ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಭಾಗ್ಯ ಸೌಲಭ್ಯ: ಶಾಸಕರಿಗೆ ಆಯ್ಕೆ ‘ಭಾಗ್ಯ’!

ಹಿಂದಿನ ಎರಡು ಸಾಲಿನಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ
Last Updated 20 ಜುಲೈ 2017, 11:59 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಶುಭಾಗ್ಯ ಯೋಜನೆಯಡಿ ಈ ಸಾಲಿನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಆಯಾ ಕ್ಷೇತ್ರದ ಶಾಸಕರಿಗೆ ನೀಡಲಾಗಿದೆ.

ಯೋಜನೆ ಅನುಷ್ಠಾನಕ್ಕೆ ಬಂದ ಮೊದಲೆರಡು ವರ್ಷ ಫಲಾನುಭವಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿತ್ತು. ಆದರೆ, ಈ ಬಾರಿಯಿಂದ ಲಾಟರಿ ಪದ್ಧತಿ ರದ್ದುಪಡಿಸಲಾಗಿದ್ದು, ಶಾಸಕರಿಗೆ ಮಣೆ ಹಾಕಲಾಗಿದೆ.

‘ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸುವಾಗ ನಮ್ಮನ್ನು ಕಡೆಗಣಿಸಲಾಗುತ್ತಿದೆ’ ಎಂದು ಬಹಳಷ್ಟು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಫಲಾನುಭವಿಗಳ ಆಯ್ಕೆಯ ಸ್ವಾತಂತ್ರ್ಯವನ್ನು ನಮಗೇ ನೀಡಬೇಕು ಎಂದು ಒತ್ತಾಯಿಸಿದ್ದರು.

ಇದನ್ನು ಪುರಸ್ಕರಿಸಿದ ಸರ್ಕಾರ ಶಾಸಕರಿಗೆ ಚುನಾವಣೆಯ ಹೊಸ್ತಿಲಲ್ಲಿ ವಿಶೇಷ ಅವಕಾಶವೊಂದನ್ನು ಒದಗಿಸಿದೆ. ಇದರಿಂದಾಗಿ, ಶಾಸಕರು ಹಾಗೂ ಅವರ ಬೆಂಬಲಿಗರಿಗೆ ಬೇಕಾದವರಿಗೆ ಸೌಲಭ್ಯ ದೊರೆಯುವ ಸಾಧ್ಯತೆಯೂ ದಟ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾವಿರಾರು ಅರ್ಜಿ ಸಲ್ಲಿಕೆ: ಜಿಲ್ಲೆಯಲ್ಲಿ 2015–16ನೇ ಸಾಲಿನಲ್ಲಿ 892 ಫಲಾನುಭವಿಗಳನ್ನು ಆಯ್ಕೆ ಮಾಡುವ ಗುರಿ ನೀಡಲಾಗಿತ್ತು. ಆಗ, ಬರೋಬ್ಬರಿ 23ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. 2016–17ರಲ್ಲಿ 615 ಗುರಿ ನಿಗದಿಯಾಗಿತ್ತು. 19ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಬಂದಿದ್ದವು.

ಜೂರಾದ ಗುರಿಗಿಂತ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದರಿಂದ, ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಸುವ ಅಧಿಕಾರವಿತ್ತು. ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಕ್ಷೇತ್ರವಾರು ಫಲಾನುವಿಗಳ ಆಯ್ಕೆಯ ಗುರಿಯನ್ನು ಶಾಸಕರಿಗೆ ನೀಡಲಾಗಿದೆ. ಆಯ್ಕೆಯಾದವರಿಗೆ ಬ್ಯಾಂಕ್‌ನಿಂದ ಸಾಲಸೌಲಭ್ಯ ದೊರೆಯುತ್ತದೆ.

‘2017–18ನೇ ಸಾಲಿನಲ್ಲಿ ಜಿಲ್ಲೆಗೆ 595 ಫಲಾನುಭವಿಗಳ ಗುರಿ ನೀಡಲಾಗಿದೆ. ಈ ಬಾರಿ ಆಯ್ಕೆ ಪ್ರಕ್ರಿಯೆಯನ್ನು ಶಾಸಕರ ನೇತೃತ್ವದ ಸಮಿತಿ ನಡೆಸುತ್ತದೆ. ಆಸಕ್ತರು ಅರ್ಜಿಗಳನ್ನು ಆ ಸಮಿತಿಗೇ ಸಲ್ಲಿಸಿದ್ದಾರೆ. ಸಾವಿರಾರು ಅರ್ಜಿಗಳು ಬಂದಿವೆ. ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ. ಶಾಸಕರು ಆಯ್ಕೆ ಮಾಡುವವರಿಗೆ ಸೌಲಭ್ಯ ದೊರೆಯಲಿದೆ’ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎ.ಕೆ. ಚಂದ್ರಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.

ದೊರೆಯುವ ಸೌಲಭ್ಯವೇನು?: ‘ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ 50 (ಘಟಕ ವೆಚ್ಚದಲ್ಲಿ), ಸಾಮಾನ್ಯ ವರ್ಗದವರಿಗೆ ಶೇ 25ರಷ್ಟು ಸಹಾಯಧನ ದೊರೆಯುತ್ತದೆ. 2 ಆಕಳು ಅಥವಾ 2 ಎಮ್ಮೆ, 10 ಕುರಿ ಹಾಗೂ 1 ಟಗರು, 11 ಆಡು, 500 ಮಾಂಸದ ಕೋಳಿ, 10 ಹಂದಿ ಸಾಕಾಣಿಕೆ– ಇವುಗಳಲ್ಲಿ ಯಾವುದಾದರೊಂದು ಘಟಕ ಆಯ್ಕೆ ಮಾಡಿಕೊಳ್ಳಬಹುದು.

ಆರ್ಥಿಕವಾಗಿ ಹಿಂದುಳಿದವರಿಗೆ ಆಸ್ತಿ ಕಲ್ಪಿಸಿದಂತಾಗಬೇಕು ಹಾಗೂ ಅವರಿಗೆ ಸ್ವಯಂಉದ್ಯೋಗ ಕಂಡುಕೊಳ್ಳುವುದಕ್ಕೆ ದಾರಿ ಮಾಡಿಕೊಡಬೇಕು ಎಂಬ ಸದುದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.

ಸಹಾಯಧನ ಪಡೆಯುವುದಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಬಹಳಷ್ಟು ಮಂದಿ ಹೈನುಗಾರಿಕೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ದೊಡ್ಡ ಜಿಲ್ಲೆಯಾಗಿರುವುದರಿಂದ, ಹೆಚ್ಚಿನ ಗುರಿ ನಿಗದಿಪಡಿಸಬೇಕು ಎಂದು ಕೋರಲಾಗಿದೆ’ ಎನ್ನುತ್ತಾರೆ ಅವರು.

‘ಹೈನುಗಾರಿಕೆ ಮಾಡಲು, ಕುರಿ, ಕೋಳಿ, ಹಂದಿ ಸಾಕಣೆಗೆ ಬೇಕಾಗುವ ಶೆಡ್‌ಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿಕೊಳ್ಳಲು ಅವಕಾಶವಿದೆ. ಈ ಸಂಬಂಧ ಗ್ರಾಮ ಪಂಚಾಯ್ತಿಗಳಿಗೆ ಸೂಚನೆ ನೀಡಲಾಗಿದೆ.

ಇದರಿಂದಾಗಿ ಫಲಾನುಭವಿಗಳಿಗೆ ಶೆಡ್‌ ಕೂಡ ಉಚಿತವಾಗಿ ದೊರೆತಂತಾಗುತ್ತದೆ. ಹೆಚ್ಚಿನ ಹಾಲು ನೀಡುವ ಮಿಶ್ರತಳಿಯ ಆಕಳುಗಳನ್ನು ಅವರು ಖರೀದಿಸಬೇಕಾಗುತ್ತದೆ’ ಎಂದು ಹೇಳಿದರು.

**

ಪರಿಶಿಷ್ಟರು ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದವರಿಗೂ ‘ಪಶುಭಾಗ್ಯ’ ಯೋಜನೆ ವರದಾನವಾಗಿದ್ದು, ನೂರಾರು ಮಂದಿ ಸೌಲಭ್ಯ ಪಡೆದುಕೊಂಡಿದ್ದಾರೆ
ಡಾ.ಎ.ಕೆ. ಚಂದ್ರಶೇಖರ ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT