ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಯಾಲ ರಸ್ತೆಯಲ್ಲಿ ಉಬ್ಬುಗಳ ಕಿರಿಕಿರಿ

ಹಳ್ಳಿಗಳಿಂದ ಹುಬ್ಬಳ್ಳಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ; ಅವೈಜ್ಞಾನಿಕ ವೇಗತಡೆಗಳಿಂದ ವಾಹನ ಸವಾರರು–ಚಾಲಕರಿಗೆ ಗೊಂದಲ
Last Updated 20 ಜುಲೈ 2017, 8:44 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಒಂದು ರಸ್ತೆ ಉಬ್ಬು ಅರ್ಧ ಅಡಿ, ಮತ್ತೊಂದು ಒಂದು ಅಡಿಯಷ್ಟು  ಎತ್ತರ. ಉಬ್ಬುಗಳನ್ನು ದಾಟಿದ ಕೂಡಲೇ ಆಳವಾದ ಗುಂಡಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹುಬ್ಬಳ್ಳಿಯ ಮಾವನೂರ, ಗಿರಿಯಾಲ ರಸ್ತೆಯ ನೋಟವಿದು. ಪಿ.ಬಿ. ರಸ್ತೆಯಷ್ಟೇ ಇಲ್ಲಿಯೂ ಹೆಚ್ಚು ವಾಹನಗಳು ಓಡಾಡುತ್ತವೆ.ರಸ್ತೆ ಉಬ್ಬು ಮಾತ್ರವಲ್ಲ, ಇಡೀ ಮಾರ್ಗವೇ ಅವೈಜ್ಞಾನಿಕವಾಗಿದೆ ಎನ್ನುತ್ತಾರೆ ವಾಹನ ಸವಾರರು.

‘ಹುಬ್ಬಳ್ಳಿ ಹೊರವಲಯದ ಹಳ್ಳಿಗಳ ಜನರು ನಗರಕ್ಕೆ ಇದೇ ಮಾರ್ಗದ ಮೂಲಕ ಬರುತ್ತಾರೆ. ಗಿರಿಯಾಲ ಮತ್ತು ಮಾವನೂರಿನಲ್ಲಿ ಹೆಚ್ಚು ತರಕಾರಿ ಬೆಳೆಯುತ್ತಾರೆ. ಅವುಗಳನ್ನು ಮಾರಾಟ ಮಾಡಲು ನಿತ್ಯ ನಗರಕ್ಕೆ ತೆಗೆದುಕೊಂಡು ಬರುತ್ತಾರೆ. ಎತ್ತರದ ರಸ್ತೆ ಉಬ್ಬುಗಳಿಂದ ಹಲವು ಬಾರಿ ಸರಕು ಸಾಗಣೆ ವಾಹನಗಳು ಪಲ್ಟಿ ಹೊಡೆದಿವೆ. ತರಕಾರಿಗಳು, ಸರಕುಗಳು ರಸ್ತೆಗೆ ಬಿದ್ದಿವೆ’ ಎಂದು ಸ್ಥಳೀಯ ನಿವಾಸಿ ಸುಶೀಲಾ ಕುಂದೂರ ತಿಳಿಸಿದರು.

‘ಈ ಮಾರ್ಗದಲ್ಲಿನ ರಸ್ತೆ ಉಬ್ಬುಗಳು ಸ್ವಲ್ಪ ಅಗಲವಾಗಿವೆ. ಆದರೆ, ಅವುಗಳ ಎತ್ತರ ಏಕಪ್ರಕಾರವಾಗಿಲ್ಲ. ಹಾಗಾಗಿ ವಾಹನ ಸವಾರರಿಗೆ ಅಂದಾಜು ಸಿಗುವುದಿಲ್ಲ. ರಾತ್ರಿಯ ವೇಳೆಯಂತೂ, ರಸ್ತೆ ಉಬ್ಬುಗಳು ಕಾಣದೇ ತುಂಬಾ ಗೊಂದಲವಾಗುತ್ತದೆ. ಬೈಕ್‌ಗಳನ್ನು ನಿಧಾನ ಮಾಡಲು ಹೋದಾಗ ನಿಂತೇ ಬಿಡುತ್ತವೆ’ ಎಂದು ಬಸವರಾಜ ಹಿರೇಮಠ ಹೇಳಿದರು.

ಒಂದು ರಸ್ತೆ; ಎರಡು ವಾರ್ಡ್‌: ಗಿರಿಯಾಲ ರಸ್ತೆ ಎರಡು ವಾರ್ಡ್‌ಗಳ ನಡುವೆ ಹಂಚಿಹೋಗಿದೆ. ಗಿರಿಯಾಲ ಮುಖವಾಗಿ ನೋಡಿದಾಗ, ರಸ್ತೆಯ ಎಡಗಡೆ ಭಾಗ 65ನೇ ವಾರ್ಡ್‌ಗೆ ಸೇರಿದರೆ, ಬಲಭಾಗ 64ನೇ ವಾರ್ಡ್‌ ವ್ಯಾಪ್ತಿಗೆ ಬರುತ್ತದೆ. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಯಾರನ್ನು ಕೇಳಬೇಕು ಎಂಬುದೇ ಗೊಂದಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

‘ರಸ್ತೆ ಉಬ್ಬುಗಳು ಮಾತ್ರವಲ್ಲ, ಯಾವುದೇ ಮೂಲಸೌಕರ್ಯಗಳೂ ಇಲ್ಲಿ ಇಲ್ಲ. ಎಲ್ಲೆಂದರಲ್ಲಿ ಕಸ ಬಿಸಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಉಬ್ಬುಗಳಿಂದ ಸಂಚಾರ ವಿಳಂಬವಾದರೆ, ರಸ್ತೆಯ ಮೇಲೆಯೇ ಕಸ ಬಿಸಾಕುವುದರಿಂದ ಪಾದಚಾರಿಗಳು ಓಡಾಡಲೂ ತೊಂದರೆಯಾಗುತ್ತದೆ’ ಎಂದು ಮಂಜುನಾಥ ಮರಿಗುದ್ದಿ ಹೇಳಿದರು.

ರಸ್ತೆ ಉಬ್ಬು ಬೇಕು: ‘ರಸ್ತೆಯಲ್ಲಿ ನಾಲ್ಕು ಅಲ್ಲ, ಇನ್ನೂ ರಸ್ತೆ ಉಬ್ಬುಗಳು ಬೇಕು’ ಎನ್ನುತ್ತಾರೆ ಸ್ಥಳೀಯರು.

‘ಅಫ್ರೋಜಾ ಶಾಲೆ, ವಿವೇಕಾನಂದ ಶಾಲೆ ಹಾಗೂ ಗ್ಲೋರಿ ಲಿಟಲ್‌ ಫ್ಲವರ್ಸ್‌ ಇಂಗ್ಲಿಷ್‌ ಮೀಡಿಯಂ ಶಾಲೆ ಇಲ್ಲಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಹೆಚ್ಚು ಮಕ್ಕಳು ಓಡಾಡುತ್ತಾರೆ. ಯುವಕರು ಅತಿ ವೇಗವಾಗಿ ವಾಹನಗಳ ಚಲಾಯಿಸುವುದರಿಂದ ಹಲವು ಬಾರಿ ಅಪಘಾತಗಳೂ ಆಗಿವೆ.

ದ್ದರಿಂದ, ರಸ್ತೆ ಉಬ್ಬುಗಳು ಹೆಚ್ಚಿನ ಸಂಖ್ಯೆಯಲ್ಲಿ ವೇಗದ ಚಾಲನೆಯನ್ನು ನಿಯಂತ್ರಿಸಬಹುದು’ ಎಂದು ಹೇಳುತ್ತಾರೆ ಇಲ್ಲಿನ ನಿವಾಸಿ ಕಮಲವ್ವ ಸಿದ್ದಣ್ಣವರ.

**

ಸರಿ ಮಾಡಿಸುತ್ತೇನೆ: ಅಲ್ತಾಫ್‌

‘ರಸ್ತೆ ಉಬ್ಬುಗಳು ಇರುವುದು ನನ್ನ ಗಮನಕ್ಕೂ ಬಂದಿದೆ. ಶೀಘ್ರವೇ ರಸ್ತೆ ಉಬ್ಬುಗಳ ಎತ್ತರ ಕಡಿಮೆ ಮಾಡಿಸುತ್ತೇನೆ’ ಎಂದು ಪಾಲಿಕೆ ಸದಸ್ಯ ಅಲ್ತಾಫ್‌ ಕಿತ್ತೂರ ಹೇಳಿದರು.

‘ಏಳು ವರ್ಷಗಳ ಹಿಂದೆ ರಸ್ತೆ ನಿರ್ಮಿಸುವಾಗ ಹಾಕಿರುವ ಉಬ್ಬುಗಳು ಅವು. ರಸ್ತೆ ಸವೆದಿರುವುದರಿಂದ ಉಬ್ಬುಗಳು ಹೆಚ್ಚು ಎತ್ತರವಾಗಿವೆ’ ಎಂದರು.
‘ಗಿರಿಯಾಲ, ಮಾವನೂರಿನಿಂದ ರೈತರು ಬರುತ್ತಾರೆ. ಸರಕು ಸಾಗಿಸುವಾಗ ತೊಂದರೆಯಾಗಿದೆ. ಕೆಲವರು ಬಿದ್ದಿರುವುದೂ ಗಮನಕ್ಕೆ ಬಂದಿದೆ. ಈಗ ಹೊಸದಾಗಿ ಡಾಂಬರು ರಸ್ತೆ ನಿರ್ಮಿಸಲಾಗುತ್ತಿದ್ದು, ವೈಜ್ಞಾನಿಕ ಉಬ್ಬುಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT