ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆಗೆ ಜನಜೀವನ ತತ್ತರ

ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಲವೆಡೆ ರಸ್ತೆ ಸಂಪರ್ಕ ಕಡಿತ
Last Updated 20 ಜುಲೈ 2017, 9:38 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಹಾಗೂ ಗಾಳಿ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ– ಕಾಲೇಜುಗಳಿಗೆ ಗುರುವಾರ (ಜುಲೈ 20) ರಜೆ ಘೋಷಿಸಿದೆ.

ಬುಧವಾರ ಮಧ್ಯಾಹ್ನದ ಬಳಿಕ ಮಡಿಕೇರಿ – ತಲಕಾವೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬ್ರಹ್ಮಗಿರಿ ವ್ಯಾಪ್ತಿಯ ತಲಕಾವೇರಿಯಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಪ್ರವೇಶ ನಿಷೇಧಿಸಲಾಗಿದೆ. ಸತತ ಮಳೆಗೆ ಕಾವೇರಿ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ.

ಕಾವೇರಿ ನದಿಯ ನೀರು ಭಾಗಮಂಡಲ– ಅಯ್ಯಂಗೇರಿ ರಸ್ತೆ ಮೇಲೆ ಹರಿಯುತ್ತಿದ್ದು, ರಸ್ತೆ ದಾಟಲು ಜನರಿಗೆ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಿದ್ದಾಪುರ, ನೆಲ್ಯಹುದಿಕೇರಿ, ಕುಶಾಲನಗರದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ನದಿ ನೀರು ಭತ್ತದ ಗದ್ದೆಗಳಿಗೂ ನುಗ್ಗಿದ್ದು, ನೂರಾರು ಎಕರೆ ಜಲಾವೃತವಾಗಿದೆ. ನದಿ ಪಕ್ಕದ ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದ್ದು, ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಭಾಗಮಂಡಲದಲ್ಲಿ ಕ್ಷಣಕ್ಷಣಕ್ಕೂ ನೀರಿನಮಟ್ಟ ಏರಿಕೆ ಆಗುತ್ತಲೇ ಇದೆ. ಜಿಲ್ಲೆಯ ವಿವಿಧೆಡೆ ಮರಗಳು ಬಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 79.36 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.

ಕಳೆದ ವರ್ಷ ಇದೇ ದಿವಸ 10.51 ಮಿ.ಮೀ. ಮಳೆಯಾಗಿತ್ತು. ಜನವರಿ ಯಿಂದ ಇಲ್ಲಿಯವರೆಗೆ 994.16 ಮಿ.ಮೀ. ಮಳೆಯಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 1,065.27 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿ ನಲ್ಲಿ 118.55, ವಿರಾಜಪೇಟೆ ತಾಲ್ಲೂಕಿ ನಲ್ಲಿ 59.13, ಸೋಮವಾರಪೇಟೆ ತಾಲ್ಲೂಕಿನಲ್ಲಿ 60.4 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ಮಳೆ

ಮಡಿಕೇರಿ ಕಸಬಾ 69.4 ಮಿ.ಮೀ, ನಾಪೋಕ್ಲು 83.6, ಸಂಪಾಜೆ 121, ಭಾಗಮಂಡಲ 200.2, ವಿರಾಜಪೇಟೆ ಕಸಬಾ 28.4, ಹುದಿಕೇರಿ 109, ಶ್ರೀಮಂಗಲ 90.6, ಪೊನ್ನಂಪೇಟೆ 58.3, ಅಮ್ಮತ್ತಿ 20.5, ಬಾಳೆಲೆ 48, ಸೋಮವಾರಪೇಟೆ ಕಸಬಾ 62.6, ಶನಿವಾರಸಂತೆ 37, ಶಾಂತಳ್ಳಿ 170, ಕೊಡ್ಲಿಪೇಟೆ 50.4, ಕುಶಾಲನಗರ 11.4, ಸುಂಟಿಕೊಪ್ಪ 31 ಮಿ.ಮೀ. ಮಳೆಯಾಗಿದೆ.

**

ಕೃಷಿ ಚಟುವಟಿಕೆ ಚುರುಕು

ಶನಿವಾರಸಂತೆ: ಹೋಬಳಿಯಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. 4–5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಸಂತಸಗೊಂಡಿದ್ದು, ಗದ್ದೆ ಉಳುಮೆ ಆರಂಭಿಸಿದ್ದಾರೆ. ಸಸಿಮಡಿ ಕೀಳುವ ಹಾಗೂ ನಾಟಿ ಮಾಡುತ್ತಿರುವ ದೃಶ್ಯವೂ ಕಂಡುಬರುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆರಂಭದಲ್ಲಿ ಮುಂಗಾರು ಮಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಬಳಿಕ ಜುಲೈ 2ನೇ ವಾರದಲ್ಲಿ ಕೈಕೊಟ್ಟು ನಿರಾಸೆ ಮೂಡಿಸಿದ್ದರೂ ಈ ವಾರದ ಮಳೆ ರೈತರಲ್ಲಿ ಹರ್ಷ ತಂದಿದೆ.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಕೂಜಗೇರಿ, ಮಾದ್ರೆ, ಬಿಳಾಹ ಗ್ರಾಮಗಳಲ್ಲಿ ಉಳುವೆ ಭರದಿಂದ ಸಾಗಿದೆ. 6 ತಿಂಗಳ ಬೆಳೆಯಾದ ತುಂಗ ಭತ್ತದ ಸಸಿಮಡಿ ಬೆಳೆದು ನಿಂತಿದೆ.

**

ಮೈದುಂಬಿ ಧುಮ್ಮಿಕ್ಕುವ ಜಲಧಾರೆಗಳು...

ನಾಪೋಕ್ಲು: ಎರಡು ದಿನಗಳಿಂದ ಮಳೆ ಬಿರುಸುಗೊಂಡಿದ್ದು, ನದಿ– ತೊರೆಗಳು ಉಕ್ಕಿ ಹರಿಯುತ್ತಿವೆ. ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿವೆ.

ಬುಧವಾರ ಬೆಳಗ್ಗಿನಿಂದಲೇ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯಿತು. ಗಾಳಿಯೂ ರಭಸವಾಗಿ ಬೀಸುತ್ತಿದ್ದು, ಅಲ್ಲಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಬಾರಿ ಮಳೆಯಾಗಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಬೆಟ್ಟ ಶ್ರೇಣಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಭಾಗಮಂಡಲ ಜಲಾವೃತಗೊಂಡಿದೆ.

ಭಾಗಮಂಡಲ – ನಾಪೋಕ್ಲು ಸಂಪರ್ಕ ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಗ್ರಾಮೀಣ ಭಾಗದ ಗದ್ದೆಗಳು ಜಲಾವೃತವಾಗಿವೆ. ಗಾಳಿ– ಮಳೆಯಿಂದ ಮರಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದ ಪರಿಣಾಮ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದೆ. ನೆಲಜಿ, ಬಲ್ಲಮಾವಟಿ, ಪೇರೂರು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.

ನಾಪೋಕ್ಲು – ಮೂರ್ನಾಡು ರಸ್ತೆಯ ಬೊಳಿಬಾಣೆ ಎಂಬಲ್ಲಿ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಎದುರಾಗಿದೆ. ಭಾಗಮಂಡಲ ಸುತ್ತಮುತ್ತಲ ಶಾಲೆಗಳಿಗೆ ಬುಧವಾರ ಮಧ್ಯಾಹ್ನದಿಂದಲೇ ರಜೆ ಘೋಷಿಸಲಾಯಿತು.

ಅಲ್ಲಲ್ಲಿ ಜಲಪಾತಗಳು ಭೋರ್ಗರೆಯುತ್ತಿವೆ. ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ಜಲಧಾರೆಯೊಂದು ಭೋರ್ಗರೆದು ಧುಮ್ಮಿಕ್ಕುತ್ತಿದ್ದ ರಮಣೀರ ದೃಶ್ಯ ಕಂಡುಬಂದಿತು. ಭಾಗಮಂಡಲ – ಕರಿಕೆ ರಸ್ತೆಯಲ್ಲಿ ಹತ್ತು ಹಲವು ಜಲಪಾತಗಳು ಭೋರ್ಗರೆಯುತ್ತಿವೆ.

**

ಕದನೂರು, ಕಾವೇರಿ ಹೊಳೆ ನೀರಿನ ಮಟ್ಟ ಏರಿಕೆ

ವಿರಾಜಪೇಟೆ: ಎರಡು ದಿನಗಳಿಂದ ವಿರಾಜಪೇಟೆ ವಿಭಾಗದಲ್ಲಿ ಚುರುಕು ಗೊಂಡಿದ್ದ ಮಳೆ ಬುಧವಾರ ರಭಸದಿಂದ ಸುರಿಯಿತು.

ಮಂಗಳವಾರ ರಾತ್ರಿ ಬಿರುಸು ಗೊಂಡ ಮಳೆ ಬುಧವಾರ ಮಧ್ಯಾಹ್ನದ ವರೆಗೆ ಧಾರಾಕಾರವಾಗಿ ಸುರಿಯಿತು. ಬಳಿಕ ಆರ್ಭಟ ಸ್ಪಲ್ಪ ಕಡಿಮೆಯಾಯಿತು. ಮತ್ತೆ ಸಂಜೆ ವೇಳೆಗೆ ಉತ್ತಮವಾಗಿ ಸುರಿ ಯತೊಡಗಿತು. ಪಟ್ಟಣದಲ್ಲಿ ಆರ್ಭಟ ಜೋರಾಗಿದ್ದರಿಂದ ಸಂತೆ ದಿನವಾದ ಬುಧವಾರ ಗ್ರಾಮೀಣ ಪ್ರದೇಶದಿಂದ ಬಂದಿದ್ದವರು ಪರದಾಡುವಂತಾಯಿತು.

ಸಮೀಪದ ಹೆಗ್ಗಳ, ಆರ್ಜಿ, ಬೇಟೋಳಿ, ತೋರ, ಕೆದಮುಳ್ಳೂರು, ಬಿಟ್ಟಂಗಾಲ, ಕದನೂರು, ದೇವಣಗೇರಿ, ಕಾವಡಿ, ಅಮತ್ತಿ ಇತರೆ ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದೆ.

ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳ ಕೆಲವು ಗದ್ದೆಗಳು ಜಲಾವೃತಗೊಂಡಿವೆ. ಕದನೂರು ಹೊಳೆ ಹಾಗೂ ಭೇತ್ರಿಯ ಕಾವೇರಿ ಹೊಳೆಯ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣ ದಲ್ಲಿ ಏರಿಕೆ ಉಂಟಾಗಿದೆ.

ಉತ್ತಮ ಮಳೆಯಿಂದ ಸಂತಸಗೊಂಡಿರುವ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

**

ಹಲವು ಮನೆಗಳಿಗೆ ಹಾನಿ

ಸೋಮವಾರಪೇಟೆ: ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ಭಾರಿ ಗಾಳಿ, ಮಳೆಯಾಗುತ್ತಿದ್ದು, ಹಲವೆಡೆ ರಸ್ತೆಯ ಮೇಲೆ ನೀರು ಹರಿಯುತ್ತಿರುವುದು ಕಂಡುಬಂದಿದೆ.

ಪುಷ್ಪಗಿರಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿದೆ. ಕಳೆದ ಒಂದು ದಿನದಲ್ಲಿ ಸುಮಾರು 20 ಇಂಚು ಮಳೆಯಾಗಿದ್ದು, ಈ ಭಾಗದ ಹೊಳೆ, ತೊರೆಗಳು ತುಂಬಿ ಹರಿಯುತ್ತಿವೆ. ಗದ್ದೆ ಹಾಗೂ ರಸ್ತೆಯ ಮೇಲೆ ನೀರು ನಿಂತಿರುವುದರಿಂದ ಜನರು ಪರದಾಡುತ್ತಿದ್ದಾರೆ.

ಇದರೊಂದಿಗೆ ಸೋಮವಾರಪೇಟೆ ಪಟ್ಟಣ ಹಾಗೂ ಕೊಡ್ಲಿಪೇಟೆ ಹೋಬಳಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕೆಲವೆಡೆ ರಸ್ತೆಗೆ ಮರಗಳು ಉರುಳಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಅನೇಕ ಕಡೆ ವಿದ್ಯುತ್‌ ತಂತಿ ಮೇಲೆ ಮರ ಬಿದ್ದು, ವಿದ್ಯುತ್‌ ಕೈ ಕೊಟ್ಟಿದೆ. ಮಳೆ ಹೆಚ್ಚಾದ ಪರಿಣಾಮ ಗುರುವಾರ ತಾಲ್ಲೂಕಿನ ಶಾಲೆಗಳಿಗೆ ರಜೆ ಘೊಷಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 170 ಮಿ.ಮೀ ಮಳೆಯಾಗಿದೆ. ಸೋಮವಾರಪೇಟೆ 62.6, ಕೊಡ್ಲಿಪೇಟೆ 50.4, ಶನಿವಾರಸಂತೆ 37, ಸುಂಟಿಕೊಪ್ಪ 21 ಹಾಗೂ ಕುಶಾಲನಗರದಲ್ಲಿ 11.4 ಮಿ.ಮೀ ಮಳೆ ಆಗಿರುವ ವರದಿಯಾಗಿದೆ.

ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಮಂಗಳವಾರದಿಂದಲೇ ಬೀಳುತ್ತಿರುವ ಮಳೆ ಬುಧವಾರ ಬಿರುಸುಗೊಂಡಿದ್ದು, ಗಾಳಿ ಮಳೆಗೆ ತಡೆಗೋಡೆ ಹಾಗೂ ಹಲಸಿನ ಮರ ಬಿದ್ದ ಪರಿಣಾಮ ವಾಸದ ಮನೆಗಳು ಜಖಂಗೊಂಡಿವೆ.

ಗರಗಂದೂರು ಗ್ರಾಮದ ಅಪ್ಸತ್ ಎಂಬುವವರ ವಾಸದ ಮನೆ ಮೇಲೆ ಪಕ್ಕದಲ್ಲೇ ನಿರ್ಮಿಸಿದ್ದ ಬೃಹತ್ ತಡೆಗೋಡೆ ಕುಸಿದಿದೆ. ಮೂರು ಕೊಠಡಿಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಘಟನೆ ಸಂದರ್ಭ ಮನೆಯೊಳಗೆ ಯಾರೂ ಇಲ್ಲದ್ದರಿಂದ ಯಾವುದೇ ಅನಾಹುತವಾಗಿಲ್ಲ.

ಸ್ಥಳಕ್ಕೆ ಗ್ರಾಮಲೆಕ್ಕಿಗ ನಾಗೇಶ್‌ರಾವ್, ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತ್ತೊಂದೆಡೆ, ಶಾಂತಳ್ಳಿ ಹೋಬಳಿಯ ಬಸವನಕಟ್ಟೆ ಗ್ರಾಮದಲ್ಲಿ ಬುಧವಾರ ಹಲಸಿನ ಮರ ಬಿದ್ದು ಪುಟ್ಟಸ್ವಾಮಿ ಅವರ ಮನೆ ಹಾನಿಯಾಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಮರ ಬಿದ್ದ ಸಂದರ್ಭ ಮನೆ ಮಂದಿ ಹೊರಭಾಗದಲ್ಲಿ ಇದ್ದುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗ್ರಾಮಲೆಕ್ಕಿಗ ನಾಗೇಂದ್ರ, ಗ್ರಾಮ ಸಹಾಯಕ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

**

ಬಲಮುರಿ ಕಿರುಸೇತುವೆ ಮುಳುಗಡೆ

ನಾಪೋಕ್ಲು: ಮೂರ್ನಾಡು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತ ಗೊಂಡಿದೆ.

2 ದಿನಗಳಿಂದ ಹಗಲು– ರಾತ್ರಿ ಮಳೆ ಸುರಿಯುತ್ತಿದ್ದು, ಮೂರ್ನಾಡು ಸಮೀಪದ ಬಲಮುರಿಯಲ್ಲಿ ಕಾವೇರಿ ನದಿ ಹರಿವು ಹೆಚ್ಚಿದೆ. ಕಿರುಸೇತುವೆ ಕೂಡ ಮುಳುಗಡೆಯಾಗಿದೆ. ಕಿರು ಸೇತುವೆ ಮೇಲ್ಭಾಗದಲ್ಲಿ ಸುಮಾರು 6 ಅಡಿಯಷ್ಟು ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ.

ಬೇತ್ರಿ ಕಾವೇರಿ ಹೊಳೆ ಹಾಗೂ ಮುತ್ತಾರುಮುಡಿ ಕಿರುಹೊಳೆಯ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಕೋಡಂಬೂರು ಸಮೀಪ ಹೊಳೆ ತೋಡುವಿನಲ್ಲಿ ನೀರಿನ ಮಟ್ಟ ಏರಿಕೆ ಯಾಗಿದ್ದು, ಮೂರ್ನಾಡು– ಬಲಮುರಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ಎರಡು ದಿನಗಳಿಂದ ಮಳೆ ಸ್ವಲ್ಪ ಬಿಡುವು ನೀಡುತ್ತಾ ಮತ್ತೆ ರಭಸವಾಗಿ ಸುರಿಯುತ್ತಿದೆ. ವಿದ್ಯಾರ್ಥಿಗಳು ಛತ್ರಿ ಸಹಾಯದಿಂದ ಮಳೆಯಲ್ಲಿ ಶಾಲಾ– ಕಾಲೇಜಿಗೆ ತೆರಳುವಂತಾಗಿದೆ.

**

ಮುಂದುವರಿದ ಪುನರ್ವಸು ಮಳೆ ಆರ್ಭಟ; ಹಾನಿ

ಸಿದ್ದಾಪುರ: ಸುತ್ತಮುತ್ತಲ ವ್ಯಾಪ್ತಿಯಲ್ಲಿ ಪುನರ್ವಸು ಮಳೆ ಆರ್ಭಟ ಬುಧವಾರವೂ ಮುಂದುವರಿದಿದ್ದು, ನದಿ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಸಿದ್ದಾಪುರ ವ್ಯಾಪ್ತಿಯಲ್ಲಿ ಮಂಗಳವಾರ 1.90 ಇಂಚು ಮಳೆ ಪ್ರಮಾಣ ದಾಖಲಾಗಿದ್ದು, ಜನವರಿ ತಿಂಗಳಿನಿಂದ ಜುಲೈ19ರವರೆಗೆ ಒಟ್ಟು 29 ಇಂಚು ಮಳೆ ಆಗಿದೆ. ಕರಡಿಗೋಡು ವ್ಯಾಪ್ತಿಯ ಚಿಕ್ಕನಹಳ್ಳಿ, ನೆಲ್ಯಹುದಿಕೇರಿ ಸಮೀಪದ ಬೆಟ್ಟದಕಾಡು, ಕೂಡುಗದ್ದೆ ಹಾಗೂ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಗೇರಿ ಗ್ರಾಮ ನದಿ ತೀರದ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ಪ್ರವಾಹದ ಭೀತಿ ಎದುರಿಸುವಂತಾಗಿದೆ. ಈ ವ್ಯಾಪ್ತಿಯ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಪ್ರಸ್ತುತ ವರ್ಷ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಕಂದಾಯ ಇಲಾಖೆ ಅಗತ್ಯ ಕ್ರಮಗಳಿಗೆ ಮುಂದಾಗಿದೆ. ಅಗತ್ಯತೆ ಕಂಡುಬಂದರೆ ಕರಡಿಗೋಡು ಗ್ರಾಮದಲ್ಲಿ ಗಂಜಿಕೇಂದ್ರ ತೆರೆಯಲಾಗುವುದು ಎಂದು ಕಂದಾಯ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

**

* ಜಿಲ್ಲೆಯಲ್ಲಿ ಇಂದು ಶಾಲಾ– ಕಾಲೇಜಿಗೆ ರಜೆ

* ಹಲವೆಡೆ ವಿದ್ಯುತ್ ಕಂಬಗಳ ಮೇಲೆ ಬಿದ್ದ ಮರ

* ಕತ್ತಲಲ್ಲಿ ಮುಳುಗಿದ ಹಲವು ಗ್ರಾಮಗಳು 

* ಸರಾಸರಿ 79.36 ಮಿ.ಮೀ. ಮಳೆ ಪ್ರಮಾಣ ದಾಖಲು

* ಜಲಪಾತ, ಝರಿಗಳಿಗೆ ಮತ್ತೆ ಜೀವಕಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT