ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆ ಹೇಳುತ್ತಿವೆ ಮರದ ಫ್ರೇಮ್‌ಗಳು

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ರಜಿತಾ ಮೆನನ್‌

ನಮ್ಮ ಹವ್ಯಾಸದ ಬಗ್ಗೆ ಮಾತನಾಡುವಾಗ ರಂಜಿಮ್‌ ಗರ್ಗ್‌ ಅವರ ಮಾತಿನಲ್ಲಿಯೇ ಖುಷಿ, ಯಶಸ್ಸು ಎದ್ದು ಕಾಣುತ್ತದೆ. ತಮ್ಮ ಬಾಲ್ಯದ ಕನಸುಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಸಂತಸ ಅವರದು.

ರಂಜಿಮ್‌ ಅವರು ಐಟಿ ಕಂಪೆನಿಯಲ್ಲಿ ಬ್ಯುಸಿನೆಸ್‌ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆಯೂ ಅವರು ತಮ್ಮ ಹವ್ಯಾಸಗಳಾದ ಚಿತ್ರ ಬಿಡಿಸುವುದು ಹಾಗೂ ಬಗೆಬಗೆ ಕಲಾಕೃತಿ ರಚನೆಯಲ್ಲೂ ತೊಡಗಿಸಿಕೊಂಡಿದ್ದಾರೆ.

‘ನನಗೆ ಮೊದಲಿನಿಂದಲೂ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇತ್ತು. ಬಳಿಕ ನಾನು ಕೃತಕ ಹೂವು, ಬಳಸಿ ಬಿಸಾಕುವಂತಹ ವಸ್ತುಗಳಿಂದ ಕಲಾಕೃತಿ ರಚನೆ ಮಾಡಲು ಆರಂಭಿಸಿದೆ. ಮುಖ್ಯವಾಗಿ ಮನೆ ಅಲಂಕಾರಿಕ ವಸ್ತುಗಳಾದ ಹೆಸರುಗಳ ಫಲಕಗಳು, ಕೀ ಬಂಚ್‌, ತಟ್ಟೆಗಳ ಅಲಂಕಾರ ಹಾಗೂ ಮರದಿಂದ ಕೆಲವು ಕಲಾಕೃತಿಗಳನ್ನು ನಾನು ತಯಾರಿಸುತ್ತೇನೆ’ ಎಂದು ತನ್ನ ಹವ್ಯಾಸದ ಬಗ್ಗೆ ರಂಜಿಮ್‌ ವಿವರಣೆ ನೀಡುತ್ತಾರೆ.

ತನ್ನ ಪ್ರತಿ ಶೈಲಿಯಲ್ಲಿಯೂ ಭಿನ್ನತೆ ಹಾಗೂ ವೈವಿಧ್ಯ ಬಯಸುವ ರಂಜಿಮ್‌ ಅವರು ಪ್ರತಿ ಕಲಾಕೃತಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುತ್ತಾರೆ. ಅಲ್ಲಿ ತನ್ನ ಅಭಿಮಾನಿಗಳ ಮಾತೇ ತನಗೆ ಹೊಸ ಹೊಸ ವಿನ್ಯಾಸಕ್ಕೆ ಸ್ಫೂರ್ತಿ ಎಂದು ಹೇಳುವ ಅವರು, ನಾನು ಕಲಾಕೃತಿಗಳಲ್ಲಿ ಹಳ್ಳಿಗಾಡು ಪ್ರದೇಶ, ಗ್ರಾಮೀಣ ಶೈಲಿಯನ್ನು ಬಿಡಿಸಲು ಇಷ್ಟಪಡುತ್ತೇನೆ. ಇನ್ನು ಒಬ್ಬ ಚಿತ್ರ ಕಲಾವಿದೆಯಾಗಿ ನಾನು ಗಾಢ ಬಣ್ಣಗಳನ್ನು ಹೆಚ್ಚು ಪ್ರೀತಿಸುತ್ತೇನೆ. ಗಾಢ ಬಣ್ಣಗಳು ಕಲಾಕೃತಿಗೆ ಅಮೂರ್ತ ರೂಪವನ್ನು ನೀಡುತ್ತವೆ’ ಎಂದು ನಗುತ್ತಾರೆ.

ಇವರ ಗಾಢ ಬಣ್ಣದ ಕಲಾಕೃತಿಗಳನ್ನು ಇವರ ಫೇಸ್‌ಬುಕ್‌ ಪುಟ 'ಆರ್ಟ್‌ಡಿಲೈಟ್‌’(art delight)ನಲ್ಲಿ ಕಾಣಬಹುದು. ಈ ಪುಟವನ್ನು ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಆರಂಭಿಸಿದ್ದಾರೆ. ಇದರಲ್ಲಿ ಇವರು ರಚಿಸಿದ ಎಲ್ಲಾ ಕಲಾಕೃತಿಗಳನ್ನು ನೋಡಬಹುದು. ಇವರು ತಟ್ಟೆಗಳಲ್ಲಿ ರಚಿಸಿದ ಕಪ್ಪು–ಬಿಳುಪು ಬಣ್ಣದ ಸಂಯೋಜನೆಯ ವಿನ್ಯಾಸ, ಮರದ ಫ್ರೇಮ್‌ಗಳ ವಿನ್ಯಾಸ, ಕಾರ್ಟೂನ್‌ ಪಾತ್ರಗಳನ್ನೊಳಗೊಂಡ ಹೆಸರಿನ ಫಲಕಗಳು ಮೊದಲಾದವುಗಳನ್ನು ಕಾಣಬಹುದು.

’ನಾನು ಮಕ್ಕಳಿಗಾಗಿ ಕೆಲವು ವಸ್ತುಗಳನ್ನು ಮಾಡಲು ಇಷ್ಟಪಡುತ್ತೇನೆ. ಇದರಲ್ಲಿ ಕಾರ್ಟೂನ್‌ ವಿಷಯದ ಕಲಾಕೃತಿಗಳು ಮಕ್ಕಳಿಗೆ, ದೊಡ್ಡವರಿಗೆ ಎಲ್ಲರಿಗೂ ಇಷ್ಟವಾಗಿದೆ. ಇದಲ್ಲದೇ ವಿವಿಧ ವಿನ್ಯಾಸದ ಆಭರಣ ಬಾಕ್ಸ್‌ಗಳನ್ನು ಮಾಡುತ್ತೇನೆ’ ಎಂದು ಹೇಳುತ್ತಾರೆ.

ತಮ್ಮ ಕಲಾಕೃತಿಗೆ ಬೇಕಾದ ಕಚ್ಛಾ ವಸ್ತುಗಳನ್ನು ರಂಜಿಮ್‌, ರಾಜಾ ಮಾರ್ಕೆಟ್‌ನಿಂದ  ಖರೀದಿಸುತ್ತಾರೆ. ಕೆಲವೊಮ್ಮೆ ದೆಹಲಿಯಿಂದಲೂ ತರಿಸಿಕೊಳ್ಳುತ್ತಾರೆ. ಇದಲ್ಲದೇ  ಬಳಸಿ ಬಿಸಾಕುವಂತಹ ವಸ್ತುಗಳನ್ನೂ ಕಲಾಕೃತಿಗೆ ಬಳಸುತ್ತಾರೆ. 

’ನಾನು ಆರಂಭದಲ್ಲಿ ಮನೆಯಲ್ಲಿ ಸಿಗುವಂತಹ ವಸ್ತುಗಳನ್ನು ತಗೆದುಕೊಂಡು ಕಲಾಕೃತಿ ಮಾಡುವುದನ್ನು ಕಲಿತೆ. ಮರದ ಕಲಾಕೃತಿಗಳನ್ನೂ ಅಷ್ಟೇ, ಮನೆಯ ಸುತ್ತಮುತ್ತ ಸಿಗುವ ಮರದ ತುಂಡುಗಳನ್ನು ಬಳಸಿ ರಚಿಸುತ್ತಿದ್ದೆ. ಬಳಿಕ ನಾನು ಅಂಗಡಿಗಳಿಂದ ಕಚ್ಚಾ ವಸ್ತುಗಳನ್ನು ಖರೀದಿಸಿ ನನ್ನ ಹವ್ಯಾಸಗಳನ್ನು ಬೆಳೆಸಿಕೊಂಡೆ. ಆದರೆ ಈಗಲೂ ನಾನು ಬಳಸಿ ಬಿಸಾಕುವ ವಸ್ತುಗಳಿಂದ ಕಲಾಕೃತಿ ರಚಿಸುತ್ತೇನೆ’ ಎಂದು ಅವರು ಹೇಳುತ್ತಾರೆ.

ಇತ್ತೀಚೆಗೆ ರಂಜಿಮ್‌ ಕೇಬಲ್‌ ಅಂಗಡಿ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ಕೇಬಲ್‌ ವೈರ್‌ಗಳನ್ನು ಬಿಸಾಕುತ್ತಿದ್ದರು. ಆಗ ಅಲ್ಲಿಗೆ ಹೋದ ರಂಜಿಮ್‌ ಅದನ್ನು ತನಗೆ ಕೊಡುವಂತೆ ಕೇಳಿದರು. ಆಗ ಅಂಗಡಿಯವರು ಇದರಿಂದ ಏನು ಲಾಭ?' ಎಂದು ಕುತೂಹಲದಿಂದ ನೋಡಿದರಂತೆ. ಆಗ ರಂಜಿಮ್‌ 'ನೀವು ಯೋಚಿಸಬೇಡಿ, ನಾನು ಅದನ್ನು ಬಳಸಿಕೊಳ್ಳುತ್ತೇನೆ' ಎಂದರಂತೆ. ಈಗ ಆ ವೈರ್‌ಗಳಿಂದ ಕಲಾಕೃತಿಗಳನ್ನು ರಚಿಸಲು ತೊಡಗಿದ್ದೇನೆ. ಇನ್ನೂ ಮುಗಿದಿಲ್ಲ’ ಎಂದು ರಂಜಿಮ್‌ ತಿಳಿಸುತ್ತಾರೆ.

ಇವರ ಹವ್ಯಾಸಕ್ಕೆ ಮನೆಯವರ ಹಾಗೂ ಸ್ನೇಹಿತರ ಪ್ರೋತ್ಸಾಹವಿದೆ. ಕೆಲವು ಕಡೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ‘ಹವ್ಯಾಸದಲ್ಲಿಯೇ ಮುಂದುವರಿಯಬೇಕೆಂಬ ಅಭಿಲಾಷೆ ಇದ್ದರೆ ಉದ್ಯೋಗಕ್ಕೆ ರಾಜೀನಾಮೆ ನೀಡು’ ಎಂದು ತಂದೆ ಸಲಹೆ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ ರಂಜಿಮ್‌. ಆದರೆ ಅದರ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎನ್ನುತ್ತಾರೆ ಅವರು.

ರಂಜಿಮ್‌ ಅವರನ್ನು ಅವರ ಫೇಸ್‌ಬುಕ್‌ ಪುಟ ‘ಆರ್ಟ್‌ಡಿಲೈಟ್‌’ (art delight) ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT