ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಹತ್ಯೆ, ರೂಪಾ ವರ್ಗಾವಣೆಗೆ ಖಂಡನೆ

ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ, ಬೈಕ್‌ ರ್‍ಯಾಲಿ
Last Updated 20 ಜುಲೈ 2017, 7:14 IST
ಅಕ್ಷರ ಗಾತ್ರ

ಯಾದಗಿರಿ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಾಗೂ ಡಿಐಜಿ ರೂಪಾ ಅವರ ವರ್ಗಾವಣೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಭಿತ್ತಿಪತ್ರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅವ್ಯವಹಾರಗಳನ್ನು ಬಯಲಿಗೆ ಎಳೆದ ಡಿಐಜಿ ರೂಪಾ ಅವರ ವರ್ಗಾವಣೆ ಹಾಗೂ ಮಡಿವಾಳ ಅವರ ಹತ್ಯೆ ಕುರಿತು ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ‘ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರ ಕುರಿತು ರಾಜ್ಯ ಸರ್ಕಾರ ಹಾಗೂ ರಾಜ್ಯದ ಜನರ ಮುಂದೆ ಡಿಐಜಿ ರೂಪಾ ಮಾಹಿತಿ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ನಿಷ್ಠಾವಂತ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಖಂಡನೀಯ. ಭಷ್ಟ್ರರಿಗೆ ಸರ್ಕಾರ ಮಣೆ ಹಾಕಿದೆ’ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಉಸ್ತುವಾರಿ ಎನ್.ಶಂಕರಪ್ಪ ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕೊಲೆಗಳು ಹೆಚ್ಚಿವೆ. ಹಿರಿಯ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ನೀಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ ಮಾತನಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ, ವೆಂಕಟರೆಡ್ಡಿಗೌಡ ಮುದ್ನಾಳ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಭೀಮಣ್ಣ ಮೇಟಿ, ವೆಂಕಟರೆಡ್ಡಿ ಅಬ್ಬೆತುಮಕೂರು, ಸಾಯಬಣ್ಣ ಬೋರಬಂಡಾ, ದೇವರಾಜ ನಾಯಕ್, ಸಿದ್ದಣ್ಣಗೌಡ ಕಾಡಂನೋರಾ, ಖಂಡಪ್ಪ ದಾಸನ, ಸ್ವಾಮಿದೇವ ದಾಸನಕೇರಿ, ಬಸವರಾಜ್ ಪಾಟೀಲ ಬಿಳ್ಹಾರ್, ವಿರುಪಾಕ್ಷ ಮಠಪತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಯಾಣಿಕರ ಪರದಾಟ: ಪ್ರತಿಭಟನಾಕಾರರು 20 ನಿಮಿಷ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT