ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತೀರ್ಣ ಹೆಚ್ಚು; ಮೂಲ ಸೌಕರ್ಯ ಮರೀಚಿಕೆ

ಬಿಡದಿ ಪುರಸಭೆ ಅಭಿವೃದ್ಧಿಗೆ ಬೇಕಿದೆ ಸರ್ಕಾರದ ಅನುದಾನ l ಆಗಬೇಕಿದೆ 30 ಹಳ್ಳಿಗಳ ಪ್ರಗತಿ
Last Updated 20 ಜುಲೈ 2017, 8:47 IST
ಅಕ್ಷರ ಗಾತ್ರ

ಬಿಡದಿ: ಇಲ್ಲಿನ ಪುರಸಭೆ ಅಸ್ತಿತ್ವಕ್ಕೆ ಬಂದು ವರ್ಷವೇ ಕಳೆದಿದ್ದರೂ ಮೂಲ ಸೌಕರ್ಯ ಇನ್ನೂ ಮರೀಚಿಕೆಯಾಗಿದೆ. ಸುತ್ತಲಿನ ಹಳ್ಳಿಗಳನ್ನೂ ಪಟ್ಟಣದ ವ್ಯಾಪ್ತಿಗೆ ಸೇರಿದ್ದು, ಅದಕ್ಕೆ ತಕ್ಕ ಪ್ರಮಾಣದ ಅನುದಾನವನ್ನು ರಾಜ್ಯ ಸರ್ಕಾರವು ನೀಡಿಲ್ಲ.

ಗ್ರಾಮ ಪಂಚಾಯಿತಿಯಾಗಿದ್ದ ಬಿಡದಿಗೆ ಪುರಸಭೆಯ ಸ್ಥಾನಮಾನ ನೀಡಿದ ರಾಜ್ಯ ಸರ್ಕಾರವು ಕಳೆದ ಏಪ್ರಿಲ್‌ನಲ್ಲಿ ಚುನಾವಣೆಯ ಮೂಲಕ ಹೊಸ ಸಾರಥಿಗಳನ್ನು ಆಯ್ಕೆ ಮಾಡಿತ್ತು. ಅಲ್ಲಿಂದ ಪಟ್ಟಣದಲ್ಲಿ ನೀರು ಪೂರೈಕೆ, ಒಳಚರಂಡಿ, ಬೀದಿದೀಪ ವ್ಯವಸ್ಥೆಗಳು ಸುಧಾರಣೆ ಕಾಣುತ್ತಿವೆಯಾದರೂ ಅನುದಾನದ ಕೊರತೆಯಿಂದಾಗಿ ಎಲ್ಲ ವಾರ್ಡುಗಳಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸುವುದು ಅಸಾಧ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ವ್ಯಾಪ್ತಿ ಹಿರಿದು: ಸುಮಾರು 18.9 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಬಿಡದಿ ಪುರಸಭೆಯು ವಿಸ್ತೀರ್ಣದಲ್ಲಿ ರಾಮನಗರ ನಗರಸಭೆಗಿಂತ ದೊಡ್ಡದಿದೆ. 23 ವಾರ್ಡುಗಳನ್ನಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಪಟ್ಟಣ ವ್ಯಾಪ್ತಿಯ 7 ಹಳ್ಳಿಗಳನ್ನು ಹೊರತುಪಡಿಸಿ ಉಳಿದವುಗಳು ಹಳ್ಳಿಗಳೇ ಆಗಿವೆ.

ಕಲ್ಲುಗೋಪನಹಳ್ಳಿ, ಹನಸಿನಮರದ ದೊಡ್ಡಿ, ಕೆಂಚನಗುಪ್ಪೆ, ಇಟ್ಟಮಡು, ಬಾನಂದೂರು ಸಹಿತ ಸುತ್ತಮುತ್ತ 30 ಹಳ್ಳಿಗಳು ಪುರಸಭೆಯ ವ್ಯಾಪ್ತಿಯಲ್ಲಿವೆ. ಇವುಗಳಿಗೂ ಪಟ್ಟಣದ ನಿವಾಸಿಗಳಿಗೆ ಸಮಾನಾಗಿ ಮೂಲ ಸೌಕರ್ಯ ಒದಗಿಸಬೇಕಿದೆ. ಇನ್ನೊಂದೆಡೆ ಬಿಡದಿ ಕೈಗಾರಿಕಾ ಪ್ರದೇಶವು ವಿಸ್ತಾರವಾಗಿ ಬೆಳೆಯುತ್ತಲಿದ್ದು, ಅಲ್ಲಿನ ಅಭಿವೃದ್ಧಿಗೆ ಆದ್ಯತೆ ಸಿಗಬೇಕಿದೆ.

ಸಮಸ್ಯೆ ಏನು?: ಪಟ್ಟಣದ ಕೆಲವೇ ಬಡಾವಣೆಗಳನ್ನು ಹೊರತುಪಡಿಸಿ ಉಳಿದೆಡೆ ಉತ್ತಮ ರಸ್ತೆಗಳಿಲ್ಲ. ಒಳಚರಂಡಿ ವ್ಯವಸ್ಥೆ ಸಹ ಸಮರ್ಪಕವಾಗಿಲ್ಲ. ಕುಡಿಯುವ ನೀರು ಪೂರೈಕೆ ಅಷ್ಟಕ್ಕಷ್ಟೇ ಎಂಬಂತೆ ಇದೆ. ಬೀದಿದೀಪಗಳ ನಿರ್ವಹಣೆ, ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಅನುದಾನದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬಿಡದಿಯಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಈಗಲೂ ಹೆದ್ದಾರಿ ಬದಿಯಲ್ಲಿಯೇ ಸುರಿದು, ಸುಡಲಾಗುತ್ತಿದೆ. ಕಸದ ವೈಜ್ಞಾನಿಕ ವಿಲೇವಾರಿಗೆ ಅವಶ್ಯವಾದ ಜಾಗವನ್ನು ಈವರೆಗೆ ಜಿಲ್ಲಾಡಳಿತವಾಗಲೀ, ತಾಲ್ಲೂಕು ಆಡಳಿತವಾಗಲೀ ಗುರುತಿಸಿಕೊಟ್ಟಿಲ್ಲ.

ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 60 ಪೌರ ಕಾರ್ಮಿಕರು ಇದ್ದು, ಎಲ್ಲರೂ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಯಂ ಸ್ವಚ್ಛತಾ ಕಾರ್ಮಿಕರ ಸೇವೆಯನ್ನು ಸರ್ಕಾರ ಒದಗಿಸಿಲ್ಲ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಆಗಬೇಕಾದದ್ದು ಏನು? ಪುರಸಭೆಯು ನೀರು ಪೂರೈಕೆಗಾಗಿ ಹೆಚ್ಚಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಿದೆ. ಅದನ್ನು ತಪ್ಪಿಸಿ ಶಾಶ್ವತ ನೀರು ಪೂರೈಕೆ ಯೋಜನೆಗಳಿಗೆ ಸರ್ಕಾರ ಅನುದಾನ ನೀಡಬೇಕಿದೆ. ಮಂಚನಬೆಲೆ ಜಲಾಶಯದಿಂದ ಪಟ್ಟಣಕ್ಕೆ ನೀರು ಪೂರೈಕೆ ಯೋಜನೆಗೆ ಸರ್ವೆ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಅದಕ್ಕೆ ಮನ್ನಣೆ ಸಿಗಬೇಕಿದೆ. ನೆಲ್ಲಿಗುಡ್ಡ ಕೆರೆಯನ್ನು ಸಂರಕ್ಷಿಸಿ ಇಡಬೇಕಿದೆ.

ಬಿಡದಿ ಕೈಗಾರಿಕಾ ಪ್ರದೇಶಕ್ಕೊಂದು ಸ್ಪಷ್ಟ ರೂಪ ಕೊಟ್ಟು ಕೈಗಾರಿಕಾ ಕಾರಿಡಾರ್‌ ನಿರ್ಮಾಣ, ನೆನೆಗುದಿಗೆ ಬಿದ್ದ ಸ್ಮಾರ್ಟ್‌ ಸಿಟಿ ಯೋಜನೆಗೆ ಮರುಜೀವ, ಪ್ರತ್ಯೇಕ ನಗರಾಭಿವೃದ್ಧಿ ಪ್ರಾಧಿಕಾರ ರಚನೆ ಕಾರ್ಯ ಆಗಬೇಕಿದೆ.

ಪುರಸಭೆಗೆ ಅಗತ್ಯ ಅನುದಾನ, ಕಾರ್ಯ ನಿರ್ವಹಿಸಲು ಸಿಬ್ಬಂದಿ ಬೇಕಿದೆ. ಅಂತೆಯೇ ಕಿಷ್ಕಿಂದೆಯಂತಿರುವ ಪುರಸಭೆ ಕಚೇರಿಗೆ ಬದಲಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು ಎನ್ನುತ್ತಾರೆ ಸ್ಥಳೀಯರು.

**

ಹೆಚ್ಚು ಕರ ಸಂಗ್ರಹ

ಬಿಡದಿ ಪಟ್ಟಣ ಕೈಗಾರಿಕಾ ಕೇಂದ್ರೀಕೃತ ವ್ಯವಸ್ಥೆಗೆ ತನ್ನನ್ನು ಹೆಚ್ಚು ಒಗ್ಗಿಸಿಕೊಂಡಿದೆ. ದಿನಕಳೆದಂತೆ ನಿವೇಶನಗಳ ಬೆಲೆ ಗಗನಮುಖಿಯಾಗಿದ್ದು, ಭೂಮಿಗೆ ಬಂಗಾರದ ಬೆಲೆ ಇದೆ. ಹೀಗಾಗಿ ನಿವೇಶನಗಳ ನೋಂದಣಿಯಿಂದಲೇ ಪುರಸಭೆಗೆ ಹೆಚ್ಚಿನ ಆದಾಯ ಬರತೊಡಗಿದೆ. ಇದಲ್ಲದೆ ಹತ್ತಾರು ಕೈಗಾರಿಕೆಗಳಿಂದಲೂ ಉತ್ತಮ ತೆರಿಗೆ ಸಂಗ್ರಹವಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಅವಶ್ಯವಾದ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಯೋಜನೆ ರೂಪಿಸಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

**

ಬಿಡದಿ ಪುರಸಭೆಯಾಗಿ ವರ್ಷ ಕಳೆದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಈಗಾಲಾದರೂ ಸರ್ಕಾರ ಮನಸ್ಸು ಮಾಡಬೇಕಿದೆ
-ರಮೇಶ್‌, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT