ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಮೃತ್ತಿಕೆಯಲ್ಲಿ ಮೈದಳೆದ ಬೆನಕ

ನಗರ ಹೊರವಲಯದಲ್ಲಿ ಸಿದ್ಧಗೊಳ್ಳುತ್ತಿವೆ ‘ಪರಿಸರ ಸ್ನೇಹಿ’ ಗಣೇಶ ಮೂರ್ತಿಗಳು
Last Updated 20 ಜುಲೈ 2017, 8:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂಬರುವ ಗಣೇಶ ಹಬ್ಬಕ್ಕಾಗಿ ಮೂರ್ತಿಗಳನ್ನು ಸಿದ್ಧಪಡಿಸಲು ನಗರದ ಹೊರವಲಯದಲ್ಲಿರುವ ಅಗಲಗುರ್ಕಿ ಗೇಟ್‌ ಬಳಿ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಕೊಲ್ಕತ್ತಾ ಮೂಲದ ಕಲಾವಿದರ ತಂಡ ತಿಂಗಳು ಮೊದಲೇ ಬಂದು ಬೀಡು ಬಿಟ್ಟಿದೆ.

ಸ್ಥಳೀಯ ಜೇಡಿಮಣ್ಣು ಮತ್ತು ಕೋಲ್ಕತ್ತಾದಿಂದ ತರುವ ಗಂಗಾ ನದಿಯ ಮಣ್ಣನ್ನು ಬಳಸಿ ‘ಪರಿಸರ ಸ್ನೇಹಿ’ ಮೂರ್ತಿಗಳನ್ನು ತಯಾರಿಸುವುದು ಈ ತಂಡದ ವಿಶೇಷ. ಕೊಲ್ಕತ್ತಾದ ಕೃಷ್ಣಾನಗರದ ಲಕ್ಷ್ಮೀಕಾಂತ್ ಅವರ ನೇತೃತ್ವದ ಐದು ಕಲಾವಿದರ ತಂಡ ರಸ್ತೆಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಟೆಂಟ್‌ನೊಳಗೆ ಈಗಾಗಲೇ 50 ಮೂರ್ತಿಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತವಾಗಿದೆ.

ಬಿದಿರು, ಬಟ್ಟೆ ಬಳಸಿ ಮೂರ್ತಿಯ ಹಂದರ ರಚಿಸಿಕೊಳ್ಳುವ ಕಲಾವಿದರು ಜೆಡಿಮಣ್ಣು ಮತ್ತು ಭತ್ತದ ಹೊಟ್ಟು, ಹುಲ್ಲು ಬಳಸಿ ಬೆನಕನಿಗೆ ರೂಪ ಕೊಡುತ್ತಾರೆ. ಮೂರ್ತಿಗಳು ಒಣಗುತ್ತಿದ್ದಂತೆ ಗಂಗಾ ನದಿಯ ಮೃತ್ತಿಕೆಯಿಂದ ಮೇಲ್ಮೈ ನುಣುಪು ಮಾಡಿ ಜಲವರ್ಣಗಳನ್ನು ಬಳಿಯಲಾಗುತ್ತದೆ. ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಈ ಕಲಾವಿದರು ಜಲಮಾಲಿನ್ಯವಾಗಲಿ ಅಥವಾ ಜಲಚರಗಳಿಗೆ ತೊಂದರೆ ಉಂಟು ಮಾಡದಂತಹ ಪಂಜೆ, ಶಲ್ಯಗಳನ್ನು ಬಳಸಿ ಮೂರ್ತಿಗಳನ್ನು ಅಲಂಕರಿಸುತ್ತಾರೆ.

‘ಕಳೆದ 17 ವರ್ಷಗಳಿಂದ ನಾನು ಗಣೇಶನ ವಿಗ್ರಹ ತಯಾರಿಸುತ್ತಿದ್ದೇನೆ. ಇಲ್ಲಿಗೆ ಬರುವ ಮೊದಲು ದೊಡ್ಡಬಳ್ಳಾಪುರ, ತುಮಕೂರಿಗೆ ಬರುತ್ತಿದ್ದೆ. ಚಿಕ್ಕಬಳ್ಳಾಪುರಕ್ಕೆ ಬರುತ್ತಿರುವುದು ಇದು ಸತತ ಮೂರನೇ ವರ್ಷ. ಈ ಬಾರಿಯೂ ನಾಲ್ಕು ಜನ ಕಲಾವಿದರೊಂದಿಗೆ ಬಂದಿರುವೆ. ಸದ್ಯ 50 ಪರಿಸರ ಸ್ನೇಹಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದೇವೆ’ ಎನ್ನುತ್ತಾರೆ ಲಕ್ಷ್ಮೀಕಾಂತ್.

‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಮೂರ್ತಿಗಳಿಗೆ ಸಂಪೂರ್ಣವಾಗಿ ನಿಷೇಧ ವಿಧಿಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮೂರ್ತಿಗಳನ್ನು ಸಿದ್ಧಪಡಿಸುವ ಉದ್ದೇಶವಿದೆ. ಆದರೆ ಆ ಬಗ್ಗೆ ಇನ್ನೂ ಸ್ಪಷ್ಟತೆ ಕಾಣುತ್ತಿಲ್ಲ. ಕಳೆದ ಬಾರಿ ಕೂಡ ಚಿಕ್ಕಬಳ್ಳಾಪುರದಲ್ಲಿ 50 ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದ್ದೆ. ದೊಡ್ಡ ಪ್ರಮಾಣದ ಲಾಭವಾಗಲಿಲ್ಲ ಹಾಗಂತ ನಷ್ಟ ಆಗಿಲ್ಲ’ ಎಂದು ಹೇಳಿದರು.

‘ಪ್ರತಿ ವರ್ಷದಂತೆ ಈ ಬಾರಿಯೂ ದರ್ಬಾರ್‌, ಸಿಂಹಾರೂಢ, ಗಜವಾಹನ, ಮಯೂರ ವಾಹನ, ಕಮಲಾರೂಢ, ನೃತ್ಯಪಟು ಹೀಗೆ ಬಗೆ ಬಗೆಯ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಮೂರ್ತಿಯ ಗಾತ್ರದ ಮೇಲೆ ದರ ನಿಗದಿ ಮಾಡುತ್ತೇವೆ. ₹ 3,000ದಿಂದ  ₹ 10–15 ಸಾವಿರ ಮೌಲ್ಯದ ಮೂರ್ತಿಗಳಿವೆ. ಗ್ರಾಹಕರು ಇಂತಹದೇ ವಿನ್ಯಾಸದ ಮೂರ್ತಿ ಬೇಕೆಂದು ಮುಂಚಿತವಾಗಿ ಬೇಡಿಕೆ ಸಲ್ಲಿಸಿದರೆ ಸಿದ್ಧಪಡಿಸಿ ಕೊಡುತ್ತೇವೆ’ ಎಂದು ಅವರು ವಿವರಿಸಿದರು.

ಆಸಕ್ತರು ಲಕ್ಷ್ಮೀಕಾಂತ್‌ ಅವರನ್ನು 9686799791 ಈ ಸಂಖ್ಯೆಗೆ ಕರೆ ಮಾಡಬಹುದು.

**

ಪಿಒಪಿ, ರಾಸಾಯನಿಕ ಬಣ್ಣ ಬಳಸಿದ ಮೂರ್ತಿಗಳಿಂದ ಜಲಮೂಲಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ನಾವು ಮಣ್ಣಿನ ಮೂರ್ತಿಗಳನ್ನಷ್ಟೇ ತಯಾರಿಸುತ್ತೇವೆ.
–ಲಕ್ಷ್ಮೀಕಾಂತ್, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT