ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌.ಡಿ ಇಡಲೂ ₹ 3.25 ಕೋಟಿ ‘ಕಿಕ್‌ಬ್ಯಾಕ್‌’!

ಸಿಐಡಿ ತನಿಖೆಯಿಂದ ಬಹಿರಂಗ, ಮಾಜಿ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್‌ ‘ಸಂಶಯಾಸ್ಪದ ವ್ಯಕ್ತಿ’
Last Updated 20 ಜುಲೈ 2017, 9:23 IST
ಅಕ್ಷರ ಗಾತ್ರ

ವಿಜಯಪುರ: ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ, ನಗರದ ಲಿಂಗದಗುಡಿ ರಸ್ತೆಯ ಐಸಿಐಸಿಐ ಬ್ಯಾಂಕ್‌ ಕ್ಲಸ್ಟರ್‌ ಮ್ಯಾನೇಜರ್‌ ವಿಜಯಸಾರಥಿ ಅವರಿಂದ, ಪಾಲಿಕೆಯ ಆಗಿನ ಮೇಯರ್‌ ‘ಕಿಕ್‌ಬ್ಯಾಕ್‌’ ಪಡೆದಿದ್ದರು ಎಂಬುದು ಸಿಐಡಿ ತನಿಖೆಯಿಂದ ಬಹಿರಂಗಗೊಂಡಿದೆ.

ಬೆಂಗಳೂರಿನ ಸಿಐಡಿ ಘಟಕದ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಮೇಯರ್‌, ಕಾಂಗ್ರೆಸ್‌ನ ಹಾಲಿ ಸದಸ್ಯ ಸಜ್ಜಾದೆ ಪೀರಾ ಮುಶ್ರೀಫ್‌ರನ್ನು ‘ಸಂಶಯಾಸ್ಪದ ವ್ಯಕ್ತಿ’ ಎಂದು ಉಲ್ಲೇಖಿಸಲಾಗಿದೆ.

‘ಬ್ಯಾಂಕಿಂಗ್‌ ವಲಯದಲ್ಲಿ ಎರಡು ವರ್ಷಗಳ ಹಿಂದೆ ತಲ್ಲಣ ಸೃಷ್ಟಿಸಿದ್ದ ಈ ಪ್ರಕರಣದ ಪ್ರಮುಖ ಆರೋಪಿ ವಿಜಯಸಾರಥಿ, 2014–15ರಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಮೇಯರ್‌ ಆಗಿದ್ದ ಸಜ್ಜಾದೆ ಪೀರಾ ಮುಶ್ರೀಫ್‌ರನ್ನು ಭೇಟಿಯಾಗಿ  ತಮ್ಮ ಶಾಖೆಯ ಬ್ಯಾಂಕ್‌ನಲ್ಲಿ ವಹಿವಾಟು ನಡೆಸುವಂತೆ ಆಮಿಷವೊಡ್ಡಿ ಮನವೊಲಿಸಿದ್ದರು.

 ಈ ವೇಳೆ ಆರೋಪಿಯ ಜತೆ ‘ಕಿಕ್‌ಬ್ಯಾಕ್‌’ ಒಪ್ಪಂದ ಮಾಡಿಕೊಂಡಿದ್ದ ಸಜ್ಜಾದೆ, ಪಾಲಿಕೆಯ ವಿವಿಧ ಅನುದಾನದ ಮೊತ್ತ, ಬೇರೆ ಬೇರೆ ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿಯನ್ನು ಅವಧಿಗೂ ಮುನ್ನವೇ ರದ್ದುಗೊಳಿಸಿ, ಐಸಿಐಸಿಐ ಬ್ಯಾಂಕ್‌ನ ಲಿಂಗದಗುಡಿ ರಸ್ತೆಯ ಶಾಖೆಗೆ ವರ್ಗಾಯಿಸಿದ್ದರು. ಆ ಬಳಿಕ ನೀರು ಸರಬರಾಜು ಮಂಡಳಿ ಸಹ ತನ್ನ ವಹಿವಾಟನ್ನು ಇದೇ ಬ್ಯಾಂಕ್‌ನಲ್ಲಿ ನಡೆಸುವಂತೆ ಮುಶ್ರೀಫ್‌ ಸೂಚಿಸಿದ್ದರು.

ಇದಕ್ಕೆ ಪ್ರತಿಯಾಗಿ ಆರೋಪಿ ವಿಜಯಸಾರಥಿ,  2015ರ ಮೇ 15ರಂದು ₹2.50 ಕೋಟಿ, ಜುಲೈ 9ರಂದು ₹50 ಲಕ್ಷ ‘ಕಿಕ್‌ ಬ್ಯಾಕ್’ ಅನ್ನು ಪ್ರಕರಣದ ಎರಡನೇ ಆರೋಪಿ ಸಚಿನ್ ಅಣ್ಣಪ್ಪ ಪಾಟೀಲ ಮೂಲಕ ಮೇಯರ್‌ಗೆ ನೀಡಿದ್ದಾಗಿ ತನಿಖೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ’ ಎಂದು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜಾದೆ ಪೀರಾ ಮುಶ್ರೀಫ್‌ಗೆ ವಿಚಾರಣೆಗೆ ಹಾಜರಾಗುವಂತೆ 2016ರ ಮಾರ್ಚ್‌ನಲ್ಲಿ ಸಿಐಡಿ ಎರಡು ಬಾರಿ ನೋಟಿಸ್‌ ನೀಡಿತ್ತು. ಆದರೂ ಅವರು ತನಿಖೆಗೆ ಹಾಜರಾಗಿರಲಿಲ್ಲ. ಪಾಲಿಕೆಯ ಆಗಿನ ಆಯುಕ್ತ ಎಸ್‌.ಜಿ.ರಾಜಶೇಖರನ್ ವಿಚಾರಣೆಗೆ ಹಾಜರಾಗಿ, ‘ಮುಶ್ರೀಫ್‌ ತಾನು ಚುನಾಯಿತ ಜನಪ್ರತಿನಿಧಿ ಯಾಗಿದ್ದು, ತಾನು ಹೇಳಿದಂತೆಯೇ ಅಧಿಕಾರಿಗಳು ಕೇಳಬೇಕೆಂದು ಹೇಳಿ ಭಯ ಹುಟ್ಟಿಸಿ, ಐಸಿಐಸಿಐ ಬ್ಯಾಂಕ್‌ನಲ್ಲಿ ವ್ಯವಹರಿಸುವಂತೆ ಒತ್ತಾಯಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ವಿಜಯಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿಯನ್ನು ಅವಧಿಗೂ ಮುನ್ನವೇ ತೆಗೆದು, ಐಸಿಐಸಿಐ ಬ್ಯಾಂಕ್‌ನಲ್ಲಿ ಇಡಲು ಜಿಲ್ಲಾಧಿಕಾರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಮೇಯರ್‌ ಪರಿಗಣಿಸಿಲ್ಲ ಎಂದೂ ಸಿಐಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.


‘ಸಜ್ಜಾದೆ ಪೀರಾ ಮುಶ್ರೀಫ್‌, ತಮ್ಮ ಸೋದರನ (ತಮ್ಮ) ಮಗನಾದ ಅತೀಫ್‌ ಮುಶ್ರೀಫ್‌ಗೂ ವಿಜಯಸಾರಥಿಯಿಂದ ₹ 25 ಲಕ್ಷ ನಗದು ಕೊಡಿಸಿದ್ದಾರೆ’ ಎಂಬುದು ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT