ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆಗೆ ಕಡಿವಾಣ ಅಗತ್ಯ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಒಂದು ಗ್ರಾಮೀಣ ಪ್ರದೇಶವೆಂದರೆ ಕೆಲವಾರು ಹಂಚಿನ ಮನೆಗಳು, ಸಮೀಪದಲ್ಲೇ ವಿಶಾಲವಾದ ಕೆರೆ. ಅದರ ಹಿಂದೆ ಹೊಲ ಗದ್ದೆ ತೋಟಗಳು. ತುಸು ದೂರದಲ್ಲಿ ಕಾಡು... ಹೀಗೆ.

ಕೆಲವೇ ದಶಕಗಳ ಹಿಂದೆ ಕಂಡ ಇಂಥ ಗ್ರಾಮಗಳಲ್ಲೀಗ ಮಹತ್ತರ ಬದಲಾವಣೆಗಳಾಗಿವೆ. ಕೆಲವಾರು ಮನೆಗಳು ಹಲವಾರು ಮನೆಗಳಾದರೆ, ವಿಶಾಲವಾದ ಕೆರೆ ಕಾಣೆಯಾಗಿ ಪುಟ್ಟ ಕೆರೆಯಂತಾಗಿದೆ. ಕಾಡು ಮಾಯವಾಗಿ ಹೊಸ ಗ್ರಾಮಗಳು ತಲೆ ಎತ್ತುತ್ತಿವೆ. ಈ ಸಮಸ್ಯೆ ಒಂದು ಗ್ರಾಮ ಅಥವಾ ಒಂದು ಜಿಲ್ಲೆಯಲ್ಲಿ ಆದ ಬದಲಾವಣೆಯಲ್ಲ. ಪುಟ್ಟ ಪುಟ್ಟ ಹೋಬಳಿಗಳು ನಗರಗಳಂತೆ ಬೆಳೆದರೆ, ನಗರಗಳು ಮಹಾನಗರಗಳಾಗಿ, ಬೃಹತ್ ನಗರಗಳಾಗಿ ಬದಲಾಗಿವೆ.

ಮಹಾನಗರಗಳಲ್ಲಿ ಸಮಸ್ಯೆಗಳು ಸಹ ಬೃಹದಾಕಾರವಾಗಿವೆ. ಮುಖ್ಯವಾಗಿ ಟ್ರಾಫಿಕ್ ಸಮಸ್ಯೆ. ಆ ಸಮಸ್ಯೆಗೆ ಕಡಿವಾಣ  ಹಾಕಲು ರಸ್ತೆ ವಿಸ್ತರಣೆ, ಅದು ಸಾಧ್ಯವಾಗದಿದ್ದಾಗ ಮೇಲ್ಸೇತುವೆ, ಅದರಿಂದಲೂ ಸಮಸ್ಯೆ ಬಗೆಹರಿಯದಿದ್ದಾಗ ಮೆಟ್ರೊ ರೈಲು. ಇತ್ತೀಚಿನ ದಿನಗಳಲ್ಲಿ ಉಕ್ಕಿನ ಸೇತುವೆಗೆ ಪ್ರಯತ್ನ. ಹೀಗೆ ದಿನದಿಂದ ದಿನಕ್ಕೆ ಹೊಸ ಪ್ರಯತ್ನದಿಂದ ನಗರದಲ್ಲಿರುವ ಹಸಿರೆಲ್ಲ ಹಾಳಾಗಿದೆ.

ಈ ನಡುವೆ ಕಾಡು ಉಳಿಸಿ, ಕಾಡು ಬೆಳೆಸಿ ಎಂಬ ಪರಿಸರ ಪ್ರೇಮಿಗಳ ಕೂಗು ಕೂಗಾಗಿಯೇ ಉಳಿದಿದೆ. ಕಾಡು ನಶಿಸುತ್ತಿದೆ, ಕೆರೆಗಳು ಕಿರಿದಾಗುತ್ತಿವೆ. ಅದಕ್ಕೆ ಒತ್ತುವರಿ ಎಂಬ ಹಣೆಪಟ್ಟಿ ಹಚ್ಚಿ  ಸುಮ್ಮನಾಗಿದ್ದೇವೆ. ಈ ಸಮಸ್ಯೆಗೆ ಪರಿಹಾರ ಹುಡುಕಲು, ಒತ್ತುವರಿಗೆ ಕಡಿವಾಣ ಹಾಕಲು ಸರ್ಕಾರ ಮತ್ತು ನ್ಯಾಯಾಲಯಗಳು ಯತ್ನಿಸದಿರುವುದು ನಿಜಕ್ಕೂ ಮುಂದಿನ ಪೀಳಿಗೆಯ ದುರಂತ.

ಮುಖ್ಯವಾಗಿ ನಾವು ಇಂದು ಎಂತಹ ಪರಿಸ್ಥಿತಿಯಲ್ಲಿದ್ದೇವೆ ಎಂದರೆ ಕಾಲಕ್ಕೆ ಸರಿಯಾಗಿ ಮಳೆಯಾಗಲಿ–ಆಗದಿರಲಿ, ನೀರಿನ ಬಳಕೆ ಹೆಚ್ಚುತ್ತಿದೆ. ನಾವು ಬಳಸಿದ ನೀರನ್ನೇ ಶುದ್ಧೀಕರಿಸಿ ಮರುಬಳಕೆ ಮಾಡಲು ಯತ್ನಿಸುತ್ತಿದ್ದೇವೆ. ಇದಕ್ಕಿಂತಲೂ ದುರಂತ ಇನ್ನೊಂದಿದೆಯೇ? ಇದಕ್ಕೆಲ್ಲ ಮುಖ್ಯ ಕಾರಣ ಅತಿಯಾದ ಜನಸಂಖ್ಯೆ. ಈಗಲೂ ಕೆಲವು ಸಮುದಾಯದವರು ‘ಮನೆ ತುಂಬ ಮಕ್ಕಳಿರಲಿ’ ಎಂದು ಬಯಸುತ್ತಾರೆ. ಬಹುಶಃ ದಿವಂಗತ ಇಂದಿರಾ ಗಾಂಧಿಯವರು ಮಾತ್ರ ಅವರ ಆಡಳಿತಾವಧಿಯಲ್ಲಿ ಜನಸಂಖ್ಯೆಗೆ ಕಡಿವಾಣ ಹಾಕಲು ಯತ್ನಿಸಿದರು. ನಂತರ ಯಾವ ಸರ್ಕಾರವೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ.

ಇಂದು ನಮ್ಮವರು ವಿದೇಶಗಳನ್ನು ನೋಡಿ ಬಂದು ಬೆರಗಾಗಿ ಹೇಳುತ್ತಾರೆ: ‘ವಾಹ್, ಆ ದೇಶ ಎಷ್ಟು ಶುಚಿಯಾಗಿದೆ!’  ನಮ್ಮವರ್‍ಯಾಕೆ ಅಲ್ಲಿಯ ಜನಸಂಖ್ಯೆಯ ಬಗ್ಗೆ ಅರೆಕ್ಷಣ ಚಿಂತಿಸುವುದಿಲ್ಲ? ಪ್ರತೀ ಸರ್ಕಾರ ತಮ್ಮ ಸಚಿವರನ್ನು ವಿದೇಶ ಪ್ರವಾಸಕ್ಕೆ ಕಳಿಸುವುದುಂಟು. ಅದಾಗಿಯೂ ನಮ್ಮವರು ಜನಸಂಖ್ಯೆಯ ನಿಯಂತ್ರಣದಿಂದ ಆಗುವ ಉಪಯೋಗಗಳನ್ನು ಅರಿಯುತ್ತಿಲ್ಲ.

ಜನಸಂಖ್ಯೆ ಅತಿಯಾದಂತೆ ಜನ ಬಳಕೆಯ ವಸ್ತುಗಳು ಹೆಚ್ಚಲೇಬೇಕು. ಅದಕ್ಕಾಗಿಯೇ ಹುಟ್ಟಿಕೊಂಡ ಕಾರ್ಖಾನೆಗಳಿಂದ ಹೊರಹೊಮ್ಮುವ ತ್ಯಾಜ್ಯಗಳನ್ನು ವಿಸರ್ಜಿಸಲು ಸ್ಥಳವಿಲ್ಲದೆ ಎಲ್ಲೆಂದರಲ್ಲಿ ಕೆರೆಗಳಿಗೆ ವಿಸರ್ಜಿಸುವುದರಿಂದ ಇಂದು ನಗರಗಳ ಕೆರೆಗಳು ಮಲಿನವಾಗಿವೆ.

ಜನಸಂಖ್ಯೆ ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚುತ್ತಿದೆ. ಉದ್ಯೋಗ ಸಿಗದೆ ಅದೆಷ್ಟೋ ಮಂದಿ ಅಪರಾಧ ಜಗತ್ತಿಗೆ ಕಾಲಿಡುತ್ತಾರೆ. ಬೆಂಗಳೂರಿನ ಮೆಜೆಸ್ಟಿಕ್ ಅಂತಹ ಭಾಗಗಳಲ್ಲಿ ಮುಂಬೈನ ಕಾಮಾಟಿಪುರದಂಥ ಪರಿಸ್ಥಿತಿಯನ್ನು ಇತ್ತೀಚೆಗೆ ಕಾಣಬಹುದು.

ಸರ್ಕಾರ ಕೆಲವು ನಿಬಂಧನೆಗಳ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದು. ಪಡಿತರ ಚೀಟಿ ಹಾಗೂ ಇತರ ಸರ್ಕಾರಿ ಸೌಲಭ್ಯ ದೊರಕುವ ಪತ್ರಗಳನ್ನು ನೀಡುವಾಗ ಒಂದು ಮಗು ಉಳ್ಳವರಿಗೆ ಎಲ್ಲಾ ಸೌಲಭ್ಯ, ಎರಡು ಮಕ್ಕಳಿರುವವರಿಗೆ ಅದರಲ್ಲಿ ಸ್ವಲ್ಪ ಕಡಿತ, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಎಂದು ಕಟ್ಟುನಿಟ್ಟು ಮಾಡಬೇಕು.
-ಕಿಕ್ಕೇರಿ ಎಂ. ಚಂದ್ರಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT