ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಮುಕ್ತ ಸಮಾಜಕ್ಕೆ ಸಹಕರಿಸಿ

ಕನಕಪುರದಲ್ಲಿ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌ ಬಾನೋತ್‌ ಮನವಿ
Last Updated 20 ಜುಲೈ 2017, 8:49 IST
ಅಕ್ಷರ ಗಾತ್ರ

ಕನಕಪುರ: ಅಪರಾಧ ಮುಕ್ತ ಸಮಾಜವನ್ನಾಗಿ ಮಾಡಲು ಪೊಲೀಸ್‌ ಇಲಾಖೆಯೊಂದಿಗೆ ಸಾರ್ವಜನಿಕರು ಮುಕ್ತವಾಗಿ ಸಹಕರಿಸಬೇಕೆಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌ ಬಾನೋತ್‌ ಮನವಿ ಮಾಡಿದರು.

ನಗರದ ಎಸ್‌.ಬಿ.ಕಲ್ಯಾಣ ಮಂಟಪದಲ್ಲಿ ಪೊಲೀಸ್‌ ಇಲಾಖೆಯು ಬುಧವಾರ ಆಯೋಜಿಸಿದ್ದ ಬೀಟ್‌ ನಾಗರಿಕರ ಸದಸ್ಯರ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಸಮಾಜದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್‌ ಇಲಾಖೆಯು ಹಂತ ಹಂತವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ, ಗಸ್ತು (ಬೀಟ್‌) ವ್ಯವಸ್ಥೆ ಹೊಸದೇನೂ ಅಲ್ಲ, ಮೊದಲಿಂದಲೂ ಇದೆ, ಅಪರಾಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು 2–3 ಹಳ್ಳಿಗಳಿಗೆ, ವಾರ್ಡುಗಳಿಗೆ ಒಬ್ಬರನ್ನು ಬೀಟ್‌ ಪೊಲೀಸ್‌ ಆಗಿ ನೇಮಕ ಮಾಡಿ ಅವರ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಲಾಗಿದೆ ಎಂದರು.

ಗಸ್ತು ವ್ಯವಸ್ಥೆಯ ಬಗ್ಗೆ ಈಗಾಗಲೆ ತಾಲ್ಲೂಕಿನ ಎಲ್ಲಾ ಬೀಟ್‌ ಸ್ಥಳಗಳಲ್ಲಿ ಸಾರ್ವಜನಿಕ ಸಭೆ ನಡೆಸಿ ಜನತೆಗೆ ಮಾಹಿತಿ ನೀಡಲಾಗಿದೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆಯೊಂದಿಗೆ ಸಮಾಜದಲ್ಲಿ ಸುಧಾರಣೆಗಾಗಿ ನಡೆಸುತ್ತಿರುವ ಈ ಹೊಸ ಗಸ್ತು ವ್ಯವಸ್ಥೆಗೆ ಜನರು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಮಾತನಾಡಿ ಸಮಾಜದಲ್ಲಿ ನಡೆಯುವ ವಿಧ್ವಂಸಕ ಕೃತ್ಯ ಅಪರಾಧಗಳನ್ನು ತಡೆಗಟ್ಟಿ ಸಮಾಜದಲ್ಲಿ ಶಾಂತಿ ಕಾಪಾಡಿ ಜನತೆ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಪೊಲೀಸ್‌ ಇಲಾಖೆಯು ದಕ್ಷತೆಯಿಂದ ಪಾರದರ್ಶಕವಾಗಿ ಕೆಲಸ ಮಾಡಬೇಕಿದೆ, ಅಪರಾಧ ಚಟುವಟಕೆಗಳನ್ನು ಬಗ್ಗುಬಡಿಯಲು ನಿಷ್ಠುರವಾಗಿ ಕಾರ್ಯ ನಿರ್ವಹಿಸಬೇಕಿದೆ. ಇದಕ್ಕೆ ಜನರು  ಸಹಕರಿಸಿ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಹೇಳಿದರು.

ಡಿ.ವೈ.ಎಸ್‌.ಪಿ. ಮಂಜುನಾಥ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ದೇಗೌಡ ಹೊಸ ಬೀಟ್‌ ವ್ಯವಸ್ಥೆ ಮತ್ತು ಕಾನೂನು ಕಾಪಾಡುವಲ್ಲಿ ಸಾರ್ವಜನಿಕರ ಪಾತ್ರ ಕುರಿತು ಮಾತನಾಡಿದರು.

ಬೀಟ್‌ ವ್ಯವಸ್ಥೆಯ ಕುರಿತು ಸಾರ್ವಜನಿಕರ ಪರವಾಗಿ ವಿವಿಧ ಸಂಘಟನೆಯ ಮುಖಂಡರು, ಹಿರಿಯ ನಾಗರೀಕರು, ಮಹಿಳೆಯರು ಮಾತನಾಡಿದರು.

ಕಾನೂನು ಸುವ್ಯವಸ್ಥೆಯಲ್ಲಿ ಪೊಲೀಸರು ಪಾತ್ರ ಮುಖ್ಯವಾಗಿದೆ, ಕಾನೂನು ಪರಿಪಾಲನೆಗೆ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕು, ಕಾನೂನು ಜಾರಿಯಲ್ಲಿ ಎಲ್ಲವೂ ಆಗಿದೆ ಎಂದು ಹೇಳಲಾಗದು, ಬದಲಾದ ವ್ಯವಸ್ಥೆಯಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ, ಅಪರಾಧ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರೊಂದಿಗೆ ಪೊಲೀಸರು ಎಷ್ಟೇ ವಿಶ್ವಾಸದಿಂದ ಇದ್ದರೂ ಅಪರಾಧಕ್ಕೆ ಸಂಬಂಧಪಟ್ಟಂತೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು, ಕಾನೂನು ಪಾಲನೆಯಲ್ಲಿ ಯಾವುದೇ ಮುಲಾಜಿಗೆ ಒಳಗಾಗಬಾರದು ಎಂಬ ಸಲಹೆ ನೀಡಿದರು.

**

ಸಮಾಜವಿರೋಧಿ ಕೃತ್ಯದ ಮಾಹಿತಿ ಕೊಡಿ

‘ಸಾರ್ವಜನಿಕರು ತಮ್ಮ ಸುತ್ತ ನಡೆಯುವ ಅಪರಾಧ ಚಟುವಟಿಕೆ, ಸಮಾಜ ವಿರೋಧಿ ಕೃತ್ಯವನ್ನು ಬೀಟ್‌ ಪೊಲೀಸರ ಗಮನಕ್ಕೆ ತರಬೇಕು’ ಎಂದು ಎಸ್ಪಿ ರಮೇಶ್‌ ಬಾನೋತ್‌ ತಿಳಿಸಿದರು.

‘ಅವರಿಂದಲೂ ಪರಿಹಾರ ಸಿಗದಿದ್ದಾಗ ಲಿಖಿತವಾಗಿ ನಮ್ಮ ಗಮನಕ್ಕೆ ತನ್ನಿ. ಅಪರಾಧವನ್ನು ಸಂಪೂರ್ಣ ತಡೆಗೆ ಇಲಾಖೆಯ ಸನ್ನದ್ಧವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT