ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿಗೆ 2 ಆನೆಗಳ ಸ್ಥಳಾಂತರ

ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ಆನೆ ಶಿಬಿರಕ್ಕೆ ‘ರೌಡಿ ರಂಗ’, ‘ಐರಾವತ’
Last Updated 20 ಜುಲೈ 2017, 8:40 IST
ಅಕ್ಷರ ಗಾತ್ರ

ಆನೇಕಲ್‌: ಸಮೀಪದ ಬನ್ನೇರುಘಟ್ಟ ಉದ್ಯಾನದಿಂದ ಬುಧವಾರ ‘ರೌಡಿ ರಂಗ’, ‘ಐರಾವತ’ ಆನೆಗಳನ್ನು ಸ್ಥಳಾಂತರಿಸಲಾಯಿತು.

ಈ ಆನೆಗಳನ್ನು ಆರು ತಿಂಗಳ ಹಿಂದೆ ಸೆರೆಹಿಡಿಯಲಾಗಿತ್ತು. ಬಳಿಕ ಜೈವಿಕ ಉದ್ಯಾನದ ಸೀಗೆಕಟ್ಟೆಯಲ್ಲಿ ಕ್ರಾಲ್‌ನಲ್ಲಿ ಬಂಧಿಸಿ ಆರು ತಿಂಗಳಿನಿಂದ ತರಬೇತಿ ನೀಡಲಾಗಿತ್ತು. ಈಚೆಗಷ್ಟೇ  ಬಿಡುಗಡೆಗೊಂಡಿದ್ದ ಈ ಆನೆಗಳನ್ನು  ಹೆಚ್ಚಿನ ತರಬೇತಿಗಾಗಿ ಬನ್ನೇರುಘಟ್ಟದಿಂದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಮತ್ತಿಕಟ್ಟೆಯ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಉದ್ಯಾನ ವ್ಯಾಪ್ತಿಯಲ್ಲಿ ‘ರೌಡಿ ರಂಗ’ ಎಂದೇ ಹೆಸರಾಗಿದ್ದ ಒಂಟಿ ಸಲಗವನ್ನು ಮಾಗಡಿಯ ಭಂಟರಕುಪ್ಪೆ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್‌ 25ರಂದು ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿದು ಇಲ್ಲಿಗೆ ಕರೆತರಲಾಗಿತ್ತು.

ಈ ಆನೆಗೆ ನುರಿತ ಮಾವುತರು ಹಾಗೂ ವೈದ್ಯರು ಎಲ್ಲಾ ತರಬೇತಿ ನೀಡಿದ್ದರು. ಇದಕ್ಕಾಗಿ ದಸರಾ ಆನೆ ‘ಅಭಿಮನ್ಯು’ ಹಾಗೂ ‘ಕೃಷ್ಣ’ರ ನೆರವು ಪಡೆಯಲಾಗಿತ್ತು.

ನೆಲಮಂಗಲ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ತೀವ್ರ ದಾಳಿಗಳಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಐರಾವತ ಆನೆಯನ್ನೂ ಬಂಧಿಸಿ ರಂಗನ ಜೊತೆಗೆ ಕ್ರಾಲ್‌ನಲ್ಲಿ (ಮರದ ದಿಮ್ಮಿಗಳು) ಪಳಗಿಸಲಾಗಿತ್ತು. ಜೂನ್‌ 29ರಂದು ರಂಗನನ್ನು, ಜುಲೈ 1ರಂದು ಐರಾವತನನ್ನು ಕ್ರಾಲ್‌ನಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಸೀಗೆ ಕಟ್ಟೆಯ ಬಯಲಿನ ಬಳಿ ಮಾವುತರು, ಅರಣ್ಯ ಇಲಾಖೆಯ ವೈದ್ಯರು ಆನೆಗಳ ನೆರವಿನಿಂದ ತರಬೇತಿ ನೀಡಿದ್ದರು.

ಮಾವುತರ ಸೂಚನೆಗಳಿಗೆ ಸ್ಪಂದಿಸಿ ಇಲ್ಲಿಯ ತರಬೇತಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಿ ನಿಯಂತ್ರಣಕ್ಕೆ ಸಿಕ್ಕಿದ ಈ ಆನೆಗಳನ್ನು ಮತ್ತಿಕಟ್ಟೆ ಆನೆ ಶಿಬಿರಕ್ಕೆ ಬೀಳ್ಕೊಡಲಾಯಿತು.

‘ದಿಮ್ಮಿಗಳನ್ನು ಎಳೆಯುವುದು, ಅರಣ್ಯದಲ್ಲಿ ಭಾರವಾದ ವಸ್ತುಗಳನ್ನು ಎತ್ತುವುದು ಸೇರಿದಂತೆ ವಿವಿಧ ಕೆಲಸಗಳಿಗೆ ಸಜ್ಜುಗೊಳಿಸಲು  ಆನೆಗಳಿಗೆ ತರಬೇತಿ ನೀಡಲಾಗುತ್ತದೆ.  ಈ ಆನೆಗಳ ಜೊತೆಗೆ ‘ಅಭಿಮನ್ಯು’, ‘ಕೃಷ್ಣ’ ಸೇರಿದಂತೆ ಒಟ್ಟು ಐದು ಆನೆಗಳು ಲಾರಿಗಳಲ್ಲಿ ಮತ್ತಿಕಟ್ಟೆ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಆನೆ ಶಿಬಿರಕ್ಕೆ ಪ್ರಯಾಣ ಬೆಳೆಸಿದವು.

ಬನ್ನೇರುಘಟ್ಟ ಜೈವಿಕ ಉದ್ಯಾನ ಹಾಗೂ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

**

ಪಳಗಿದ ಮಾವುತರು ಸಾಕಾನೆಗಳ ನೆರವಿನಿಂದ ತರಬೇತಿ ನೀಡುತ್ತಾರೆ.  ನಂತರ ಆನೆಗಳು ಇಲಾಖೆಯ ಸಾಕಾನೆಯ ಕುಟುಂಬದ ಸದಸ್ಯರಾಗುವರು
-ಸುರೇಶ್,
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT