ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಂಗಳ ಒತ್ತುವರಿ ಪರಿಶೀಲನೆ

ಕಾರಟಗಿ: 36 ಎಕರೆ 32 ಗುಂಟೆ ವ್ಯಾಪ್ತಿ, ಸರ್ವೆ ಕೈಗೊಂಡ ಅಧಿಕಾರಿಗಳು
Last Updated 20 ಜುಲೈ 2017, 7:29 IST
ಅಕ್ಷರ ಗಾತ್ರ

ಕಾರಟಗಿ: ವರ್ಷಗಳು ಕಳೆದಂತೆ ಪಟ್ಟಣದಲ್ಲಿ ಕೆರೆಗಳ ಸಂಖ್ಯೆ ಕಡಿಮೆಯಾಗಿದೆ. ಇದರ ಬಗ್ಗೆ ಸ್ಥಳೀಯರಲ್ಲಿ ಬೇಸರವಿದೆ. ಇದರ ಮಧ್ಯೆ ಸ. ನಂ. 416ರ 36 ಎಕರೆ 32 ಗುಂಟೆಯ ಬೃಹತ್ ಕೆರೆಪ್ರದೇಶದ ಆಭಿವೃದ್ಧಿಗೆ ವಿವಿಧ ಇಲಾಖೆಗಳು ಆಸಕ್ತಿ ತೋರಿವೆ. ಕೆರೆ ಪ್ರದೇಶದ ಸರ್ವೆ ಕಾರ್ಯ ಬುಧವಾರ ಆರಂಭಗೊಂಡಿದೆ.

ಎರಡು ತಿಂಗಳ ಹಿಂದೆ ಸರ್ವೆಗೆ ಅಧಿಕಾರಿಗಳು ಮುಂದಾದಾಗ, ಕೆಲವರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು. ಕೆರೆಪ್ರದೇಶದ  ಸುತ್ತಮುತ್ತಲಿನ ಜನರಿಗೆ ನೋಟಿಸ್‌  ನೀಡದೇ ಸರ್ವೆ ಕಾರ್ಯನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.

ಅದಕ್ಕೆಂದೇ ಈ ಬಾರಿ ಸರ್ವೆ ಕಾರ್ಯಕ್ಕೂ ಮುನ್ನ ನೋಟಿಸ್‌ ನೀಡಲಾಯಿತು.  ಭೂ ಸರ್ವೇಯರ ಬಸವರಾಜ್, ಬಿ. ರಾಜು, ಎಸ್‌. ಎನ್‌. ರಮೇಶ್ ಮತ್ತು ಸಿಬ್ಬಂದಿ ತಂಡ ಕೆರೆ ಆರಂಭದ ಗುರುತು ಪರಿಶೀಲನೆಯಲ್ಲಿ ನಿರತರಾದರು.

ಸರ್ವೇಯರ್ ಬಸವರಾಜ್ ಮಾತನಾಡಿ, ‘ಸರ್ವೆ ಕಾರ್ಯವು ಹಿಂದಿನ ಭೂ ದಾಖಲೆಗಳ ಆಧಾರದಲ್ಲೇ ನಡೆದಿದೆ. ಕೆರೆ ಪ್ರದೇಶವು ಒಂದು ಅಡಿಯು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ. ನಮಗೆ ಯಾರ ಒತ್ತಡ, ಪ್ರಭಾವವಿಲ್ಲ. ಸಂಬಂಧಿಸಿದ ಜಮೀನು, ಜಾಗ ಮಾಲೀಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈಗಾಗಲೇ ಪಶ್ಚಿಮ, ಉತ್ತರ ದಿಕ್ಕಿನ ಜಾಗ ಗುರುತಿಸಲಾಗಿದೆ.  ಪೂರ್ವ, ದಕ್ಷಿಣ ದಿಕ್ಕಿನ ಸರ್ವೆ ನಡೆಸಿದ್ದೇವೆ. ಎರಡು ದಿನದಲ್ಲಿ ಸರ್ವೆ ಪೂರ್ಣಗೊಳ್ಳಲಿದೆ’ ಎಂದರು.

ವಿಶೇಷ ತಹಶೀಲ್ದಾರ್ ಕಿರಣಕುಮಾರ, ಉಪ ತಹಶೀಲ್ದಾರ್‌ ಮಹಾಂತಗೌಡ, ಗ್ರಾಮ ಲೆಕ್ಕಿಗ ಉಮೇಶ್ ಮಾತನಾಡಿದರು. ಸರ್ಕಾರಿ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಸರ್ವೆ ಬಳಿಕ ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದರು.

‘ಕೆರೆಯ ಜಾಗವನ್ನು ವಿವಿಧ ಇಲಾಖೆಗಳಿಗೆ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಇಲಾಖೆಗಳಿಗೆ ಎಷ್ಟು ಜಾಗ ಅಗತ್ಯವಿದೆ ಎಂಬುದನ್ನು ಜಿಲ್ಲಾಧಿಕಾರಿ ನಿರ್ಧರಿಸುವರು. ಉಳಿದ ಜಾಗವನ್ನು ಇತರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬಹುದು’ ಎಂದರು.

ಪುರಸಭೆ ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ ಮಾತನಾಡಿ, ‘ನೆಮ್ಮದಿ ಗ್ರಾಮ ಯೋಜನೆಯಡಿ ಅನೇಕ ಅಭಿವೃದ್ಧಿ ಕಾರ್ಯಕ್ಕೆ ಜಮೀನಿನ ಅವಶ್ಯಕತೆ ಇದೆ. ಪುರಭವನ ಸೇರಿದಂತೆ ಇತರೆ ಕಾರ್ಯಕ್ಕೆ ನಾಲ್ಕೈದು ಎಕರೆ ಜಮೀನನ್ನು ಕೆರೆ ಪ್ರದೇಶದಲ್ಲಿ ನೀಡಿದರೆ ಅನುಕೂಲ ಆಗಲಿದೆ’ ಎಂದರು.

ಆರೋಪ: ‘ಸರ್ವೆ ಕಾರ್ಯ ಒತ್ತಡ, ಪ್ರಭಾವದ ಹಿನ್ನೆಲೆಯಲ್ಲಿ ನಡೆದರೆ ಸಹಿಸುವುದಿಲ್ಲ. ಹಿಂದೆ ಅಳತೆ ಮಾಡಿ ಕಲ್ಲುಗಳನ್ನು ಹಾಕಲಾಗಿತ್ತು. ಬುಧವಾರ ಅಳತೆ ಮಾಡಿದಾಗ, ಮೊದಲಿನ ಸ್ಥಳ ಮೀರಿ ಹೆಚ್ಚುವರಿ ಜಮೀನು ಕೆರೆಯದ್ದು ಎಂದು ಬಯಲಾಗಿದೆ. ಸಾರ್ವಜನಿಕ ಆಸ್ತಿಯು ಜನರ ಅಭಿವೃದ್ಧಿಗೆ ಮೀಸಲಾಗಬೇಕು. ಅದನ್ನು ಮೀರಿ ಸರ್ವೆ ಕಾರ್ಯ ನಡೆದರೆ ಸಹಿಸುವುದಿಲ್ಲ. ಇದಕ್ಕಾಗಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮರಿಯಪ್ಪ ಸಾಲೋಣಿ ತಿಳಿಸಿದರು.
– ಕೆ. ಮಲ್ಲಿಕಾರ್ಜುನ, ಕಾರಟಗಿ.

**

ನೆಮ್ಮದಿ ಗ್ರಾಮ ಯೋಜನೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಜಮೀನಿನ ಅವಶ್ಯಕತೆ ಇದೆ. ಸರ್ವೆ ಬಳಿಕ ಜಮೀನು ದೊರೆತಲ್ಲಿ ಅಭಿವೃದ್ಧಿಗೆ ಅನುಕೂಲ.

ಡಾ. ಎನ್. ಶಿವಲಿಂಗಪ್ಪ
ಮುಖ್ಯಾಧಿಕಾರಿ, ಪುರಸಭೆ, ಕಾರಟಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT