ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮೋಜಿಗಳಿಗೊಂದು ದಿನ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

* ಬಿ.ಸಿ.ಯತಿರಾಜ್

ಈಚೆಗಷ್ಟೇ ಆನ್‌ಲೈನ್‌ನಲ್ಲಿ ‘ಅಂತರರಾಷ್ಟ್ರೀಯ ಇಮೋಜಿ ದಿನ’ ಆಚರಿಸಲಾಯಿತು. ತಂತ್ರಜ್ಞಾನಕ್ಕೆ ತೆರೆದುಕೊಂಡಿರುವ ನಾವು ಕೂಡ ಹೆಚ್ಚಾಗಿ ಇಮೋಜಿಗಳನ್ನು ಬಳಸುತ್ತಿದ್ದರೂ ಇದಕ್ಕೂ ಒಂದು ದಿನ ಇದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಜುಲೈ 17ರಂದು ಕೆಲವೊಂದು ಇಮೋಜಿಗಳನ್ನು ಫಾರ್ವಡ್ ಮಾಡಿಕೊಂಡವರು, ನಾವೂ ಇಮೋಜಿ ದಿನವನ್ನು ಆಚರಿಸಿದ್ದೇವೆ ಎಂದು ಭಾವಿಸೋಣ. ಹಾಗೆ ನೋಡಿದರೆ, ನಿತ್ಯವೂ ಇಮೋಜಿ ದಿನವನ್ನು ಆಚರಿಸುತ್ತಿದ್ದೇವೆ. ಅದೇನೆ ಇರಲಿ, ಆಧುನಿಕ ಸಂವಹನ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಮೋಜಿಗಳಿಗೂ ಒಂದು ದಿನ ನೀಡಿರುವುದು ಸ್ವಾರಸ್ಯಕರ.

ಇಮೋಜಿಗಳ ಇತಿಹಾಸ ಕೆದಕುತ್ತಾ ಹೋದರೆ, ಶಿಲಾಯುಗಕ್ಕೆ ಹೋಗಬೇಕಾಗುತ್ತದೆ. ಸಿಂಧೂ ನಾಗರಿತೆಯ ಇತಿಹಾಸ ನಾವೆಲ್ಲಾ ಓದಿದ್ದೇವೆ. ಸಿಂಧೂ ಭಾಗದಲ್ಲಿ ಉತ್ಖನನ ಮಾಡುವಾಗ ಚಿತ್ರಲಿಪಿಗಳು ಸಿಕ್ಕಿವೆ. ಆ ಲಿಪಿಗಳನ್ನು ಇಲ್ಲಿಯವರೆಗೆ ಓದಲು ಸಾಧ್ಯವಾಗಿಲ್ಲವಾದರೂ, ಅವುಗಳು ಚಿತ್ರದ ಮೂಲಕ ತಿಳಿಸುತ್ತಿರುವ ಯಾವುದೋ ವಿಚಾರವಿದೆ ಎಂಬ ತೀರ್ಮಾನಕ್ಕಂತೂ ಬಂದಿದ್ದೇವೆ. ಇಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಉದ್ದೇಶವಿಷ್ಟೇ: ಚಿತ್ರದ ಮೂಲಕ ಸಂದೇಶವನ್ನು ರವಾನಿಸುವ ಪರಿಕಲ್ಪನೆ ತೀರ ಹಳೆಯದು ಎಂಬುದು ಸ್ಪಷ್ಟ. ಈ ಚಿತ್ರಸಂದೇಶದ ತಾಂತ್ರಿಕ ರೂಪಾಂತರವೇ ‘ಇಮೋಜಿ’.

ಅಂದಹಾಗೆ ಇಮೋಜಿಗಳು ತಾಂತ್ರಿಕ ಲೋಕಕ್ಕೆ ಪರಿಚಯವಾದದ್ದು ಜಪಾನ್‌ ದೇಶದಿಂದ. ಹಳೆಯ ಜಪಾನಿ ಮೊಬೈಲ್ ಪೋನ್‌ಗಳಲ್ಲಿ ಕೆಲವು ಚಿತ್ರಸಂದೇಶಗಳನ್ನು ಮೊದಲು ಬಳಸಲಾಯಿತು. ಅವುಗಳನ್ನು ಇಮೋಜಿ ಎಂದು ಜಪಾನಿಯರು ಕರೆದರು. ‘ಇ’ ಅಂದರೆ ‘ಫಾರ್ ಫಿಕ್ಚರ್’, ‘ಮೋಜಿ’ ಅಂದರೆ ‘ಫಾರ್ ಕ್ಯಾರೆಕ್ಟರ್’. ಇಮೋಜಿ ಎಂದರೆ ಚಿತ್ರಕ್ಕೆ ಭಾವನೆ ಅಥವಾ ಗುಣವನ್ನು ನೀಡುವುದು ಎಂದು ಕರೆಯಬಹುದು.

ಈ ಇಮೋಜಿಗಳನ್ನು ಹೆಚ್ಚು ಬಳಕೆಗೆ ತಂದ ಕೀರ್ತಿ ಎನ್‌ಟಿಟಿ ಡೊಕೊಮೊ, ವೊಡಾಪೋನ್‌ನಂಥ ಕಂಪೆನಿಗಳಿಗೆ ಸಲ್ಲುತ್ತದೆ. 2000ನೇ ಇಸವಿಯಲ್ಲಿ 1,000ಕ್ಕೂ ಹೆಚ್ಚು ಗ್ರಾಫಿಕಲ್ ಸ್ಮೈಲಿಗಳನ್ನು ಪರಿಚಯಿಸಲಾಯಿತು. ಈಗ ಕಾಲಕಾಲಕ್ಕೆ ಹೊಸಹೊಸ ಇಮೋಜಿಗಳು ಅಭಿವೃದ್ಧಿ ಹೊಂದುತ್ತಿವೆ. ನಮ್ಮ ಜೇಬಿನಲ್ಲಿರುವ ಮೊಬೈಲ್‌ನಲ್ಲಿ ನಿತ್ಯ ನೂರಾರು ಇಮೋಜಿಗಳನ್ನು, ನಮಗೆ ಬೇಕಾದಾಗ ಬಳಸಿಕೊಳ್ಳಲು ಸಾಗಿಸುತ್ತಿರುತ್ತೇವೆ.

ನಮ್ಮ ಬದುಕು ವರ್ಚುವಲ್ ಲೋಕಕ್ಕೆ ಹೆಚ್ಚುಹೆಚ್ಚು ಅಂಟಿಕೊಂಡಷ್ಟು ಇಮೋಜಿಗಳನ್ನು ಹೆಚ್ಚಾಗಿಯೇ ಬಳಸಲಾರಂಭಿದ್ದೇವೆ. ‘ನನಗೆ ನಿನ್ನ ಮೇಲೆ ಕೋಪ ಬಂದಿದೆ’ ‘ನನಗೆ ನಗು ಬರುತ್ತಿದೆ’ ಇತ್ಯಾದಿ ಭಾವನೆಗಳನ್ನು ಅಕ್ಷರ ರೂಪದಲ್ಲಿ ಸಂದೇಶ ರವಾನಿಸುವುದಕ್ಕಿಂತ ಸೂಕ್ತ ಇಮೋಜಿಯನ್ನು ಬಳಸಿದರೆ ಖಂಡಿತ ಪರಿಣಾಮಕಾರಿ.

ನಾವು ಹೆಚ್ಚು ಬಳಸುವ ಇಮೋಜಿಗಳು ಕೆಲವೊಮ್ಮೆ ನಮ್ಮ ಸ್ಥಿತಿಯನ್ನು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತವೆ ಎಂದು ಕೆಲವರು ಊಹಿಸುತ್ತಾರೆ. ಕೆಲವೊಮ್ಮೆ ನಾಟಕ ಆಡಲು ಇವುಗಳನ್ನು ಬಳಕೆ ಮಾಡುವವರೂ ಇದ್ದಾರೆ. ಇನ್ನೊಬ್ಬರನ್ನು ಅಣಕಿಸಲು ಬಳಸುತ್ತಾರೆ. ಸಂವಹನಕ್ಕೆ ಸೇತುವಾಗಿರುವ ಇಮೋಜಿಗಳನ್ನು ಯಾರಿಗೂ ನೋವಾಗದಂತೆ ಬಳಸೋಣ. ನೀವೇನಂತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT