ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಶ್ಯಪ್‌ಗೆ ಜಯದ ಆರಂಭ

ಅಮೆರಿಕ ಓಪನ್ ಬ್ಯಾಡ್ಮಿಂಟನ್‌; ಹುಯಾನ್‌ಗೆ ಆಘಾತ
Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಅನಾಹೆಮ್‌, ಅಮೆರಿಕ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತದ ಪರುಪಳ್ಳಿ ಕಶ್ಯಪ್‌ ಗುರುವಾರ ಅಮೆರಿಕ ಓಪನ್ ಗ್ರ್ಯಾನ್‌ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ದಾಖಲಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕಶ್ಯಪ್‌ 21–16, 10–21, 21–19ರಲ್ಲಿ ಅಗ್ರ ಶ್ರೇಯಾಂಕದ ಕೊರಿಯಾದ ಆಟಗಾರ ಲೀ ಹುಯಾನ್‌ಗೆ ಆಘಾತ ನೀಡಿದರು. ಗಾಯದ ಸಮಸ್ಯೆಯಿಂದ ಹೊರಬಂದಿರುವ ಕಶ್ಯಪ್‌ ಇತ್ತೀಚಿಗೆ ಫಾರ್ಮ್‌ ಕಂಡುಕೊಂಡು ಆಡುತ್ತಿದ್ದಾರೆ.

ಒಂದು ಗಂಟೆ ಮೂರು ನಿಮಿಷದ ಪಂದ್ಯದಲ್ಲಿ ಭಾರತದ ಆಟಗಾರ ವಿಶ್ವ ರ್‍ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಹುಯಾನ್‌ಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಗೇಮ್‌ನಲ್ಲಿ ಸುಲಭ ಗೆಲುವು ದಾಖಲಿಸಿದ ಕಶ್ಯಪ್ ಎರಡನೇ ಗೇಮ್‌ನಲ್ಲಿ ಆರಂಭದಲ್ಲೇ ಹಿಂದೆ ಉಳಿಯುವ ಮೂಲಕ ಸೋಲು ಅನುಭವಿಸಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ತಮ್ಮ ಅನುಭವದ ಆಟದ ಮೂಲಕ ಗಮನಸೆಳೆದರು. ಸ್ಮ್ಯಾಷ್ ಮತ್ತು ನಿಖರ ರಿಟರ್ನ್ಸ್‌ಗಳಿಂದ ಎದುರಾಳಿಯನ್ನು ಹಿಮ್ಮೆಟ್ಟಿಸಿದರು.

ಐದನೇ ಶ್ರೇಯಾಂಕದ ಸಮೀರ್ ವರ್ಮಾ ಕೂಡ ಶುಭಾರಂಭ ಮಾಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಆರಂಭಿಕ ಸುತ್ತಿನ ಪಂದ್ಯದಲ್ಲಿ  ಅವರು 21–5, 21–10ರಲ್ಲಿ ವಿಯೆಟ್ನಾಂನ ಹೊಯಾಂಗ್ ನಮ್ ನೆಗುಯೆನ್ ಮೇಲೆ ಗೆದ್ದರು.

ಇಂಡೊನೇಷ್ಯಾ ಓಪನ್ ಗೆದ್ದುಕೊಂಡಿದ್ದ ಎಚ್‌.ಎಸ್ ಪ್ರಣಯ್‌ 21–12, 21–16ರಲ್ಲಿ ನೇರ ಗೇಮ್‌ಗಳಿಂದ ಆಸ್ಟ್ರಿಯಾದ ಲೂಕ ವ್ರಾಬರ್ ವಿರುದ್ಧ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು. ಹರ್ಷೀಲ್ ದನಿ 21–13, 21–9ರಲ್ಲಿ ಮೆಕ್ಸಿಕೊದ ಅರ್ಟುರೊ ಹೆರ್ಮಂಡ್ಸ್ ಎದುರು ಜಯದಾಖಲಿಸಿದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 59ನೇ ಸ್ಥಾನದಲ್ಲಿರುವ ಕಶ್ಯಪ್ ಮುಂದಿನ ಸುತ್ತಿನ ಪಂದ್ಯದಲ್ಲಿ ಹಂಗೇರಿಯ ಜರ್ಗೆಲಿ ಕರುಸು ಮೇಲೆ ಆಡಲಿದ್ದಾರೆ. ಸಮೀರ್ ಕ್ರೊವೇಷ್ಯಾದ ಜೊನಿಮಿರ್ ದುರ್ಕಿಜಕ್ ವಿರುದ್ಧವೂ, ಪ್ರಣಯ್‌ ಐರ್ಲೆಂಡ್‌ನ ಜೋಷುವಾ ಮಾಗಿ ಎದುರೂ, ಹರ್ಷೀಲ್‌ ವಿಯೆಟ್ನಾಂನ ಟಿನ್ ಮಿನ್ ಗುಯೆನ್ ಮೇಲೂ ಆಡಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ರಿತುಪರ್ಣಾ ದಾಸ್ 21–16, 21–18ರಲ್ಲಿ ಕೆನಡಾದ ರಾಚೆಲ್ ಹೆನ್‌ರಿಚ್ ಮೇಲೆ ಗೆದ್ದರು. ಶ್ರೀ ಕೃಷ್ಣ ಪ್ರಿಯಾ ಕುದರವಳ್ಳಿ 21–13, 21–16ರಲ್ಲಿ ಅಮೆರಿಕದ ಮಾಯಾ ಚೆನ್ ಎದುರು ಗೆಲುವಿನ ಆರಂಭ ಪಡೆದರು.

ಕರ್ನಾಟಕದ ಅಭಿಷೇಕ್ ಯೆಲೆಗಾರ್‌ ಅವರನ್ನು ಸೇರಿದಂತೆ ಸಾಯಿ ಉತ್ತೇಜಿತಾ ಚುಕ್ಕಾ, ಲಕನೀ ಸಾರಂಗ್‌, ರೇಷ್ಮಾ ಕಾರ್ತಿಕ್ ಮತ್ತು ರುತ್ವಿಕಾ ಶಿವಾನಿ ಗಾದ್ದೆ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಲಕನೀ 16–21, 13–21ರಲ್ಲಿ ಜಪಾನ್‌ನ ಕೆಂಟ ನಿಶಿಮೊಟಾ ವಿರುದ್ಧ ಸೋತರು. ಅಭಿಷೇಕ್ 17–21, 21–16, 13–21ರಲ್ಲಿ ಮೂರನೇ ಶ್ರೇಯಾಂಕದ ಫ್ರಾನ್ಸ್‌ನ ಆಟಗಾರ್ತಿ ಬ್ರೈಸ್ ವೆವರ್ಡ್ಸ್‌ ಮೇಲೆ ಸೋಲು ಅನುಭವಿಸಿದರು. ಸಾಯಿ ಉತ್ತೇಜಿತಾ 23–25, 21–13, 21–16ರಲ್ಲಿ ನೆದರ್ಲೆಂಡ್ಸ್‌ನ ಗೇಲ್‌ ಮಹುಲೆಟ್ ವಿರುದ್ಧ ಸೋತರು.

ರುತ್ವಿಕಾ 14–21, 27–25, 16–21ರಲ್ಲಿ ಜಪಾನ್‌ನ ಅಯಾ ಒಹೊರಿ ಮೇಲೆ ಸೋತರು. ರೇಷ್ಮಾ 21–12, 16–21, 15–21ರಲ್ಲಿ ಡೆನ್ಮಾರ್ಕ್‌ನ ಸೋಫಿ ಹೊಲಂಬೊ ಮೇಲೆ ಸೋತರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಜೋಡಿ 21–15, 21–19ರಲ್ಲಿ ಕೆನಡಾದ ಜಾಸನ್ ಅಂಥೋಣಿ ಮತ್ತು ನಲ್ ಯಕುರಾ ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿತು.

ಫ್ರಾನ್ಸಿಸ್ ಅಲ್ವಿನ್ ಮತ್ತು ತರುಣ್ ಕೋನಾ 21–3, 21–10ರಲ್ಲಿ ಸ್ಥಳೀಯ ಜೋಡಿ ಯನ್ ಟಕ್ ಚನ್ ಮತ್ತು ಬ್ರಿಯಾನ್ ಚಿ ಚೆಂಗ್ ವಿರುದ್ಧ ಜಯಗಳಿಸಿದರು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಮೇಘನಾ ಜಕ್ಕಮಪುಡಿ ಮತ್ತು ಪೂರ್ವಿಷಾ ಎಸ್‌. ರಾಮ್ ಜೋಡಿ 21–16, 14–21, 21–14ರಲ್ಲಿ ಜಪಾನ್‌ನ ರಿಯಾ ಕವಾಶಿಮಾ ಮತ್ತು ಸರೊಯಿ ಒಜಾಕಿ ಮೇಲೆ ಗೆದ್ದಿತು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಮನು ಮತ್ತು ಮನೀಷಾ ಜೋಡಿ 21–13, 21–15ರಲ್ಲಿ  ಕೆನಡಾದ ನಲ್ ಯಕುರಾ ಮತ್ತು ಬ್ರಿಟನಿ ಟಮ್ ಮೇಲೆ ಜಯಗಳಿಸಿತು.

ಮೂರನೇ ಶ್ರೇಯಾಂಕದ ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿ 21–19, 19–21, 17–21ರಲ್ಲಿ ಇಂಗ್ಲೆಂಡ್‌ನ ಬೆನ್‌ ಲೇನ್ ಮತ್ತು ಜೆಸ್ಸಿಕಾ ಪುಗ್‌ ವಿರುದ್ಧ ಸೋತಿತು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕುಹೂ ಜಾರ್ಜ್‌ ಮತ್ತು ನಿಗಶಿ ಬ್ಲಾಕ್‌ ಹಜಾರಿಕಾ 12–21, 10–21ರಲ್ಲಿ ರಷ್ಯಾದ ಅನಸ್ತಾಶಿಯಾ ಚೆರವಕೊವ ಮತ್ತು ಒಲ್ಗಾ ಮೊರೊಜವಾ ವಿರುದ್ಧ ಸೋತರು.

ನಾಲ್ಕನೇ ಶ್ರೇಯಾಂಕದ ಸಾತ್ವಿಕ್‌ಸೈರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 21–8, 19–21, 19–21ರಲ್ಲಿ ಜಪಾಣ್‌ನ ಕೊಯಿ ಗೊಂಡಾ ಮತ್ತು ತಸೂಯ ವಟನೆಬೆ ವಿರುದ್ಧ ಸೋತಿತು.

ಮಿಶ್ರ ಡಬಲ್ಸ್‌ನಲ್ಲಿ ತುರುಣ್ ಮತ್ತು ಮೇಘನಾ ಜೋಡಿ 21–15, 21–17ರಲ್ಲಿ ವಿಯೆಟ್ನಾಂನ ಡೂಕ್ ಡೊ ಮತ್ತು ತೊ ಫಾಮ್ ವಿರುದ್ಧ ತನ್ನ ಹೋರಾಟ ಕೊನೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT