ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆ: ಜಲಾಶಯಗಳ ಒಳಹರಿವು ಹೆಚ್ಚಳ

Last Updated 20 ಜುಲೈ 2017, 11:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಗುರುವಾರವೂ ಉತ್ತಮ ಮಳೆಯಾಗಿದೆ. ಕೆರೆ, ನದಿಗಳು ತುಂಬಿದ್ದು ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ.

ತುಂಗಭದ್ರಾ ಜಲಾಶಯದ ಒಳಹರಿವು ಬುಧವಾರದಿಂದ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ಒಂದು ಟಿ.ಎಂ.ಸಿ. ಅಡಿಗಿಂತಲೂ ಹೆಚ್ಚು ನೀರು ಹರಿದು ಬಂದಿದೆ.

ಶೃಂಗೇರಿಯಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ನೀರು ರಸ್ತೆವರೆಗೆ ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.  ಮಳೆ ಆರ್ಭಟ ಹೆಚ್ಚಿದ ಕಾರಣ ಮಲೆನಾಡು ಭಾಗದ  ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿಲಾಗಿದೆ.

(ತುಂಗಾ ನದಿ)

ಮಹಾರಾಷ್ಟ್ರದ ಪಶ್ಚಿಮ ಘಟ್ಟ, ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ವರ್ಷಧಾರೆ ಮುಂದುವರೆದಿದ್ದು, ಆಲಮಟ್ಟಿಯ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಸಾಗರ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ಜಲಾಶಯಗಳ ಕೆಳಭಾಗದ ಜಲಾನಯನ ಪ್ರದೇಶದ ಮಳೆ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ’ ಎಂದು ಕೆಬಿಜೆಎನ್‌ಎಲ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ಗುರುವಾರ ಜಲಾಶಯದ ಮಟ್ಟ 514.30 ಮೀ ನಷ್ಟಿದ್ದು, ಈ ಅವಧಿಯಲ್ಲಿ ಜಲಾಶಯದ ಮಟ್ಟ 10.64 ಮೀ ಎತ್ತರಕ್ಕೇರಿದೆ.  ಪ್ರಸ್ತುತ 57.065 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.

ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಬುಧವಾರ ಆಲಮಟ್ಟಿಯಿಂದ ನೀರು ಬಿಟ್ಟಿದ್ದು, 10 ಸಾವಿರ ಕ್ಯುಸೆಕ್ ಒಳಹರಿವು ಹೆಚ್ಚಿದೆ. 11,500 ಕ್ಯುಸೆಕ್ ನೀರು 24 ಗಂಟೆ ಹರಿದರೆ ಒಂದು ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಲಿದೆ ಎಂದು ನಾರಾಯಣಪುರ ಕೆಬಿಜೆಎನ್ಎಲ್ ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್ ಹಳ್ಳೂರು ತಿಳಿಸಿದ್ದಾರೆ.

(ನಾರಾಯಣಪುರ ಜಲಾಶಯ)

ಶಿರಸಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಕಳೆದ 24 ತಾಸುಗಳಲ್ಲಿ 135 ಮಿ.ಮೀ ಮಳೆ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಗೋಕಾಕ ನಗರದ ಹೊರವಲಯದ ಸಿಂಗಳಾಪೂರ ಸೇತುವೆ ಮುಳುಗಿದೆ. ಇದರಿಂದ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಚಿಕ್ಕಮಗಳೂರು, ಬೆಳಗಾವಿ, ಹೊಸಪೇಟೆ ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ.

(ಘಟಪ್ರಭಾ ನದಿ)

ಮಳೆಯ ಪರಿಣಾಮ:
ವಿರಾಜಪೇಟೆ ಸಮೀಪದ ಪೆರುಂಬಾಡಿ ಚೆಕ್ ಪೋಸ್ಟ್ ಬಳಿ ರಸ್ತೆ ಕುಸಿದಿದ್ದು ಕೇರಳ ಮಾರ್ಗ ಬಂದ್ ಆಗಿದೆ.

ಕುಮಟಾ ತಾಲ್ಲೂಕಿನ ದೀವಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದೆ. ಹೆದ್ದಾರಿ ವಿಸ್ತರಣೆಗಾಗಿ ಗುಡ್ಡ ಕೊರೆಯಲಾಗಿತ್ತು.

(ಪೆರುಂಬಾಡಿ ಚೆಕ್ ಪೋಸ್ಟ್)

(ರಾಷ್ಟ್ರೀಯ ಹೆದ್ದಾರಿ 66)

ಸಾವು–ನೋವು:
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಗ್ರಾಮದ ಆನಂದು ವಿಷ್ಣು ನಾಯ್ಕ (50) ಕಾಲು ಜಾರಿ ಹಳ್ಳದಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ತೆರೆದ ಚರಂಡಿಯಲ್ಲಿ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟ ಘಟನೆ ಕಾರವಾರದ ಹಳೆ ಮೀನುಮಾರುಕಟ್ಟೆ ಎದರುಗಡೆ ನಡೆದಿದೆ. ಈ ವ್ಯಕ್ತಿ ನಗರದ ಚಪ್ಪಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತ ನಿನ್ನೆ ರಾತ್ರಿಯೇ ಚರಂಡಿಯಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT