ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವರ್‌ಬಾಯ್‌ ಒಳಗೊಬ್ಬ ಆ್ಯಕ್ಷನ್‌ ಹೀರೊ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಅಜಯ್‌ರಾವ್‌ ಎಂದಾಕ್ಷಣ ಲವರ್‌ಬಾಯ್‌ ಚಿತ್ರಣ ಮೂಡುವುದು ಸಹಜ. ‘ಎಕ್ಸ್‌ಕ್ಯೂಸ್‌ ಮಿ’ ಅವರ ಅಭಿನಯದ ಮೊದಲ ಚಿತ್ರ. ಇದು ಅವರಿಗೆ ಯಶಸ್ಸು ತಂದುಕೊಟ್ಟ ಚಿತ್ರವೂ ಹೌದು. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರನೆಲೆ ಒದಗಿಸಿದ ಚಿತ್ರ ‘ತಾಜ್‌ಮಹಲ್‌’. ಬಳಿಕ ಅವರು ‘ಪ್ರೇಮ್‌ ಕಹಾನಿ’ಯಲ್ಲಿ ಬಿದ್ದರು. ಮತ್ತೆ ‘ಕೃಷ್ಣನ್‌ ಲವ್‌ ಸ್ಟೋರಿ’ ಮೂಲಕ ಪ್ರೇಕ್ಷಕರ ಮನಗೆದ್ದರು. ‘ಕೃಷ್ಣ ಲೀಲಾ’ವೂ ಜನರನ್ನು ರಂಜಿಸಿತು.

‘ಸಂತೆಯಲ್ಲಿ ನಿಂತರೂನು ನೋಡು ನೀನು ನನ್ನನ್ನೇ...’ ಎಂದ ನಟ ಅಜಯ್‌ರಾವ್‌ಗೆ ‘ಲವರ್‌ಬಾಯ್’ ಪಟ್ಟ ಗಟ್ಟಿಯಾಗಿ ಅಪ್ಪಿಕೊಂಡಿದೆ. ಈಗ ಪ್ರಥಮ ಬಾರಿಗೆ ಆ್ಯಕ್ಷನ್ ಹೀರೊ ಆಗುವ ತವಕ ಅವರಲ್ಲಿದೆ. ಪ್ರೇಕ್ಷಕರು ನಿಮ್ಮ ಹೊಸ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆಯೇ? ಎಂಬ ಪ್ರಶ್ನೆ ಮುಂದಿಟ್ಟರೆ ಎಲ್ಲದ್ದಕ್ಕೂ, ‘‘ಧೈರ್ಯಂ’ ಸರ್ವತ್ರ ಸಾಧನಂ’’ ಎನ್ನುತ್ತಾರೆ. ಹಳೆಯ ಇಮೇಜ್‌ ಉಳಿಸಿಕೊಂಡೇ ಜನರಿಗೆ ಇಷ್ಟವಾಗುವ ಪಾತ್ರ ಮಾಡಿರುವ ಖುಷಿಯಲ್ಲಿದ್ದಾರೆ. ಈ ಕುರಿತು ’ಚಂದನವನ’ದೊಂದಿಗೆ ಅವರು ಮಾತನಾಡಿದ್ದು ಹೀಗೆ.

‘ಧೈರ್ಯಂ’ ನನ್ನ ಉಳಿದ ಚಿತ್ರಗಳಿಗಂತ ಭಿನ್ನವಾದ ಸಿನಿಮಾ. ನನಗೊಂದು ಹೊಸ ಇಮೇಜ್‌ ತಂದುಕೊಡುವ ಚಿತ್ರ. ಲವರ್‌ಬಾಯ್‌ ಇಮೇಜ್‌ನಿಂದ ಆ್ಯಕ್ಷನ್ ಸಿನಿಮಾಗೆ ಬದಲಾಗುತ್ತಿದ್ದೇನೆ. ಪ್ರೇಕ್ಷಕರಿಗೆ ಬದಲಾವಣೆ ಕೊಡುತ್ತಿದ್ದೇನೆಂಬ ಸಂತಸ ಇದೆ. ಈ ಚಿತ್ರದ ಸ್ಕ್ರಿಪ್ಟ್‌ ಅದ್ಭುತವಾಗಿದೆ. ಇದೇ ಸಿನಿಮಾದ ಸಕಾರಾತ್ಮಕ ಅಂಶ ಎಂದ ಅಜಯ್‌ರಾವ್‌ ಮಾತಿನಲ್ಲಿ ಪಾತ್ರವು ಜನರಿಗೆ ಇಷ್ಟವಾಗಲಿದೆ ಎಂಬ ಧೈರ್ಯ ಇತ್ತು.

‘ಚಿತ್ರದ ಮೊದಲಾರ್ಧ ಹೊಡೆದಾಟ ಇರುವುದಿಲ್ಲ. ಸಿನಿಮಾ ಸಾಗುವ ಹಾದಿಯಲ್ಲಿ ದೈಹಿಕವಾಗಿ ಅಲ್ಲದಿದ್ದರೂ ನನ್ನ ಪಾತ್ರ ಜನರನ್ನು ಕೆರಳಿಸುತ್ತದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಲಿದೆ. ನನ್ನ ಲವರ್‌ಬಾಯ್‌ ಪಾತ್ರವೂ ಅವರಲ್ಲಿ ಪ್ರಶ್ನೆ ಹುಟ್ಟಿಸುತ್ತಾ ಸಾಗುತ್ತದೆ. ಅಜಯ್‌ ಹೊಡೆಯುತ್ತಾನೋ ಇಲ್ಲವೋ ಎಂಬುದು ಪ್ರೇಕ್ಷಕರಿಗೆ ಬಹುವಾಗಿ ಕಾಡಲಿದೆ. ಇಲ್ಲಿಯೂ ನನ್ನ ಹಿಂದಿನ ಸಿನಿಮಾಗಳಲ್ಲಿ ಇರುವಂತೆ ಮೃದು ಸ್ವಭಾವವನ್ನು ಬಿಟ್ಟುಹೋಗುತ್ತಿಲ್ಲ. ಮೈಂಡ್‌ಗೇಮ್‌ನಲ್ಲಿ ಆಟವಾಡಿಕೊಂಡು ಹೋಗುವುದೇ ಚಿತ್ರದ ವಿಶೇಷ’ ಎಂದರು.

‘ನನ್ನದು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವಲ್ಲ. ಮಾರ್ಷಲ್‌ ಆರ್ಟ್‌ ಬಗ್ಗೆ ನನಗೆ ಗೊತ್ತು. ಯುದ್ಧ ಕ್ಕಾಗಿ ಕಾಯುತ್ತಿದ್ದೆ. ಆ್ಯಕ್ಷನ್ ಚಿತ್ರ ಮಾಡಬೇಕೆಂಬ ಆಸೆ ಹಲವು ದಿನಗಳಿಂದಲೇ ಮೊಳಕೆಯೊಡೆದಿತ್ತು. ಇನ್ನೂ ಧೈರ್ಯಂ ಸ್ಕ್ರಿಪ್ಟ್‌ ನೋಡಿರಲಿಲ್ಲ. ಅದಕ್ಕೂ ಮೊದಲೇ ಆ್ಯಕ್ಷನ್‌ ಸಿನಿಮಾ ಬಗ್ಗೆ ಚಿಂತಿಸುತ್ತಿದ್ದೆ. ಈ ಚಿತ್ರದಲ್ಲಿ ಆಸೆ ಈಡೇರಿದೆ’ ಎಂದರು ಅಜಯ್‌ರಾವ್.

‘ಬೆಳಿಗ್ಗೆಯಿಂದ ಸಂಜೆವರೆಗೆ ಎಲ್ಲರೂ ದುಡಿಮೆ ಮಾಡುತ್ತಾರೆ. ಹಣ ಸಂಪಾದನೆಯೇ ಎಲ್ಲರ ಏಕೈಕ ಗುರಿ. ಸುಲಭವಾಗಿ ಹಣ ಸಂಪಾದನೆಗೆ ಹೋಗುತ್ತಾರೆ. ಕಥಾ ನಾಯಕ ಕೂಡ ಬಡವ. ಪರಿಸ್ಥಿತಿ ಅವನನ್ನು ಕೆಣಕುತ್ತದೆ. ಅವನಿಗೂ ಹಣದ ಅಗತ್ಯ ಬೀಳುತ್ತದೆ. ಆತ ಹೇಗೆ ಹಣ ಸಂಪಾದಿಸುತ್ತಾನೆ ಎಂಬುದು ಕಥೆಯ ತಿರುಳು’ ಎಂದ ಅವರು, ಕೊನೆಯಲ್ಲಿ ಉಳಿಯುವುದು ಮಾನವೀಯ ಮೌಲ್ಯಗಳೇ ಹೊರತು ಹಣವಲ್ಲ ಎಂಬ ಸತ್ಯ ತೆರೆದಿಟ್ಟರು.

ಜೀವನದಲ್ಲಿ ದುಡ್ಡು ಅನಿವಾರ್ಯವಲ್ಲ. ಬದುಕಿನಲ್ಲಿ ಸಂಬಂಧ, ಪ್ರೀತಿಯಷ್ಟೇ ಮುಖ್ಯ. ಇದನ್ನು ರಾಜಕೀಯ, ಕ್ರೈಂ ಇಟ್ಟುಕೊಂಡು ಜನರಿಗೆ ಹೇಳಿದ್ದೇವೆ ಎಂದರು.

ರವಿಶಂಕರ್‌ ಅವರೊಂದಿಗೆ ಕೆಲಸ ಮಾಡುವುದು ಹೊಸ ಅನುಭವ. ಅವರ ಸರಳತೆ ಎಲ್ಲರಿಗೂ ಆದರ್ಶ. ಅವರೇ ನಮಗೆ ಪ್ರಶ್ನೆ ಕೇಳುತ್ತಾರೆ. ನಾನು ಅವರಿಂದ ಸಾಕಷ್ಟು ಕಲಿತೆ. ಅವರು ಸೆಟ್‌ಗೆ ಚಿಕ್ಕಮಗುವಿನಂತೆ ಬರುತ್ತಾರೆ. ತಪ್ಪುಗಳಾದರೆ ತಿದ್ದುತ್ತಾರೆ. ಅವರು ತಿದ್ದುವ ರೀತಿಯೂ ಭಿನ್ನ ಎಂದ ಅವರು, ಧೈರ್ಯಂ ಬಳಿಕ ‘ತಾಯಿಗೆ ತಕ್ಕ ಮಗ’ನಾಗಲು ಸಿದ್ಧತೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT