭವಲ್ಲ. ಸ್ವಚ್ಛತಾ ಕೆಲಸ ಮಾಡುವವರಿಗೆ ಅದರ ಕಷ್ಟ ಏನೆಂದು ಗೊತ್ತು. ಪೌರ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಹಾಕಿಕೊಂಡೇ ಕೆಲಸ ಮಾಡಬೇಕು. ಇಲಾಖೆಯವರು ಪರಿಕರಗಳನ್ನು ವಿತರಿಸ ದಿದ್ದರೆ ಕರ್ತವ್ಯಕ್ಕೆ ಹಾಜರಾಗಬಾರದು’ ಎಂದು ಕಿವಿಮಾತು ಹೇಳಿದರು.

ಆದೇಶಪತ್ರ ನೀಡಲಾಗಿದೆ: ಆಯೋಗದ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ‘ರಾಜ್ಯದ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರ ಪೈಕಿ  11 ಸಾವಿರ ಮಂದಿಯ ಸೇವೆ ಕಾಯಂಗೊಳಿಸಿ ಈಗಾಗಲೇ ಆದೇಶಪತ್ರ ನೀಡಲಾಗಿದೆ. ಕಾಯಂಗೊಂಡ ಕಾರ್ಮಿಕರಿಗೆ ತಿಂಗಳಿಗೆ ₹ 25 ಸಾವಿರ ವೇತನ ಸಿಗಲಿದೆ’ ಎಂದು ಹೇಳಿದರು.

‘ಪೌರ ಕಾರ್ಮಿಕರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸಬೇಕು. ಈ ನಿಟ್ಟಿನಲ್ಲಿ ಸರ್ಕಾರ 22 ಬಗೆಯ ಪರಿಕರಗಳನ್ನು ನೀಡಲು ಆದೇಶ ಹೊರಡಿಸಿದೆ. ಪರಿಕರಗಳನ್ನು ನೀಡದಿದ್ದರೆ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ವರದಿ ಸಲ್ಲಿಕೆ: ‘ಪೌರ ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಪೌರಾಡಳಿತ ನಿರ್ದೇಶನಾಲಯ ನಿಭಾಯಿಸುವ ಹಿನ್ನೆಲೆಯಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗ ರಚಿಸಲಾಗಿದೆ. ಆಯೋಗ ರಚನೆಯಾದ ಬಳಿಕ ಸಫಾಯಿ ಕರ್ಮಚಾರಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕಾರ್ಮಿಕರ ಸೇವೆ ಕಾಯಂಗೊಳಿಸಲು ಮತ್ತು ಗುತ್ತಿಗೆದಾರರ ಶೋಷಣೆ ತಪ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ, ಕೋಲಾರ ತಾಲ್ಲೂಕು ಸಹಾಯಕ ನಿರ್ದೇಶಕ ಬಾಲಾಜಿ, ಕೋಲಾರ ನಗರಸಭೆ ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್, ಕೆಜಿಎಫ್ ನಗರಸಭೆ ಆಯುಕ್ತ ಶ್ರೀಕಾಂತ್ ಪಾಲ್ಗೊಂಡಿದ್ದರು.

**

15 ದಿನಗಳಲ್ಲಿ ಕಾರ್ಮಿಕರಿಗೆ ಓಟಿಸಿ ಹಣ

ಕೆಜಿಎಫ್‌: ಸಫಾಯಿ ಕರ್ಮಚಾರಿ ಗಳಿಗೆ ಬರಬೇಕಾದ ₹ 1 ಲಕ್ಷ   ಓಟಿಸಿ ಹಣವನ್ನು ( ಒಂದು ಬಾರಿ ವಿನಿಮಯ) ಹದಿನೈದು ದಿನಗಳ ಒಳಗೆ ನೀಡುವುದಾಗಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ್‌ ಹೇಳಿದರು.

ರಾಬರ್ಟಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ನಡೆದ ಪೌರಕಾರ್ಮಿಕರು, ವಿವಿಧ ಸಂಘಟನೆಗಳು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪೌರಕಾರ್ಮಿಕರ ವೃತ್ತಿ ಬದಲಾವಣೆಗೆ ಅನುಕೂಲವಾಗುವಂತೆ ನೀಡಲಾಗುವ ₹ 1.40 ಲಕ್ಷದ ಪೈಕಿ ₹ 40 ಸಾವಿರವನ್ನು ಕೇಂದ್ರ ಸರ್ಕಾರ ನೀಡಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ನೀಡಬೇಕಾಗಿದೆ. ಅದನ್ನು ಮುಂದಿನ ಹದಿನೈದು ದಿನಗಳ ಒಳಗೆ ಎಲ್ಲ ಸಫಾಯಿ ಕರ್ಮಚಾರಿಗಳಿಗೆ ನೀಡಲಾಗುವುದು’ ಎಂದು ಹೇಳಿದರು.

‘ಕರ್ಮಚಾರಿಗಳು ಯಾರೂ ತಮ್ಮ ಹಿಂದಿನ ವೃತ್ತಿ ಮುಂದುವರಿಸಬಾರದು. ಮಲ ಬಳಿಯುವ ಕೆಲಸ ಮಾಡಿದರೆ ಮತ್ತು ಮಾಡಿಸುವವರಿಗೆ ಕಠಿಣ ಶಿಕ್ಷೆ ಇದೆ. ಈಗಾಗಲೇ ಆಯೋಗ 20 ಪ್ರಕರಣಗಳನ್ನು ದಾಖಲಿಸಿದೆ. ಎರಡು ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿದೆ’ ಎಂದು ಹೇಳಿದರು.

‘ಎಲ್ಲ ಪೌರಕಾರ್ಮಿಕರಿಗೂ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ನೀಡಿದೆ. ಇದೊಂದು ಐತಿಹಾಸಿಕ ಕ್ರಮ. ಹಣ ನೇರವಾಗಿ   ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಗುತ್ತಿಗೆದಾರರ ಮತ್ತು ಮಧ್ಯವರ್ತಿಗಳ ಕಾಟ ಇರುವುದಿಲ್ಲ’ ಎಂದು ತಿಳಿಸಿದರು.

ಆಯೋಗದ ಸದಸ್ಯ ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ರಮೇಶ್‌ಕುಮಾರ್‌, ಉಪಾಧ್ಯಕ್ಷೆ ಜಯಂತಿ, ಯೋಜನಾ ನಿರ್ದೇಶಕಿ ರೇಣುಕಾ, ಆಯುಕ್ತ ಆರ್.ಶ್ರೀಕಾಂತ್‌ ಹಾಜರಿದ್ದರು.

**

ಸಮಸ್ಯೆ ಪರಿಹರಿಸುವಂತೆ ಮನವಿ

ಕೆಜಿಎಫ್‌: ಸರಿಯಾಗಿ ಸಂಬಳ ಕೊಡುವುದಿಲ್ಲ. ಸರ್ಕಾರ ನಿಗದಿ ಪಡಿಸಿದ ಸವಲತ್ತುಗಳಿಂದ ವಂಚಿಸಲಾಗುತ್ತಿದೆ. ಸಹಿ ಪಡೆಯುವುದೇ ಒಂದು ಸಂಬಳಕ್ಕೆ ನೀಡುವುದೇ ಮತ್ತೊಂದು ಸಂಬಳ...

ಹೀಗೆ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಸಿಬ್ಬಂದಿ ಬುಧವಾರ ತಮ್ಮ ಅಳಲನ್ನು ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ನಾರಾಯಣಸ್ವಾಮಿ ಅವರ ಎದುರು ಬಿಚ್ಚಿಟ್ಟರು.

ದಿಢೀರ ಆಸ್ಪತ್ರೆಗೆ ಭೇಟಿ ಪರಿಶೀಲಿಸಿದ ನಾರಾಯಣಸ್ವಾಮಿ, ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು.

‘ನಮಗೆ ಕೇವಲ ₹ 6 ಸಾವಿರ ಸಂಬಳ ಕೊಡಲಾಗುತ್ತಿದೆ. ನಿಗದಿತ ಸಮಯಕ್ಕಿಂತ ಹೆಚ್ಚಿನ ಕೆಲಸ ತೆಗೆದುಕೊಳ್ಳುತ್ತಾರೆ. ಆಸ್ಪತ್ರೆ  ಸ್ವಚ್ಛಗೊಳಿಸಲು ಯಾವುದೇ ಕೈಗವಸು, ಮುಖ ಗವಸುಗಳನ್ನು ನೀಡಿಲ್ಲ. ಕೆಲವರಿಗೆ ಮೂರು ತಿಂಗಳಾದರೂ ಸಂಬಳ ನೀಡಿಲ್ಲ’ ಎಂದು ಅವಲತ್ತುಕೊಂಡರು.

‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಕಾಯಂ ಮಾಡುತ್ತೇನೆ ಎಂದು ಗುತ್ತಿಗೆದಾರರು, ವ್ಯವಸ್ಥಾಪಕ ಕೆಲವು ಕಾರ್ಮಿಕರಿಂದ ಹಣಪಡೆದಿದ್ದಾರೆ. ಹಣ ವಾಪಸ್ ಕೇಳಿದರೆ ಕೆಲಸಕ್ಕೆ ಬರುವುದು ಬೇಡ ಎಂದು ದಬಾಯಿಸುತ್ತಾರೆ’ ಎಂದು ದೂರಿದರು.

ಆಸ್ಪತ್ರೆ ಆವರಣದಲ್ಲಿರುವ ಗಲೀಜು ವಾತಾವರಣ ಕಂಡು ನಾರಾಯಣಸ್ವಾಮಿ ಸಿಡಿಮಿಡಿಗೊಂಡರು. ವೈದ್ಯಕೀಯ ತ್ಯಾಜ್ಯವನ್ನು ಆಸ್ಪತ್ರೆ ಆವರಣದಲ್ಲಿಯೇ ಸುಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

‘ಕೂಡಲೇ ಸಫಾಯಿ ಕರ್ಮಚಾರಿಗಳ ಸಮಸ್ಯೆ ಪರಿಹರಿಸಬೇಕು. ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದರು.

**

11 ಸಾವಿರ ಪೌರ ಕಾರ್ಮಿಕ ರನ್ನು ಕಾಯಂಗೊಳಿಸಿ ಕನಿಷ್ಠ ವೇತನ ಕಲ್ಪಿಸಲಾಗಿದೆ. ತಂತ್ರಜ್ಞಾನದ ಬಗ್ಗೆ ತರಬೇತಿ ಕೊಡಿಸಲು 1,000 ಪೌರ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಲಾ ಗುತ್ತಿದೆ. ಮೊದಲ ಹಂತ ವಾಗಿ 40 ಮಂದಿ ಸಿಂಗಪುರಕ್ಕೆ ಹೋಗಿದ್ದಾರೆ.
-ವೆಂಕಟೇಶ್,  ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT