ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಇ-– ಹರಾಜಿಗೆ ಅವಕಾಶ ನೀಡಿ

ಎಸ್‌.ಎಂ.ಕೃಷ್ಣ ಬಡಾವಣೆ ಮೂಲೆ ನಿವೇಶನ ಹಂಚಿಕೆ; ಶಾಸಕ ಎಚ್‌.ಎಸ್‌.ಪ್ರಕಾಶ್‌ ಆಗ್ರಹ
Last Updated 20 ಜುಲೈ 2017, 10:09 IST
ಅಕ್ಷರ ಗಾತ್ರ

ಹಾಸನ: ನಗರದ ಎಸ್.ಎಂ.ಕೃಷ್ಣ  ಬಡಾವಣೆಯ ಮೂಲೆ (ಕಾರ್ನರ್) ನಿವೇಶನ ಹಂಚಿಕೆ ಸಂಬಂಧ ಆನ್‌ಲೈನ್ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಶಾಸಕ ಎಚ್‌.ಎಸ್‌.ಪ್ರಕಾಶ್‌ ಆಗ್ರಹಿಸಿದರು.

ಒಂದೇ ಬಾರಿಗೆ 200–300 ನಿವೇಶನ ಹಂಚಿಕೆ ಮಾಡಲು ಮುಂದಾದ ಕಾರಣ ಆನ್‌ಲೈನ್ ಸರ್ವರ್ ಸಮಸ್ಯೆಯಿಂದಾಗಿ ಒಂದು ತಾಸು ಮುಂಚಿತವಾಗಿಯೇ ಬಿಡ್ಡಿಂಗ್‌ ಅಂತ್ಯಗೊಂಡಿದೆ. ಹೀಗಾಗಿ ಬಿಡ್ ನಡೆಸಲು ಸಾಕಷ್ಟು ಮಂದಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಾರ್ವಜನಿಕರು ದೂರು ನೀಡಿದ್ದಾರೆ. ಪ್ರಾಧಿಕಾರದಿಂ ತಪ್ಪು ಆಗಿರುವ ಕಾರಣ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಬೇಕು. ಈ ವಿಷಯವನ್ನು  ಹುಡಾ ಆಯುಕ್ತರು ಹಾಗೂ ನಗರಾಭಿವೃದ್ಧಿ ಸಚಿವರ ಗಮನಕ್ಕೂ ತರಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರಸಭೆ ಆಡಳಿತದಲ್ಲಿ ಸಚಿವ ಎ. ಮಂಜು ಹಸ್ತಕ್ಷೇಪ ಮಾಡುವ ಮೂಲಕ ಅನುದಾನವನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ನಗರೋತ್ಥಾನ ಅನುದಾನವನ್ನು  35 ವಾರ್ಡ್‌ಗಳ ಅಭಿವೃದ್ಧಿಗೆ ಬಳಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡು ಕೆಲ ರಸ್ತೆಗಳ ಅಭಿವೃದ್ಧಿಗೆ ಬಳಸಲು ಹೊರಟಿದ್ದಾರೆ.  ಮುಂದಿನ ಚುನಾವಣೆಯಲ್ಲಿ ಜನರು ಪಾಠ ಕಲಿಸಲಿದ್ದಾರೆ ಎಂದು  ಎಚ್ಚರಿಸಿದರು.

ಕೇವಲ ಮೂರು ರಸ್ತೆಗೆ  ಅನುದಾನ ನಿಯೋಜಿಸದಂತೆ ನಗರಸಭೆ ಕೈಗೊಂಡ ನಿರ್ಣಯವನ್ನು   ಸಚಿವರು ತಿರಸ್ಕರಿಸಿ ದ್ದಾರೆ.  ನಗರಸಭೆಯಲ್ಲಿ ಜೆಡಿಎಸ್ ಆಡಳಿತ ನಡೆಸುತ್ತಿದೆ ಎಂಬ ಕಾರಣಕ್ಕೆ   35  ವಾರ್ಡ್‌ಗಳನ್ನು ಕಡೆಗಣಿಸಿ ಕೇವಲ ಮೂರು ರಸ್ತೆಗಳಿಗೆ ಅನುದಾನ ನೀಡಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಅವರು ಸಚಿವರಿಗೆ  ರೇಷ್ಮೆ ಮತ್ತು ಪಶು ಸಂಗೋಪನಾ ಖಾತೆ ಖಾತೆ ನೀಡಿದ್ದಾರೆ. ಹೀಗಾಗಿ ಅವರು ಒತ್ತಡದಲ್ಲಿ ಕೆಲಸ ಮಾಡಬೇಕಾಗಿದ್ದು, ಇತರೆ ಕೆಲಸದ ಗಮನ ಹರಿಸಲು ಸಮಯವಿಲ್ಲ ಎಂದು ವ್ಯಂಗ್ಯವಾಡಿದರು.

ಉದ್ದೂರು ರಿಂಗ್ ರಸ್ತೆ ಸಂಬಂಧ ವಿಧಾನ ಸಭಾ ಅರ್ಜಿ ಸಮಿತಿಯು ಬಂದು ವೀಕ್ಷಣೆ ಮಾಡಿ ತಿಂಗಳೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಕೆಲ ರೈತರು ದಾಖಲೆಗಳನ್ನು ನೀಡಿದ್ದಾರೆ.  ಉಪವಿಭಾಗಾಧಿಕಾರಿ ದಾಖಲೆ ಪರಿಶೀಲಿಸಿದ ಬಳಿಕ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಗುವುದು ಎಂದರು.

ಮಳೆ ಕೊರತೆಯಿಂದ ಹೇಮಾವತಿ ಹಾಗೂ ಯಗಚಿ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿದೆ.  ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿಗೆ ತೊಂದರೆಯಾಗದಂತೆ ಈಗಿನಿಂದಲೇ ಕ್ರಮಕೈಗೊಳ್ಳಬೇಕು. ರೈತರಿಗೆ ಮೇವಿನ ಬೀಜಗಳನ್ನು ವಿತರಿಸಬೇಕು. ಕುಡಿಯುವ ನೀರು ಸಂಬಂಧ ಕೊಳವೆ ಬಾವಿ ಕೊರೆಯುವುದಕ್ಕೆ ಇರುವ ನಿಯಮ ಸಡಿಲಗೊಳಿಸಬೇಕು. ಬೆಳೆ ನಷ್ಟಕ್ಕೆ  ರೈತರಿಗೆ ಪರಿಹಾರ ಕೊಡಿಸುವ ಶೀಘ್ರವೇ ಆಗಬೇಕು ಎಂದು ಪ್ರಕಾಶ್‌ ಒತ್ತಾಯಿಸಿದರು.

**

ನಗರದಲ್ಲಿದ್ದ ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್‌ ಅನ್ನು  ಅರಕಲಗೂಡಿಗೆ ಸ್ಥಳಾಂತರಿಸಿರುವುದೇ ಸಚಿವ ಮಂಜು ಅವರ ದೊಡ್ಡ ಸಾಧನೆ
–ಎಚ್‌.ಎಸ್‌.ಪ್ರಕಾಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT