ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಗೋ ಬಂತು ‘ಆದಿಪುರಾಣ’!

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಇದು ‘ಆದಿ ಪುರಾಣ’. ಯಾರ ಆದಿ ಪುರಾಣ? ಆದಿತ್ಯನ ಪುರಾಣ ಇದು. ಹಾಗಾಗಿ ಈ ಹೆಸರು. ಈ ಸಿನಿಮಾ ಜನವರಿ ಅಥವಾ ಫೆಬ್ರುವರಿ ವೇಳೆಗೆ ತೆರೆಗೆ ಬರುವ ನಿರೀಕ್ಷೆ ಇದೆ.

ಈ ಚಿತ್ರದ ಕುರಿತು ಮಾಹಿತಿ ನೀಡಲು ಚಿತ್ರತಂಡ ಬೆಂಗಳೂರಿನಲ್ಲಿ ಕಳೆದ ವಾರ ಸುದ್ದಿಗೋಷ್ಠಿ ಕರೆದಿತ್ತು. ಚಿತ್ರದ ನಾಯಕ ನಟ ಶಶಾಂಕ್, ನಾಯಕ ನಟಿ ಅಹಲ್ಯಾ, ನಿರ್ದೇಶಕ ಮೋಹನ್ ಕಾಮಾಕ್ಷಿ, ನಿರ್ಮಾಪಕ ಶಮಂತ್ ಕೆ ಸೇರಿದಂತೆ ಚಿತ್ರತಂಡ ಹಲವರು ಅಲ್ಲಿ ಸೇರಿದ್ದರು.

ಮೊದಲಿಗೆ ಮಾತು ಆರಂಭಿಸಿದವರು ಶಮಂತ್. ‘ಇದು ನನ್ನ ಮೂರನೆಯ ಸಿನಿಮಾ. ಎಂಟು ತಿಂಗಳುಗಳಿಂದ ಈ ಸಿನಿಮಾಕ್ಕಾಗಿ ಕೆಲಸ ನಡೆದಿದೆ. ಇದು ರೊಮ್ಯಾಂಟಿಕ್ ಕಥಾಹಂದರ ಇರುವ ಹಾಸ್ಯ ಚಿತ್ರ’ ಎಂದರು.

ನಿರ್ಮಾಪಕರ ಮಾತು ಮುಂದುವರಿಸುವ ಸರದಿ ನಿರ್ದೇಶಕರದಾಗಿತ್ತು. ’ಈ ಸಿನಿಮಾದಲ್ಲಿ ಗಡಿಯಾರ ಕೂಡ ಒಂದು ಪಾತ್ರವಾಗಿ ಬಂದಿದೆ. ಇದು ಬರಿಯ ಪ್ರೇಮಕಥೆ ಅಲ್ಲ’ ಎಂದರು ಮೋಹನ್. ಅಂದಹಾಗೆ, ಈ ಸಿನಿಮಾದಲ್ಲಿ ನಾಯಕ ನಟಿಯರಾಗಿ ಅಭಿನಯಿಸಲು ಆಸಕ್ತಿ ತೋರಿ ಐನೂರು ಜನ ಯುವತಿಯರು ಅರ್ಜಿ ಸಲ್ಲಿಸಿದ್ದರಂತೆ. ಅಷ್ಟೂ ಅರ್ಜಿಗಳನ್ನು ಪರಿಶೀಲಿಸಿ ಇಬ್ಬರನ್ನು ಆಯ್ಕೆ ಮಾಡಲಾಯಿತಂತೆ. ಅವರಲ್ಲಿ ಒಬ್ಬರು ಅಹಲ್ಯಾ.

‘ಭರತನಾಟ್ಯ ಕಲಿಯುವ ಸಂಪ್ರದಾಯಸ್ಥ ಮನೋಭಾವದ ಹುಡುಗಿಯ ಪಾತ್ರ ನನ್ನದು. ಐನೂರು ಜನರ ಜೊತೆ ಸ್ಪರ್ಧಿಸಿ, ನಾಯಕಿಯಾಗಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗುತ್ತಿದೆ’ ಎಂದರು ಅಹಲ್ಯಾ. ರಂಗಾಯಣ ರಘು ಅವರೂ ಈ ಸಿನಿಮಾದಲ್ಲಿ ಒಂದು ಪಾತ್ರ ನಿರ್ವಹಿಸಿದ್ದಾರಂತೆ. ಈ ಸಿನಿಮಾದಲ್ಲಿ ಅವರದು ಮಾತು ಕಡಿಮೆ ಇರುವ ಪಾತ್ರವಂತೆ.

ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದವರು ವಿಕ್ರಮ್ ವಸಿಷ್ಠ, ಚಂದನಾ ವಸಿಷ್ಠ ಮತ್ತು ಸಿದ್ಧಾರ್ಥ ಕಾಮತ್ ಅವರು. ಹಾಡುಗಳಿಗೆ ಕನ್ನಡದ ಗಾಯಕರನ್ನೇ ಹುಡುಕಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ನಾಯಕ ನಟ ಶಶಾಂಕ್ ಅವರು ಬುಕ್ಕಾಪಟ್ಟಣ ವಾಸು ಅವರ ಬಳಿ ಅಭಿನಯದ ಪಾಠ ಹೇಳಿಸಿಕೊಳ್ಳುತ್ತಿದ್ದಾರಂತೆ. ಇವರು ಈಗ ಎಂಜಿನಿಯರಿಂಗ್ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT