ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ನಗುವಿನ ಕರಾವಳಿ ಬೆಡಗಿ ನಿಮಿಕಾ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬುದ್ಧನ ನಗು ತುಳುಕಿಸುವ ಚೆಲುವೆ ನಿಮಿಕಾ ರತ್ನಾಕರ್‌ ಅಪ್ಪಟ ಕರಾವಳಿ ಪ್ರತಿಭೆ. ಈಚೆಗೆ ಕೊರಿಯಾದಲ್ಲಿ ನಡೆದ ‘ಮಿಸ್‌ ಇಂಡಿಯಾ ಸೂಪರ್‌ ಟ್ಯಾಲೆಂಟ್‌ ಆಫ್‌ ದಿ ವರ್ಲ್ಡ್‌’ ಸ್ಪರ್ಧೆ ಯಲ್ಲಿ ‘ಬೆಸ್ಟ್‌ ಮ್ಯೂಜಿಷಿಯನ್‌’ ಟೈಟಲ್‌ ಪಡೆದು ದೇಶಕ್ಕೆ ಕೀರ್ತಿ ತಂದವರು.

ಸಂಗೀತವನ್ನೇ ಧೇನಿಸುವಡ ನಿಮಿಕಾ ಅವರ ಶಾರೀರದಿಂದ ಹೊಮ್ಮಿದ ಅನೇಕ ಚಿತ್ರಗೀತೆಗಳು ಸೂಪರ್‌ಹಿಟ್‌ ಎನಿಸಿಕೊಂಡಿವೆ. ಮಾಡೆಲಿಂಗ್‌ ನಂಟಿನಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ನಿಮಿಕಾ ಈಗ ಕನ್ನಡದಲ್ಲಿ ಮೂಡಿಬರುತ್ತಿರುವ ‘ರಾಮಧಾನ್ಯ’ ಎಂಬ ಐತಿಹಾಸಿಕ ಸಿನಿಮಾದ ನಾಯಕನಟಿ.

ಎತ್ತರದ ಮೈಮಾಟ, ಹೊಳೆವ ಕಂಗಳ ಒಡತಿ ನಿಮಿಕಾ ರತ್ನಾಕರ್‌ ವೃತ್ತಿಯಿಂದ ಸಾಫ್ಟ್‌ ವೇರ್‌ ಎಂಜಿನಿಯರ್‌. ನಟಿಸುವ ಮೋಹದಿಂದ ಎಂಜಿನಿಯರಿಂಗ್‌ ವೃತ್ತಿ ಬಿಟ್ಟು ಚಿತ್ರೋದ್ಯಮಕ್ಕೆ ಕಾಲಿಟ್ಟ ಇವರಿಗೆ ಮೊದಲಚಿತ್ರದಲ್ಲೇ ಅತ್ಯುತ್ತಮ ಎನಿಸುವಂತಹ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿದೆ.

ಆ ಖುಷಿಯನ್ನು ಅವನ್ನು ಹಂಚಿಕೊಂಡಿದ್ದು ಹೀಗೆ:‘ಟಿ.ಎನ್‌.ನಾಗೇಶ್‌ ನಿರ್ದೇಶನದ ‘ರಾಮಧಾನ್ಯ’ ಸಿನಿಮಾ ಐತಿಹಾಸಿಕ ಕಥಾಹಂದರವುಳ್ಳ ಚಿತ್ರ. ‘ದರ್ಶನ್‌ ಅಭಿನಯದ ‘ಚಕ್ರವರ್ತಿ’ ಸಿನಿಮಾದಲ್ಲಿ ಸಹನಟರಾಗಿ ಕಾಣಿಸಿಕೊಂಡಿದ್ದ ಯಶಸ್‌ ಸೂರ್ಯ ಅವರೊಂದಿಗೆ ಈ ಚಿತ್ರದಲ್ಲಿ ನಾನು ತೆರೆ ಹಂಚಿಕೊಳ್ಳುತ್ತಿದ್ದೇನೆ. ಈ ಸಿನಿಮಾದಲ್ಲಿ ನಾವಿಬ್ಬರೂ ಕೂಡ ಮೂರು ಶೇಡ್‌ಗಳಿರುವ ಮೂರು ಬಗೆಯ ಪಾತ್ರವನ್ನು ಒಂದೇ ಚಿತ್ರದಲ್ಲಿ ನಿರ್ವಹಿಸುತ್ತಿದ್ದೇವೆ. ಇದು ಈ ಚಿತ್ರದ ವಿಶೇಷತೆಗಳಲ್ಲಿ ಒಂದು. ಮೊದಲ ಚಿತ್ರದಲ್ಲೇ ಇಂತಹದ್ದೊಂದು ಭಿನ್ನ ಪಾತ್ರ ದೊರಕಿದ್ದು ತುಂಬ ಖುಷಿ ತಂದಿದೆ’ ಎನ್ನುತ್ತಾರವರು.

ಸುಂದರಿ ನಿಮಿಕಾ ರತ್ನಾಕರ್‌ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವರು. ತಮ್ಮ ಸಿರಿಕಂಠದ ಮಾಧುರ್ಯವನ್ನು ಆಗಾಗ ಯೂಟ್ಯೂಬ್‌ ಚಾನೆಲ್‌ ಮೂಲಕ ಸಂಗೀತಪ್ರಿಯರಿಗೆ ದಾಟಿಸುವ ರತ್ನಾಕರ್‌ ಈವರೆಗೆ ಅನೇಕ ಆಲ್ಬಂ ಸಾಂಗ್‌ಗಳಿಗೆ ದನಿಯಾಗಿದ್ದಾರೆ. ತುಳು ಚಿತ್ರಗಳಾದ ‘ದಬಕ್‌ ದಬಾ ಐಸ’, ‘ಪಿಲಿಬೈಲ್‌ ಯಮುನಕ್ಕ’, ‘ಮದಿಪು’ ಸಿನಿಮಾಗಳ ಚಿತ್ರಗೀತೆ ಗಳನ್ನೂ ಹಾಡಿ ಜನರನ್ನು ರಂಜಿಸಿದ್ದಾರೆ. ಸಂಗೀತದ ಬಲದಿಂದಲೇ ಅಂತರರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಟೈಟಲ್‌ ಮುಡಿಗೇರಿಸಿಕೊಂಡಿರುವ ನಿಮಿಕಾ ಆ ಸ್ಪರ್ಧೆಯಲ್ಲಿ ಪಡೆದುಕೊಂಡ ಅನುಭವದ ಬುತ್ತಿ ಜೀವನದುದ್ದಕ್ಕೂ ಕಾಪಿಡುವಂತಹದ್ದು ಎಂದು ನಂಬಿದವರು. ‌

‘ಕೊರಿಯಾದಲ್ಲಿ 22 ದಿನ ನಡೆದ ಸ್ಪರ್ಧೆ ನನಗೆ ಮರೆಯಲಸಾಧ್ಯವಾದ ಅನುಭವವನ್ನು ದಕ್ಕಿಸಿಕೊಟ್ಟಿತು. ಈ ಸ್ಪರ್ಧೆಯಲ್ಲಿ 40 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಯುವತಿ ನಾನು. ನನ್ನನ್ನು ಮುಂಬೈನಲ್ಲೇ ಗ್ರೂಮಿಂಗ್‌ ಮಾಡಿ ಕಳುಹಿಸಲಾಗಿತ್ತು. ಕೊರಿಯಾಕ್ಕೆ ಹೋದ ನಂತರ ಅಲ್ಲಿನ ವಿವಿಧ ನಗರಗಳಲ್ಲಿ ಅನೇಕ ಸುತ್ತುಗಳ ಆಡಿಷನ್‌ ಎದುರಿಸಿದೆ’ ಎನ್ನುತ್ತಾರೆ.

ಎಂಟು ಮಂದಿ ಅಂತರರಾಷ್ಟ್ರೀಯ ಖ್ಯಾತಿಯ ಡಿಸೈನರ್‌ಗಳ ಉಡುಪುಗಳನ್ನು ಧರಿಸಿ 12 ಷೋಗಳಲ್ಲಿ ರ‍್ಯಾಂಪ್‌ ವಾಕ್‌ ಮಾಡಿದೆ. ಸೆಪ್ಟೆಂಬರ್‌ನಲ್ಲಿ ವಿದೇಶದಲ್ಲಿ ನಡೆಯಲಿರುವ ಫ್ಯಾಷನ್ ವೀಕ್‌ಗೆ ಆಯ್ಕೆಯಾದ ಮೂವರು ಸ್ಪರ್ಧಿಗಳಲ್ಲಿ ನಾನೂ ಒಬ್ಬಳು. 40 ದೇಶಗಳ ಸ್ಪರ್ಧಿಗಳ ಜತೆಗಿನ ಒಡನಾಟ ವಿಭಿನ್ನ ಅನುಭವ ಒದಗಿಸಿತು. ಅವರ ದೇಶಗಳ ಸಂಸ್ಕೃತಿ, ಆಹಾರ, ಉಡುಪುಗಳ ಪರಿಚಯ ಆಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಗೆಳತಿಯರು ಸಿಕ್ಕರು’ ಎಂದು ವಿವರಿಸುತ್ತಾರೆ ಶ್ವೇತ ಸುಂದರಿ ನಿಮಿಕಾ.

ರಂಗಭೂಮಿ ಅಥವಾ ಅಭಿನಯ ಶಾಲೆಯ ನಂಟಿಲ್ಲದ ನಿಮಿಕಾ ರತ್ನಾಕರ್‌ ಅವರಿಗೆ ‘ರಾಮಧಾನ್ಯ’ ಚಿತ್ರವೇ ನಟನೆಯ ಕಲಿಕೆಗೆ ಮೆಟ್ಟಿಲಾಗಿದೆಯಂತೆ. ಇದರ ಜತೆಗೆ ನಟನೆಯ ಪಟ್ಟುಗಳನ್ನು ತಿಳಿಯಲು ನಟನೆಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ನಿಮಿಕಾ ತಮ್ಮ ಮುಂದಿನ ಚಿತ್ರಯಾನದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

‘ಗಾಯಕಿಯಾಗಿ ಹೆಸರು ಮಾಡಿದ್ದ ನನಗೆ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿನ ಗೆಲುವು ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ಸ್ಪರ್ಧೆಯನ್ನು ಮುಗಿಸಿ ಕಿರೀಟ ತೊಟ್ಟು ಬಂದ ನಂತರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮಾಡೆಲಿಂಗ್‌, ಕಾರ್ಯಕ್ರಮ ನಿರೂಪಣೆ ಸಂದರ್ಭದಲ್ಲಿ ಕ್ಯಾಮೆರಾ ಎದುರಿಸಿದ್ದೆ. ಆದರೆ ನನಗೆ ರಂಗಭೂಮಿಯ ನಂಟು ಇರಲಿಲ್ಲ.

ಹಾಗಂತ, ಸಿನಿಮಾ ಒಪ್ಪಿಕೊಂಡಾಗ ಭಯ ಇರಲಿಲ್ಲ. ಏಕೆಂದರೆ ‘ರಾಮಧಾನ್ಯ’ ಚಿತ್ರದಲ್ಲಿನ ಪಾತ್ರವೇ ನನ್ನ ಅಭಿನಯವನ್ನು ತಿದ್ದಿ ತೀಡುವ ಗುಣ ಹೊಂದಿತ್ತು. ಒಳ್ಳೆ ಕತೆ, ಮೂರು ವಿಭಿನ್ನ ಲುಕ್, ಮೂರು ಭಿನ್ನ ಬಗೆಯ ಡೈಲಾಗ್ ಡೆಲಿವರಿ ಇರುವ ಕಾರಣಕ್ಕಾಗಿಯೇ ನಾನು ಈ ಸಿನಿಮಾವನ್ನು ಒಪ್ಪಿಕೊಂಡೆ. ಇದರ ಜತೆಗೆ ಕನ್ನಡದಲ್ಲಿ ಮತ್ತಷ್ಟು ಆಫರ್‌ಗಳು ಬರುತ್ತಿವೆ. ಇನ್ನೂ ಯಾವುದು ಅಂತಿಮ ಆಗಿಲ್ಲ. ಒಳ್ಳೆ ಕತೆ, ಬ್ಯಾನರ್ ಸಿಕ್ಕರೆ ತುಳು ಚಿತ್ರಗಳಲ್ಲೂ ನಟಿಸುತ್ತೇನೆ’ ಎನ್ನುವ ನಿಮಿಕಾ ಈ ಚಿತ್ರ ಬಿಡುಗಡೆಗೊಂಡ ನಂತರ ತನಗೆ ಮತ್ತಷ್ಟು ವಿಭಿನ್ನ ಬಗೆಯ ಪಾತ್ರಗಳು ಅರಸಿ ಬರುತ್ತವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT