ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ನೀರು ಶುದ್ಧೀಕರಣ ಕಾರ್ಯ ಆರಂಭ

ಕಡೆಗೂ ಎಚ್ಚೆತ್ತುಕೊಂಡ ನಗರಸಭೆ: ಅರ್ಕಾವತಿ ನದಿ ಒಡಲಿಗೆ ಮಲಿನ ನೀರು ಸೇರದಂತೆ ತಡೆ
Last Updated 20 ಜುಲೈ 2017, 8:34 IST
ಅಕ್ಷರ ಗಾತ್ರ

ರಾಮನಗರ: ನಗರದ ವ್ಯಾಪ್ತಿಯಲ್ಲಿ ಅರ್ಕಾವತಿ ಒಡಲಿಗೆ ಕೊಳಚೆ ನೀರು ಸೇರ್ಪಡೆಯಾಗುವುದಕ್ಕೆ ಕಡೆಗೂ ತಡೆ ಬಿದ್ದಿದೆ. ಒಳಚರಂಡಿ ನೀರನ್ನು ಶುದ್ಧೀಕರಿಸುವ ಕಾರ್ಯಕ್ಕೆ ನಗರಸಭೆಯು ಸದ್ದಿಲ್ಲದೆ ಚಾಲನೆ ನೀಡಿದೆ.

ಜಿಲ್ಲಾಧಿಕಾರಿ ನಿವಾಸದ ಬಳಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಒಳಚರಂಡಿ ನೀರು ಶುದ್ಧೀಕರಣ ಘಟಕವು ಸದ್ಯ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ನಿತ್ಯ ಕೊಳಚೆ ನೀರನ್ನು ಶುದ್ಧೀಕರಿಸಿ ಹೊರಗೆ ಬಿಡಲಾಗುತ್ತಿದೆ. ಇದರಿಂದ ಅರ್ಕಾವತಿ ಒಡಲಿಗೆ ವಿಷಪ್ರಾಶನದ ಪ್ರಮಾಣ ತಗ್ಗಿದೆ.

ಎಷ್ಟು ನೀರು ಶುದ್ಧೀಕರಣ: ರಾಮನಗರಕ್ಕೆ ಪ್ರಸ್ತುತ ನಿತ್ಯ 8ರಿಂದ 10 ಎಂಎಲ್‌ಡಿಯಷ್ಟು ಕುಡಿಯುವ ನೀರು ಸರಬರಾಜಾಗುತ್ತಿದೆ. ಇದರಲ್ಲಿ ಶೇ 40ರಷ್ಟು ಅಂದರೆ 4 ಎಂಎಲ್‌ಡಿಯಷ್ಟು ಬಳಸಿದ ನೀರು ಒಳಚರಂಡಿ ಪಾಲಾಗುತ್ತಿದೆ. ಇಷ್ಟು ಪ್ರಮಾಣದ ನೀರು ಮುಂದೆ ಶುದ್ಧೀಕರಣಕ್ಕೆ ಒಳಗಾಗಲಿದೆ.

ನಗರದ ವ್ಯಾಪ್ತಿಯಲ್ಲಿ ಗೌಸಿಯಾನಗರ ಪಂಪ್‌, ಬಾಲಗೇರಿ, ಕೈಗಾರಿಕಾ ಶೆಡ್‌ ಹಾಗೂ ಕನಕಪುರ ವೃತ್ತ ಮಾರ್ಗವಾಗಿ ನಾಲ್ಕು ವೆಟ್‌ವೆಲ್‌ಗಳ ಮೂಲಕ ನೀರು ಹರಿದು ಶುದ್ಧೀಕರಣ ಘಟಕವನ್ನು ತಲುಪಲಿದೆ.

‘ಸದ್ಯ ಗೌಸಿಯಾನಗರ ಹೊರತುಪಡಿಸಿ ಉಳಿದ ಮೂರು ಘಟಕಗಳ ನೀರು ಹರಿದುಬರುತ್ತಿದೆ. ಇದನ್ನು ಯಂತ್ರಗಳ ಸಹಾಯದಿಂದ ಶುದ್ಧಗೊಳಿಸಿ, ನೈಸರ್ಗಿಕ ಕ್ರಿಮಿನಾಶಕಗಳನ್ನು ಬಳಸಿ ವಾಸನೆ ಬರದಂತೆ ತಡೆಯಲಾಗುತ್ತಿದೆ. ಹೀಗೆ ಶುದ್ಧವಾದ ನೀರನ್ನು ನಾಲೆಯ ಮೂಲಕ ಪಕ್ಕದ ಹಳ್ಳಕ್ಕೆ ಬಿಡಲಾಗುತ್ತಿದೆ’ ಎಂದು ನಗರಸಭೆ ಆಯುಕ್ತ ಕೆ. ಮಾಯಣ್ಣ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಘಟಕವು ದಿನಕ್ಕೆ 7 ಎಂಎಲ್‌ಡಿ ನೀರನ್ನು ಶುದ್ದೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ನಿತ್ಯ ಸುಮಾರು 2 ಎಂಎಲ್‌ಡಿಯಷ್ಟು ನೀರನ್ನು ಶುದ್ಧ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವು ಹೆಚ್ಚಾಗಲಿದೆ’ ಎಂದು ತಿಳಿಸಿದರು.

‘ಇಡೀ ನಗರದ ಒಳಚರಂಡಿ ವ್ಯವಸ್ಥೆ ಮತ್ತೆ ಒಂದೇ ಸಂಪರ್ಕಕ್ಕೆ ತರಬೇಕಿದೆ. ಇವುಗಳನ್ನು ಜೋಡಿಸುವ ಮತ್ತು ನವೀಕರಿಸುವ ಕಾರ್ಯವೂ ಈಗಾಗಲೇ ಆರಂಭವಾಗಿದೆ’ ಎಂದು ಹೇಳಿದರು.

ನಗರಸಭೆ–ಜಲಮಂಡಳಿ ತಿಕ್ಕಾಟ: ರಾಮನಗರದ ಪಟ್ಟಣ ಪ್ರದೇಶದಲ್ಲಿ ಸಂಗ್ರಹವಾಗುವ ಒಳಚರಂಡಿ ನೀರಿನ ಶುದ್ಧೀಕರಣಕ್ಕಾಗಿ ಸುಮಾರು 15 ವರ್ಷದ ಹಿಂದೆಯೇ ಎಲ್‌ ಅಂಡ್‌ ಟಿ ಕಂಪೆನಿಯು ಅರ್ಚಕರಹಳ್ಳಿ ಬಳಿ ಈ ಶುದ್ಧೀಕರಣ ಘಟಕವನ್ನು ನಿರ್ಮಿಸಿಕೊಟ್ಟಿತ್ತು. ನಂತರ ಅದರ ನಿರ್ವಹಣೆಯು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿಯ ಮಂಡಳಿಯ ಅಧೀನಕ್ಕೆ ಬಂದಿತು. ಆದರೆ ಕಳಪೆ ನಿರ್ವಹಣೆ ಪರಿಣಾಮ ಇಡೀ ಒಳಚರಂಡಿ ವ್ಯವಸ್ಥೆಯ ಹದಗೆಟ್ಟಿತು. ಅಲ್ಲಲ್ಲಿ ಚರಂಡಿಗಳನ್ನು ಒಡೆದು ನದಿಗೆ ನೀರು ಹರಿಸುವ ಕೆಲಸವೂ ನಡೆಯಿತು. ಕಳೆದ ನಾಲ್ಕೈದು ವರ್ಷದ ಹಿಂದೆ ಶುದ್ಧೀಕರಣ ಘಟಕವೇ ಬಂದ್‌ ಆಗಿತ್ತು.

ನದಿ ಮೂಲ ರಕ್ಷಣೆಗೆ ಪರಿಸರ ಪ್ರಿಯರ ಒತ್ತಡ ಹಾಗೂ ನ್ಯಾಯಾಲಯಗಳ ಕಟ್ಟುನಿಟ್ಟಿನ ಸೂಚನೆ ಅನ್ವಯ ಕೊಳಕು ನೀರು ಶುದ್ಧೀಕರಿಸುವುದು ನಗರಸಭೆಗೆ ಅನಿವಾರ್ಯವಾಗಿದ್ದು, ಕಡೆಗೂ ಅದು ಜಲಮಂಡಳಿಯನ್ನು ನೆಚ್ಚಿ ಕೂರುವುದನ್ನು ಬಿಟ್ಟು ತಾನೇ ಯೋಜನೆ ಕಾರ್ಯಗತಗೊಳಿಸುತ್ತಿದೆ. ಹೀಗಾಗಿ ನೀರು ಶುದ್ಧೀಕರಣ ಕಾರ್ಯವು ತಡವಾಗಿಯಾದರೂ ಆರಂಭಗೊಳ್ಳುತ್ತಿದೆ.

**

ಕೈಗಾರಿಕಾ ಘಟಕಕ್ಕೆ ನೀರು  ಪೂರೈಕೆ

ಜಲ ಶುದ್ಧೀಕರಣ ಘಟಕದಿಂದ ಹೊರಬರುವ ನೀರನ್ನು ಕನಕಪುರ ರಸ್ತೆಯಲ್ಲಿರುವ ಸೇನಾಪತಿ ವೈಟ್ಲೆ ಕಾರ್ಖಾನೆಗೆ ಪೂರೈಸಲು ಈ ಹಿಂದೆಯೇ ಒಪ್ಪಂದ ಆಗಿತ್ತು. ಆದರೆ ಘಟಕವು ಕಾರ್ಯನಿರ್ವಹಿಸದ ಕಾರಣ ವೈಟ್ಲೆ ಕಾರ್ಖಾನೆಗೆ ಸದ್ಯ ನಿತ್ಯ ಒಂದು ಎಂಎಲ್‌ಡಿಯಷ್ಟು ನದಿ ನೀರನ್ನೇ ನೀಡಲಾಗುತ್ತಿದೆ.

‘ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬಳಸಿಕೊಳ್ಳಲು ಕಾರ್ಖಾನೆಯು ಪಂಪ್‌ ಸ್ಟೇಷನ್‌ ಮತ್ತು ಪೈಪ್‌ಲೈನ್‌ ನಿರ್ಮಿಸಿಕೊಳ್ಳಲಿದೆ. ನಂತರ ಅವರಿಗೆ ಇದೇ ನೀರು ಪೂರೈಕೆ ಆಗಲಿದೆ. ಇದರಿಂದ ರಾಮನಗರಕ್ಕೆ ಒಂದು ಎಂಎಲ್‌ಡಿ ಹೆಚ್ಚುವರಿ ನೀರು ಲಭ್ಯವಾಗಲಿದೆ’ ಎಂದು ಮಾಯಣ್ಣಗೌಡ ವಿವರಿಸಿದರು.

ನಗರಸಭೆಗೆ ಹಣ ಉಳಿತಾಯ: ಒಳಚರಂಡಿ ನೀರು ಶುದ್ಧೀಕರಣ ಘಟಕದ ಕಾರ್ಯಾರಂಭಕ್ಕೆ ಜಲಮಂಡಳಿಯು ನಗರಸಭೆಯಿಂದ ₹3 ಕೋಟಿಗೆ ಬೇಡಿಕೆ ಇಟ್ಟಿತ್ತು. ಸದ್ಯ ಈ ಕಾರ್ಯವನ್ನು ₹8–10 ಲಕ್ಷದ ಒಳಗೆ ಮುಗಿಸಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಇದರಿಂದ ನಗರಸಭೆಗೆ ಹೆಚ್ಚಿನ ಹಣ ಉಳಿತಾಯ ಆದಂತೆ ಆಗಿದೆ.

ಆದರೆ ಒಳಚರಂಡಿ ವ್ಯವಸ್ಥೆಯ ನವೀಕರಣಕ್ಕಾಗಿ ನಗರಸಭೆಯು ಜಲಮಂಡಳಿಗೆ ಈಗಾಗಲೇ ₹96 ಲಕ್ಷ ನೀಡಿದೆ. ಮಂಡಳಿಯು ಕಾಮಗಾರಿ ಪೂರ್ಣಗೊಳಿಸಿಲ್ಲ. ಉಳಿದ ಹಣವನ್ನೂ ನೀಡಿಲ್ಲ. ಇದರ ಮರುಪಾವತಿಗೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT