ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದ ಸಚಿವರ ಕುರ್ಚಿಯಲ್ಲಿ ಕುಳಿತು ಫೋಟೊ ತೆಗೆಸಿಕೊಂಡಿದ್ದ ವ್ಯಕ್ತಿಯ ಬಂಧನ

ಕಂಬಿ ಹಿಂದೆ ದೂಡಿದ ಕುರ್ಚಿ ಮೋಹ!
Last Updated 20 ಜುಲೈ 2017, 10:38 IST
ಅಕ್ಷರ ಗಾತ್ರ

ಲಖನೌ: ಕುರ್ಚಿಯ ಆಸೆ ಯಾರಿಗಿರುವುದಿಲ್ಲ ಹೇಳಿ?! ಅದರಲ್ಲೂ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಕುರ್ಚಿಯ ಮೋಹವಂತೂ ರಾಜಕಾರಣಿಗಳಿಗೆ ಇದ್ದಿದ್ದೇ. ಈ ಕುರ್ಚಿಮೋಹ ಕೇವಲ ರಾಜಕಾರಣಿಗಳಿಗಷ್ಟೇ ಅಲ್ಲ, ಜನಸಾಮಾನ್ಯರಲ್ಲೂ ಇರುವಂಥದ್ದೇ. ಅವಕಾಶ ಸಿಕ್ಕಾಗ ಈ ಕುರ್ಚಿ ಮೇಲೆ ಕುಳಿತುಕೊಳ್ಳಬೇಕೆಂಬ ಬಯಕೆ ಹಲವರದ್ದು. ಆದರೆ, ಹೀಗೆ ಕುರ್ಚಿ ಮೇಲೆ ಒಂದು ನಿಮಿಷ ಕುಳಿತು, ಫೋಟೊ ಕ್ಲಿಕ್ಕಿಸಿಕೊಂಡ ವ್ಯಕ್ತಿ ಈಗ ಉತ್ತರ ಪ್ರದೇಶ ಪೊಲೀಸರ ಅತಿಥಿಯಾಗಿದ್ದಾರೆ!

ಬಾರಾಬಂಕಿಯ ಅಜಯ್‌ ತಿವಾರಿ ಎಂಬುವರು ತಮ್ಮ ಸ್ನೇಹಿತರೊಂದಿಗೆ ಉತ್ತರ ಪ್ರದೇಶದ ಶಿಕ್ಷಣ ಸಚಿವ ಸಂದೀಪ್‌ ಸಿಂಗ್‌ ಅವರ ಭೇಟಿಗೆ ಹೋಗಿದ್ದರು. ಈ ವೇಳೆ ಕೊಠಡಿಯಲ್ಲಿ ಸಚಿವರು ಇರಲಿಲ್ಲ. ಇದೇ ಸರಿಯಾದ ಸಮಯ ಎಂದುಕೊಂಡ ಅಜಯ್‌ ತಿವಾರಿ ಸಚಿವರ ಕುರ್ಚಿಯ ಮೇಲೆ ಕುಳಿತುಕೊಂಡಿದ್ದಾರೆ. ಕುಳಿತಿದ್ದಷ್ಟೇ ಅಲ್ಲ, ಕುಳಿತಿದ್ದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೊ ಕೂಡಾ ಕ್ಲಿಕ್ಕಿಸಿಕೊಂಡಿದ್ದಾರೆ.

ಫೋಟೊ ಕ್ಲಿಕ್ಕಿಸಿಕೊಂಡ ಮೇಲೆ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಆಗದಿದ್ದರೆ ಹೇಗೆ?! ಅಜಯ್‌ ಕೇವಲ ಈ ಫೋಟೊ ಹಾಕಿ ಸುಮ್ಮನಾಗಿದ್ದರೆ ಏನೂ ಆಗುತ್ತಿರಲಿಲ್ಲವೇನೋ. ಆದರೆ, ಅವರು ಈ ಫೋಟೊ ಜತೆಗೆ ಕುರ್ಚಿಯ ಪ್ರವರವನ್ನೂ ಸೇರಿಸಿದ್ದಾರೆ. ‘ರಾಜ್ಯದ ಶಿಕ್ಷಣ ಸಚಿವರ ಕುರ್ಚಿಯ ಮೇಲೆ ಕುಳಿತಿರುವ ನಾನೆಂಥ ಪ್ರಭಾವಿ’ ಎಂದು ಫೇಸ್‌ಬುಕ್‌ನಲ್ಲಿ ಬಡಾಯಿ ಕೊಚ್ಚಿಕೊಂಡು ಹಾಕಿದ ಈ ಫೋಟೊಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವರು ಈ ವಿಷಯನ್ನು ಸಚಿವ ಸಂದೀಪ್‌ ಸಿಂಗ್ ಅವರ ಗಮನಕ್ಕೂ ತಂದಿದ್ದರು. ಸಚಿವರ ಆಪ್ತ ಕಾರ್ಯದರ್ಶಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಅಜಯ್‌ ತಿವಾರಿ ಫೇಸ್‌ಬುಕ್‌ ಖಾತೆ ಪರಿಶೀಲಿಸಿದಾಗ ನಿಜಾಂಶ ಬಯಲಾಗಿದೆ. ಮುಂದೆ ಇನ್ನೇನು, ಶಿಕ್ಷಣ ಸಚಿವರ ಕುರ್ಚಿಯ ಮೇಲೆ ಕುಳಿತ ಆರೋಪದ ಮೇಲೆ ಸೈಬರ್‌ ವಿಭಾಗದ ಪೊಲೀಸರು ಅಜಯ್‌ ಅವರನ್ನು ಬಂಧಿಸಿ ಹುಸೇನ್‌ಗಂಜ್‌ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT