ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾವತಿ ರಾಜೀನಾಮೆ ಹತಾಶೆಯ ಸಂಕೇತ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.  ನಾಟಕೀಯ ರೀತಿಯಲ್ಲಿ ಮಾಯಾವತಿ ಅವರು ಮಂಗಳವಾರ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ ನಂತರ  ಗುರುವಾರ ಅವರ ರಾಜೀನಾಮೆ ಅಂಗೀಕಾರವೂ ಆಗಿದೆ. ಮಾಯಾವತಿಯವರ ಈ ಇಡೀ ನಡೆಯ ಹಿಂದೆ ರಾಜಕಾರಣವೂ ಇದೆ ಮತ್ತು ಹತಾಶೆಯೂ ಇದೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ತಮಗೆ ಸಾಕಷ್ಟು ಅವಕಾಶ ಕೊಡಲಿಲ್ಲ ಎಂದು ಪ್ರತಿಭಟಿಸಿ ಅವರು ಮಂಗಳವಾರ ಸದನದಲ್ಲಿಯೇ ರಾಜೀನಾಮೆ ಘೋಷಿಸಿದ್ದರು. ನಂತರ ಮೂರು ಪುಟಗಳ ರಾಜೀನಾಮೆ ಪತ್ರವನ್ನು ರವಾನಿಸಿದ್ದರು. ಆದರೆ ಅದು ನಿಯಮಕ್ಕೆ ಅನುಗುಣವಾಗಿ   ಇರಲಿಲ್ಲ. ರಾಜೀನಾಮೆ ಕೊಡುವ ಸದಸ್ಯರು ಅದರಲ್ಲಿ ಕಾರಣಗಳನ್ನು ನಮೂದಿಸುವಂತಿಲ್ಲ. ತಾವು ರಾಜೀನಾಮೆ ಕೊಡುತ್ತಿರುವುದನ್ನಷ್ಟೇ    ಸಂಕ್ಷಿಪ್ತವಾಗಿ ಬರೆದು ಸಭಾಪತಿಗೆ ಸಲ್ಲಿಸಬೇಕು. ಅನೇಕ ವರ್ಷಗಳಿಂದ ರಾಜಕಾರಣದಲ್ಲಿ ಇದ್ದು, ಸ್ವತಃ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಣೆ ಮಾಡಿದ ಅನುಭವ ಹೊಂದಿದ್ದು   ಸಂಸದೀಯ ಕಲಾಪದ ಒಳಹೊರಗನ್ನೂ ಬಲ್ಲವರಾದ ಮಾಯಾವತಿ ಅವರಿಗೆ ಇದೇನೂ ತಿಳಿಯದ ವಿಷಯವಂತೂ ಖಂಡಿತಾ ಅಲ್ಲ.  ಹೀಗಾಗಿಯೇ  ಸಹಜವಾಗಿ ಅದು ಅಂಗೀಕಾರವಾಗಿರಲಿಲ್ಲ. ‘ಅವರದು ತೋರಿಕೆಯ ಕ್ರಮ; ನಾಟಕೀಯ ನಡೆಗೆ ಅವರು ಹೆಸರುವಾಸಿ. ಅಂಗೀಕಾರ ಆಗುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ’ ಎಂಬಂಥ ಟೀಕೆಗಳೂ ಬಂದವು. ಕೊನೆಗೆ ಗುರುವಾರ ಕೈಬರಹದಲ್ಲಿ  ಒಂದೇ ಸಾಲಿನ ಪತ್ರವನ್ನು ಸಭಾಪತಿಗಳಿಗೆ ಸಲ್ಲಿಸುವುದು ಅವರಿಗೆ ಅನಿವಾರ್ಯವಾಯಿತು. ಒಂದು ವೇಳೆ ಈಗ ರಾಜೀನಾಮೆ ಕೊಡದೇ ಇದ್ದರೂ ಬರುವ ಏಪ್ರಿಲ್‌ಗೆ ಅವರ ರಾಜ್ಯಸಭೆ  ಅವಧಿ ಅಂತ್ಯವಾಗುತ್ತಿತ್ತು.

ಅವರ ರಾಜಕೀಯ ಹೆಜ್ಜೆಗಳನ್ನು ನೋಡಿದವರಿಗೆ ಇದರಲ್ಲೇನೂ ವಿಶೇಷ ಕಾಣುವುದಿಲ್ಲ. ಆದರೆ ಅವರು ಹತಾಶರಾಗಿದ್ದಾರೆ ಎಂಬುದಂತೂ ಎದ್ದು ಕಾಣುತ್ತದೆ.  ಉತ್ತರ ಪ್ರದೇಶದಲ್ಲಿ ಅವರ ರಾಜಕೀಯ ಸಾಮ್ರಾಜ್ಯ ನೆಲ ಕಚ್ಚಿದೆ. ಅವರ ನಾಯಕತ್ವದಲ್ಲಿಯೇ ಬಿಎಸ್‌ಪಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವೂ ಸಿಕ್ಕಿರಲಿಲ್ಲ. ನಾಲ್ಕು ತಿಂಗಳ ಹಿಂದೆ ಉತ್ತರ ಪ್ರದೇಶ ವಿಧಾನಸಭೆಯ 403 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸಿಕ್ಕಿದ್ದು ಕೇವಲ 18 ಸ್ಥಾನಗಳು. ಅವರು ಜೋಪಾನವಾಗಿ ಕಾಪಾಡಿಕೊಂಡು  ಬಂದಿದ್ದ  ದಲಿತ ವೋಟ್‌ ಬ್ಯಾಂಕ್‌  ಅವರ ಕೈತಪ್ಪಿದೆ. ಅಲ್ಲೀಗ ಬಿಜೆಪಿ ಪ್ರಬಲವಾಗಿ ಬೆಳೆದಿದೆ. ಅದು ದಲಿತರ, ಹಿಂದುಳಿದವರ ಮನ ಗೆಲ್ಲುವ ಪ್ರಯತ್ನದಲ್ಲಿಯೂ ಯಶಸ್ಸು ಸಾಧಿಸಿದೆ. ಹೀಗಾಗಿ, ಒಂದು ಕಾಲದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ತೃತೀಯ ರಂಗದ ಪ್ರಭಾವಿ ನಾಯಕಿಯಾಗಿದ್ದ ಮತ್ತು  ಸಂಘಟನಾ ಚಾತುರ್ಯಕ್ಕೆ ಹೆಸರಾಗಿದ್ದ ಮಾಯಾವತಿ ಈಗ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಆ ರಾಜ್ಯದಿಂದ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುವ ಸ್ಥಿತಿಯಲ್ಲೂ ಅವರಿಲ್ಲ. ದಲಿತ ನಾಯಕತ್ವ, ಮೇಲ್ಜಾತಿಯೊಂದಿಗೆ ಸಮೀಕರಣ ಹೀಗೆ ವಿವಿಧ  ಪ್ರಯೋಗಗಳ ಮೂಲಕ ಯಶಸ್ಸಿನ ಅಲೆಯೇರಿ ನಾಲ್ಕು ಸಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಅವರ ಪಾಲಿಗೆ ಇದು ಸಾಮಾನ್ಯ ಹಿನ್ನಡೆಯಂತೂ ಅಲ್ಲ.  ಇವೆಲ್ಲ ಅವರನ್ನು ಹತಾಶೆಗೆ ನೂಕಿರಲೂಬಹುದು.

ರಾಜೀನಾಮೆ ಎನ್ನುವುದು ಯಾವುದಕ್ಕೂ ಪರಿಹಾರವಲ್ಲ ಎನ್ನುವುದನ್ನು ಮಾಯಾವತಿ ಮರೆಯಬಾರದಾಗಿತ್ತು. ರಾಜ್ಯಸಭೆಯಲ್ಲಿ  ತಮ್ಮ ಮಾತಿಗೆ ಆಡಳಿತ ಪಕ್ಷದವರು ಅಡ್ಡಿಪಡಿಸಿದರು ಎಂಬ ಅವರ ಆರೋಪದಲ್ಲೂ ಅರ್ಥ ಇಲ್ಲ. ಸದನ ಕಲಾಪಕ್ಕೆ ಒಂದು ನಿಯಮ ಇದೆ. ಸಭಾಪತಿಯ ಸೂಚನೆ ಪಾಲಿಸಬೇಕು. ಅದನ್ನು ಎಲ್ಲರೂ ಗೌರವಿಸಬೇಕು. ಅಲ್ಲದೆ ಅವರದೇ ಪಕ್ಷ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಹುಮತದಲ್ಲಿದ್ದಾಗ  ಪ್ರತಿಪಕ್ಷಗಳ ಸದಸ್ಯರ ಮಾತಿಗೆ ಅಡ್ಡಿಪಡಿಸಿದ ಬೇಕಾದಷ್ಟು ನಿದರ್ಶನಗಳಿವೆ. ರಾಜಕೀಯದಲ್ಲಿ ಇವೆಲ್ಲ ಸಹಜ ಎನ್ನುವಂತಾಗಿ ಹೋಗಿದೆ. ಹೀಗಾಗಿ ಈಗ ತಮ್ಮ ಮಾತು ಮೊಟಕು ಮಾಡಲಾಯಿತು ಎಂಬ ನೆಪ ಹೇಳಿ ರಾಜೀನಾಮೆ ಕೊಡುವುದು ಪಲಾಯನ ಎನಿಸಿಕೊಳ್ಳುತ್ತದೆ.  ಪ್ರಭಾವಿ ದಲಿತನಾಯಕಿಯಾಗಿ ಬೆಳೆದ ಮಾಯಾವತಿಯವರು ದಲಿತ ನಾಯಕತ್ವ ಬೆಳೆಸಲಿಲ್ಲ. ಬದಲಿಗೆ   ಸ್ವಯಂ ಪ್ರತಿಷ್ಠೆ ಬೆಳೆಸಿಕೊಳ್ಳುವುದಕ್ಕೆ ಗಮನ ನೀಡಿದರು, ಸ್ವಾರ್ಥ ಹಿತಾಸಕ್ತಿಗಳನ್ನು ಬೆಳೆಸಿಕೊಂಡು ದಲಿತ ಪರ ಕಾಳಜಿಗಳನ್ನು ಮರೆತದ್ದು ವಿಷಾದನೀಯ. ಅವರು ಬೆಳೆಸದಿದ್ದರೂ ಹೊಸ ದಲಿತ ನಾಯಕತ್ವ ಈಗ ಉದಯವಾಗುತ್ತಿರುವುದರಿಂದ ಮಾಯಾವತಿಯವರ ದಲಿತ ರಾಜಕಾರಣ ಪ್ರಸ್ತುತತೆ ಕಳೆದುಕೊಳ್ಳುತ್ತಿರುವಂತಿದೆ. ಹೀಗಾಗಿ, ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೈಗೊಂಡ ಲೆಕ್ಕಾಚಾರದ ನಡೆ ಇದು ಎಂಬಂಥ ವ್ಯಾಖ್ಯಾನಗಳು ಸಹಜವಾಗಿಯೇ ಕೇಳಿಬರುತ್ತಿವೆ. ಮಾಯಾವತಿ ಅವರಿಗೆ ನೈಜ ಕಳಕಳಿ ಇದ್ದರೆ ದಲಿತರ, ಶ್ರೀಸಾಮಾನ್ಯರ ಸಮಸ್ಯೆಗಳನ್ನು ದೇಶದ ಗಮನಕ್ಕೆ ತರಲು ಸಂಸದೀಯ ವೇದಿಕೆಗಳಲ್ಲಿ ಲಭ್ಯ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿತ್ತು. ಅದನ್ನು ಅವರು ಕೈಯಾರೆ ಬಿಟ್ಟುಕೊಟ್ಟಿದ್ದಾರೆ.  ಇನ್ನಾದರೂ ಅವರು ಸ್ವಪ್ರತಿಷ್ಠೆಯನ್ನು ಬದಿಗಿಡಬೇಕು. ತಮ್ಮ ಪಕ್ಷ ಯಾಕೆ ಈ ಸ್ಥಿತಿಗೆ ಬಂತು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಕಾಲೀನ ರಾಜಕಾರಣದಲ್ಲಿಯೂ ಚಲಾವಣೆಯಲ್ಲಿ ಇರಬೇಕಾದರೆ  ತಮ್ಮ ನಡೆಯನ್ನು ಬದಲಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT