ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಅನಾನಸ್ ಮೋಡಿ

ಮಾವು, ಹಲಸು ಬಳಿಕ ಮಾರುಕಟ್ಟೆಗೆ ಬಂದ ಅನಾನಸ್; ಕನಿಷ್ಠ ₹ 30ರಿಂದ ಬಿಕರಿ
Last Updated 20 ಜುಲೈ 2017, 11:08 IST
ಅಕ್ಷರ ಗಾತ್ರ

ಅಕ್ಕಿಆಲೂರ: ಹಣ್ಣುಗಳ ರಾಜ ಮಾವು, ಸ್ವಾದಿಷ್ಟ ಹಲಸು, ಬಾಯಿ ಚಪ್ಪರಿಸುವ ನೇರಳೆ ಬಳಿಕ ಇದೀಗ ಒಳ್ಳೆಯ ರುಚಿವತ್ತಾದ ಅನಾನಸ್ ಹಣ್ಣು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಣ್ಣು ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿದೆ.

ಮಾರುಕಟ್ಟೆ ತುಂಬೆಲ್ಲ ಅನಾನಸ್ ಹಣ್ಣಿನ ಪರಿಮಳ ಜೋರಾಗಿದೆ, ಇದರ ಸಿಹಿಹುಳಿ ಮಿಶ್ರಿತ ರುಚಿಗೆ ಹಣ್ಣು ಪ್ರಿಯರು ಮಾರು ಹೋಗಿದ್ದಾರೆ. ಅನಾನಸ್ ಹಣ್ಣಿನ ಆಹ್ಲಾದಕರ ಸುವಾಸನೆ ಮೂಗಿಗೆ ಬೀಳುತ್ತಿದ್ದು, ವಾಸನೆ ಬೆನ್ನಟ್ಟಿ ಅದರ ಬಳಿ ತೆರಳುತ್ತಿರುವ ಮಕ್ಕಳು ಅನಾನಸ್ ಹಣ್ಣು ಕೊಡಿಸುವವರೆಗೆ ಪೋಷಕರನ್ನು ಬಿಡುತ್ತಿಲ್ಲ.

ಮಾವು, ಹಲಸು ಹಾಗೂ ನೇರಳೆ ಹಣ್ಣುಗಳ ಕಾಲ ಮುಗಿದ ಬೆನ್ನಲ್ಲೇ. ಅನಾನಸ್ ಜನರನ್ನು ಮೊಡಿ ಮಾಡುತ್ತಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಅನಾನಸ್ ಹಣ್ಣಿನ ಖರೀದಿ ಭರಾಟೆ ಜೋರಾಗಿದೆ. ಬೆಲೆ ಏರಿಕೆ ಬಿಸಿಯ ನಡುವೆಯೂ ಹಣ್ಣಿನ ಮಾರಾಟ ಹೆಚ್ಚಾಗಿದೆ.

ಅರೆಮಲೆನಾಡು ಪ್ರದೇಶದ ಹಾನಗಲ್ಲ ತಾಲ್ಲೂಕಿನ ಗಡಿ ಅಂಚಿಗೆ ಹೊಂದಿಕೊಂಡಿರುವ ಶಿರಸಿ ಮತ್ತು ಬನವಾಸಿ ಭಾಗದಲ್ಲಿ ಹೇರಳವಾಗಿ ಅನಾನಸ್ ಬೆಳೆಯಲಾಗುತ್ತಿದೆ. ಅನಾನಸ್ ಹಣ್ಣಿನ ಪ್ರದೇಶ ಹಾನಗಲ್ಲ ತಾಲ್ಲೂಕಿನಿಂದ ಕೇವಲ 25–30 ಕಿ.ಮೀ. ಅಂತರದಲ್ಲಿದೆ. ಹಾಗಾಗಿ, ಈ ಭಾಗದ ಮಾರುಕಟ್ಟೆಗೆ ಬೇಗ ಲಗ್ಗೆ ಇಡುತ್ತದೆ.

ಶಿರಸಿ ತಾಲ್ಲೂಕಿನಾದ್ಯಂತ ಅನಾನಸ್ ಹಣ್ಣಿನ ಸಾಗುವಳಿ ಮಾಡುವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಹೀಗಾಗಿ ಹಾನಗಲ್ಲ ತಾಲ್ಲೂಕಿನ ಜನತೆಗೆ ಅನಾನಸ್ ಹಣ್ಣು ಚಪ್ಪರಿಸುವ ಸುಯೋಗ ಕೂಡಿಬಂದಿದೆ. ಹಾನಗಲ್ಲ, ಅಕ್ಕಿಆಲೂರ, ತಿಳವಳ್ಳಿ ಸೇರಿದಂತೆ ಈ ಭಾಗದ ಮಾರುಕಟ್ಟೆಯಲ್ಲಿ ತಾಜಾ ತಾಜಾ ಹಣ್ಣು ಸವಿಯುವ ಅವಕಾಶ ಒದಗಿ ಬಂದಿದೆ.

ಪ್ರತಿ ವರ್ಷ ಮೇ ಅಂತ್ಯದಲ್ಲಿ ಕೊಯ್ಲಿಗೆ ಲಭಿಸುವ ಅನಾನಸ್ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಆರಂಭದಲ್ಲಿ ಬೆಲೆ ದುಬಾರಿಯಾದರೂ, ಕ್ರಮೇಣ ಇಳಿಮುಖವಾಗುತ್ತದೆ. ಆದರೆ ಈ ಬಾರಿ ಮಾತ್ರ ಬೆಲೆ ಏರುಮುಖವಾಗಿಯೇ ಇದೆ. ಮಾರುಕಟ್ಟೆಯಲ್ಲಿ ದೊಡ್ಡ ಮತ್ತು ಚಿಕ್ಕ ಗಾತ್ರದ ಅನಾನಸ್ ಮಾರಾಟಕ್ಕೆ ಲಭ್ಯವಿದೆ.

ಅಲ್ಲಲ್ಲಿ ಜನಸಂದಣಿ ಪ್ರದೇಶದಲ್ಲಿ ಕತ್ತರಿಸಿದ ತುಂಡುಗಳು ಸಹ ಬಿಡಿಬಿಡಿಯಾಗಿ ಮಾರಾಟಕ್ಕೆ ಲಭ್ಯವಿರುತ್ತವೆ. ಹಣ್ಣಿನ ತುಂಡುಗಳ ಮೇಲೆ ಒಂದಿಷ್ಟು ಖಾರ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಬಾಯಿ ಚಪ್ಪರಿಸಿದರೆ ಸಿಗುವ ಆನಂದವೇ ಬೇರೆ.

ಹಣ್ಣಿನ ಗಾತ್ರದ ಆಧಾರದಲ್ಲಿ ಬೆಲೆ ನಿಗದಿಪಡಿಸಲಾಗಿರುತ್ತದೆ. ಈ ಬಾರಿ ಸಣ್ಣ ಗಾತ್ರದ ಹಣ್ಣುಗಳ ಬೆಲೆಯೂ ಗಗನಮುಖಿಯಾಗಿದೆ. ದೊಡ್ಡ ಗಾತ್ರದ ಹಣ್ಣು ₹ 40 ರಿಂದ ₹60 ರ ವೆರೆಗೆ, ಸಣ್ಣ ಗಾತ್ರದ ಹಣ್ಣುಗಳು ₹ 30ರಿಂದ ₹40ರ ವರೆಗೆ ಬಿಕರಿಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT